ಬೈಕಂಪಾಡಿಯ ಬೋಳಾಸ್ ಆಗ್ರೋ ಪ್ಯಾಕಿಂಗ್ ಘಟಕದಲ್ಲಿ ನಡೆದ ತಪಾಸಣೆಯ ಕುರಿತು ಸಂಸ್ಥೆ ಸ್ಪಷ್ಟನೆ ನೀಡಿದೆ. ಎಣ್ಣೆಯ ಶುದ್ಧತೆಯಲ್ಲಿ ಯಾವುದೇ ಲೋಪವಿಲ್ಲ, ಕೇವಲ ಲೇಬಲ್ ನಲ್ಲಿ ತಾಂತ್ರಿಕ ದೋಷವಿತ್ತು ಎಂದು ತಿಳಿಸಿದೆ.

ಮಂಗಳೂರು (ನ.18): ಬೈಕಂಪಾಡಿಯಲ್ಲಿರುವ ತಮ್ಮ ಖಾದ್ಯ ತೈಲ ಪ್ಯಾಕಿಂಗ್ ಘಟಕದ (Edible oil packing facility) ಮೇಲೆ ನವೆಂಬರ್ 17ರಂದು ಆಹಾರ ಸುರಕ್ಷತಾ ಅಧಿಕಾರಿಗಳು ನಡೆಸಿದ ತಪಾಸಣೆಗೆ ಸಂಬಂಧಿಸಿದಂತೆ ಕೆಲವು ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ದಾರಿತಪ್ಪಿಸುವ ವರದಿಗಳಿಗೆ 'ಬೋಳಾಸ್ ಆಗ್ರೋ ಪ್ರೈವೇಟ್ ಲಿಮಿಟೆಡ್' (Bolas Agro Private Limited) ಅಧಿಕೃತ ಸ್ಪಷ್ಟನೆ ನೀಡಿದೆ. ತಪಾಸಣೆ ವೇಳೆ ಕಾರ್ಖಾನೆಯ ಸ್ವಚ್ಛತೆ ಅಥವಾ ಎಣ್ಣೆಯ ಶುದ್ಧತೆಯಲ್ಲಿ ಯಾವುದೇ ಲೋಪ ಕಂಡುಬಂದಿಲ್ಲ; ಕೇವಲ ಶೇಂಗಾ ಎಣ್ಣೆಯ ಪ್ಯಾಕೇಜಿಂಗ್ ಲೇಬಲ್‌ನಲ್ಲಿ ತಾಂತ್ರಿಕ ದೋಷವಿತ್ತು ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

ಜಿಲ್ಲಾದ್ಯಂತ ನಡೆಯುತ್ತಿರುವ ವಿಶೇಷ ತಪಾಸಣಾ ಅಭಿಯಾನದ ಭಾಗವಾಗಿ ನವೆಂಬರ್ 17ರಂದು ಆಹಾರ ಸುರಕ್ಷತಾ ಅಧಿಕಾರಿಗಳು ಬೈಕಂಪಾಡಿ ಘಟಕವನ್ನು ಪರಿಶೀಲಿಸಿದ್ದರು. ಈ ವೇಳೆ ಅಧಿಕಾರಿಗಳು ಕಾರ್ಖಾನೆಯ ಆವರಣ, ಸ್ವಚ್ಛತೆ, ನೈರ್ಮಲ್ಯ (Hygiene) ಮತ್ತು ಕಾರ್ಯಾಚರಣೆಯ ಸ್ಥಿತಿಗತಿಗಳನ್ನು ಕೂಲಂಕಷವಾಗಿ ಪರಿಶೀಲಿಸಿದ್ದಾರೆ. ಸ್ವಚ್ಛತೆ ಅಥವಾ ನೈರ್ಮಲ್ಯಕ್ಕೆ ಸಂಬಂಧಿಸಿದಂತೆ ಯಾವುದೇ ಕೊರತೆಗಳನ್ನು ಅಧಿಕಾರಿಗಳು ಗುರುತಿಸಿಲ್ಲ ಹಾಗೂ ಈ ಕುರಿತು ಕಂಪನಿಗೆ ಯಾವುದೇ ನೋಟಿಸ್ ಕೂಡ ನೀಡಿಲ್ಲ ಎಂದು ಬೋಳಾಸ್ ಆಗ್ರೋ ತಿಳಿಸಿದೆ.

ಪ್ಯಾಕೇಜಿಂಗ್ ಲೇಬಲ್‌ನಲ್ಲಿದ್ದ ತಾಂತ್ರಿಕ ದೋಷ ಏನು?

ಕಂಪನಿಗೆ ಅಧಿಕಾರಿಗಳು ತಿಳಿಸಿದ ಏಕೈಕ ವಿಷಯವೆಂದರೆ ಶೇಂಗಾ ಎಣ್ಣೆಯ (Groundnut oil) ಪ್ಯಾಕೇಜಿಂಗ್ ಲೇಬಲ್‌ನಲ್ಲಿನ ತಾಂತ್ರಿಕ ವ್ಯತ್ಯಾಸ. ಬೋಳಾಸ್ ಆಗ್ರೋದ ಮಾನದಂಡಗಳಿಗೆ ಅನುಗುಣವಾಗಿ ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿರುವ (Challakere) ಮಿಲ್‌ನಲ್ಲಿ ಶೇಂಗಾ ಎಣ್ಣೆಯನ್ನು ಕೋಲ್ಡ್-ಪ್ರೆಸ್ (Cold-pressed) ಮಾಡಲಾಗುತ್ತದೆ. ಬಳಿಕ ಆ ಎಣ್ಣೆಯನ್ನು ಮಂಗಳೂರಿನ ಬೈಕಂಪಾಡಿ ಘಟಕಕ್ಕೆ ತಂದು ಪ್ಯಾಕ್ ಮಾಡಿ 'ಬೋಳಾಸ್' (Bolas) ಬ್ರಾಂಡ್ ಅಡಿಯಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ.

ಪ್ಯಾಕೇಜಿಂಗ್ ಮೇಲೆ "Processed and Packed by Bolas Agro" (ಬೋಳಾಸ್ ಆಗ್ರೋದಿಂದ ಸಂಸ್ಕರಿಸಲ್ಪಟ್ಟ ಮತ್ತು ಪ್ಯಾಕ್ ಮಾಡಲ್ಪಟ್ಟಿದೆ) ಎಂದು ಮುದ್ರಿಸಲಾಗಿತ್ತು. ಆದರೆ, ಎಣ್ಣೆಯನ್ನು ಹಿಂಡುವ (Pressing) ಪ್ರಕ್ರಿಯೆಯು ನಮ್ಮ ಸ್ವಂತ ಘಟಕದ ಬದಲು ಪಾಲುದಾರ ಮಿಲ್‌ನಲ್ಲಿ ನಡೆಯುವುದರಿಂದ, ಲೇಬಲ್ ಮೇಲೆ "Packed by Bolas Agro" (ಬೋಳಾಸ್ ಆಗ್ರೋದಿಂದ ಪ್ಯಾಕ್ ಮಾಡಲ್ಪಟ್ಟಿದೆ) ಎಂದು ನಮೂದಿಸಬೇಕು ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ. ಅದರಂತೆ ಆಹಾರ ಸುರಕ್ಷತಾ ಇಲಾಖೆಯು ಲೇಬಲ್ ದೋಷವನ್ನು ಸರಿಪಡಿಸುವಂತೆ ನಿರ್ದೇಶಿಸಿ ಸಂಬಂಧಪಟ್ಟ ದಾಸ್ತಾನನ್ನು ಜಪ್ತಿ (Seizure) ಮಾಡಿದ್ದು, ಲೇಬಲ್‌ಗಳನ್ನು ಸರಿಪಡಿಸಲು ಕಂಪನಿಯು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಅಪ್ಪಟ ಕೋಲ್ಡ್-ಪ್ರೆಸ್ಡ್ ಶೇಂಗಾ ಎಣ್ಣೆ ಕುರಿತು ಸ್ಪಷ್ಟನೆ

ತಮ್ಮ ಶೇಂಗಾ ಎಣ್ಣೆಯು ಅಪ್ಪಟ ಕೋಲ್ಡ್-ಪ್ರೆಸ್ಡ್ ಶೇಂಗಾ ಎಣ್ಣೆಯಾಗಿದೆ ಎಂದು ಕಂಪನಿಯು ಖಚಿತವಾಗಿ ಸ್ಪಷ್ಟಪಡಿಸಿದೆ. ಚಳ್ಳಕೆರೆ ಮಿಲ್‌ನಲ್ಲಿ ಯಾವುದೇ ಸಾಲ್ವೆಂಟ್ ಎಕ್ಸ್‌ಟ್ರಾಕ್ಷನ್ (Solvent extraction) ಅಥವಾ ರಿಫೈನಿಂಗ್ (Refining) ಪ್ರಕ್ರಿಯೆಯಿಲ್ಲದೆ ಯಾಂತ್ರಿಕವಾಗಿ (Mechanically) ಈ ಎಣ್ಣೆಯನ್ನು ತೆಗೆಯಲಾಗುತ್ತದೆ. ಆಹಾರ ಸುರಕ್ಷತಾ ಇಲಾಖೆ ಎತ್ತಿರುವ ಆಕ್ಷೇಪಣೆಯು ಪ್ಯಾಕೇಜಿಂಗ್ ಮೇಲಿನ ಘೋಷಣೆಗೆ ಸಂಬಂಧಿಸಿದೆಯೇ ಹೊರತು, ಅದು ಕೋಲ್ಡ್-ಪ್ರೆಸ್ಡ್ ಶೇಂಗಾ ಎಣ್ಣೆಯಲ್ಲ ಎಂಬುದಕ್ಕಲ್ಲ ಎಂದು ಸಂಸ್ಥೆ ತಿಳಿಸಿದೆ.

ಕಲಬೆರಕೆ ಅಥವಾ ಅಸುರಕ್ಷಿತ ಎಣ್ಣೆ ಎಂಬ ಅಂಶವೇ ಇಲ್ಲ

ಆಹಾರ ಸುರಕ್ಷತಾ ಇಲಾಖೆಯ ನೈಜ ವೀಕ್ಷಣೆಗಳು ಮತ್ತು ಕೆಲವು ಮಾಧ್ಯಮ ವರದಿಗಳಲ್ಲಿನ ಆರೋಪಗಳ ನಡುವಿನ ವ್ಯತ್ಯಾಸವನ್ನು ಸ್ಪಷ್ಟಪಡಿಸಿರುವ ಬೋಳಾಸ್ ಆಗ್ರೋ, ಇಲಾಖೆಯ ನೋಟಿಸ್‌ನಲ್ಲಿ ಇದನ್ನು ಕೇವಲ 'ತಪ್ಪು ಲೇಬಲಿಂಗ್' (Mislabelling) ಎಂದು ಮಾತ್ರ ಉಲ್ಲೇಖಿಸಲಾಗಿದೆ ಎಂದಿದೆ. ನೋಟಿಸ್‌ನಲ್ಲಿ ಈ ಕೆಳಗಿನ ಯಾವ ಅಂಶಗಳೂ ಇಲ್ಲ. ಶೇಂಗಾ ಎಣ್ಣೆಯು ಕೋಲ್ಡ್-ಪ್ರೆಸ್ಡ್ ಅಲ್ಲ ಎಂದು ಹೇಳಿಲ್ಲ ಅಥವಾ ಬಳಸಿದ ಅಥವಾ ಮರುಬಳಕೆ ಮಾಡಿದ (Reused) ಎಣ್ಣೆ ಪತ್ತೆಯಾಗಿದೆ ಎಂದು ಹೇಳಿಲ್ಲ. ಎಣ್ಣೆಯಲ್ಲಿ ಕಲಬೆರಕೆಯಾಗಿದೆ (Adulterated) ಅಥವಾ ಬೇರೆ ಯಾವುದೇ ಎಣ್ಣೆಯನ್ನು ಬೆರೆಸಲಾಗಿದೆ ಎಂದು ಹೇಳಿಲ್ಲ. ಎಣ್ಣೆಯು ಮನುಷ್ಯರ ಬಳಕೆಗೆ ಅಸುರಕ್ಷಿತವಾಗಿದೆ ಎಂದು ಹೇಳಿಲ್ಲ. ಆದ್ದರಿಂದ, ಎಣ್ಣೆಯ ಶುದ್ಧತೆ, ನೈಜತೆ ಅಥವಾ ಸುರಕ್ಷತೆಯ ಕುರಿತಾದ ಆರೋಪಗಳಿಗೆ ಈ ತಪಾಸಣೆಯ ಯಾವುದೇ ವರದಿಯ ಆಧಾರವಿಲ್ಲ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

ದಾರಿತಪ್ಪಿಸುವ ಮಾಧ್ಯಮ ವರದಿಗಳನ್ನು ತಿದ್ದುಪಡಿ ಮಾಡಲು ಮನವಿ

ಇಲಾಖೆಯ ನೋಟಿಸ್‌ನಲ್ಲಿ ಅಂತಹ ಯಾವುದೇ ಅಂಶಗಳಿಲ್ಲದಿದ್ದರೂ, ಕೆಲವು ಮಾಧ್ಯಮ ವರದಿಗಳು ಮತ್ತು ಸೋಶಿಯಲ್‌ ಮೀಡಿಯಾ ಪೋಸ್ಟ್‌ಗಳಲ್ಲಿ ನಮ್ಮ ಶೇಂಗಾ ಎಣ್ಣೆಯನ್ನು "ನಕಲಿ" (Fake), "ಮರುಬಳಕೆ ಮಾಡಿದ" (Reused) ಅಥವಾ "ಕಲಬೆರಕೆ" (Adulterated) ಎಂದು ಬಿಂಬಿಸಿರುವುದು ಕಳವಳಕಾರಿಯಾಗಿದೆ. ಇಂತಹ ಹೇಳಿಕೆಗಳು ಅಧಿಕಾರಿಗಳ ವೀಕ್ಷಣೆಯನ್ನು ಮೀರಿದ್ದಾಗಿದ್ದು, ಗ್ರಾಹಕರಲ್ಲಿ ನಮ್ಮ ಉತ್ಪನ್ನಗಳ ಗುಣಮಟ್ಟದ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸಬಹುದು. ಬೋಳಾಸ್ ಆಗ್ರೋ ಆಹಾರ ಸುರಕ್ಷತೆ, ಗುಣಮಟ್ಟ ಮತ್ತು ಕಾನೂನು ಪಾಲನೆಯನ್ನು ಗಂಭೀರವಾಗಿ ಪರಿಗಣಿಸುತ್ತದೆ; ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡುತ್ತಿದ್ದು, ಲೇಬಲ್ ದೋಷ ಸರಿಪಡಿಸಲು ಕ್ರಮ ಕೈಗೊಳ್ಳುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.