ಬೆಂಗಳೂರು[ಫೆ. 01]: ನೂತನ ಪೊಲೀಸ್‌ ಮಹಾನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿರುವ ಪ್ರವೀಣ್‌ ಸೂದ್‌ ಅವರು ಪೊಲೀಸ್‌ ಇಲಾಖೆಗೆ ಹೊಸತನದ ಮೆರಗು ನೀಡುವ ಮೂಲಕ ಇಲಾಖೆಯ ಸುಧಾರಕ ಎಂಬ ಕೀರ್ತಿಗೆ ಪಾತ್ರರಾದವರು.

ತಾಂತ್ರಿಕವಾಗಿ ಹೊಸ ಬದಲಾವಣೆಯನ್ನು ತಂದು ಇಲಾಖೆಗೆ ಆಧುನಿಕ ಸ್ಪರ್ಶವನ್ನು ಸಹ ನೀಡಿದ್ದರು. ಬೆಂಗಳೂರು, ಮೈಸೂರು ನಗರ ಪೊಲೀಸ್‌ ಆಯುಕ್ತರಾಗಿ ಅವರು ಸಲ್ಲಿಸಿದ ಸೇವೆಯು ಮೆಚ್ಚುಗೆಗೆ ಪಾತ್ರವಾಗಿತ್ತು.

1964ರ ಮೇ 22ರಂದು ಜನಿಸಿದ ಅವರು ಐಐಟಿ ದೆಹಲಿಯಲ್ಲಿ ಬಿಟೆಕ್‌ (ಸಿವಿಲ್‌ ಎಂಜಿನಿಯರಿಂಗ್‌) ವಿದ್ಯಾಭ್ಯಾಸ ಮಾಡಿದರು. 1986ರಲ್ಲಿ ಪೊಲೀಸ್‌ ಇಲಾಖೆಗೆ ಸೇರಿದ ಅವರು, ಇಲಾಖೆಯಲ್ಲಿ ಹಲವು ಪ್ರಮುಖ ಹುದ್ದೆಗಳನ್ನು ನಿರ್ವಹಿಸಿ ಸೈ ಎನಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಸಹಾಯಕ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ನಂಜನಗೂಡು ಉಪವಿಭಾಗದಲ್ಲಿ (1988-90) ಸೇವೆಯನ್ನು ಆರಂಭಿಸಿದರು. 1990ರಲ್ಲಿ ನಾಗರಿಕ ಹಕ್ಕುಗಳ ನಿರ್ದೇಶನಾಲಯದ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ನಂತರ ಬಳ್ಳಾರಿ, ರಾಯಚೂರು ನಂತರ ಬೆಂಗಳೂರು ನಗರದ ಪಶ್ಚಿಮ ವಿಭಾಗದ ಡಿಸಿಪಿಯಾಗಿ ಸೇವೆ ಸಲ್ಲಿಸಿದರು. ರೈಲ್ವೆ, ತರಬೇತಿ ಸೇರಿದಂತೆ ಇತರೆ ಇಲಾಖೆಯಲ್ಲಿಯೂ ಅವರ ಸೇವೆ ಗಣನೀಯವಾಗಿದೆ.

2003-05ರಲ್ಲಿ ಪ್ರವೀಣ್‌ ಸೂದ್‌ ಅವರು ಸಾರ್ವಜನಿಕ ನೀತಿ ಮತ್ತು ನಿರ್ವಹಣೆ ಕುರಿತು ಸ್ನಾತಕೋತ್ತರ ಪದವಿಯನ್ನು ಗಳಿಸಿದ್ದಾರೆ. 2004-2007ರ ಅವಧಿಗೆ ಮೈಸೂರು ಆಯುಕ್ತರಾಗಿ, ಬೆಂಗಳೂರು ನಗರ ಸಂಚಾರ ವಿಭಾಗದ ಹೆಚ್ಚುವರಿ ಆಯುಕ್ತರಾಗಿ ಹಲವು ಬದಲಾವಣೆಗಳನ್ನು ತಂದಿದ್ದಾರೆ. ಪೊಲೀಸ್‌ ಇಲಾಖೆಯ ಕಂಪ್ಯೂಟರ್‌ ವಿಭಾಗದ ಎಡಿಜಿಪಿಯಾಗಿ ಕರ್ತವ್ಯ ನಿರ್ವಹಿಸಿದ ವೇಳೆ ಆಧುನಿಕ ತಂತ್ರಜ್ಞಾನವನ್ನು ಇಲಾಖೆಗೆ ಯಾವ ರೀತಿ ಬಳಸಿಕೊಳ್ಳಬಹುದು ಎಂಬುದನ್ನು ತೋರಿಸಿಕೊಟ್ಟರು. ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಕೆಎಸ್‌ಆರ್‌ಪಿ ಎಡಿಜಿಪಿ, ಬೆಂಗಳೂರು ನಗರ ಪೊಲೀಸ್‌ ಆಯುಕ್ತರಾಗಿ, ಅಂತರಿಕ ಭದ್ರತಾ ವಿಭಾಗದ ಡಿಜಿಪಿಯಾಗಿ ಸೇವೆ ಸಲ್ಲಿಸಿದ್ದ ಅವರು ಸಿಐಡಿ ವಿಶೇಷ ವಿಭಾಗ ಮತ್ತು ಆರ್ಥಿಕ ಅಪರಾಧ ವಿಭಾಗದಲ್ಲಿ ಡಿಜಿಪಿಯಾಗಿದ್ದರು. ಇದೀಗ ಪೊಲೀಸ್‌ ಇಲಾಖೆ ಅತ್ಯುನ್ನತ ಹುದ್ದೆಯಾದ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಸ್ಥಾನಕ್ಕೇರಿದ್ದಾರೆ. ಮುಂದಿನ ನಾಲ್ಕು ವರ್ಷಗಳ ಕಾಲ ಪೊಲೀಸ್‌ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸಲಿದ್ದಾರೆ.