ಮತ್ತೊಮ್ಮೆ ಸಿಎಂ ಆದ್ರು ಯಡಿಯೂರಪ್ಪ, ಹೊಸ ಇನಿಂಗ್ಸ್ ಆರಂಭ
ಕರ್ನಾಟಕದಲ್ಲಿ ಮತ್ತೆ ಅರಳಿದ ಕಮಲ/ 22ನೇ ಸಿಎಂ ಆಗಿ ಬಿ.ಎಸ್.ಯಡಿಯೂರಪ್ಪ ಪ್ರಮಾಣ ವಚನ/ ಹಸಿರು ಶಾಲು ಹೊದ್ದು ಪ್ರಮಾಣ ವಚನ ತೆಗೆದುಕೊಂಡ ಬಿಎಸ್ ವೈ/ 4 ನೇ ಸಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ
ಬೆಂಗಳೂರು[ಜು. 26] ದಕ್ಷಿಣ ಭಾರತದಲ್ಲಿ ಮತ್ತೆ ಕಮಲ ಅರಳಿದೆ. ಹಸಿರು ಶಾಲು ಹೊದ್ದು ಬಂದ ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಜುಲೈ 26, ಶುಕ್ರವಾರ ಸಂಜೆ 6.35ಕ್ಕೆ ರಾಜ್ಯಪಾಲ ವಿಆರ್ ವಾಲಾ ಯಡಿಯೂರಪ್ಪ ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ರಾಜಭವನದಲ್ಲಿ ಯಡಿಯೂರಪ್ಪ ಸಿಎಂ ಆಗಿ ಗದ್ದುಗೆ ಏರಿದ್ದಾರೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಕಾರ್ಯಕ್ರಮದಲ್ಲಿ ಹಾಜರಿದ್ದು ಶುಭಕೋರಿದರು. ಮಾಜಿ ಸಿಎಂ, ಬಿಜೆಪಿ ಹಿರಿಯ ನಾಯಕ ಎಸ್.ಎಂ.ಕೃಷ್ಣ ಮೊದಲನೇ ಸಾಲಿನಲ್ಲಿ ಆಸೀನರಾಗಿದ್ದರು.
2018ರಲ್ಲಿ ರಾಜ್ಯ ವಿಧಾನಸಭೆ ಚುನಾವಣಾ ಫಲಿತಾಂಶ ಪ್ರಕಟವಾದಾಗ ಬಿಜೆಪಿ 104 ಸ್ಥಾನ ಗಳಿಸಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ರಾಜ್ಯಪಾಲರ ಬಳಿಗೆ ಅಂದು ತೆರಳಿದ್ದ ಬಿ.ಎಸ್.ಯಡಿಯೂರಪ್ಪ ಹಕ್ಕು ಮಂಡಿಸಿ ಸಿಎಂ ಆಗಿ ಪ್ರಮಾಣ ತೆಗೆದುಕೊಂಡಿದ್ದರು. ಆದರೆ ನಂತರ ವಿಶ್ವಾಸಮತ ಸಿಗದೇ ರಾಜೀನಾಮೆ ಕೊಟ್ಟಿದ್ದರು. ಇದಾದ ಮೇಲೆ ಕಾಂಗ್ರೆಸ್ ಮತ್ತು ಜೆಡಿಎಸ್ ದೋಸ್ತಿ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು.
ಪ್ರಮಾಣ ವಚನಕ್ಕೆ ಹೊರಟ ಬಿಎಸ್‌ವೈಗೆ ಸಿದ್ದು ನೇರ ಪ್ರಶ್ನೆ
14 ತಿಂಗಳು ಕಾಲ ಅಧಿಕಾರ ನಡೆಸಿದ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಜುಲೈ 23 ರಂದು ವಿಶ್ವಾಸ ಮತ ಕಳೆದುಕೊಂಡಿತ್ತು. ಈಗ ಬದಲಾದ ರಾಜಕಾರಣದ ವಾತಾವರಣದಲ್ಲಿ ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿ ಪ್ರಮಾಣ ವಚನ ತೆಗೆದುಕೊಂಡಿದ್ದಾರೆ.