ಅಕ್ಷರ ಇಲ್ಲದಿದ್ದರೆ ಪುಸ್ತಕ ಖಾಲಿ ಹಾಳೆ: ರಮೇಶ್ ಅರವಿಂದ್
ಒಳ್ಳೆಯ ಯೋಚನೆಯನ್ನು ಬರವಣಿಗೆ ಮೂಲಕ ದಾಖಲಿಸಿದಾಗ ಅದನ್ನು ಮುಂದಿನ ಪೀಳಿಗೆಗೆ ತಲುಪಿಸಲು ಸಾಧ್ಯವಾಗುತ್ತದೆ ಎಂದು ನಟ ರಮೇಶ್ ಅರವಿಂದ್ ಹೇಳಿದರು.

ಬೆಂಗಳೂರು (ಅ.09): ಒಳ್ಳೆಯ ಯೋಚನೆಯನ್ನು ಬರವಣಿಗೆ ಮೂಲಕ ದಾಖಲಿಸಿದಾಗ ಅದನ್ನು ಮುಂದಿನ ಪೀಳಿಗೆಗೆ ತಲುಪಿಸಲು ಸಾಧ್ಯವಾಗುತ್ತದೆ ಎಂದು ನಟ ರಮೇಶ್ ಅರವಿಂದ್ ಹೇಳಿದರು. ಭಾನುವಾರ ನಗರದ ಬಿ.ಪಿ.ವಾಡಿಯಾ ಸಭಾಂಗಣದಲ್ಲಿ ನಡೆದ ‘ಅಕ್ಷರ ಆರಾಧನೆ’ ಕಾರ್ಯಕ್ರಮದಲ್ಲಿ ಸಾವಣ್ಣ ಪ್ರಕಾಶನದ ಏಳು ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಪುಸ್ತಕ ಹಾಗೂ ಸಿನಿಮಾ ಯಶಸ್ವಿ ಆಗಲು ಓದುಗರು, ಪ್ರೇಕ್ಷಕರು ಹಾಗೂ ಬರೆದವರ ಮಿದುಳು ಹೊಂದಿಕೆಯಾಗಬೇಕು.
ಓದುಗರ ಹಾಗೂ ಬರೆದವರ ಸೂಕ್ಷ್ಮತೆ ಹೊಂದಾಣಿಕೆ ಆದರೆ ಅಕ್ಷರ ಗೆಲ್ಲುತ್ತದೆ. ಪುಸ್ತಕ ಬರೆಯುವುದು ಸುಲಭವಲ್ಲ. ಪ್ರತಿಯೊಂದು ಪುಸ್ತಕವು ವ್ಯಕ್ತಿಯ ಪ್ರತಿನಿಧಿ ಆಗಿರುತ್ತದೆ. ಅಕ್ಷರವು ಯುದ್ಧ, ಪ್ರೇಮಕತೆ ಮತ್ತು ಶಾಂತಿಗೆ ಕಾರಣ ಆಗುತ್ತದೆ. ಒಂದು ವೇಳೆ ಅಕ್ಷರ ಇರದಿದ್ದರೆ ಪುಸ್ತಕಗಳು ಖಾಲಿ ಹಾಳೆಗಳ ಗೋದಾಮು ಆಗುತ್ತದೆ. ಹಾಗಾಗಿ, ಅಕ್ಷರದ ಆರಾಧನೆ ಅಗತ್ಯವಾಗಿವೆ ಎಂದು ಹೇಳಿದರು.
ಆನೇಕಲ್ ಪಟಾಕಿ ದುರಂತ, ಮಾಲೀಕನ ಮೇಲೆ ಕ್ರಮ ತೆಗೆದುಕೊಳ್ಳಲು ಸೂಚಿಸಿದ್ದೇನೆ: ಸಿದ್ದರಾಮಯ್ಯ
ಕನ್ನಡಪ್ರಭ ಪುರವಣಿ ಸಂಪಾದಕ ಗಿರೀಶ್ ರಾವ್ ಹತ್ವಾರ್ (ಜೋಗಿ) ಮಾತನಾಡಿ, ಪ್ರಕಾಶಕರು ಹಣ ಹಾಗೂ ಸಮಯ ಹಾಕಿ ಪುಸ್ತಕ ಮಾಡಿರುತ್ತಾರೆ. ಆದರೆ, ಜನರು ಓದಿದಾಗಲೆ ಅದು ಪುಸ್ತಕ ಆಗುತ್ತದೆ. ಇಲ್ಲವಾದರೆ ಅದು ಖಾಲಿ ಕಾಗದವಾಗುತ್ತದೆ. ಐದಾರು ವರ್ಷಗಳ ಹಿಂದೆ ಓಟಿಟಿ ಬಂದಾಗ ಪುಸ್ತಕಗಳ ಕತೆ ಮುಗಿಯಿತು ಎಂಬ ಮಾತುಗಳು ಕೇಳಿಬಂದವು. ವಾಸ್ತವವೆಂದರೆ ಪುಸ್ತಕಕ್ಕೆ ಎಂದೂ ಸಾವಿಲ್ಲ. ಒಂದು ಪುಸ್ತಕ ಓದಲು ಆರಂಭಿಸಿದರೆ ಅದು ಮತ್ತೊಂದು ಪುಸ್ತಕ ಓದಲು ಪ್ರೇರೇಪಿಸುತ್ತದೆ ಎಂದು ತಿಳಿಸಿದರು.
ಲೇಖಕರಾದ ಗಂಗಾವತಿ ಪ್ರಾಣೇಶ್ ಮಾತನಾಡಿ, ಸಾಹಿತ್ಯದಲ್ಲಿ ಶಾಶ್ವತ ಹಾಗೂ ತೂಕದ ಸಾಹಿತ್ಯ ಎಂಬ ಪ್ರಕಾರಗಳಿವೆ. ರಾಮಾಯಣ ಹಾಗೂ ಮಹಾಭಾರತ ಶಾಶ್ವತ ಸಾಹಿತ್ಯ ಪ್ರಕಾರವಾದರೆ, ಹಳಗನ್ನಡ ತೂಕದ ಸಾಹಿತ್ಯ. ನಾನು ನನ್ನ ಅನುಭವವನ್ನು ಬರೆಯುತ್ತೇನೆ. ವಯಸ್ಸಾದ ಕಾರಣ ಆಧ್ಯಾತ್ಮಿಕದ ಕಡೆ ಒಲವು ಜಾಸ್ತಿಯಾಗುತ್ತದೆ. ಇತ್ತೀಚೆಗೆ ತತ್ವ ಹೇಳಿದರೂ ಪುಸ್ತಕ ಸುಡುತ್ತಿದ್ದಾರೆ. ಅದು ಸುಟ್ಟವನ ಸಂಸ್ಕಾರ ತೋರಿಸುತ್ತದೆ ಎಂದು ನುಡಿದರು. ಲೇಖಕರು ಸೇರಿದಂತೆ ಪ್ರಕಾಶಕ ಜಮೀಲ್ ಸಾವಣ್ಣ ಉಪಸ್ಥಿತರಿದ್ದರು.
ಯುದ್ಧಪೀಡಿತ ಇಸ್ರೇಲ್‌ನಲ್ಲಿ 12 ಸಾವಿರಕ್ಕೂ ಅಧಿಕ ಕರಾವಳಿ ಕನ್ನಡಿಗರು!
ಬಿಡುಗಡೆ ಆದ ಕೃತಿಗಳು: ಕಾರ್ಯಕ್ರಮದಲ್ಲಿ ಗಂಗಾವತಿ ಪ್ರಾಣೇಶ್ ಅವರ ‘ನುಡಿ ಪಡಿ’, ರಂಗಸ್ವಾಮಿ ಮೂಕನಹಳ್ಳಿ ರಚನೆಯ ‘ಬದುಕು ಸುಂದರ’, ಪತ್ರಕರ್ತ ಶರಣು ಹುಲ್ಲೂರು ರಚಿಸಿರುವ ‘ನೋಡಲು ಮರೆಯದಿರಿ; ಮರೆತು ನಿರಾಶರಾಗದಿರಿ’, ವಿರೂಪಾಕ್ಷ ದೇವರಮನೆ ಅವರ ‘ಕಣ್ಣಿಗೆ ಕಾಣುವ ದೇವರು’, ಬಿ.ಸಿ.ಶ್ವೇತಾ ಅವರ ‘ಬಿಟ್ಟಜಾಗ ತುಂಬಿ’, ವಸಂತ್ ಗಿಳಿಯಾರ್ ಅವರ ‘ಲೈಫ್ ಈಸ್ ಜಿಂಗಲಾಲ್’ ಮತ್ತು ಜಗದೀಶ್ ಶರ್ಮಾ ಸಂಪ ಅವರ ‘ಜಸ್ಟ್ ಒಂದು ಗಂಟೆ’ ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಯಿತು.