ಮುಂಜಾವ 3 ಗಂಟೆಗೇ ಮದುವೆ ಹೆಣ್ಣು ಎಸ್ಕೇಪ್, ನಷ್ಟ ಪರಿಹಾರ ಕೇಳಿದ ವರ
ಮದುವೆ ದಿನ ವಧು ಮನೆಯಿಂದ ಓಡಿ ಹೋಗಿರುವ ಘಟನೆ ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ನಡೆದಿದೆ. ಮದುವೆ ನಿಂತ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ವರ ನಷ್ಟಪರಿಹಾರ ಕೇಳಿದ್ದಾನೆ.
ಚಾಮರಾಜನಗರ(ಫೆ.06): ಮದುವೆಯ ಮುನ್ನಾ ದಿನ ಮುಂಜಾನೆಯೇ ವಧು ಪರಾರಿಯಾಗಿರುವ ಪ್ರಸಂಗ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ನವ ವಧು, ವರರು ತೆರಕಣಾಂಬಿ ಗ್ರಾಮದವರು. ಕಳೆದ ವರ್ಷದ ಹಿಂದೆಯೇ ಕುಮಾರಿ (ಹೆಸರು ಬದಲಿಸಲಾಗಿದೆ) ಗ್ರಾಮದ ಕುಮಾರ (ಹೆಸರು ಬದಲಿಸಲಾಗಿದೆ)ನೊಂದಿಗೆ ನಿಶ್ಚಿತಾರ್ಥ ನಡೆದಿತ್ತು ಎನ್ನಲಾಗಿದೆ. ಕುಮಾರಿಗೆ 18 ವರ್ಷ ತುಂಬಿದ ಹಿನ್ನೆಲೆ ನಿಶ್ಚಿತಾರ್ಥವಾದ ವರ್ಷದ ಬಳಿಕ ಫೆ. 5ರಂದು ತಾಲೂಕಿನ ತೆರಕಣಾಂಬಿ ಗ್ರಾಮದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಮದುವೆ ನಿಗದಿಯಾಗಿತ್ತು. ಫೆ. 3ರ ಸೋಮವಾರ ಸಂಜೆ ನವ ವಧುವಿಗೆ ನೀರು ಹಾಕುವ ಶಾಸ್ತ್ರ ಮುಗಿಸಿದ ಬಳಿಕ ಮನೆಯಲ್ಲಿಯೇ ನವವಧು ಇದ್ದಾಳೆ. ಮಂಗಳವಾರ ಮುಂಜಾನೆ (3 ಗಂಟೆ) ಸಮಯದಲ್ಲಿ ಮನೆಯಿಂದ ನಾಪತ್ತೆಯಾಗಿದ್ದಾಳೆ.
ಮದುವೆ ನಿರಾಕರಿಸಿದ ಅತ್ತೆ ಮಗಳ ಕಿಡ್ನಾಪ್, ಬಲವಂತವಾಗಿ ತಾಳಿ ಕಟ್ಟಿದ!
ಮದುವೆ ಫೆ. 5ರಂದು ನಿಗದಿಯಾಗಿದ್ದ ಹಿನ್ನೆಲೆ ಮದುವೆಗೆ ಬೇಕಾದ ಎಲ್ಲ ವ್ಯವಸ್ಥೆ ವಧು ವರರ ಕಡೆಯವರು ಮಾಡಿಕೊಂಡಿದ್ದರು. ನವ ವಧು ಪರಾರಿಯಾದ ಹಿನ್ನೆಲೆ ಮದುವೆ ನಿಂತಿದೆ. ನವವಧು ಎಲ್ಲಿಗೆ ಹೋಗಿದ್ದಾಳೆ ಎಂಬುದು ಸ್ವತಃ ವಧುವಿನ ಮನೆಯವರಿಗೂ ತಿಳಿದಿಲ್ಲ. ವಧು ಹಾಗೂ ವರನ ಸಂಬಂಧಿಕರು ವಧು ಪರಾರಿಯಾದ ವಿಷಯ ತಿಳಿದು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ವರನ ಸಂಬಂಧಿಕರು ವಧುವಿನ ಸಂಬಂಧಿಕರ ಮೇಲೆ ತೀವ್ರ ಆಕ್ರೋಶಗೊಂಡಿದ್ದಾರೆ. ಮದುವೆ ನಿಂತ ಕಾರಣ ವರನಿಗೆ ಅವಮಾನವಾಗಿದೆ ಎಂದು ವರನ ಸಂಬಂಧಿಕರು ವಾದ.
ಧಾರಾ ಮುಹೂರ್ತ ಮುಗಿಸಿ ಪರೀಕ್ಷೆ ಬರೆದ ಮದುಮಗಳು!
ವರನ ಸಂಬಂಧಿಕರು ಮದುವೆ ಹಣ ವ್ಯಯವಾಗಿದೆ. ಮದುವೆ ನಿಂತ ಕಾರಣ ಹಣ ಕೂಡ ನಷ್ಟವಾಗಿದೆ. ವಧುವಿನ ಮನೆಯವರು ಹಣ ಕಟ್ಟಿಕೊಡಲಿ ಎಂದು ಪಟ್ಟು ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ. ವಧುವಿನ ಕಡೆಯವರು ವರನ ಕಡೆಯವರು ಮದುವೆ ನಿಂತ ಸಂಬಂಧ ಮಾತುಕತೆ ನಡೆದಿದ್ದು, ವಧುವಿನ ಕಡೆಯವರು ವರನ ಕಡೆಯವರಿಗೆ ಒಂದೂವರೆ ಲಕ್ಷ ರು.ನೀಡಲು ಒಪ್ಪಿದ್ದಾರೆ ಎನ್ನಲಾಗಿದೆ.