ಬೆಂಗಳೂರು :  ಬಿಎಂಟಿಸಿಯು ಕಳೆದ ಶೈಕ್ಷಣಿಕ ಸಾಲಿನಲ್ಲಿ ಪ್ರಥಮ ಬಾರಿಗೆ ಪರಿಚಯಿಸಿದ್ದ ಸ್ಮಾರ್ಡ್‌ ಕಾರ್ಡ್‌ ಮಾದರಿ ವಿದ್ಯಾರ್ಥಿ ಬಸ್‌ಪಾಸ್‌ ವಿತರಣೆಯಲ್ಲಾಗಿದ್ದ ಗೊಂದಲಗಳಿಂದ ಪಾಠ ಕಲಿತಿದ್ದು, ಸಮಸ್ಯೆಗಳು ಪುನರಾವರ್ತನೆಯಾಗದಂತೆ ಪ್ರಸಕ್ತ ಸಾಲಿನಿಂದ ಆನ್‌ಲೈನ್‌ ಶುಲ್ಕ ಪಾವತಿ ಹಾಗೂ ಅಂಚೆ ಮೂಲಕ ಪಾಸ್‌ ವಿತರಣೆಗೆ ಕೋಕ್‌ ನೀಡಿದೆ.

ಬದಲಿಗೆ, ವಿದ್ಯಾರ್ಥಿಗಳೇ ಆನ್‌ಲೈನ್‌ ಮೂಲಕ ಪಾಸ್‌ಗೆ ಅರ್ಜಿ ಸಲ್ಲಿಸುವ ವೇಳೆ ತಮಗೆ ಅನುಕೂಲವಾದ ಸಮಯ ನಿಗದಿ ಮಾಡಿ, ಆ ಸಮಯಕ್ಕೆ ಸಮೀಪದ ಪಾಸ್‌ ವಿತರಣಾ ಕೌಂಟರ್‌ಗೆ ಹೋದರೆ ಸಾಕು ಕೆಲವೇ ನಿಮಿಷಗಳಲ್ಲಿ ಸ್ಮಾರ್ಟ್‌ ಕಾರ್ಡ್‌ ವಿದ್ಯಾರ್ಥಿಗಳ ಕೈ ಸೇರುತ್ತದೆ.

ಶಾಲಾ-ಕಾಲೇಜು ವಿದ್ಯಾರ್ಥಿಗಳು ಶಾಲಾ ತರಗತಿ, ಟ್ಯೂಷನ್‌, ಪಠ್ಯೇತರ ಚಟುವಟಿಕೆಗಳ ಒತ್ತಡದ ನಡುವೆ ಪಾಸ್‌ ವಿತರಣಾ ಕೇಂದ್ರದಲ್ಲಿ ಗಂಟೆಗಟ್ಟಲೇ ಸಾಲು ನಿಲ್ಲುವುದು ಕಷ್ಟವಾಗುತ್ತಿದೆ. ಹೀಗಾಗಿ ತಮಗೆ ಅನುಕೂಲವಾದ ಸಮಯವನ್ನು ಆನ್‌ಲೈನ್‌ ಮೂಲಕ ಮೊದಲೇ ನಿಗದಿ ಪಡಿಸಿಕೊಂಡು ಸಮಯಕ್ಕೆ ಸರಿಯಾಗಿ ಪಾಸ್‌ ವಿತರಣಾ ಕೇಂದ್ರ ತಲುಪಿದರೆ 5-10 ನಿಮಿಷದಲ್ಲಿ ಸ್ಮಾರ್ಟ್‌ ಕೈ ಸೇರಲಿದೆ ಎನ್ನುತ್ತಾರೆ ಬಿಎಂಟಿಸಿ ಅಧಿಕಾರಿಗಳು.

ಇನ್ನು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸಹಜವಾಗಿ ಬೆಳಗ್ಗೆ ಅಥವಾ ಸಂಜೆ ಬಿಡುವು ಲಭಿಸುವುದರಿಂದ ಎಲ್ಲಾ ವಿದ್ಯಾರ್ಥಿಗಳು ಒಂದೇ ಅವಧಿಗೆ ಪಾಸ್‌ ವಿತರಣಾ ಕೇಂದ್ರಕ್ಕೆ ಲಗ್ಗೆ ಇಡುವ ಸಾಧ್ಯತೆ ಇದೆ. ಈ ವೇಳೆ ದಟ್ಟಣೆ ಉಂಟಾಗದೆ ಸಲೀಸಾಗಿ ಪಾಸ್‌ ಪಡೆಯಲು ನೆರವಾಗುವಂತೆ ನಗರಾದ್ಯಂತ 26 ಪಾಸ್‌ ವಿತರಣಾ ಕೇಂದ್ರ ಸ್ಥಾಪಿಸಿದ್ದು, 92 ಕೌಂಟರ್‌ ತೆರೆಯಲಾಗಿದೆ. ಇನ್ನು ಆನ್‌ಲೈನ್‌ನಲ್ಲಿ ಸ್ಲಾಟ್‌ ನಿಗದಿ ಮಾಡಿಕೊಳ್ಳದೆ ನೇರವಾಗಿ ಹೋಗುವವರಿಗೆ ಪ್ರತ್ಯೇಕ ಕೌಂಟರ್‌ ವ್ಯವಸ್ಥೆ ಮಾಡಲಿದ್ದು, ಆನ್‌ಲೈನ್‌ನಲ್ಲಿ ಸ್ಲಾಟ್‌ ಪಡೆದವರಿಗೆ ತ್ವರಿತವಾಗಿ ಪಾಸ್‌ ದೊರೆಯಲಿದೆ.

ಆನ್‌ಲೈನ್‌ ಅರ್ಜಿ : ಬಿಎಂಟಿಸಿ ಜಾಲತಾಣದಲ್ಲಿ ಆನ್‌ಲೈನ್‌ ಮೂಲಕ ವಿದ್ಯಾರ್ಥಿಗಳು ಬಸ್‌ ಪಾಸ್‌ಗೆ ಅರ್ಜಿ ಸಲ್ಲಿಸಬೇಕು. ಅರ್ಜಿಯಲ್ಲಿ ಭಾವಚಿತ್ರ ಹಾಗೂ ಅಗತ್ಯ ದಾಖಲೆಗಳನ್ನು ಅಪ್‌ಲೋಡ್‌ ಮಾಡಬೇಕು. ಬಳಿಕ ಮೊಬೈಲ್‌ಗೆ ಒಟಿಪಿ ಸಂಖ್ಯೆ ಬರಲಿದೆ. ಈ ಒಟಿಪಿ ಸಂಖ್ಯೆಯನ್ನು ಅರ್ಜಿಯಲ್ಲಿ ನಮೂದಿಸಿ ಬಳಿಕ ಸಲ್ಲಿಸಬೇಕು. ನಂತರ ಶಿಕ್ಷಣ ಸಂಸ್ಥೆ ಹಾಗೂ ಬಿಎಂಟಿಸಿ ಅರ್ಜಿ ಪರಿಶೀಲಿಸಿ, ಪ್ರಕ್ರಿಯೆ ಮುಗಿದ ಬಳಿಕ ಅರ್ಜಿ ಅನುಮೋದನೆಗೊಂಡಿರುವ ಬಗ್ಗೆ ಮೊಬೈಲ್‌ಗೆ ಸಂದೇಶ ಬರಲಿದೆ. ಬಳಿಕ ವಿದ್ಯಾರ್ಥಿಗಳು ತಮಗೆ ಸಮೀಪವಿರುವ ಪಾಸ್‌ ವಿತರಣಾ ಕೌಂಟರ್‌ ಆಯ್ಕೆ ಮಾಡಿ ಆನ್‌ಲೈನ್‌ನಲ್ಲಿ ತಮ್ಮ ಸಮಯ ನಿಗದಿ ಮಾಡಿಕೊಳ್ಳಬೇಕು. ನಿಗದಿತ ಸಮಯಕ್ಕೆ ಆ ಪಾಸ್‌ ಕೌಂಟರ್‌ಗೆ ತೆರಳಿ ನಿಗದಿತ ಪಾಸ್‌ ಶುಲ್ಕ ಪಾವತಿಸಿ ಸ್ಮಾರ್ಟ್‌ ಕಾರ್ಡ್‌ ಪಡೆದುಕೊಳ್ಳಬಹುದು ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು.

ಆನ್‌ಲೈನ್‌ ಶುಲ್ಕ ಪಾವತಿ, ಅಂಚೆ ವ್ಯವಸ್ಥೆಗೆ ಕೊಕ್‌:

ಕಳೆದ ವರ್ಷ ಮೊದಲ ಬಾರಿಗೆ ಸ್ಮಾರ್ಟ್‌ ಕಾರ್ಡ್‌ ಪರಿಚಯಿಸಿದ್ದ ಬಿಎಂಟಿಸಿ ಪಾರ್ಸ್‌ ವಿತರಣೆ ವ್ಯವಸ್ಥೆಯನ್ನೂ ಸ್ಮಾರ್ಟ್‌ ಮಾಡಲು ಹೋಗಿ ಕೈ ಸುಟ್ಟುಕೊಂಡಿತ್ತು. ಆನ್‌ಲೈನ್‌ನಲ್ಲೇ ಶುಲ್ಕ ಪಾವತಿ ಪಾವತಿ ಮಾಡಿ, ಅಂಚೆ ಮೂಲಕ ವಿದ್ಯಾರ್ಥಿ ಮನೆಗಳಿಗೇ ಪಾಸ್‌ ಕಳುಹಿಸುವ ವ್ಯವಸ್ಥೆ ಮಾಡಿದ್ದರು.

ಆದರೆ ಆನ್‌ಲೈನ್‌ ಪಾವತಿಯಲ್ಲಿ ಆದ ತಾಂತ್ರಿಕ ಸಮಸ್ಯೆ ಹಾಗೂ ಆನ್‌ಲೈನ್‌ನಲ್ಲಿ ನಗದು ಪಾವತಿ ಮಾಡಿದ್ದರೂ ಮನೆಗೆ ಪಾಸ್‌ ತಲುಪದ ಬಗ್ಗೆ ವ್ಯಾಪಕವಾಗಿ ದೂರುಗಳು ಬಂದಿದ್ದವು. ದೂರುಗಳನ್ನು ಸರಿಪಡಿಸಲಾಗದೆ ಬಿಎಂಟಿಸಿ ತೀವ್ರ ಸಮಸ್ಯೆ ಎದುರಿಸಿತ್ತು. ಹೀಗಾಗಿ ಈ ಬಾರಿ ಆನ್‌ಲೈನ್‌ ಶುಲ್ಕ ಪಾವತಿ ಹಾಗೂ ಅಂಚೆ ಮೂಲಕ ಪಾಸ್‌ ಕಳುಹಿಸುವ ಸೌಲಭ್ಯಕ್ಕೆ ವಿದಾಯ ಹೇಳಲಾಗಿದೆ.

ಜೂನ್‌ ಮೊದಲ ವಾರದಿಂದ ವಿತರಣೆ

ಪ್ರಸಕ್ತ ಶೈಕ್ಷಣಿಕ ಸಾಲಿನ ಬಸ್‌ ಪಾಸ್‌ ವಿತರಣಾ ಪ್ರಕ್ರಿಯೆಗೆ ಜೂನ್‌ ಮೊದಲ ವಾರದಲ್ಲಿ ಚಾಲನೆ ನೀಡಲಾಗುತ್ತದೆ. 1ರಿಂದ 10ನೇ ತರಗತಿ, ಪ್ರಥಮ, ದ್ವಿತೀಯ ಪಿಯು, ಪದವಿ, ವೃತ್ತಿಪರ ಕೋರ್ಸ್‌, ಎಂಜಿನಿಯರಿಂಗ್‌, ವೈದ್ಯಕೀಯ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ಜೂನ್‌ ಮೊದಲ ವಾರದಿಂದ ಆಗಸ್ಟ್‌ ಅಂತ್ಯದೊಳಗೆ ಬಸ್‌ ವಿತರಿಸಲು ವೇಳಾ ಪಟ್ಟಿತಯಾರಿಸಲಾಗಿದೆ.

ಮಾರ್ಗ ಬದಲಾವಣೆಗೆ ಅವಕಾಶ

ಕಳೆದ ಸಾಲಿನಲ್ಲಿ ಬಸ್‌ ಪಾಸ್‌ ಪಡೆದ ಹಾಗೂ ಹೊಸದಾಗಿ ಪಡೆಯುವ ವಿದ್ಯಾರ್ಥಿಗಳೂ ಆನ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಸಬೇಕು. ಅರ್ಜಿಯಲ್ಲಿ ಹೊಸದು ಹಾಗೂ ನವೀಕರಣ ಎಂಬ ಆಯ್ಕೆಗಳಿದ್ದು, ವಿದ್ಯಾರ್ಥಿಗಳು ತಮ್ಮ ಆಯ್ಕೆ ನಮೂದಿಸಬೇಕು. ಪಾಸ್‌ ನವೀಕರಣ ಮಾಡುವ ವಿದ್ಯಾರ್ಥಿಗಳು ತಮ್ಮ ವಾಸಸ್ಥಳ ಬದಲಾಗಿದ್ದರೆ, ಸಂಚಾರದ ಮಾರ್ಗ ಬದಲಾವಣೆಗೆ ಅವಕಾಶ ಕಲ್ಪಿಸಲಾಗಿದೆ.

ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದ ಸ್ಮಾರ್ಟ್‌ ಕಾರ್ಡ್‌ ಮಾದರಿಯ ಬಸ್‌ ಪಾಸ್‌ ನೀಡಲು ಎಲ್ಲ ರೀತಿಯ ಸಿದ್ಧತೆ ನಡೆಯುತ್ತಿದೆ. ಕಳೆದ ಬಾರಿಯ ಗೊಂದಲಗಳನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಜೂನ್‌ ಮೊದಲ ವಾರದಿಂದ ಪಾಸ್‌ ವಿತರಣಾ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ.

-ಡಾ.ಎನ್‌.ವಿ.ಪ್ರಸಾದ್‌, ವ್ಯವಸ್ಥಾಪಕ ನಿರ್ದೇಶಕ, ಬಿಎಂಟಿಸಿ.

ವರದಿ :  ಮೋಹನ ಹಂಡ್ರಂಗಿ

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.