ವಿಜಯಪುರ ನಗರದ ಮುಂಡೆವಾಡಿ ಆಸ್ಪತ್ರೆ ಎದುರು ಯಾಸೀನ್ ಠಕ್ಕೆ ಎಂಬಾತನ ಮೇಲೆ ಗುಂಡಿನ ದಾಳಿ ನಡೆದಿದ್ದು, ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಪತ್ನಿಯ ಎದುರಲ್ಲೇ ಈ ಭೀಕರ ಹತ್ಯೆ ನಡೆದಿದೆ. ಕೃತ್ಯಕ್ಕೆ ಕಾರಣವಾಯ್ತಾ ಅದೊಂದು ಗಲಾಟೆ?
ವಿಜಯಪುರ: ನಗರದಲ್ಲಿ ಮತ್ತೆ ಗುಂಡಿನ ಮೊರೆತ ನಡೆದಿದ್ದು, ವಿಜಯಪುರ ನಗರದ ಜನ ಬೆಚ್ಚಿಬಿದ್ದಿದ್ದಾರೆ. ಯಾಸೀನ್ ಠಕ್ಕೆ ಎಂಬಾತನ ಮೇಲೆ ಎರಡು ಸುತ್ತು ಫೈರಿಂಗ್ ನಡೆದಿದ್ದು, ಆತ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾನೆ.
ಘಟನೆ ಏನು?
ಮೃತ ಯಾಸೀನ್ ಠಕ್ಕೆ, ನಗರದ ಗ್ಯಾಂಗ್ ಬಾವಡಿ ನಿವಾಸಿ. ಈತನ ಹೆಂಡತಿಗೆ ಅನಾರೋಗ್ಯ ಕಾಡಿತ್ತು. ಅದೇ ಕಾರಣಕ್ಕೆ ಪತ್ನಿಯನ್ನು ಕರೆದುಕೊಂಡು ನಗರದ ಮುಂಡೆವಾಡಿ ಆಸ್ಪತ್ರೆಗೆ ಬಂದಿದ್ದ. ವೈದ್ಯರ ಬಳಿ ಪತ್ನಿಯನ್ನ ತೋರಿಸಿ ವಾಪಸ್ ಬೈಕ್ ಮೂಲಕ ಮನೆಗೆ ಹೋಗಲು ಆಸ್ಪತ್ರೆ ಎದುರು ನಿಂತಿದ್ದರು. ಈ ವೇಳೆ ಪತ್ನಿಯ ಎದುರಲ್ಲೇ ಏಕಾಏಕಿ ಗುಂಡಿನ ದಾಳಿ ನಡೆಸಿ ಮುಗಿಸಲಾಗಿದೆ.
ಯಾಕೆ?
ಪೊಲೀಸರ ಮತ್ತು ಕುಟುಂಬಸ್ಥರ ಅನುಮಾನಗಳ ಪ್ರಕಾರ, ಕೆಲವು ದಿನಗಳ ಹಿಂದೆ ಡಿಜೆ ವಿಚಾರವಾಗಿ ನಗರದಲ್ಲಿ ಗಲಾಟೆ ನಡೆದಿತ್ತು. ಈ ಗಾಲಾಟೆಯಲ್ಲಿ ಯಾಸೀನ್ ಕೂಡ ಭಾಗಿಯಾಗಿದ್ದ. ಅದೇ ಕಾರಣಕ್ಕೆ ವಿರೋಧಿಗಳ ಆತನ ಮೇಲೆ ಫೈರಿಂಗ್ ಮಾಡಿರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಗಾಂಧಿ ಚೌಕ್ ಪೊಲೀಸರು ಸ್ಥಳಕ್ಕೆ ಓಡೋಡಿ ಬಂದಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಯಾರು ಯಾಸೀನ್ ಠಕ್ಕೆ?
ಯಾಸೀನ್ ಠಕ್ಕೆ ಗ್ಯಾಂಗ್ ಬಾವಡಿ ಏರಿಯಾದ ನಿವಾಸಿ. ಈತನ ಬಗ್ಗೆ ಏರಿಯಾದಲ್ಲಿ ಆಗಾಗ ಸುದ್ದಿ ಆಗುತ್ತಿತ್ತು. ಏರಿಯಾದಲ್ಲಿ ಹವಾ ಇಡಬೇಕು ಎಂಬ ಕಾರಣಕ್ಕೆ ಜನರಲ್ಲಿ ಭಯ ಹುಟ್ಟಿಸುವಂತಹ ಕೃತ್ಯದಲ್ಲಿ ಭಾಗಿಯಾಗುತ್ತಿದ್ದ ಎನ್ನಲಾಗಿದೆ. ಇತ್ತೀಚೆಗೆ ಯಾಸೀನ್, ಇನ್ಸ್ಟಾಗ್ರಾಂನಲ್ಲಿ ಭಯ ಹುಟ್ಟಿಸುವಂತಹ ವಿಡಿಯೋಗಳನ್ನ ಶೇರ್ ಮಾಡಿಕೊಂಡಿದ್ದ. ಆ ವಿಡಿಯೋಗಳು ಜನರಿಗೆ ನೋಡಲು ಗಾಬರಿ ಆಗುವಂತ್ತಿದ್ದವು ಎನ್ನಲಾಗಿದೆ. ಆದರೆ ಫೈರಿಂಗ್ ಹಿಂದಿನ ಕಾರಣ ಮಾತ್ರ ಇನ್ನೂ ತಿಳಿದುಬಂದಿಲ್ಲ.
ಪತ್ನಿಯ ಎದುರಲ್ಲೇ ಫೈರಿಂಗ್
ಪತ್ನಿಯ ಎದುರಲ್ಲೇ ಯಾಸೀನ್ ಠಕ್ಕೆಯನ್ನು ಫೈರಿಂಗ್ ಮಾಡಿ ಮುಗಿಸಿದ್ದಾರೆ. ಈ ದಾರುಣ ಹಾಗೂ ಘೋರ ಕೃತ್ಯವನ್ನು ಕಣ್ಣಾರೆ ಕಂಡ ಆತನ ಪತ್ನಿ ಅಕ್ಷರಶಃ ಕುಸಿದು ಬಿದ್ದಾಳೆ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಯಾಸೀನ್ ಠಕ್ಕೆ ಕುಟುಂಬಸ್ಥರು ಸ್ಥಳಕ್ಕೆ ಓಡೋಡಿ ಬಂದಿದ್ದಾರೆ. ಆದರೆ, ಅಷ್ಟರಲ್ಲೇ ಯಾಸೀನ್ ಪ್ರಾಣ ಬಿಟ್ಟಿದ್ದ. ಮನೆಯ ಸದಸ್ಯನನ್ನು ಕಳೆದುಕೊಂಡ ಸಂಬಂಧಿಕರು ತೀವ್ರ ನೋವಿನಲ್ಲಿದ್ದಾರೆ.
ಸ್ಥಳದಲ್ಲಿ ಆತಂಕ
ಘಟನೆ ಬೆನ್ನಲ್ಲೇ ಆಸ್ಪತ್ರೆಯ ಸುತ್ತುಮುತ್ತ ಆತಂಕದ ವಾತಾವರಣ ನಿರ್ಮಾಣ ಆಗಿತ್ತು. ಫೈರಿಂಗ್ ಸದ್ದು ಕೇಳುತ್ತಿದ್ದಂತೆಯೇ ಅಲ್ಲಿದ್ದ ಜನರೆಲ್ಲ ಗಾಬರಿಯಲ್ಲಿ ಕಣ್ಮರೆಯಾಗಿದ್ದರು. ನಂತರ ಪೊಲೀಸರು ಸ್ಥಳಕ್ಕೆ ಬರುತ್ತಿದ್ದಂತೆಯೇ ಮತ್ತಷ್ಟು ಜನ ಜಮಾಯಿಸಿದ್ದರು. ಇನ್ನು ಈ ಕೃತ್ಯದಿಂದ ಇಡೀ ಏರಿಯಾದಲ್ಲಿ ಒಂದು ರೀತಿಯ ಭಯದ ವಾತಾವರಣ ನಿರ್ಮಾಣ ಆಗಿದೆ. ಸದ್ಯ ಪೊಲೀಸರು ಅಲ್ಲಿನ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.
ಮೃತದೇಹ ಜಿಲ್ಲಾಸ್ಪತ್ರೆಗೆ ರವಾನೆ
ಮೃತ ಯಾಸೀನ್ ಠಕ್ಕೆಯ ಮೃತದೇಹವನ್ನು ವಿಜಯಪುರ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಆಸ್ಪತ್ರೆ ಸುತ್ತಮುತ್ತ ಸಾವಿರಾರು ಜನರು ಜಮಾಯಿಸಿದ್ದಾರೆ. ಯಾಸೀನ್ ಸ್ನೇಹಿತರು ಹಾಗೂ ಕುಟುಂಬಸ್ಥರನ್ನ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಇನ್ನು ಆಸ್ಪತ್ರೆಯ ಹೊರಭಾಗದಲ್ಲಿ ಕುಟುಂಬಸ್ಥರ ಕಣ್ಣೀರು ಎಲ್ಲರ ಹೃದಯ ಒಡೆಯುವಂತಿದೆ.






