Asianet Suvarna News Asianet Suvarna News

South India's First Project: ದಶಕ ಕಳೆದರೂ BRTS ಪೂರ್ಣವಾಗಿಲ್ಲ..!

*   970.87 ಕೋಟಿ ಸುರಿದರೂ ಮುಗಿಯದ ಯೋಜನೆ
*   ಅರೆಬರೆ ಕಾರಿಡಾರಲ್ಲೇ ಚಿಗರಿ ಓಟ
*   ನವಲೂರು ಬ್ರಿಡ್ಜ್‌ ಪೂರ್ಣಗೊಳ್ಳುವ ಲಕ್ಷಣಗಳಿಲ್ಲ
 

BRTS is Not Complete Despite a Decade in Hubballi- Dharwad grg
Author
Bengaluru, First Published Jan 6, 2022, 6:31 AM IST

ಶಿವಾನಂದ ಗೊಂಬಿ

ಹುಬ್ಬಳ್ಳಿ(ಜ.06):  ಪ್ರತ್ಯೇಕ ನಿಗಮ ಕೂಡ ಆಗಲಿಲ್ಲ. ಅತಿಕ್ರಮಣ ತೆರವುಗೊಳಿಸಲಿಲ್ಲ. ಬಿಆರ್‌ಟಿಎಸ್‌(BRTS) ಕಾರಿಡಾರ್‌ ಕೂಡ ಪೂರ್ಣವಾಗಲೇ ಇಲ್ಲ. ಅರೆಬರೆ ಕಾರಿಡಾರ್‌ನಲ್ಲೇ ‘ಮಾಯಾಚಿಗರಿ’ಗಳ ಎರ್ರಾಬಿರ್ರಿ ಓಟ!. ಇದು ದಕ್ಷಿಣ ಭಾರತದಲ್ಲೇ(South India) ಮೊಟ್ಟ ಮೊದಲು ಪರಿಚಯಿಸಿದ್ದ, ಹುಬ್ಬಳ್ಳಿ- ಧಾರವಾಡ(Hubballi-Dharwad) ಮಧ್ಯೆ ಸಂಚರಿಸುತ್ತಿರುವ ‘ತ್ವರಿತ, ಸುಖಾಸೀನ ಸಾರಿಗೆ’ ಕನಸಿನ ಬಿಆರ್‌ಟಿಎಸ್‌ ಕಥೆ ವ್ಯಥೆ!

ಈ ಯೋಜನೆಗೆ ಬರೋಬ್ಬರಿ 970.87 ಕೋಟಿ ಖರ್ಚಾಗಿದೆ. ಆದರೂ ಪೂರ್ಣ ಈ ಯೋಜನೆ ಪೂರ್ಣವಾಗದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಬಿಳಿಯಾನೆಯಂತಾದ ಯೋಜನೆ ಸರ್ಕಾರಕ್ಕೂ ಭಾರವಾಗಿದೆ.
ಬಿಆರ್‌ಟಿಎಸ್‌ ಕಾರಿಡಾರ್‌ಗೆ(BRTS Corridor) ಚಾಲನೆ ನೀಡಿ ಇದೀಗ ಬರೋಬ್ಬರಿ 10 ವರ್ಷಗಳೇ ಗತಿಸಿವೆ. ಕಾರಿಡಾರ್‌ನಲ್ಲೇ ಚಿಗರಿ ಬಸ್‌ಗಳೇನೋ(Chigari Bus) ಓಡಾಡುತ್ತಿವೆ. ಆದರೆ, ಆರಂಭಕ್ಕೂ ಮುನ್ನ ಜನತೆಗೇನೋ ನೀಡಲಾದ ಭರವಸೆ ಮಾತ್ರ ಈಡೇರಿಲ್ಲ. ಕಾಮಗಾರಿಯೂ ಈವರೆಗೂ ಪೂರ್ಣವಾಗಲಿಲ್ಲ. ಆಗಿರುವ ಕೆಲಸಗಳು ಪೂರ್ಣ ಬಳಕೆಯಾಗುತ್ತಿಲ್ಲ.

Digital Pay Facility in BRTS: ಹುಬ್ಬಳ್ಳಿ-ಧಾರವಾಡ ಬಿಆರ್‌ಟಿಎಸ್‌ನಲ್ಲಿ ಇನ್ಮುಂದೆ ಡಿಜಿಟಲ್‌ ಪೇ

ಯಾವಾಗ ಪ್ರಾರಂಭ:

ಹುಬ್ಬಳ್ಳಿ ವಾಣಿಜ್ಯನಗರಿ. ಧಾರವಾಡ ವಿದ್ಯಾಕಾಶಿ ಎಂದು ಹೆಸರು ಪಡೆದ ನಗರ. ಈ ಎರಡು ನಗರಗಳ ನಡುವೆ ಪ್ರತಿನಿತ್ಯ ಕನಿಷ್ಠವೆಂದರೂ 1.75 ಲಕ್ಷ ಜನರು ಓಡಾಡುತ್ತಾರೆ ಎಂಬುದು ಸಮೀಕ್ಷೆಯೊಂದರ ಫಲಿತಾಂಶ. ಈ ಎರಡು ನಗರಗಳ ನಡುವಿನ ಅಂತರ 22 ಕಿಮೀ. ಇಷ್ಟು ದೂರ ಕ್ರಮಿಸಬೇಕೆಂದರೆ ಕನಿಷ್ಠವೆಂದರೂ 40-50 ನಿಮಿಷ ಬೇಕಾಗುತ್ತದೆ ಎಂಬುದು ಅಂದಾಜು. ಈ ಹಿನ್ನೆಲೆಯಲ್ಲಿ ಇದನ್ನು ಕಡಿಮೆಗೊಳಿಸಬೇಕು ಎಂಬ ಉದ್ದೇಶದಿಂದ 2002ರಲ್ಲಿ ಈ ನಗರಗಳ ನಡುವೆ ಚತುಷ್ಪಥ ಮಾಡಬೇಕೆಂಬ ಬೇಡಿಕೆ ಇತ್ತು. ಆಗ ಅದಕ್ಕೆ ಆಗಿನ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಹಸಿರು ನಿಶಾನೆ ತೋರಿಸಿದ್ದರು. ಅದು ನಿಧಾನವಾಗಿ ಸಾಗಿ ಬಳಿಕ ಚತುಷ್ಪಥ ಮಾಡುವ ಬದಲು ಬಿಆರ್‌ಟಿಎಸ್‌ ಸಾರಿಗೆ ವ್ಯವಸ್ಥೆ ಕಲ್ಪಿಸಲು ರಾಜ್ಯ ಸರ್ಕಾರ(Government of Karnataka) ನಿರ್ಧರಿಸಿತು. 2012ರಲ್ಲಿ ಬಿಆರ್‌ಟಿಎಸ್‌ಗೆ ಯೋಜನೆಗೆ ಶಂಕು ನೆರವೇರಿಸಲಾಯಿತು. ಅಲ್ಲಿಂದ ನಿರಂತರವಾಗಿ ಕುಂಟುತ್ತಾ ತೆವಳುತ್ತಾ 2018 ಆದರೂ ಕಾಮಗಾರಿ ಪೂರ್ಣವಾಗಲೇ ಇಲ್ಲ.

ಹೀಗೆ ಆದರೆ ಕಾಮಗಾರಿಯೇ ಮುಗಿಯಲ್ಲ ಎಂದುಕೊಂಡು ಆಗ ಬಿಆರ್‌ಟಿಎಸ್‌ ಎಂಡಿ ಆಗಿದ್ದ ರಾಜೇಂದ್ರ ಚೋಳನ್‌ ಅವರು ಬಸ್‌ ಸಂಚಾರ ಆರಂಭಿಸಿಯೇ ಬಿಟ್ಟರು. ಹೀಗೆ ಒಂದು ವರ್ಷ ನಾಲ್ಕು ತಿಂಗಳುವರೆಗೂ ಉದ್ಘಾಟನೆಯಾಗದೇ ಬಿಆರ್‌ಟಿಎಸ್‌ ಬಸ್‌ಗಳು ಸಂಚರಿಸಿದವು. ಕೊನೆಗೆ ಕಾಮಗಾರಿಗೇನೋ ಲೋಕಾರ್ಪಣೆಗೊಳಿಸಲಾಯಿತು. ಆಗಿನಿಂದ ಈವರೆಗೂ ಕಾಮಗಾರಿಗಳು ಮಾತ್ರ ಪೂರ್ಣವಾಗುತ್ತಲೇ ಇಲ್ಲ.

ಏನೇನು ಉಳಿದಿವೆ:

ನವಲೂರು ಬಳಿಕ ಸೇತುವೆ ನಿರ್ಮಾಣ ಕಾಮಗಾರಿ ಆಗಬೇಕಿದೆ. ಇದು ಸ್ಥಗಿತಗೊಂಡು ವರ್ಷಗಳೇ ಉರುಳಿದರೂ ಈವರೆಗೂ ಕಾಮಗಾರಿಯೇ ಆರಂಭವಾಗಿಲ್ಲ. ಇನ್ನೂ ಭೈರಿದೇವರಕೊಪ್ಪದ ಬಳಿ ಕೆಲವೊಂದು ಪ್ರಾರ್ಥನಾ ಮಂದಿರ, ದೇವಸ್ಥಾನಗಳು ಕಾರಿಡಾರ್‌ಗೆ ಅಡ್ಡವಾಗಿವೆ. ಅವುಗಳ ಸಮಸ್ಯೆ ಬಗೆಹರಿಸಲು ಜಿಲ್ಲಾಡಳಿತಕ್ಕೆ ಸಾಧ್ಯವಾಗಿಲ್ಲ. ಹೀಗಾಗಿ ಭೈರಿದೇವರಕೊಪ್ಪ ಹಾಗೂ ನವಲೂರು ಬಳಿ ಕಾರಿಡಾರ್‌ ಅರೆಬರೆ ಆಗಿವೆ.

ಪ್ರತ್ಯೇಕ ನಿಗಮ ಇಲ್ಲ:

ಬಿಬಿಎಂಪಿ(BBMP) ಮಾದರಿಯಲ್ಲಿ ಬಿಆರ್‌ಟಿಎಸ್‌ಗೆ ಪ್ರತ್ಯೇಕ ನಿಗಮ ಮಾಡುತ್ತೇವೆ ಎಂದು ಮೊದಲು ಹೇಳಲಾಗಿತ್ತು. ಆದರೆ, ಆ ಬಗ್ಗೆಯೂ ಸರ್ಕಾರ ತೀರ್ಮಾನ ಕೈಗೊಳ್ಳಲೇ ಇಲ್ಲ. ಹೀಗಾಗಿ ಪ್ರತ್ಯೇಕ ನಿಗಮ ಎನ್ನುವುದು ಕನಸಾಗಿಯೇ ಉಳಿದಿದೆ. ಇದರೊಂದಿಗೆ ಪ್ರತ್ಯೇಕ ಪೊಲೀಸ್‌ ಠಾಣೆ ಮಾಡಬೇಕೆಂಬ ಬೇಡಿಕೆಯೂ ಇತ್ತು. ಈ ಸಂಬಂಧ ಕೂಡ ನಾಲ್ಕಾರು ಬಾರಿ ಪ್ರಸ್ತಾವನೆಗಳೂ ಹೋಗಿವೆಯೇ ಹೊರತು ಸರ್ಕಾರ ಈ ನಿಟ್ಟಿನಲ್ಲಿ ನಿರ್ಧಾರ ಮಾತ್ರ ಕೈಗೊಂಡಿಲ್ಲ. ಇನ್ನು ಬೇರೆ ಬೇರೆ ವಾಹನಗಳು ಈ ಪಥದಲ್ಲಿ ಸಂಚರಿಸಬಾರದೆಂಬ ಉದ್ದೇಶದಿಂದ ಬೂಮ್‌ ಬ್ಯಾರಿಕೇಡ್‌ ಅಳವಡಿಕೆ ಆಗಿಲ್ಲ. ಹೀಗಾಗಿ ಬೇರೆ ಬೇರೆ ವಾಹನಗಳು ಓಡಾಟ ಎಂದಿನಂತೆ ನಡೆದಿದೆ.

ಹುಬ್ಬಳ್ಳಿ-ಧಾರವಾಡದ BRTSಗೆ ಕಳಪೆ ಕಾಮಗಾರಿ ಸಂಕಟ!

ಇನ್ನೂ ಬೇಂದ್ರೆ ಸೇರಿದಂತೆ ಇತರೆ ಖಾಸಗಿ ವಾಹನಗಳ ಓಡಾಟದಿಂದ ಬಿಆರ್‌ಟಿಎಸ್‌ ಲಾಭದಲ್ಲಿಲ್ಲ ಎಂಬುದು ಸಾಮಾನ್ಯ ದೂರು. ಈವರೆಗೂ ಖಾಸಗಿ ವಾಹನಗಳ ಓಡಾಟಕ್ಕೆ ಬ್ರೇಕ್‌ ಹಾಕಲು ಸರ್ಕಾರಕ್ಕೆ ಆಗುತ್ತಿಲ್ಲ.
ಬಿಆರ್‌ಟಿಎಸ್‌ ಅವೈಜ್ಞಾನಿಕ ಯೋಜನೆಯೆಂದು ಶಾಸಕ ಅರವಿಂದ ಬೆಲ್ಲದ ಬಹಿರಂಗವಾಗಿಯೇ ಹೇಳಿದರು. ಇದರಲ್ಲಿನ ಲೋಪದೋಷಗಳನ್ನು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸರಿಪಡಿಸುವುದಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಸಿಎಂ ಜಗದೀಶ ಶೆಟ್ಟರ್‌ ಹೇಳಿರುವುದುಂಟು. ಆದರೆ, ಅದಕ್ಕೆ ಇನ್ನೂ ಕಾಲ ಕೂಡಿಬಂದಂತಿಲ್ಲ.

ನವಲೂರು ಬ್ರಿಡ್ಜ್‌ ಕೆಲಸ ಇನ್ನೂ 8-10 ತಿಂಗಳಲ್ಲಿ ಪೂರ್ಣವಾಗುತ್ತದೆ. ಯಾವುದೇ ಡಿಸೈನ್‌ ಬದಲಾಯಿಸದೇ ಹಿಂದಿನ ಡಿಸೈನ್‌ನಲ್ಲಿ ಕೆಲಸ ಮಾಡಲಾಗುವುದು ಅಂತ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಕಾರ್ಯನಿರ್ವಾಹಕ ಅಭಿಯಂತರ ಕುರಡೇಕರ್‌ ತಿಳಿಸಿದ್ದಾರೆ.  

ಬಿಆರ್‌ಟಿಎಸ್‌ ಅತ್ಯಂತ ಕೆಟ್ಟ ಯೋಜನೆ. ಮಳೆಗಾಲದಲ್ಲಿ ಬಿಆರ್‌ಟಿಎಸ್‌ ಕಾರಿಡಾರ್‌ನಿಂದ ಆಗುವ ಆವಾಂತರ ಅಷ್ಟಿಷ್ಟಲ್ಲ. ಲೋಪದೋಷ ಸರಿಪಡಿಸಬೇಕು ಅಂತ ಪ್ರಯಾಣಿಕ ಮೃತ್ಯುಂಜಯ ಮಠದ ಹೇಳಿದ್ದಾರೆ.  
 

Follow Us:
Download App:
  • android
  • ios