Asianet Suvarna News Asianet Suvarna News

'ಬಿಎಂಟಿಸಿ ನಮ್ಮ ತೇರು' ಹೆಚ್ಚಿನ ಅನುದಾನ ನೀಡು ಸಿಎಂ ಗುರು: ಬಜೆಟ್‌ಗಾಗಿ ವಿಭಿನ್ನ ಅಭಿಯಾನ

ಉತ್ತಮ ಬೆಂಗಳೂರಿಗಾಗಿ ಬಿಎಂಟಿಸಿಗೆ ಹೆಚ್ಚಿನ ಅನುದಾನ ನೀಡಿ
ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರಿಗೆ ವಿಭಿನ್ನ ಅಭಿಯಾನದ ಮೂಲಕ ಮನವಿ
ಮಹಿಳೆಯರು, ವಿದ್ಯಾರ್ಥಿಗಳು, ವೃದ್ಧರಿಗೆ ಉಚಿತ ಪ್ರಯಾಣಕ್ಕೆ ಅನುಮತಿ ಕೊಡಿ

BMTC Namma Theru Give more funding to CM Guru Different campaign for budget sat
Author
First Published Feb 4, 2023, 3:10 PM IST

ಬೆಂಗಳೂರು (ಫೆ.04): ರಾಜ್ಯ ಸರ್ಕಾರದ ಬೊಪಕ್ಕಸಕ್ಕೆ ಶೆ.40ರಷ್ಟು ಆದಾಯವನ್ನು ತಂದುಕೊಡುವ ಬೆಂಗಳೂರಿನ ಸಾರ್ವಜನಿಕರಿಗೆ ಪ್ರತಿನಿತ್ಯ ಸೇವೆಯನ್ನು ನೀಡುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಗೆ ಈ ಬಾರಿ ಕನಿಷ್ಠ 2,500 ಕೋಟಿ ರೂ. ಅನುದಾನ ನೀಡಬೇಕು. ಈ ಮೂಲಕ ಮಹಿಳೆಯರು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಮತ್ತು ತೃತೀಯ ಲಿಂಗಿಗಳಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಬೇಕು ಎಂದು ಅಭಿಯಾನ ಆರಂಭವಾಗಿದೆ. 

ಬೆಂಗಳೂರು ನಗರ ಇಡೀ ದೇಶದಲ್ಲಿಯೇ ಅತೀ ಹೆಚ್ಚಿನ ಟಿಕೆಟ್ ದರಗಳಿರುವ ಸಾರ್ವಜನಿಕ ಬಸ್ ಸೇವೆಗಳನ್ನು ಹೊಂದಿದ್ದು, ಕೆಲವು ವರ್ಗಗಳ ಜನರಿಗೆ ಕೈಗೆಟುಕದಿರುವಂತಾಗಿದೆ . ನಮ್ಮ ವೇದಿಕೆಯು  ಫೆಬ್ರವರಿ 2022 ರಲ್ಲಿ ಆಯೋಜಿಸಿದ್ದಂತಹ ಒಂದು ಸಾರ್ವಜನಿಕ ಸಭೆಯಲ್ಲಿ, ಕಾರ್ಮಿಕ ವರ್ಗದ ಜನರು, ದುಬಾರಿ ಬಸ್ ಟಿಕೆಟ್ ದರಗಳಿಂದಾಗಿ ಮಹಿಳೆಯರು ಹಾಗೂ ಮಕ್ಕಳು ಜೀವನೋಪಾಯ ಹಾಗೂ ಶಿಕ್ಷಣದಿಂದ ಯಾವ ರೀತಿ ನಿರ್ಬಂಧಿತರಾಗಿದ್ದಾರೆ ಅಥವಾ ವಂಚಿತರಾಗುತ್ತಿದ್ದಾರೆ. ಅವರಿಗೆ ಬರುವ ಆದಾಯದಲ್ಲಿ ದುಬಾರಿ ಬಸ್ ಟಿಕೆಟ್ ದರಗಳಿಂದಾಗಿ ಪೌಷ್ಠಿಕತೆ ಅಥವಾ ಶಿಕ್ಷಣದಂತಹ ಅಗತ್ಯತೆಗಳನ್ನು ಪಡೆಯುವುದು ಸಾಧ್ಯವಾಗದಿರುವಂತೆ ಆಗಿರುವುದು ಹಾಗೂ ಸುರಕ್ಷಿತ ಹಾಗೂ ಘನತೆಯುಳ್ಳ ಸಾರಿಗೆ ವ್ಯವಸ್ಥೆಯ ಕೊರತೆಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. 

ಮಿತಿ ಮೀರಿದ ಬಿಎಂಟಿಸಿ ಅಧಿಕಾರಿಗಳ ಕಿರುಕುಳ: ಮೊನ್ನೆ ಕಂಡಕ್ಟರ್‌ ಇಂದು ಡ್ರೈವರ್‌ ಆತ್ಮಹತ್ಯೆಗೆ ಯತ್ನ

 

ದುಬಾರಿ ಬಸ್‌ ಟಿಕೆಟ್‌ ದರ: ಅನೇಕರು ದುಬಾರಿ ಬಸ್ ಟಿಕೆಟ್‍ಗಳಿಂದಾಗಿ ತಮ್ಮ ಕೆಲಸದ ಸ್ಥಳಗಳಿಗೆ 3-4 ಕಿ.ಮೀ.ಗಳಷ್ಟು ದೂರ ನಡೆದುಕೊಂಡೇ ಹೋಗುತ್ತಿದ್ದಾರೆ. ಬಸ್ ಪ್ರಯಾಣವನ್ನು ಬಳಸುವ ಅನೇಕರು ಕೇವಲ ರೂ.10 ಟಿಕೆಟ್ ದರಕ್ಕೆ ಎಷ್ಟು ದೂರ ಹೋಗಬಹುದೋ ಅಲ್ಲಿಯವರೆಗೆ ಮಾತ್ರ ಸಾರ್ವಜನಿಕ ಸಾರಿಗೆಯನ್ನು ಬಳಸುತ್ತಿದ್ದಾರೆ. ಕಡಿಮೆ ಆದಾಯವುಳ್ಳ ಕುಟುಂಬಗಳಲ್ಲಿ, ದುಬಾರಿ ಸಾರ್ವಜನಿಕ ಸಾರಿಗೆಯಿಂದಾಗಿ ಯಾವ ರೀತಿ ಅವರ ಜೀವನದ ಮೇಲೆ ಪರಿಣಾಮ ಬೀರಿದೆ ಎನ್ನುವುದಕ್ಕೆ ಅನೇಕ ಸಾಕ್ಷಿಗಳಿವೆ. ಇದರಿಂದಾಗಿ ಇಂತಹ ಕುಟುಂಬಗಳ ಜನರಿಗೆ ತಮ್ಮ ದೈನಂದಿನ ಜೀವನದ ಅಗತ್ಯಗಳನ್ನೂ ಸಹ ಸರಿದೂಗಿಸದಂತಾಗಿದೆ. ಈ ಸಾರ್ವಜನಿಕ ಸಭೆಯ ತೀರ್ಪಿನ ವರದಿಯನ್ನು ಈ ಮನವಿಯೊಂದಿಗೆ ಹೆಚ್ಚುವರಿಯಾಗಿ ಲಗತ್ತಿಸಲಾಗಿದೆ.

ನಗರದ ಎಲ್ಲ ಭಾಗಕ್ಕೂ ಬಸ್‌ ಸೇವೆ ಸಿಗುತ್ತಿಲ್ಲ: ಬಿಎಂಟಿಸಿ ನಗರದ ಎಲ್ಲಾ ಭಾಗಗಳಿಗೂ ಸೂಕ್ತ ಸಂಪರ್ಕ ಹಾಗೂ ಸೇವೆಯನ್ನು ಕಲ್ಪಿಸುತ್ತಿಲ್ಲ. ವಿಶೇಷವಾಗಿ ಕೊಳಗೇರಿಗಳಲ್ಲಿ ವಾಸಿಸುತ್ತಿರುವ ಜನರು, ನಗರದ ಹೊರವಲಯಗಳಲ್ಲಿ ವಾಸಿಸುವವರು, ಮುಖ್ಯ ರಸ್ತೆಗಳಿಂದ ದೂರ ಒಳ ಭಾಗಗಳಲ್ಲಿ ವಾಸಿಸುತ್ತಿರುವವರು ಬಸ್ ಹಿಡಿಯಲು 2-3 ಕಿ.ಮೀ.ಗಳಷ್ಟು ದೂರ ನಡೆದುಕೊಂಡು ಹೋಗಬೇಕಾಗುತ್ತದೆ ಅಥವಾ ದುಬಾರಿ ಶೇರ್ ಆಟೋ ಸೇವೆಗಳಿಗೆ ಮೊರೆ ಹೋಗಬೇಕಾಗುತ್ತಿದೆ . ಈ ಲಭ್ಯತೆಯ ಕೊರತೆಯು ಜನರನ್ನು ಕೈಗೆಟಕುವ ಹಾಗೂ ಸುರಕ್ಷಿತ ಸಾರಿಗೆಯಿಂದ ವಂಚಿತರಾಗಿಸುತ್ತಿದ್ದು, ಮತ್ತೊಂದೆಡೆ ಖಾಸಗಿ ವಾಹನಗಳ ಆರ್ಭಟ ಹೆಚ್ಚಾಗಿಸುವಂತೆ ಮಾಡಿದೆ. 

ಹತ್ತು ವರ್ಷದಿಂದ 6,500 ಬಸ್‌ಗಳ ಸಂಚಾರ: ಬಿಎಂಟಿಸಿ ಸುಮಾರು ಒಂದು ದಶಕದಿಂದಲೂ 6,000-6,500 ರಷ್ಟು ಸಂಖ್ಯೆಯ ಬಸ್ಸುಗಳನ್ನೇ ನಡೆಸುತ್ತಿದೆ. ಆದರೆ ನಗರದ ಜನಸಂಖ್ಯೆ (ಪ್ರಸ್ತುತ 1.3 ಕೋಟಿ) ಹಾಗೂ ಖಾಸಗಿ ವಾಹನಗಳ ಸಂಖ್ಯೆ (ಪ್ರಸ್ತುತ 1 ಕೋಟಿ) ಆಘಾತಕಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವ ಜಾಗತಿಕ ಗುಣಮಟ್ಟಗಳ ಪ್ರಾವಧಾನದ ಪ್ರಕಾರ, ಬೆಂಗಳೂರು ನಗರ 1.3 ಕೋಟಿ ಜನಸಂಖ್ಯೆಯನ್ನು ಹೊಂದಿದ್ದು, ಇದಕ್ಕೆ ಪೂರಕವಾಗಿ 15,660 ಬಸ್ಸುಗಳ ಅಗತ್ಯವಿದೆ. ಈ ಹೋಲಿಕೆಯಲ್ಲಿ ಬಹಳ ಕಡಿಮೆ ಸಂಖ್ಯೆಯ ಬಸ್ಸುಗಳನ್ನು ಹೊಂದಿರುವ ಬಿಎಂಟಿಸಿಗೆ ಈಗ ಎದುರಾಗಿರುವ ಸೇವಾ ಅಂತರಗಳು ಹಾಗೂ ನಗರದ ಸಾರಿಗೆ ಬೇಡಿಕೆಯನ್ನು ಬಗೆಹರಿಸುವುದು ಸಾಧ್ಯವಾಗುತ್ತಿಲ್ಲ.

ಬಾಗಿಲ ಬಳಿ ನಿಲ್ಲಬೇಡ ಅಂದಿದ್ದಕ್ಕೆ ಕಂಡಕ್ಟರ್‌, ಡ್ರೈವರ್‌ಗೆ ಥಳಿಸಿದ ಕಿಡಿಗೇಡಿಗಳು

ಬಿಎಂಟಿಸಿಗೆ ಹೆಚ್ಚು ಸಿಬ್ಬಂದಿ ನೇಮಕ ಮಾಡಿ: ಕೋವಿಡ್ ಸಾಂಕ್ರಾಮಿಕದ ನಂತರ, ಬಿಎಂಟಿಸಿಯು ತೀವ್ರ ಹಣಕಾಸಿನ ಮುಗ್ಗಟ್ಟನ್ನು ಎದುರಿಸುತ್ತಿದ್ದು, ಬಿಎಂಟಿಸಿ ನೌಕರರ ಕೆಲಸದ ಪರಿಸ್ಥಿತಿಗಳು ಹಾಗೂ ಆರ್ಥಿಕ ಸ್ಥಿತಿಗತಿಗಳೂ ಸಹ ಉಲ್ಭಣಗೊಂಡಿವೆ. ಈ ಸಮಸ್ಯೆಗಳ ವಿರುದ್ಧ ಕಾರ್ಮಿಕರು ಪ್ರತಿಭಟಿಸಿದರು. ಆದರೆ ಅನೇಕರನ್ನು ಕೆಲಸದಿಂದ ವಜಾಗೊಳಿಸಲಾಯಿತು. ಇದರ ಜೊತೆಗೆ, ನೌಕರರ ನಡುವಿನ ಸಾಮಾನ್ಯ ಘರ್ಷಣೆಗಳಿಂದಾಗಿ ಬಿಎಂಟಿಸಿಯಲ್ಲಿ ಪ್ರಸ್ತುತ ಈಗಿರುವ ಬಸ್ಸುಗಳನ್ನು ನಡೆಸುವಷ್ಟು ಸಿಬ್ಬಂದಿಗಳೂ ಲಭ್ಯವಿಲ್ಲ. ಹಾಗಾಗಿ ಈಗ ಕೇವಲ 5,600 ಬಸ್ಸುಗಳು ಮಾತ್ರ ರಸ್ತೆಗಳ ಮೇಲಿವೆ . ಈ ಕಾರಣವು ನಗರದ ಅನೇಕ ಪ್ರದೇಶಗಳಿಗೆ ಬಸ್ ಸೇವೆಗಳನ್ನು ಮತ್ತಷ್ಟು ಕಡಿಮೆಯಾಗಿಸಿದೆ. ಈ ಹಿನ್ನೆಲೆಯಲ್ಲಿ ಬಿಎಂಟಿಸಿಗೆ ಹೆಚ್ಚಿನ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುವುದರ ಜೊತೆಗೆ ತನ್ನ ಸೇವೆಗಳನ್ನೂ ವಿಸ್ತರಿಸಬೇಕಾಗಿದೆ. 

ಸಿಬ್ಬಂದಿಗಳ ನೇಮಕಾತಿ ಖಾಸಗೀಕರಣ ಬೇಡ:  ಸರ್ಕಾರವು ಬಿಎಂಟಿಸಿಗೆ ಸಿಬ್ಬಂದಿಗಳ ನೇಮಕಾತಿಯನ್ನು ಸ್ಥಗತಿಗೊಳಿಸಿ ಆದೇಶ ಹೊರಡಿಸಿದೆ. ಇದರಿಂದಾಗಿ ಬಿಎಂಟಿಸಿಯು ಖಾಸಗಿ ಏಜೆನ್ಸಿಗಳ ಮೂಲಕ ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಗಳನ್ನು ನೇಮಕಾತಿ ಮಾಡಿಕೊಳ್ಳಲು ಮುಂದಾಗಿದೆ. ಇಂತಹ ಕ್ರಮಗಳು ಸಿಬ್ಬಂದಿಗಳ ನಡುವೆ ಅಸಮಾನತೆಗೆ ಹಾಗೂ ಭಿನ್ನಾಭಿಪ್ರಾಯಗಳಿಗೆ ದಾರಿ ಮಾಡಿಕೊಡುತ್ತದೆ. ಜೊತೆಗೆ ಸೇವೆಗಳನ್ನು ಮತ್ತಷ್ಟು ಅಸ್ಥಿರ ಹಾಗೂ ಅವಿಶ್ವಸನೀಯವನ್ನಾಗಿಸುತ್ತದೆ. ವಿದ್ಯುತ್ ಬಸ್ಸುಗಳನ್ನು ಗುತ್ತಿಗೆ ಆಧಾರದ ಮೇಲೆ ಪಡೆಯುವುದೂ ಸಹ ಇದೇ ರೀತಿಯ ಗಂಡಾಂತರಕ್ಕೆ ಎಡೆ ಮಾಡಿಕೊಡುತ್ತದೆ. ಈ ಎಲ್ಲಾ ಅಂಶಗಳು ಬಿಎಂಟಿಸಿಯನ್ನು ತನ್ನ ಸೇವೆಗಳನ್ನು ಪರಿಣಾಮಕಾರಿಯಾಗಿಸಲು ಹಾಗೂ ನಗರದ ಜನರಿಗೆ ವಿಶ್ವಸನೀಯ ಸೇವೆ ಒದಗಿಸುವ ರೀತಿಯಲ್ಲಿ ನಿರ್ವಹಿಸಲು ಸಾಧ್ಯವಾಗಿಸದೆ ದುರ್ಬಲಗೊಳಿಸುತ್ತಿದೆ.

ಲಕ್ಷಾಂತರ ಜನರು ಬಸ್‌ ಸೇವೆಯಿಂದ ವಂಚಿತ: ಸಾರ್ವಜನಿಕ ಸಾರಿಗೆ ಒಂದು ಅಗತ್ಯ ಸೇವೆ. ಕೈಗೆಟಕುವ ದರದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯೇ ನಗರಗಳಲ್ಲಿ ವಾಸಿಸುವ ಜನರಿಗೆ ಘನತೆಯುಳ್ಳ ಹಾಗೂ ಗೌರವಯುತ ಜೀವನ ಸಾಗಿಸಲು ಸಾಧ್ಯವಾಗಿಸುತ್ತದೆ. ಮನೆಗಳ ಬಳಿಯಲ್ಲಿ ಕೈಗೆಟಕುವಂತಹ ಸಾರ್ವಜನಿಕ ಸಾರಿಗೆ ವ್ಯವಸ್ಥೆ ದೊರೆಯದಿರುವ ಕಾರಣ ಜನರು ಉತ್ತಮ ಆರೋಗ್ಯ, ಶಿಕ್ಷಣ ಹಾಗೂ ಜೀವನೋಪಾಯ ಪಡೆಯಲು ಕಷ್ಟಪಡುತ್ತಿದ್ದಾರೆ. ಅಲ್ಲದೆ  ಈ ಕಾರಣದಿಂದಾಗಿ ಶೋಷಿತ ಸಮುದಾಯಗಳು ಆರ್ಥಿಕ ಹಾಗೂ ಸಾಮಾಜಿಕ ಜೀವನದಲ್ಲಿ  ಭಾಗವಹಿಸುವಿಕೆಯ ಅಂಶಗಳಿಂದಲೂ ವಂಚಿತರಾಗುತ್ತಾರೆ. ಬೆಂಗಳೂರು ನಗರದಲ್ಲಿ ವರ್ಷಗಳಿಂದಲೂ ಲಕ್ಷಾಂತರ ಜನರು ಈ ದೈನಂದಿನ ಅತ್ಯಗತ್ಯ ಸೇವೆಗಳಿಂದ ವಂಚಿತರಾಗಿಯೇ ಬದುಕುತ್ತಿದ್ದಾರೆ.

ಬಿಎಂಟಿಸಿಯಲ್ಲಿ ಮಹಿಳಾ ಅಧಿಕಾರಿಗಳದ್ದೇ ದರ್ಬಾರ್! ಪುರುಷ ಕಾರ್ಮಿಕರ ಸಮಸ್ಯೆ ಆಲಿಸೋರೇ ಇಲ್ವಾ?

ಮೂರು ರಾಜ್ಯಗಳಲ್ಲಿ ಉಚಿತ ಬಸ್‌ ಸೇವೆ: ಈಗಾಗಲೇ 2019 ಹಾಗೂ 2021ರ ನಡುವೆ, ಮೂರು ರಾಜ್ಯಗಳು (ದೆಹಲಿ, ಪಂಜಾಬ್ ಹಾಗೂ ತಮಿಳುನಾಡು) ಮಹಿಳೆಯರಿಗೆ ಸಾರ್ವಜನಿಕ ಸೇವೆಯನ್ನು ಉಚಿತಗೊಳಿಸಿವೆ. ತಮಿಳು ನಾಡು ಯೋಜನಾ ಮಂಡಳಿ  ನಡೆಸಿದಂತಹ ಒಂದು ಅಧ್ಯಯನವು, ಈ ಯೋಜನೆಯು ತಮಿಳು ನಾಡಿನಲ್ಲಿ ದುಡಿಯುವ ವರ್ಗದ ಕುಟುಂಬಗಳು ಹಾಗೂ ಅಂಚಿನಲ್ಲಿರುವ ಸಮುದಾಯಗಳ ಕುಟುಂಬಗಳ ಮಹಿಳೆಯರು ಪ್ರತಿ ತಿಂಗಳು ರೂ.756 ರಿಂದ ರೂ.1,012ರವರೆಗೆ ಉಳಿತಾಯ ಮಾಡುತ್ತಿರುವುದನ್ನು ಬಹಿರಂಗಗೊಳಿಸಿದೆ. ಮಾಧ್ಯಮಗಳಲ್ಲಿ ವರದಿಯಾಗಿರುವಂತೆ, ಈ ಯೋಜನೆಯು ಮಹಿಳೆಯರಿಗೆ ಹೆಚ್ಚು ಖರ್ಚು ಮಾಡಬಹುದಾದ ಆದಾಯವನ್ನು (ಕುಟುಂಬದ ಹೆಚ್ಚುವರಿ ವೆಚ್ಚಗಳನ್ನು ಸರಿದೂಗಿಸುವ), ಕೆಲಸದಲ್ಲಿ ಹೆಚ್ಚಿನ ಭಾಗವಹಿಸುವಿಕೆ, ಓಡಾಡಲು ಕುಟುಂಬದ ಸದಸ್ಯರ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸಿರುವುದು ಹಾಗೂ ಕಲಿಕೆ ಹಾಗೂ ನೆಟ್‍ವರ್ಕಿಂಗ್‍ಗಾಗಿ ಹೊಸ ಅವಕಾಶಗಳನ್ನು ಒದಗಿಸಿದೆ. 

ಈ ಸಾಲಿನ ಆಯವ್ಯಯದಲ್ಲಿ ಬಿಎಂಟಿಸಿಗೆ ಸಂಬಂಧಪಟ್ಟ ಪ್ರಮುಖ ಬೇಡಿಕೆಗಳು:

  • ನಗರದ ಅತ್ಯಂತ ಅಗತ್ಯವಿರುವ ಸಮುದಾಯಗಳ ಜನರಾದ ಮಹಿಳೆಯರು, ತೃತೀಯ ಲಿಂಗಿಗಳು, ಹಿರಿಯ ನಾಗರಿಕರು ಹಾಗೂ ವಿದ್ಯಾರ್ಥಿಗಳಿಗೆ ಬಿಎಂಟಿಸಿ ಬಸ್ಸುಗಳಲ್ಲಿ ಪ್ರಯಾಣವನ್ನು ಉಚಿತಗೊಳಿಸಿ. ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಬಿಎಂಟಿಸಿಗೆ ಅಗತ್ಯ ಹಣಕಾಸಿನ ಹಂಚಿಕೆಯನ್ನು ಮಾಡಿ (ಅಂದಾಜು ರೂ.1,500 ಕೋಟಿಗಳು). ಈ ಹಂಚಿಕೆ ವಿಶೇಷವಾಗಿ ಉಚಿತ ಪ್ರಯಾಣ ಯೋಜನೆಗಾಗಿ ಮಾತ್ರ ಮೀಸಲಿರಬೇಕು. 
  • ಬಿಎಂಟಿಸಿಗೆ ವಿಧಿಸಿರುವ ಸಿಬ್ಬಂದಿ ನೇಮಕಾತಿ ಸ್ಥಗಿತದ ಆದೇಶವನ್ನು ಹಿಂಪಡೆದು, ಕೂಡಲೇ 1,000 ಹೆಚ್ಚುವರಿ ಸಿಬ್ಬಂದಿ ನೇಮಕಾತಿಗೆ ಕ್ರಮ ಕೈಗೊಳ್ಳುವುದು. ಈ ಸಿಬ್ಬಂದಿಗಳ ವೇತನಕ್ಕಾಗಿ ಅಗತ್ಯ ಆಯವ್ಯಯ ಹಂಚಿಕೆ ಮಾಡುವುದು (ಅಂದಾಜು ರೂ.100 ಕೋಟಿಗಳು)
  • ಬಿಎಂಟಿಸಿಗೆ 3,000 ಹೆಚ್ಚಿನ ಸಂಖ್ಯೆಯ ಬಸ್ಸುಗಳನ್ನು ಸೇರ್ಪಡೆಗೊಳಿಸುವುದು (ಹಾಲಿ ಇತರೆ ಖರೀದಿ ಯೋಜನೆಗಳ ಜೊತೆಗೆ) ಹಾಗೂ ಇದಕ್ಕಾಗಿ ಅಗತ್ಯವಾಗುವ ಹೆಚ್ಚುವರಿ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುವುದು. ಅಗತ್ಯವಾಗುವ ಹೆಚ್ಚುವರಿ ಅನುದಾನ (Capital Expenditure ಅಂದಾಜು 1,350 ಕೋಟಿ ರೂ.  ಹಾಗೂ Operational Expenditure ಗೆ 4,500 ಕೋಟಿ ರೂ.).
  • ಮುಂದಿನ 3 ವರ್ಷಗಳ ಅವಧಿಯಲ್ಲಿ 3000 ಬಿಎಸ್6 ಡೀಸೆಲ್ ಬಸ್ಸುಗಳನ್ನು ಖರೀದಿಸಲು ಅಂದಾಜು ರೂ.1,350 ಕೋಟಿಗಳ ಭಂಡವಾಳ ನಿಧಿ ಹಂಚಿಕೆ ಅಗತ್ಯವಿದೆ. ಒಟ್ಟು 3000 ಬಸ್ಸುಗಳನ್ನು ಸೇರ್ಪಡೆಗೊಳಿಸಿದರೆ, ಮುಂದಿನ 3 ವರ್ಷಗಳ ಅವಧಿಗೆ ವಾರ್ಷಿಕ ಅಂದಾಜು ರೂ.1,400 ಕೋಟಿ ಕಾರ್ಯಾಚರಣೆ ವೆಚ್ಚಗಳನ್ನು ಭರಿಸಬೇಕಾಗುತ್ತದೆ. ಹೆಚ್ಚಿನ ಸಂಖ್ಯೆಯ ಜನರು ಬಿಎಂಟಿಸಿ ಬಸ್ಸುಗಳನ್ನು ಬಳಸುವುದರಿಂದ ಈ ಪೈಕಿ ಸ್ವಲ್ಪ ಮಟ್ಟಿಗೆ ಆದಾಯ ಲಭಿಸುತ್ತದೆ. ಆದರೆ ಉಳಿದ ಹಣವನ್ನು ಕಾರ್ಯಾಚರಣಾ ಬೆಂಬಲವಾಗಿ ಒದಗಿಸಬೇಕು.
  • ಈ ವರ್ಷದ ಬಜೆಟ್‌ನಲ್ಲಿ 1,500 ಕೋಟಿ ರೂ. ಹೆಚ್ಚುವರಿ ವಾರ್ಷಿಕ ಹಣಕಾಸಿನ ಅಗತ್ಯವಿದೆ. ಈ ಪ್ರಮಾಣ ಮುಂದಿನ 3 ವರ್ಷಗಳಲ್ಲಿ ಅಂದಾಜು ವಾರ್ಷಿಕ 2,500 ಕೋಟಿ ರೂ.ಗಳಿಗೆ ಹೆಚ್ಚಾಗಬಹುದು. ಜೊತೆಗೆ 1,350 ಕೋಟಿ ರೂ.ಗಳಷ್ಟು (3,000 ಹೆಚ್ಚಿನ ಬಸ್ಸುಗಳ ಸೇರ್ಪಡೆಗಾಗಿ) ಬಂಡವಾಳ ನಿಧಿಯ ಅಗತ್ಯಿರುತ್ತದೆ. ಇವುಗಳಿಗಾಗಿ ಮುಂದಿನ 3 ವರ್ಷಗಳ ಅವಧಿಯಲ್ಲಿ ಅಂದಾಜು 7,500 ಕೋಟಿ ರೂ. ಹಂಚಿಕೆಯ ಅಗತ್ಯವಿರುತ್ತದೆ. 
Follow Us:
Download App:
  • android
  • ios