ವಿಮಾನ ನಿಲ್ದಾಣದ ರನ್‌ವೇಯಲ್ಲಿ ತಾಂತ್ರಿಕ ದೋಷದಿಂದ ವಿಮಾನವೊಂದು ನಿಂತರೆ ಅದನ್ನು ಸುರಕ್ಷಿತವಾಗಿ ತೆರವುಗೊಳಿಸುವುದು ಹೇಗೆ? ಸ್ಥಳಾಂತರಿಸುವ ತಂತ್ರವೇನು? ಇಂತಹ ತುರ್ತು ಸಂದರ್ಭಗಳನ್ನು ಸಮರ್ಥವಾಗಿ ನಿರ್ವಹಿಸಲು ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ವಿಶೇಷ ವ್ಯವಸ್ಥೆಯೊಂದನ್ನು ರೂಪಿಸಲಾಗಿದೆ.

ಬೆಂಗಳೂರು: ರನ್‌ವೇ ಅಥವಾ ವಿಮಾನ ನಿಲ್ದಾಣದ ಆವರಣದಲ್ಲಿ ಕೆಟ್ಟು ನಿಂತ ವಿಮಾನಗಳನ್ನು ಸುರಕ್ಷಿತವಾಗಿ ತೆರವುಗೊಳಿಸುವ ತರಬೇತಿಗಾಗಿ ದೈತ್ಯ ಬೋಯಿಂಗ್ 737-200 ವಿಮಾನವನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತರಲಾಗಿದೆ. ಇದಕ್ಕೆ ಫೀನಿಕ್ಸ್‌ ಎಂದು ಮರುನಾಮಕರಣ ಮಾಡಲಾಗಿದ್ದು, ಇದನ್ನು ಇತ್ತೀಚೆಗೆ ಅನಾವರಣಗೊಳಿಸಲಾಯಿತು.

ವಿಮಾನ ನಿಲ್ದಾಣದ ‘ಏರ್‌ಕ್ರಾಫ್ಟ್ ರಿಕವರಿ ಟ್ರೈನಿಂಗ್ ಸ್ಕೂಲ್’ (ಎಆರ್‌ಟಿಎಸ್‌)ಗಾಗಿ ಈ ನಿಜವಾದ ವಿಮಾನವನ್ನು ತರಲಾಗಿದ್ದು, ತರಬೇತಿಗಾಗಿ ಸಿದ್ಧಪಡಿಸಲಾಗಿದೆ. ಮೊದಲು ತಮ್ಮದೇ ಸಿಬ್ಬಂದಿಗೆ ಪರಿಣತಿ ನೀಡಲೆಂದು ಈ ತರಬೇತಿ ಕೇಂದ್ರವನ್ನು ಶುರು ಮಾಡಲಾಗಿತ್ತು. ಈಗ ಜಗತ್ತಿನ ಎಲ್ಲಾ ವಿಮಾನಯಾನ ಸಂಸ್ಥೆಗಳು ಮತ್ತು ವಾಯುಯಾನ ವೃತ್ತಿಪರರಿಗೂ ಇದನ್ನು ಮುಕ್ತಗೊಳಿಸಲಾಗಿದೆ. ಅಂದರೆ, ಯಾರು ಬೇಕಿದ್ದರೂ ಬಂದು ಇಲ್ಲಿ ತರಬೇತಿ ಪಡೆಯಬಹುದಾಗಿದೆ.

ಈ ಹಿಂದೆ ‘ಬೇಬಿ ಬೋಯಿಂಗ್’ ಎಂದು ಕರೆಯಲ್ಪಡುತ್ತಿದ್ದ ಈ ತರಬೇತಿ ವಿಮಾನವು ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಹಾರಾಟ ನಿಲ್ಲಿಸಿ ನಿಂತಿತ್ತು. ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿ. (ಬಿಐಎಎಲ್‌) ಇದನ್ನು ಖರೀದಿಸಿ ತಂದು ಅದಕ್ಕೆ ‘ಫೀನಿಕ್ಸ್’ ಎಂದು ಹೆಸರು ಇಟ್ಟಿದೆ.

ಕೊಲ್ಕತ್ತಾದಿಂದ ಬೆಂಗಳೂರಿಗೆ 45 ದಿನಗಳ ಸುದೀರ್ಘ ಪ್ರಯಾಣ

ಕೋಲ್ಕತ್ತಾದಿಂದ ಬೆಂಗಳೂರಿಗೆ ಈ ವಿಮಾನವನ್ನು ತರುವುದೇ ದೊಡ್ಡ ಸವಾಲಿನ ಕೆಲಸವಾಗಿತ್ತು. ರಸ್ತೆ ಮಾರ್ಗವನ್ನು ಇದನ್ನು ಕೊಂಡೊಯ್ಯಬಹುದು ಎಂಬ ತೀರ್ಮಾನಕ್ಕೆ ಬಂದ ನಂತರ ವಿಮಾನದ ಭಾಗಗಳನ್ನು ಬಿಚ್ಚಿ ನಾಲ್ಕು ವಿಶೇಷ ಟ್ರೇಲರ್‌ಗಳ ಮೂಲಕ ಬೆಂಗಳೂರಿಗೆ ತರಲಾಯಿತು. ಇದಕ್ಕೆ ಬರೋಬ್ಬರಿ 45 ದಿನ ಹಿಡಿಯಿತು. ಬಳಿಕ ವಿಮಾನದ ಮೂಲ ತಯಾರಕರ ನಿಯಮದಂತೆಯೇ ಅದರ ಎಂಜಿನ್, ಎಲೆಕ್ಟ್ರಾನಿಕ್ ಉಪಕರಣಗಳು ಹಾಗೂ ಕಾಕ್‌ಪಿಟ್ ಅನ್ನು ಹಾಗೆಯೇ ಉಳಿಸಿಕೊಂಡು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅತ್ಯಂತ ನಿಖರವಾಗಿ ಮತ್ತೆ ಜೋಡಿಸಲಾಗಿದೆ.

‘ಎಆರ್‌ಟಿಎಸ್‌’ ದಕ್ಷಿಣ ಏಷ್ಯಾದಲ್ಲೇ ಕೆಟ್ಟು ನಿಂತ ವಿಮಾನಗಳ ತೆರವು ತರಬೇತಿಗಾಗಿ ಮೀಸಲಾದ ಏಕೈಕ ಶಾಲೆಯಾಗಿದೆ. ಇದು ಈ ಕ್ಷೇತ್ರದಲ್ಲಿ ವಿಶ್ವದಲ್ಲೇ ಮುಂಚೂಣಿಯಲ್ಲಿರುವ ಜರ್ಮನಿಯ ‘ಕುಂಜ್’ ಸಂಸ್ಥೆ ಮತ್ತು ಬಿಐಎಎಲ್‌ನ ಪ್ರಮಾಣೀಕೃತ ತರಬೇತುದಾರರ ಸಹಯೋಗದಲ್ಲಿ ವಿಶೇಷ ಕೋರ್ಸ್‌ಗಳನ್ನು ನಡೆಸುತ್ತಿದೆ.

ಇಲ್ಲಿ 5 ದಿನಗಳ ಅಡ್ವಾನ್ಸ್‌ಡ್ ಪ್ರಾಯೋಗಿಕ ಕೋರ್ಸ್, 3 ದಿನಗಳ ಬೇಸಿಕ್ ಕೋರ್ಸ್ ಹಾಗೂ 1 ದಿನದ ಉಪಕರಣಗಳ ಪರಿಚಯ ಕಾರ್ಯಕ್ರಮ (ಓಪನ್ ಹೌಸ್) ಇರುತ್ತದೆ. ತರಗತಿ ಪಾಠದ ಜೊತೆಗೆ ವಿಮಾನದ ಮುಂಭಾಗದ ಚಕ್ರ (ನೋಸ್ ವೀಲ್) ಅಥವಾ ಲ್ಯಾಂಡಿಂಗ್ ಗೇರ್ ಕುಸಿದಾಗ ಪರಿಸ್ಥಿತಿ ನಿಭಾಯಿಸುವುದು, ವಿಮಾನವನ್ನು ಮೇಲಕ್ಕೆತ್ತುವುದು, ಎಳೆದೊಯ್ಯುವುದು ಹಾಗೂ ಇದಕ್ಕಾಗಿ ನೆಲವನ್ನು ಸಿದ್ಧಪಡಿಸುವುದು ಹೇಗೆ ಎಂಬುದನ್ನು ನೈಜ ಸನ್ನಿವೇಶಗಳ ಮೂಲಕ ಕಲಿಸಲಾಗುತ್ತದೆ. ಪ್ರತಿ ಬ್ಯಾಚ್‌ನಲ್ಲಿ ಸುಮಾರು 16 ಮಂದಿಗೆ ತರಬೇತಿ ನೀಡಿ, ‘ಕುಂಜ್’ ಮತ್ತು ಬಿಐಎಎಲ್ ಪ್ರಮಾಣಪತ್ರ ನೀಡಲಾಗುತ್ತದೆ.

ವಿಮಾನಗಳು ಓಡಾಡುವ ಜಾಗದಲ್ಲಿ ಚಲಿಸಲಾಗದೆ ನಿಂತ ವಿಮಾನಕ್ಕೆ ಮತ್ತಷ್ಟು ಹಾನಿಯಾಗದಂತೆ ಸುರಕ್ಷಿತವಾಗಿ ಬೇರೆಡೆಗೆ ಸ್ಥಳಾಂತರಿಸುವುದೇ ‘ಡಿಸೇಬಲ್ಡ್ ಏರ್‌ಕ್ರಾಫ್ಟ್ ರಿಕವರಿ’ಯ ಮುಖ್ಯ ಉದ್ದೇಶ. ಇದಕ್ಕಾಗಿ ಬೆಂಗಳೂರು ವಿಮಾನ ನಿಲ್ದಾಣವು ಕೋಡ್-ಎಫ್ ಶ್ರೇಣಿಯ ಅತಿ ದೊಡ್ಡ ವಿಮಾನಗಳನ್ನೂ ಎತ್ತಬಲ್ಲ ಕಡಿಮೆ ಒತ್ತಡದ ಗಾಳಿ ತುಂಬುವ ಲಿಫ್ಟಿಂಗ್ ಬ್ಯಾಗ್‌ಗಳು ಸೇರಿದಂತೆ ಅತ್ಯಾಧುನಿಕ ‘ಡೇರ್’ ಉಪಕರಣಗಳನ್ನು ಹೊಂದಿದೆ.

ಈ ಕುರಿತು ಹೆಚ್ಚಿನ ವಿವರ ನೀಡಿರುವ ಬಿಐಎಎಲ್ ಮುಖ್ಯ ಕಾರ್ಯಾಚರಣಾ ಅಧಿಕಾರಿ (ಸಿಒಒ) ಗಿರೀಶ್ ನಾಯರ್, "ಭಾರತದ ವಿಮಾನಯಾನ ಕ್ಷೇತ್ರ ಮುಂದಿನ ಹಂತದ ಬೆಳವಣಿಗೆಗೆ ಕಾಲಿಡುತ್ತಿದೆ. ಇಂತಹ ಸಂದರ್ಭದಲ್ಲಿ ತೊಂದರೆ ಎದುರಾದಾಗ ಮಾತ್ರ ಸ್ಪಂದಿಸುವುದಲ್ಲ, ಮೊದಲೇ ಸಿದ್ಧವಾಗಿರುವುದು ನಮ್ಮ ಗುರಿ. ವಿಮಾನ ನಿಲ್ದಾಣಗಳು, ಏರ್‌ಲೈನ್‌ಗಳು ಹಾಗೂ ನಿಯಂತ್ರಕರು ಪರಸ್ಪರ ಜ್ಞಾನ ಹಂಚಿಕೊಳ್ಳುವುದರಿಂದ ಭಾರತ ಮತ್ತು ಆಗ್ನೇಯ ಏಷ್ಯಾದ ವಾಯುಯಾನ ವ್ಯವಸ್ಥೆ ಇನ್ನಷ್ಟು ಬಲಿಷ್ಠವಾಗಲಿದೆ,” ಎಂದು ಅಭಿಪ್ರಾಯಪಟ್ಟರು.