ಬಿಎಂಟಿಸಿ ಬಸ್‌ಗಳ ಮೇಲಿನ ಅತಿಯಾದ ಜಾಹೀರಾತುಗಳು ಪ್ರಯಾಣಿಕರಿಗೆ ತೀವ್ರ ತೊಂದರೆ ಉಂಟುಮಾಡುತ್ತಿವೆ. ಬಸ್‌ನ ಹೊರಭಾಗ ಮತ್ತು ಕಿಟಕಿಗಳ ಮೇಲಿನ ಜಾಹೀರಾತುಗಳಿಂದಾಗಿ ನಿಲ್ದಾಣ ಗುರುತಿಸಲು, ಬಸ್‌ನ ಸ್ಥಳ ತಿಳಿಯಲು ಕಷ್ಟವಾಗುತ್ತಿದೆ. ಈ ಹಿಂದೆ ಜಾಹೀರಾತುಗಳಿಗೆ ವಿರೋಧ ವ್ಯಕ್ತವಾಗಿದ್ದರೂ, ಬಿಎಂಟಿಸಿ ಆದಾಯಕ್ಕಾಗಿ ಅವೈಜ್ಞಾನಿಕ ಜಾಹೀರಾತುಗಳನ್ನು ಮುಂದುವರೆಸಿದೆ. ಇದರಿಂದ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ಮೇ.9): ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ (ಬಿಎಂಟಿಸಿ) ಜನರ ಸೇವೆಗಿಂತ ಆದಾಯವೇ ಮುಖ್ಯವಾಯ್ತಾ? ಒಂದಲ್ಲಾ ಎರಡಲ್ಲಾ ನಿತ್ಯ 40 ಲಕ್ಷ ಪ್ರಯಾಣಿಕರಿಗೆ ಬಿಎಂಟಿಸಿಯಿಂದ ಕಿರಿಕಿರಿ ಅನಿಸುತ್ತಿದೆ. ಅದಕ್ಕೆ ಕಾರಣ ಬಸ್‌ಗಳ ಮೇಲಿರುವ ಜಾಹೀರಾತು. ಬಸ್ ಗಳ ಮೇಲಿನ ಆ್ಯಡ್ ನಿಂದ ಪ್ರಯಾಣಿಕರಿಗೆ ಬಾರಿ ತಲೆನೋವಾಗ್ತಿದೆ. ಬಸ್‌ ಯಾವ ಸೈಡ್ ನೋಡಿದ್ರೂ ಜಾಹೀರಾತಿನದ್ದೇ ಕಾರುಬಾರಾಗಿದ್ದು,ಬಿಎಂಟಿಸಿ ಜಾಹೀರಾತು ಪ್ರಯಾಣಿಕರ ಆಕ್ಷೇಪಕ್ಕೆ ಕಾರಣವಾಗಿದೆ.

ಬಸ್ ಮೇಲಿನ ಹೊರಕವಚ ತುಂಬೆಲ್ಲಾ ಜಾಹೀರಾತುಗಳೇ ತುಂಬಿರುವುದರಿಂದ ಬಸ್‌ ನ ಹೊರಗಡೆ ಏನಾಗುತ್ತಿದೆ. ಯಾವ ನಿಲ್ದಾಣದಲ್ಲಿ ಇಳಿದುಕೊಳ್ಳಬೇಕು. ಬಸ್‌ ಎಲ್ಲಿಗೆ ತಲುಪಿತು. ಯಾವ ಸ್ಥಳದಲ್ಲಿದ್ದೇವೆ ಎಂಬುದು ಪ್ರಯಾಣಿಕರಿಗೆ ತಿಳಿಯದೆ ಅಂಧಃಕಾರ ಆವರಿಸಿದೆ. ಬಸ್ ಕಿಟಕಿ ಮೇಲಿನ ಜಾಹೀರಾತುನಿಂದ ನಿತ್ಯ ಪ್ರಯಾಣಿಕರು ಹೈರಾಣವಾಗಿ ಹೋಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಮೊದಲು ಜಾಹೀರಾತಿನಿಂದ ಬಾರಿ ವಿರೋಧ ವ್ಯಕ್ತವಾಗಿತ್ತು. ಇದಾದ ನಂತರ ಬಿಎಂಟಿಸಿ ಆಡಳಿತ ಮಂಡಳಿ ಆ್ಯಡ್ ಗೆ ಬ್ರೇಕ್ ಹಾಕಿತ್ತು. ಹೊರಕವಚದಲ್ಲಿ ಜಾಹೀರಾತು ಆಳವಡಿಕೆಯಿಂದ ಬಸ್ ಅಂದ ಹಾಳಾಗುತ್ತಿದೆ. ಕಿಟಕಿ ಗಾಜು ಸ್ವಷ್ಟವಾಗಿ ಬಸ್ ನಲ್ಲಿ ಕಾಣೋದಿಲ್ಲ. ಪ್ರಯಾಣಿಕರಿಗೆ ಕಿರಿಕಿರಿ ಆಗದಂತೆ ಜಾಹೀರಾತು ಆಳವಡಿಕೆ ಆಗ್ಬೇಕು ಎಂದು ಕಠಿಣ ನಿಯಮವನ್ನು ಪ್ರಕಟಿಸಿತ್ತು.

ಆದ್ರೆ ಬಿಎಂಟಿಸಿ 3400 ಬಸ್ ಗಳಲ್ಲಿ ಅವೈಜ್ಞಾನಿಕ ವಾಗಿ ಜಾಹೀರಾತು ಫಲಕ ಹಾಕಲಾಗಿದೆ. ಬಿಎಂಟಿಸಿ ನಿರ್ಧಾರದಿಂದ ತಿಂಗಳಿಗೆ 5,6 ಕೋಟಿ ಆದಾಯ ಗಳಿಕೆಯಾಗುತ್ತಿದೆ. ಆದ್ರೆ ಪ್ರತಿನಿತ್ಯವೂ ಬಸ್ ನಲ್ಲಿ ಓಡಾಟ ನಡೆಸುವ ಪ್ರಯಾಣಿಕರಿಗೆ ಕಿರಿಕಿರಿ ತಪ್ಪಿಲ್ಲ. ಹೀಗಾಗಿ ಅವೈಜ್ಞಾನಿಕ ಆ್ಯಡ್ ಗೆ ಬ್ರೇಕ್ ಹಾಕುವಂತೆ ಪ್ರಯಾಣಿಕರು ಆಗ್ರಹಿಸಿದ್ದಾರೆ. ಸಾರಿಗೆ-ಖಾಸಗಿ ಬಸ್ ನಡುವಿನ ವ್ಯತ್ಯಾಸ ತಿಳಿಯುವಲ್ಲಿ ಕೂಡ ಪ್ರಯಾಣಿಕರಿಗೆ ಗೊಂದಲವಾಗಿದೆ.