ಬೆಂಗಳೂರು [ಜು. 18] :  ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ)ದಲ್ಲಿ ಸತತ ನಷ್ಟಅನುಭವಿಸುತ್ತಿರುವ ಹವಾ ನಿಯಂತ್ರಿತ ವೋಲ್ವೋ ಬಸ್‌ಗಳನ್ನು ಅಂತರ್‌ ನಗರಗಳ ನಡುವೆ ಕಾರ್ಯಾಚರಣೆ ಮಾಡುವ ಬದಲು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಗರ ಸಾರಿಗೆಯಾಗಿ ಕಾರ್ಯಾಚರಣೆ ಮಾಡುವುದೇ ಸೂಕ್ತ ಎಂದು ತಜ್ಞರ ಸಮಿತಿ ಅಭಿಪ್ರಾಯ ಪಟ್ಟಿದೆ.

ನಷ್ಟದ ಸುಳಿಯಲ್ಲಿ ನಲುಗುತ್ತಿರುವ ಬಿಎಂಟಿಸಿಗೆ ಈ ವೋಲ್ವೋ ಬಸ್‌ ಕಾರ್ಯಾಚರಣೆಯಿಂದ ಆರಂಭದಿಂದಲೂ ಭಾರೀ ಪ್ರಮಾಣದ ನಷ್ಟಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ವೋಲ್ವೋ ಬಸ್‌ಗಳನ್ನು ಕೆಎಸ್‌ಆರ್‌ಟಿಸಿಗೆ ಹಸ್ತಾಂತರಿಸಿ ಅಂತರ್‌ ನಗರಗಳ ನಡುವೆ ಕಾರ್ಯಾಚರಣೆ ಮಾಡಲು ಸಾರಿಗೆ ಸಚಿವರು ಗಂಭೀರವಾಗಿ ಚಿಂತಿಸಿದ್ದರು. ಇದರ ಸಾಧಕ-ಬಾಧಕ ಪರಿಶೀಲಿಸುವ ಸಂಬಂಧ ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ(ಸಿಟಿಎಂ) ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಲಾಗಿತ್ತು. ಈ ಸಮಿತಿಯು ನಿಗಮದ ಈ ವೋಲ್ವೋ ಬಸ್‌ಗಳ ತಾಂತ್ರಿಕತೆ ಮತ್ತು ವಿನ್ಯಾಸ ನಗರ ಸಾರಿಗೆಗೆ ಪೂರಕವಾಗಿವೆ. ಹಾಗಾಗಿ ಅಂತರ್‌ ನಗರಗಳ ನಡುವೆ ಕಾರ್ಯಾಚರಣೆ ಮಾಡುವುದು ಕಷ್ಟಸಾಧ್ಯ. ಬದಲಾಗಿ ರಾಜ್ಯದ ಬೇರೆ ಜಿಲ್ಲೆಗಳಲ್ಲಿ ನಗರ ಸಾರಿಗೆಯಾಗಿ ಕಾರ್ಯಾಚರಣೆ ಮಾಡಬಹುದು ಎಂದು ಅಭಿಪ್ರಾಯಪಟ್ಟಿದೆ ಎಂದು ಬಿಎಂಟಿಸಿ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ಬಿಎಂಟಿಸಿಯು ವೋಲ್ವೋ ಬಸ್‌ ಖರೀದಿ ಸಂದರ್ಭದಲ್ಲಿ ನಗರದ ರಸ್ತೆಗಳಿಗೆ ಹೊಂದಿಕೆಯಾಗುವ ವಿನ್ಯಾಸ ಮತ್ತು ತಾಂತ್ರಿಕತೆಯ ಬಸ್‌ಗಳನ್ನೇ ಆದ್ಯತೆ ಮೇರೆಗೆ ಖರೀದಿಸಿದೆ. ಬಸ್‌ ಒಳಾಂಗಣದ ವಿನ್ಯಾಸ, ಆಸನ ವ್ಯವಸ್ಥೆ, ಹೊರ ಕವಚ ಸೇರಿದಂತೆ ಬಸ್‌ನ ವಿನ್ಯಾಸ ವಿಭಿನ್ನವಾಗಿದೆ. ಈ ಬಸ್‌ಗಳನ್ನು 100ರಿಂದ 150 ಕಿ.ಮೀ. ದೂರದೂರುಗಳಿಗೆ ಕಾರ್ಯಾಚರಣೆ ಮಾಡುವುದರಿಂದ ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಒಂದು ವೇಳೆ ಇಡೀ ಬಸ್‌ನ ವಿನ್ಯಾಸ ಬದಲಿಸಲು ಮುಂದಾದರೆ ಆರ್ಥಿಕ ಹೊರೆಯಾಗುತ್ತದೆ. ಇದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚಾಗುವ ಸಾಧ್ಯತೆಯೂ ಇದೆ. ಹಾಗಾಗಿ ಅಂತರ್‌ ನಗರ ಸಂಚಾರಕ್ಕೆ ಈ ಬಸ್‌ಗಳು ಯೋಗ್ಯವಲ್ಲ ಎಂದು ಸಮಿತಿ ಹೇಳಿದೆ ಎನ್ನಲಾಗಿದೆ.

ನಗರ ಸಾರಿಗೆಯಾಗಿ ಬಳಕೆ

ರಾಜಧಾನಿ ಬೆಂಗಳೂರಿನಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಿರುವುದರಿಂದ ದಿನಕ್ಕೆ 150 ಕಿ.ಮೀ. ಕಾರ್ಯಾಚರಣೆ ಮಾಡುವುದು ಕಷ್ಟವಾಗಿದೆ. ಅಲ್ಲದೆ, ಪ್ರಯಾಣ ದರವೂ ಕೊಂಚ ದುಬಾರಿ ಆಗಿರುವುದರಿಂದ ಪ್ರಯಾಣಿಕರ ಸಂಖ್ಯೆಯೂ ಕಡಿಮೆಯಿದೆ. ಹಾಗಾಗಿ ವಾಹನ ಸಂಚಾರ ದಟ್ಟಣೆ ಕಡಿಮೆಯಿರುವ ನಗರಗಳಲ್ಲಿ ಈ ವೋಲ್ವೋ ಬಸ್‌ಗಳನ್ನು ನಗರ ಸಾರಿಗೆಯಾಗಿ ಕಾರ್ಯಾಚರಣೆ ಮಾಡಬಹುದು. ಉದಾಹರಣೆಗೆ ಬೆಳಗಾವಿ, ಬಳ್ಳಾರಿ, ದಾವಣಗೆರೆ, ಬೀದರ್‌ ಸೇರಿದಂತೆ ಪ್ರಮುಖ ನಗರಗಳಿಗೆ ಈ ವೋಲ್ವೋ ಬಸ್‌ ಸೇವೆ ಪರಿಚಯಿಸಬಹುದು. ಪ್ರಯಾಣ ದರ ತಗ್ಗಿಸಿ ಹೆಚ್ಚು ಪ್ರಯಾಣಿಕರನ್ನು ಆಕರ್ಷಿಸಬಹುದು ಎಂದು ಬಿಎಂಟಿಸಿ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.

ಕೈಗಾರಿಕೆಗಳಿಗೆ ವೋಲ್ವೋ ಸೇವೆ

ನಗರ ಸಾರಿಗೆ ಜತೆಗೆ ಕೈಗಾರಿಕೆಗಳು ಅಭಿವೃದ್ಧಿ ಹೊಂದಿರುವ ಜಿಲ್ಲೆಗಳಲ್ಲಿಯೂ ಕೈಗಾರಿಕೆಗಳ ಸಹಕಾರದೊಂದಿಗೆ ವೋಲ್ವೋ ಬಸ್‌ ಸೇವೆ ನೀಡಬಹುದು. ಬೆಂಗಳೂರು ಹೊರತಾಗಿಯೂ ರಾಜ್ಯದ ಹಲವು ನಗರಗಳಲ್ಲಿ ಕೈಗಾರಿಕೆಗಳು ಕಾರ್ಯ ನಿರ್ವಹಿಸುತ್ತಿವೆ. ಕಂಪನಿಗಳ ಉದ್ಯೋಗಿಗಳ ಪ್ರಯಾಣಕ್ಕೆ ಈ ಬಸ್‌ಗಳನ್ನು ಬಳಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ಕೆಎಸ್‌ಆರ್‌ಟಿಸಿಯು ಮೈಸೂರು ನಗರದಲ್ಲಿ ಪ್ರಾಯೋಗಿಕವಾಗಿ ಕೈಗಾರಿಕೆಗಳ ಸಹಯೋಗದಲ್ಲಿ ವೋಲ್ವೋ ಬಸ್‌ ಸೇವೆ ನೀಡಲು ಮುಂದಾಗಿದೆ. ಇದೇ ಮಾದರಿಯಲ್ಲಿ ರಾಜ್ಯದ ಇತರೆಡೆಯೂ ಈ ಸೇವೆ ಪರಿಚಯಿಸಬಹುದು ಎಂದು ಕೆಎಸ್‌ಆರ್‌ಟಿಸಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಪ್ರತಿ ಕಿ.ಮೀ.ಗೆ 16 ರು. ನಷ್ಟ

ಬಿಎಂಟಿಸಿಯು 2006ರಲ್ಲಿ ಮೊದಲ ಬಾರಿಗೆ ರಾಜಧಾನಿಯಲ್ಲಿ ವೋಲ್ವೋ ಬಸ್‌ ಪರಿಚಯಿಸಿತ್ತು. ಪ್ರಸ್ತುತ 825 ವೋಲ್ವೋ ಬಸ್‌ಗಳನ್ನು ‘ವಜ್ರ’ ಹಾಗೂ ‘ವಾಯು ವಜ್ರ’ ಬ್ರ್ಯಾಂಡ್‌ ಹೆಸರಿನಲ್ಲಿ ಕಾರ್ಯಾಚರಣೆ ಮಾಡುತ್ತಿದೆ. ಕಾರ್ಯಾಚರಣೆ ವೆಚ್ಚ ಪ್ರತಿ ಕಿ.ಮೀ.ಗೆ 80.29 ರು. ತಗುಲುತ್ತಿದೆ. ಪ್ರತಿ ಕಿ.ಮೀಗೆ 63.95 ರು. ಆದಾಯ ಬರುತ್ತಿದೆ. ಅಂದರೆ ಪ್ರತಿ ಕಿ.ಮೀ.ಗೆ 16 ರು. ನಷ್ಟಉಂಟಾಗುತ್ತಿದೆ

ವರದಿ :  ಮೋಹನ ಹಂಡ್ರಂಗಿ