ಬೆಂಗಳೂರು(ಫೆ.01): ಮದುವೆಯ ಧಾರೆ ಮುಹೂರ್ತ ಮುಗಿಯುತ್ತಿದ್ದಂತೆ ಮದು ಮಗಳು ಸ್ನಾತಕೋತ್ತರ ಪರೀಕ್ಷೆಗೆ ಹಾಜರಾದ ಅಪರೂಪದ ಘಟನೆ ನಗರದ ಅಂದರಹಳ್ಳಿಯಲ್ಲಿ ಶುಕ್ರವಾರ ನಡೆದಿದೆ. ಬೆಂಗಳೂರು ವಿಶ್ವವಿದ್ಯಾಲಯದ ಎಂ.ಕಾಂ. ವಿದ್ಯಾರ್ಥಿನಿ ಹರ್ಷಿತಾ ಮದುವೆಯ ದಿನವೇ ಪರೀಕ್ಷೆಗೆ ಹಾಜರಾದ ಮದುಮಗಳು.

ಜ್ಞಾನಭಾರತಿಯಲ್ಲಿ ಕಲ್ಯಾಣ ಮಂಟದಲ್ಲಿ ಶುಕ್ರವಾರ ನಡೆದ ಮದುವೆಯಲ್ಲಿ ಬೆಳಗ್ಗೆ 10.30ರಿಂದ 11.15ರ ಅವಧಿಯಲ್ಲಿ ಮುಹೂರ್ತ ನಡೆಯಿತು. ತಾಳಿ ಕಟ್ಟಿಧಾರೆಯೆರೆದ ತಕ್ಷಣ ಕಲ್ಯಾಣ ಮಂಟದಿಂದ ವಿದ್ಯಾರ್ಥಿನಿ ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ತೆರಳಿದರು. ಅಂದರಹಳ್ಳಿಯಲ್ಲಿರುವ ಆಚಾರ್ಯ ಶಾಲೆಯ ಪರೀಕ್ಷಾ ಕೇಂದ್ರಕ್ಕೆ ಆಗಮಿಸುವ ವೇಳೆಗೆ 11.45 ಆಗಿತ್ತು. ಪರೀಕ್ಷೆಯು 11 ಗಂಟೆಗೆ ಆರಂಭವಾಗಿದ್ದರಿಂದ ಮುಕ್ಕಾಲು ಗಂಟೆ ತಡವಾಗಿತ್ತು.

ಹೊಸ DGP- IG ನೇಮಕ ಬೆನ್ನಲ್ಲೇ, 23 ಐಪಿಎಸ್‌ ಅಧಿಕಾರಿಗಳ ವರ್ಗಾವಣೆ!

ವಿಳಂಬವಾಗಿ ಹಾಜರಾಗುತ್ತಿರುವುದಕ್ಕೆ ಪರೀಕ್ಷೆಗೆ ಅವಕಾಶ ನೀಡುತ್ತಾರೋ ಇಲ್ಲವೋ ಎಂಬ ಅನುಮಾನದಿಂದಲೇ ಬಂದ ವಿದ್ಯಾರ್ಥಿನಿಗೆ ಬೆಂ.ವಿವಿ ಮೌಲ್ಯಮಾಪನ ಕುಲಸಚಿವ ಡಾ.ಸಿ.ಶಿವರಾಜು ಅವರ ಒಪ್ಪಿಗೆ ಪಡೆದು ಪರೀಕ್ಷೆಗೆ ಅವಕಾಶ ಮಾಡಿಕೊಡಲಾಗಿದೆ.

ಈ ಬಗ್ಗೆ ಮಾಹಿತಿ ಪಡೆದು ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ ಕುಲಸಚಿವರು, ವಿದ್ಯಾರ್ಥಿಯು ಯಾವುದೇ ಆತಂಕಪಡದೆ ಸಮಾಧಾನದಿಂದ ಪರೀಕ್ಷೆ ಬರೆಯುವಂತೆ ಧೈರ್ಯ ತುಂಬಿದ್ದಾರೆ. ಪರೀಕ್ಷೆ ಮುಗಿದ ಬಳಿಕ ವಿದ್ಯಾರ್ಥಿಗೆ ಶಹಬ್ಬಾಸ್‌ ಹೇಳಿ ನಿಮ್ಮಂತೆಯೇ ಎಲ್ಲಾ ವಿದ್ಯಾರ್ಥಿಗಳು ಪರೀಕ್ಷಾ ಮಹತ್ವ ತಿಳಿಯಬೇಕಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ಐಐಟಿ ಪದವೀಧರ ಪ್ರವೀಣ್‌ ಸೂದ್‌, ನಂಜನಗೂಡಿನಿಂದ ಸೇವೆ ಆರಂಭಿಸಿದ್ದ ನೂತನ ಡಿಜಿಪಿ!

ಮದುಮಗಳ ಆತಂಕ ದೂರು ಮಾಡಿದ್ದಕ್ಕೆ ಬೆಂ.ವಿವಿ ಕುಲಸಚಿವರ ಕಾಳಜಿ ಹಾಗೂ ಮದುವೆ ಉಡುಗೆಯಲ್ಲೇ ಪರೀಕ್ಷಾ ಕೇಂದ್ರಕ್ಕೆ ಬಂದು ಪರೀಕ್ಷೆ ಬರೆದ ಹರ್ಷಿತಾ ಬಗ್ಗೆ ಪರೀಕ್ಷಾ ಕೇಂದ್ರದಲ್ಲಿ ಹಾಜರಿದ್ದವರು ಮೆಚ್ಚುಗೆ ವ್ಯಕ್ತಪಡಿಸಿದರು.