Asianet Suvarna News Asianet Suvarna News

ತಾಯಿ, ಸಹೋದರನಿಗೆ ಮುಜುಗರ ತಪ್ಪಿಸಲು ಕೊಲೆ: ಬಾಯ್ಬಿಟ್ಟ ಮಗಳು ಅಮೃತಾ!

ಸಾಲಕ್ಕೆ ಹೆದರಿ ತಾಯಿಯ ಕೊಂದೆ!| ಪೊಲೀಸರ ಮುಂದೆ ಕೆ.ಆರ್‌.ಪುರದಲ್ಲಿ ತಾಯಿಯನ್ನು ಕೊಂದ ಮಹಿಳಾ ಟೆಕಿ ಹೇಳಿಕೆ| ವಿವಿಧ ಬ್ಯಾಂಕ್‌ಗಳಲ್ಲಿ .15 ಲಕ್ಷ ಸಾಲ| ಸಾಲ ವಸೂಲಿಗೆ ಬಂದರೆ ತಾಯಿ, ಸಹೋದರನಿಗೆ ಮುಜುಗರ ತಪ್ಪಿಸಲು ಕೊಲೆ| ಇದಕ್ಕಾಗಿ 2 ಚಾಕು ಖರೀದಿಸಿದ್ದ ಯುವತಿ

Bengaluru Woman Techie Amrutha Reveals The Reason For Killing Her Mother And Attacking On Brother
Author
Bangalore, First Published Feb 7, 2020, 7:56 AM IST

ಬೆಂಗಳೂರು[ಫೆ.07]: ಹೆಚ್ಚಾದ ಸಾಲಗಾರರ ಒತ್ತಡ, ಬ್ಯಾಂಕ್‌ನವರು ಮನೆ ಬಳಿ ಬಂದು ಗಲಾಟೆ ಮಾಡುತ್ತಾರೆ ಎಂಬ ಭಯ, ಇದನ್ನೆಲ್ಲಾ ನೋಡಿದ ತಾಯಿ ನೊಂದು ಕೊಳ್ಳುತ್ತಾರೆ ಎಂಬ ಕಾರಣಕ್ಕೆ ಅವರನ್ನು ಕೊಂದು, ತಾನು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ನಿರ್ಧರಿಸಿದ್ದೆ...!

ಕೆ.ಆರ್‌.ಪುರದಲ್ಲಿ ತನ್ನ 54 ವರ್ಷದ ತನ್ನ ತಾಯಿಯ ಕೊಂದು ತನ್ನ ಸಹೋದರನ ಹತ್ಯೆಗೆ ವಿಫಲ ಯತ್ನ ನಡೆಸಿ ಅಂಡಮಾನ್‌ ನಿಕೋಬಾರ್‌ಗೆ ಹೋಗಿದ್ದ ಮಹಿಳಾ ಟೆಕಿ ಅಮೃತಾ ಪೊಲೀಸರ ಬಳಿ ಬಾಯ್ಬಿಟ್ಟಿದ್ದಾಳೆ.

"

ಆರೋಪಿತೆ ಮತ್ತು ಶ್ರೀಧರ್‌ 2013ರಿಂದ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಎರಡು ವರ್ಷದ ಹಿಂದೆ ಕೆಲಸ ಬಿಟ್ಟಿದ್ದ ಅಮೃತಾ ಮನೆಯಲ್ಲಿಯೇ ಇದ್ದಳು. ಬ್ಯಾಂಕ್‌ ಹಾಗೂ ಕ್ರೆಡಿಟ್‌ ಕಾರ್ಡ್‌ ಮೂಲಕ ಎಚ್‌ಡಿಎಫ್‌ಸಿ ಬ್ಯಾಂಕ್‌ ಸೇರಿದಂತೆ ಇತರೆ ಬ್ಯಾಂಕ್‌ಗಳಲ್ಲಿ ಸುಮಾರು .15 ಲಕ್ಷ ಸಾಲ ಮಾಡಿದ್ದಳು. ಈ ಹಣದಲ್ಲಿ ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸಿದ್ದು, ಮನೆಗೆ ಮಾಸಿಕ ಹಣ ಕೂಡ ನೀಡುತ್ತಿದ್ದಳು. ಮನೆಯಲ್ಲಿಯೇ ಇದ್ದು ಕಚೇರಿ ಕೆಲಸವನ್ನು ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಳು.

"

ತಾಯಿಯನ್ನೇ ಕೊಂದು ಲವರ್ ಜೊತೆ ಎಸ್ಕೇಪ್ ಆಗಿದ್ದ ಅಮೃತಾ ಅರೆಸ್ಟ್!

ಪ್ರಾಥಮಿಕ ವಿಚಾರಣೆಯಲ್ಲಿ ಸಾಲದ ಒತ್ತಡ ಹೆಚ್ಚಾಗುತ್ತಿದ್ದಂತೆ ತಲೆಮರೆಸಿಕೊಳ್ಳಲು ಆಕೆ ಸಿದ್ಧತೆ ನಡೆಸಿದ್ದಳು. ಆದರೆ, ಬ್ಯಾಂಕ್‌ ಅಧಿಕಾರಿಗಳು ಮನೆಗೆ ಬಂದಾಗ ತಾಯಿ, ಸಹೋದರನಿಗೆ ಮುಜುಗರ ಉಂಟಾಗುತ್ತದೆ. ಹೀಗಾಗಿ ಇಬ್ಬರನ್ನು ಕೊಂದು ಪರಾರಿಯಾಗಲು ನಾಲ್ಕು ತಿಂಗಳ ಹಿಂದೆಯೇ ನಿರ್ಧರಿಸಿದ್ದಳು. ಅದಕ್ಕಾಗಿ ಎರಡು ಚಾಕುಗಳನ್ನು ಖರೀದಿಸಿ, ತನ್ನ ಬ್ಯಾಗ್‌ನಲ್ಲಿ ಇಟ್ಟುಕೊಂಡಿದ್ದಳು. ಫೆ.2ರ ಮುಂಜಾನೆ ಪಕ್ಕದಲ್ಲಿ ಮಲಗಿದ್ದ ತಾಯಿ ನಿರ್ಮಲಾರನ್ನು ದಿಬ್ಬಿನಿಂದ ಉಸಿರುಗಟ್ಟಿಸಿ, ಬಳಿಕ ಚಾಕುವಿನಿಂದ ಎದೆಗೆ ಆರೇಳು ಬಾರಿ ಇರಿದಿದ್ದಾಳೆ. ತಾಯಿ ರಕ್ತ ಕಂಡ ಆಕೆ ಅರ್ಧ ಗಂಟೆಗಳ ಕಾಲ ಮೃತ ದೇಹದ ಎದುರು ಕೂತು ಕಣ್ಣಿರು ಹಾಕಿದ್ದಾಳೆ. ಬಳಿಕ ಸಹೋದರನಿಗೆ ಎರಡು ಬಾರಿ ಇರಿದು ಗಾಯಗೊಳಿಸಿ, ಪರಾರಿಯಾಗಿದ್ದಾಳೆ. ಆದರೆ, ಕೊಲೆ ವಿಚಾರ ಆಕೆಯ ಪ್ರಿಯಕರ ಶ್ರೀಧರ್‌ರಾವ್‌ಗೆ ಗೊತ್ತಿರಲಿಲ್ಲ ಎಂದು ಹೇಳಲಾಗಿದೆ. ಹೀಗಾಗಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

"

ಅಲ್ಲದೆ, ಕೃತ್ಯದ ಹಿಂದಿನ ಮೂರು ದಿನ ಅಮೃತಾ ನಿದ್ದೆಯೇ ಮಾಡಿಲ್ಲ. ಜತೆಗೆ ಕಳೆದ ನಾಲ್ಕು ತಿಂಗಳಿಂದ ನಿದ್ದೆ ಮಾಡಲು ನಿತ್ಯ ನಿದ್ದೆ ಮಾತ್ರೆ ಸೇವಿಸುತ್ತಿದ್ದಳು ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.

"

ಅಮೃತಾ ಜತೆ ಪ್ರವಾಸ ಹೋಗಲು ಶ್ರೀಧರ್‌ ಕೂಡ ಸಾಲ ಮಾಡಿಕೊಂಡು ಆಕೆಯನ್ನು ಫೆ.2ರಂದು ಅಂಡಮಾನ್‌-ನಿಕೋಬಾರ್‌ಗೆ ಕರೆದೊಯ್ದಿದ್ದಾನೆ. ಮೂರು ದಿನಗಳ ಕಾಲ ಮೂರು ಹೋಟೆಲ್‌ಗಳಲ್ಲಿ ತಂಗಿದ್ದರು. ಫೆ.5ರಂದು ಅಂಡಮಾನ್‌ನ ಕೋಟೆಯೊಂದು ನೋಡಿಕೊಂಡು ಇಬ್ಬರು ಹೊರಬರುವಾಗ ಬಂಧಿಸಲಾಯಿತು. ಅದಕ್ಕೆ ಸ್ಥಳೀಯ ಪೊಲೀಸರು ನೆರವು ನೀಡಿದ್ದರು. ಶ್ರೀಧರ್‌ ರಾವ್‌ ವಿರುದ್ಧ 2017ರಲ್ಲಿ ರಸ್ತೆ ಅಪಘಾತ ಎಸಗಿದ ಆರೋಪವಿದೆ ಎಂದು ತನಿಖಾಧಿಕಾರಿಗಳು ತಿಳಿಸಿದರು.

"

ಓಡಿ ಹೋಗೋಣ ಬಾ.. ಮರ್ಡರ್ ಮಾಡಿ ಬೆಂಗಳೂರು ಟೆಕ್ಕಿ ಬಾಯ್ ಫ್ರೆಂಡ್ ಜತೆ ಪರಾರಿ

ಸುತ್ತಾಡಲು ಬೈಕ್‌ ಬುಕ್‌ ಮಾಡಿದ್ರು!

ಆರೋಪಿಗಳು ಅಂಡಮಾನ್‌ನಲ್ಲಿ ಸುತ್ತಾಡಲು ಖಾಸಗಿ ಬೈಕ್‌ವೊಂದನ್ನು ಬುಕ್‌ ಮಾಡಿದ್ದರು. ಆರೋಪಿತೆ ತನ್ನ ಮೊಬೈಲ್‌ನಲ್ಲಿಯೇ ಬೈಕ್‌ ಬುಕ್‌ ಮಾಡಿದ್ದಳು. ಇದರ ಜಾಡು ಹಿಡಿದು ಕೆ.ಆರ್‌.ಪುರ ಇನ್‌ಸ್ಪೆಕ್ಟರ್‌ ಅಂಬರೀಶ್‌ ಆರೋಪಿಗಳನ್ನು ಬಲೆಗೆ ಕೆಡವಿದ್ದಾರೆ. ಕೊಲೆ ಮಾಡಿ ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದಿದ್ದೆ ಎಂದು ಹೇಳಿಕೆ ನೀಡಿದ್ದಾಳೆ. ಆದರೆ ಆಕೆ ಹಾಗೂ ಪ್ರಿಯಕರನ ಹೇಳಿಕೆ ಗೊಂದಲಕಾರಿಯಾಗಿವೆ. ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.

Follow Us:
Download App:
  • android
  • ios