ಬೆಂಗಳೂರು(ಫೆ.08): ಸಾಲಕ್ಕೆ ಹೆದರಿ ತಾಯಿ ಕೊಂದು ಪ್ರಿಯಕರನ ಜತೆ ಅಂಡಮಾನ್‌ಗೆ ತೆರಳಿದ್ದ ಮಹಿಳಾ ಟೆಕ್ಕಿಯ ಕೃತ್ಯ ಆಕೆಯ ಪ್ರಿಯಕರನಿಗೆ ತಿಳಿದಿರಲಿಲ್ಲ ಎಂದು ಪೊಲೀಸ್‌ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಫೆ.2ರಂದು ಅಮೃತಾ ಮತ್ತು ಶ್ರೀಧರ್‌ರಾವ್‌ ಬೆಳಗಿನ ಜಾವ ವಿಮಾನದಲ್ಲಿ ಅಂಡಮಾನ್‌ ಹೋಗಲು ಮೊದಲೇ ಸಿದ್ಧತೆ ನಡೆಸಿದ್ದರು. ಶ್ರೀಧರ್‌ಗೆ ಆಕೆ ತಾಯಿಯನ್ನು ಹತ್ಯೆ ಮಾಡುವ ವಿಚಾರ ತಿಳಿದಿರಲಿಲ್ಲ. ಅದೇ ದಿನ ನಸುಕಿನಲ್ಲಿ 1.30 ಗಂಟೆ ಸುಮಾರಿಗೆ ಶ್ರೀಧರ್‌ರಾವ್‌, ಅಮೃತಾಗೆ ವಾಟ್ಸಪ್‌ ಮಾಡಿ ಸಿದ್ಧವಾಗಿದ್ದೀಯಾ ಹೊರಡಲು ಎಂದು ಕೇಳಿದ್ದ. ಅದಕ್ಕೆ ಆಕೆ ಸಿದ್ಧಳಾಗಿದ್ದೇನೆ ಎಂದು ಉತ್ತರಿಸಿದ್ದಳು. ಮುಂಜಾನೆ ಮೂರುವರೆಗೆ ಪ್ರಿಯಕರನಿಗೆ ಕರೆ ಮಾಡಿದ್ದ ಅಮೃತಾ, ತಾಯಿಗೆ ಉಸಿರಾಟದ ಸಮಸ್ಯೆಯಾಗಿದೆ ಎಂದಿದ್ದಳು. ಇದಕ್ಕೆ ಪ್ರತಿಕ್ರಿಯಿಸಿದ್ದ ಶ್ರೀಧರ್‌, ಹೋಗೋದು ಬೇಡ. ಟಿಕೆಟ್‌ ರದ್ದು ಪಡಿಸೋಣ ಎಂದು ಹೇಳಿದ್ದ.

ತಾಯಿ, ಸಹೋದರನಿಗೆ ಮುಜುಗರ ತಪ್ಪಿಸಲು ಕೊಲೆ: ಬಾಯ್ಬಿಟ್ಟ ಮಗಳು ಅಮೃತಾ!

40 ನಿಮಿಷಗಳ ಬಳಿಕ ಮತ್ತೆ ಕರೆ ಮಾಡಿ, ಇದೀಗ ತಾಯಿ ಆರೋಗ್ಯವಾಗಿದ್ದು, ಹೊಗೋಣ. ಕ್ಯಾಬ್‌ ಕಾಯ್ದಿರಿಸಿದ್ದೇನೆ ಎಂದಿದ್ದಳು. ಆದರೆ, ತಾಯಿ ಕೊಂದು, ಸಹೋದರನ ಕೊಲೆಗೈಯಲು ಯತ್ನಿಸಿ ಹೊರಡಲು ತಡವಾದ ಕಾರಣ ಕ್ಯಾಬನ್ನು ರದ್ದುಪಡಿಸಿದ್ದಳು. ನಂತರ ಶ್ರೀಧರ್‌ಗೆ ಕರೆ ಮಾಡಿ ಬೈಕ್‌ನಲ್ಲಿ ಕೇವಲ 43 ನಿಮಿಷಗಳಲ್ಲೇ ಏರ್‌ಪೋರ್ಟ್‌ ತಲುಪಿದ್ದರು ಎಂದು ಪೊಲೀಸರು ಹೇಳಿದರು.

ಅಂಡಮಾನ್‌ನಲ್ಲಿ ಮಜಾ ಮಾಡ್ತಿದ್ದ ಹಂತಕಿ ಹಿಡಿದ ಇನ್ಸ್ ಪೆಕ್ಟರ್‌ಗೆ ಇದೆಂಥಾ ಬಹುಮಾನ!

ಮಾರ್ಗ ಮಧ್ಯೆ ಮೊಬೈಲ್‌ ಬಿಸಾಡಿದ್ಲು:

ವಿಮಾನ ನಿಲ್ದಾಣಕ್ಕೆ ಹೋಗುವ ಮಾರ್ಗಮಧ್ಯೆ ರಾಮಮೂರ್ತಿನಗರದಲ್ಲಿ ಅಮೃತಾ ತನ್ನ ಮೊಬೈಲ್‌ನ್ನು ಪ್ರಿಯಕರ ಶ್ರೀಧರ್‌ಗೆ ತಿಳಿಯದಂತೆ ಬಿಸಾಡಿದ್ದಳು. ಪ್ರಿಯಕರ ಮೊಬೈಲ್‌ ಬಗ್ಗೆ ಪ್ರಶ್ನೆ ಮಾಡಿದಾಗ ಮನೆಯಲ್ಲಿಯೇ ಬಿಟ್ಟು ಬಂದಿರುವುದಾಗಿ ಹೇಳಿದ್ದಳು. ಪ್ರಿಯಕರ ಜತೆ ಅಂಡಮಾನ್‌ನಲ್ಲಿ ಇದ್ದ ಕಾರಣ ಆತ್ಮಹತ್ಯೆ ಮಾಡಿಕೊಂಡರೆ ಆತನಿಗೆ ತೊಂದರೆಯಾಗಲಿದೆ ಎಂದು ಆತ್ಮಹತ್ಯೆ ಮಾಡಿಕೊಳ್ಳಲಿಲ್ಲ. ಬೆಂಗಳೂರಿಗೆ ಬಂದು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೆ. ತನ್ನ ತಾಯಿ ಕೊಂದ ವಿಚಾರ ಆತನಿಗೆ ಗೊತ್ತಿರಲಿಲ್ಲ ಎಂದು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.