ಯುದ್ಧಪೀಡಿತ ಇಸ್ರೇಲ್‌ನಲ್ಲಿ 12 ಸಾವಿರಕ್ಕೂ ಅಧಿಕ ಕರಾವಳಿ ಕನ್ನಡಿಗರು!
ಯುದ್ಧಪೀಡಿತ ಇಸ್ರೇಲ್‌ನಲ್ಲಿ ಸುಮಾರು 12 ಸಾವಿರಕ್ಕೂ ಅಧಿಕ ಕರ್ನಾಟಕದ ಕರಾವಳಿ ಕನ್ನಡಿಗರಿದ್ದಾರೆ. ಕೇರಳದ ಗಡಿನಾಡು ಮಂಜೇಶ್ವರದಿಂದ ತೊಡಗಿ ಗೋವಾದ ಕಾರವಾರ ಗಡಿವರೆಗಿನ ಮಂದಿ ಇಸ್ರೇಲ್‌ನಲ್ಲಿ ಕೇರ್ ಗೀವರ್ಸ್ ಕೆಲಸ ಮಾಡಿಕೊಂಡಿದ್ದಾರೆ.

ಆತ್ಮಭೂಷಣ್
ಮಂಗಳೂರು (ಅ.09): ಯುದ್ಧಪೀಡಿತ ಇಸ್ರೇಲ್‌ನಲ್ಲಿ ಸುಮಾರು 12 ಸಾವಿರಕ್ಕೂ ಅಧಿಕ ಕರ್ನಾಟಕದ ಕರಾವಳಿ ಕನ್ನಡಿಗರಿದ್ದಾರೆ. ಕೇರಳದ ಗಡಿನಾಡು ಮಂಜೇಶ್ವರದಿಂದ ತೊಡಗಿ ಗೋವಾದ ಕಾರವಾರ ಗಡಿವರೆಗಿನ ಮಂದಿ ಇಸ್ರೇಲ್‌ನಲ್ಲಿ ಕೇರ್ ಗೀವರ್ಸ್ ಕೆಲಸ ಮಾಡಿಕೊಂಡಿದ್ದಾರೆ. ಇವರೆಲ್ಲರೂ ಯುದ್ಧಭೂಮಿ ಜೆರುಸಲೇಂನ ಅಕ್ಕಪಕ್ಕ ಇದ್ದರೂ ಸದ್ಯ ಸುರಕ್ಷಿತವಾಗಿದ್ದಾರೆ. ಇಸ್ರೇಲ್‌ಗೆ ತೆರಳಿದ ಕರಾವಳಿ ಮಂದಿಯಲ್ಲಿ ಶೇ.50ರಷ್ಟು ಮಹಿಳೆಯರೇ ಇದ್ದಾರೆ. ಅದರಲ್ಲೂ ಹೆಚ್ಚಿನವರು ಕ್ರಿಶ್ಚಿಯನ್ನರು. ಸಣ್ಣ ಪ್ರಮಾಣದಲ್ಲಿ ಹಿಂದುಗಳಿದ್ದಾರೆ. ದ.ಕ. ಜಿಲ್ಲೆಯ 8 ಸಾವಿರಕ್ಕೂ ಅಧಿಕ ಮಂದಿ ಇದರಲ್ಲಿ ಸೇರಿದ್ದಾರೆ. ಇವರೆಲ್ಲರೂ ಕೇರ್ ಗೀವರ್ಸ್ (ಭಾರತದ ಹೋಂ ನರ್ಸ್ ಮಾದರಿ ವೃತ್ತಿ) ಆಗಿ ಕೆಲಸ ಮಾಡುತ್ತಿದ್ದಾರೆ.
ಅಪಾಯ ಪ್ರದೇಶದಲ್ಲೂ ಕೆಲಸ: ಕರಾವಳಿಯ ಕನ್ನಡಿಗರು ಇಸ್ರೇಲ್‌ನಲ್ಲಿ ಯುದ್ಧಪೀಡಿತ ಪ್ರದೇಶದ ಸನಿಹ ಅಪಾಯವನ್ನೂ ಲೆಕ್ಕಿಸದೆ ಕೆಲಸ ಮಾಡುತ್ತಿದ್ದಾರೆ. ಜೆರುಸಲೇಂ, ಟೆಲ್ ಅವೀವ್, ಅರ್ಜೀಲಿಯಂ ಹಾಗೂ ಹೈಫಾ ಈ ನಾಲ್ಕು ಪ್ರಮುಖ ಪ್ರದೇಶಗಳಲ್ಲಿ ಕರಾವಳಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದನ್ನು ಹೊರತುಪಡಿಸಿ ಇಡೀ ಇಸ್ರೇಲ್‌ನಲ್ಲಿ ಭಾರತೀಯರು ಅಲ್ಲಲ್ಲಿ ಹಂಚಿಹೋಗಿದ್ದಾರೆ. ಸದ್ಯ ಕರಾವಳಿ ಕನ್ನಡಿಗರು ಇರುವ ಪ್ರದೇಶಗಳಲ್ಲಿ ಯಾವುದೇ ದಾಳಿ ನಡೆಯದಿದ್ದರೂ ಅಪಾಯದ ಭೀತಿಯಂತೂ ಇದೆ.
ಸಿದ್ದರಾಮಯ್ಯನವರ ಎರಡನೆಯ ಮುಖ ದಲಿತರನ್ನು ಅವನತಿಗೆ ದೂಡುವುದಾಗಿದೆ: ಶ್ರೀರಾಮುಲು
ಸೈರನ್ ಮೊಳಗಿದ್ರೆ ಶೆಲ್ಟರ್ ವಾಸ: ನಾನು 14 ವರ್ಷದಿಂದ ಇಸ್ರೇಲ್‌ನಲ್ಲಿದ್ದೇನೆ. ಅನೇಕ ಬಾರಿ ರಾಕೆಟ್ ದಾಳಿ ನೋಡಿದ್ದೇನೆ. ಆದರೆ ಈಗಿನಷ್ಟು ದೊಡ್ಡ ಯುದ್ಧದ ಪರಿಸ್ಥಿತಿ ಈವರೆಗೆ ಕಂಡಿಲ್ಲ. ದಿನದಲ್ಲಿ ಮೂರ್ನಾಲ್ಕು ಬಾರಿ ಸೈರನ್ ಆಗುತ್ತಿದ್ದು, ನಾವು ಕೂಡಲೇ ಸುರಕ್ಷಿತ ಜಾಗ, ಮನೆಯ ಶೆಲ್ಟರ್ ಅನ್ನು ಸೇರಿಕೊಳ್ಳುತ್ತೇವೆ. ಶನಿವಾರವೂ ರಾತ್ರಿ ವೇಳೆ ಸೈರನ್ ಮೊಳಗಿ ಶೆಲ್ಟರ್ ಸೇರಿದ್ದೆ ಎಂದು ಅಲ್ಲಿನ ಸದ್ಯದ ಪರಿಸ್ಥಿತಿಯ ಚಿತ್ರಣ ನೀಡುತ್ತಾರೆ ಮಂಗಳೂರು ಮೂಲದ ಲೆನಾರ್ಡ್ ಫರ್ನಾಂಡಿಸ್.
ಇಸ್ರೇಲ್‌ನಲ್ಲಿ ಪ್ರತಿ ಮನೆಯಲ್ಲೂ ಸಣ್ಣ ಪ್ರತ್ಯೇಕ ಕೋಣೆ(ಶೆಲ್ಟರ್) ಇರುತ್ತದೆ. ಇದು ಪ್ರಾಣ ರಕ್ಷಣೆಗೆ ನೆರವಾಗುತ್ತದೆ. ಸೈರನ್ ಮೊಳಗಿದ ಕೂಡಲೇ ಈ ರಕ್ಷಣಾತ್ಮಕ ಶೆಲ್ಟರ್‌ನಲ್ಲಿ ಬಂದು ಕೂರುತ್ತೇವೆ. ಪುನರಪಿ ಸೂಚನೆ ಬಂದ ಮೇಲಷ್ಟೇ ಹೊರ ಹೋಗುತ್ತೇವೆ ಎನ್ನುತ್ತಾರೆ ಆರು ತಿಂಗಳ ಹಿಂದೆ ಇಸ್ರೇಲ್‌ನಿಂದ ಮಂಗಳೂರಿಗೆ ವಾಪಸಾಗಿರುವ ರಾಮ್ ಕುಮಾರ್ ಅಮೀನ್.
ಹಿಂದೂ ಧರ್ಮ ಉಳಿದರೆ ದೇಶ ಉಳಿಯಲು ಸಾಧ್ಯ: ಶೋಭಾ ಕರಂದ್ಲಾಜೆ
ನಾನು ಅ.10ರಂದು ಮಂಗಳೂರಿಗೆ ಬರಬೇಕಿತ್ತು. ನನ್ನ ಪುತ್ರಿ ಪವಿತ್ರಾ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತು. ಆದರೆ ಈಗ ಯುದ್ಧ ಘೋಷಣೆಯಾಗಿ ವಿಮಾನ ಸಂಚಾರ ರದ್ದಾಗಿದೆ. ನಮ್ಮ ಸಂಪರ್ಕಕ್ಕೆ ಕರಾವಳಿಗರು ಸಿಕ್ಕಿದ್ದು, ಸದ್ಯ ಯಾರಿಗೂ ಏನೂ ತೊಂದರೆ ಆಗಿಲ್ಲ. ಶನಿವಾರ ಆಸ್ಪತ್ರೆಗೆ ತೆರಳಿದ ಇಬ್ಬರು ಭಾರತೀಯರು ಮೊಬೈಲ್ ಸಂಪರ್ಕಕ್ಕೆ ಸಿಕ್ಕಿರಲಿಲ್ಲ, ಬಳಿಕ ಮೊಬೈಲ್ ಸ್ವಿಚ್‌ಆಫ್ ಆದ ಕಾರಣ ಮನೆ ಮಂದಿ ಆತಂಕಗೊಳ್ಳುವಂತಾಗಿತ್ತು. ಬಳಿಕ ಎಲ್ಲವೂ ಸರಿಯಾಗಿದೆ.
- ಲೆನಾರ್ಡ್ ಫರ್ನಾಂಡಿಸ್, ಇಸ್ರೇಲ್