Black Money : ಆರ್‌ಎಸ್‌ಎಸ್ ಭವನಗಳ ನಿರ್ಮಾಣಕ್ಕೆ ಕಪ್ಪುಹಣ ಬಳಕೆ - ಮೋಯ್ಲಿ
- ರಾಷ್ಟದಲ್ಲಿ ಯಾವುದೇ ರಾಜ್ಯ ಸರ್ಕಾರಕ್ಕೆ ಸೇರದ ಕಪ್ಪು ಹಣ, ಬಿಜೆಪಿಗೆ ಸೇರುತ್ತಿದೆ.
- ಆ ಹಣದಿಂದಲೇ ರಾಷ್ಟ್ರವ್ಯಾಪಿ ಆರ್‌ಎಸ್‌ಎಸ್ ಭವನಗಳ ಜೊತೆಗೆ ಪ್ರತಿ ರಾಜ್ಯದಲ್ಲಿ ಬಿಜೆಪಿ ಪಕ್ಷಕ್ಕಾಗಿ ದೊಡ್ಡ ಭವನಗಳನ್ನು ನಿರ್ಮಾಣ
ಚಿಕ್ಕಬಳ್ಳಾಪುರ (ಡಿ.12): ರಾಷ್ಟದಲ್ಲಿ ಯಾವುದೇ ರಾಜ್ಯ ಸರ್ಕಾರಕ್ಕೆ ಸೇರದ ಕಪ್ಪು ಹಣ (black Money), ಬಿಜೆಪಿಗೆ (bjp) ಸೇರುತ್ತಿದೆ. ಆ ಹಣದಿಂದಲೇ ರಾಷ್ಟ್ರವ್ಯಾಪಿ ಆರ್‌ಎಸ್‌ಎಸ್ (rss) ಭವನಗಳ ಜೊತೆಗೆ ಪ್ರತಿ ರಾಜ್ಯದಲ್ಲಿ ಬಿಜೆಪಿ ಪಕ್ಷಕ್ಕಾಗಿ ದೊಡ್ಡ ಭವನಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ (Veerappa Moily) ಆರೋಪಿಸಿದರು. ನಗರದ ವಿನಯ್ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾದ ಅವರು, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ. ಇದನ್ನು ಮಹಾತ್ಮಾಗಾಂಧಿ ಬೋಧಿಸಿದ ಸತ್ಯಾಗ್ರಹ, ಅಹಿಂಸೆ, ಸತ್ಯ ಎಂಬ ಮೂರು ಅಸ್ತ್ರಗಳ ಪ್ರಯೋಗದಿಂದ ಬಗ್ಗು ಬಡಿಯಬಹುದಾಗಿದೆ ಎಂದರು.
ದೇಶ ಅಧ:ಪತನಕ್ಕೆ: ರಾಜ್ಯದಲ್ಲಿ 40 ಪರ್ಸೆಂಟ್ ಕಮಿಷನ್ ಸರ್ಕಾರ, ಕೇಂದ್ರದಲ್ಲಿ ಇಡೀ ದೇಶವನ್ನು ಅಧಃಪತನಕ್ಕೆ ದೂಡುತ್ತಿರುವ ಬಿಜೆಪಿ (BJP) ಸರ್ಕಾರ ಅಧಿಕಾರದಲ್ಲಿದೆ ಎಂದು ವಾಗ್ದಾಳಿ ನಡೆಸಿದ ಮಾಜಿ ಸಿಎಂ ವೀರಪ್ಪ ಮೊಯ್ಲಿ, ಪ್ರತಿ ವರ್ಷ 2 ಕೋಟಿಯಷ್ಟುಉದ್ಯೋಗ ಸೃಷ್ಟಿಸುತ್ತೇವೆಂದು ಪ್ರಧಾನಿ ಮೋದಿ ಹೇಳಿದರು. ಅದರಂತೆ ಈ ವೇಳೆಗೆ 14 ಕೋಟಿಯಷ್ಟುಉದ್ಯೋಗ ಸೃಷ್ಟಿಯಾಗಬೇಕಿತ್ತು. ಅದು ಸಾಧ್ಯವಾಗಲಿಲ್ಲ. ಕಾಂಗ್ರೆಸ್ ಅಧಿಕಾರ ಅವಧಿಯಲ್ಲಿ 10ರಿಂದ 11ರಷ್ಟಿದ್ದ ಜಿಡಿಪಿ ಈಗ -2, -3ಗೆ ಕುಸಿದಿದೆ. ಇಲ್ಲೇ ಹುಟ್ಟಿಬೆಳೆದವರನ್ನು ಶತ್ರುಗಳಂತೆ ಕಾಣುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಬುಡಮೇಲು ಮಾಡಿದೆ. ನೋಟ್ ಬ್ಯಾನ್, ಜಿಎಸ್ಟಿಯಂತ ಕೆಟ್ಟನೀತಿಗಳನ್ನು ಜಾರಿಗೊಳಿಸಿ ಸಾಮಾನ್ಯ ಜನರ ಮೇಲೆ ಪ್ರಯೋಗ ಮಾಡುತ್ತಿದೆ ಎಂದರು.
ದೇಶದ ಎಲ್ಲ ವರ್ಗದ ಜನ ನೆಮ್ಮದಿಯಿಂದ ಜೀವನ ನಡೆಸಲು, ಅಭಿವೃದ್ಧಿಪತದತ್ತ ಕೊಂಡೊಯ್ಯಲು ಕಾಂಗ್ರೆಸ್‌ನಿಂದ (Congress) ಮಾತ್ರ ಸಾಧ್ಯ. ದೇಶದ ಹಿತದೃಷ್ಟಯಿಂದಲೂ ಕಾಂಗ್ರೆಸ್ ಕೇಂದ್ರ ಹಾಗೂ ಎಲ್ಲ ರಾಜ್ಯಗಳಲ್ಲಿ ಅಧಿಕಾರಕ್ಕೆ ಬರಬೇಕಿದೆ. ಇದಕ್ಕಾಗಿ ಪಕ್ಷ ಸಂಘಟನೆಗೆ ಆದ್ಯತೆ ನೀಡಬೇಕು. ಪ್ರತಿಯೊಬ್ಬರು 10 ಮಂದಿ ಸದಸ್ಯರನ್ನು ಮಾಡಿ, ಶಿಸ್ತು ಬದ್ಧವಾದ ಕಾಂಗ್ರೆಸ್ ಸೈನ್ಯ ಕಟ್ಟಬೇಕು ಎಂದು ಅವರು, ಕೆಲ ಉಪ ಚುನಾವಣೆಗಳಲ್ಲಿ ಸೋಲಿನ ರುಚಿ ಕಂಡ ಬಳಿಕ ಮೋದಿ ಅಪಾಯಕಾರಿ 3 ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದರು ಎಂದರು.
ರಾಜ್ಯದ 600 ಬ್ಲಾಕ್‌ಗಳಲ್ಲಿ ಅಭಿಯಾನ
ವಿಧಾನಪರಿಷತ್ ಸದಸ್ಯ (MLC) ನಸೀರ್ ಅಹ್ಮದ್ ಮಾತನಾಡಿ, ರಾಜ್ಯದ 600 ಬ್ಲಾಕ್‌ಗಳಲ್ಲಿ ಒಂದೇ ದಿನ ಕಾಂಗ್ರೆಸ್ ಪಕ್ಷದ ಸದಸ್ಯತ್ವ ಅಭಿಯಾನ ನಡೆಯುತ್ತಿದೆ. ಸದಸ್ಯತ್ವ ಆಂದೋಲನ ವೇಳೆ ಯುವ ಸಮುದಾಯವನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕು. ಯುವಶಕ್ತಿ ಇರಬೇಕು. ಜತೆಗೆ, ಮಹಿಳೆಯರಿಗೂ ಸದಸ್ಯತ್ವ ಮಾಡಿಸಬೇಕು. ಇದರಿಂದ ಪಕ್ಷಕ್ಕೆ ಮತ್ತಷ್ಟುಶಕ್ತಿ ಬರಲಿದೆ ಎಂದರು.
ವೀರಪ್ಪ ಮೊಯ್ಲಿ (Veerappa Moily) ಸೇರಿದಂತೆ ಇನ್ನಿತರೆ ಗಣ್ಯರು ಸದಸ್ಯತ್ವ ಪಡೆಯುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಜಿಲ್ಲಾ ಸದಸ್ಯತ್ವ ಉಸ್ತುವಾರಿ ಕಮಲಾಕ್ಷಿ ರಾಜನ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಎನ್. ಕೇಶವರೆಡ್ಡಿ. ಮಾಜಿ ಶಾಸಕ ಎಸ್.ಎಂ. ಮುನಿಯಪ್ಪ, ಕಾಂಗ್ರೆಸ್ ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಸುಮಿತ್ರಮ್ಮ, ಕೆಪಿಸಿಸಿ ಸದಸ್ಯರಾದ ವಿನಯ್ ಶ್ಯಾಮ, ಪಿ.ಎನ್. ಮುನೇಗೌಡ, ಮುಖಂಡರಾದ ಮುದಾಸಿರ್, ಕೃಷ್ಣಪ್ಪ, ಜಯರಾಮ್, ಮಮತಾ ಮೂರ್ತಿ, ಕೋನಪಲ್ಲಿ ಕೋದಂಡ, ರಫೀವುಲ್ಲಾ, ಸುರೇಶ್, ಕುಬಾರ್ ಅಚ್ಚು, ಸುರೇ, ಹನುಮಂತಪ್ಪ, ಜಗದೀಶ್ ಇದ್ದರು.
ಉಜ್ವಲ ಯೋಜನೆಯಿಂದ ಬಿಜೆಪಿ ಉಜ್ವಲ.
ಬಡವರಿಗೆ ಉಚಿತವಾಗಿ ಅಡುಗೆ ಅನಿಲ ಸಂಪರ್ಕ ಕಲ್ಪಿಸಲು ಉಜ್ವಲ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿತು. ಆದರೆ, ಈ ಯೋಜನೆಯಿಂದ ಪ್ರಧಾನಿ ಮೋದಿ, ಬಿಜೆಪಿಯವರು ಉಜ್ವಲವಾದರು ಹೊರತು, ಬಡವರಿಗೆ ಅನುಕೂಲವಾಗಿಲ್ಲ. ಅಡುಗೆ ಅನಿಲಕ್ಕೆ ಸಬ್ಸಿಡಿ ಸಹ ನೀಡುತ್ತಿಲ್ಲ ಎಂದು ಮಾಜಿ ಸಿಎಂ ವೀರಪ್ಪಮೊಯ್ಲಿ ಆರೋಪಿಸಿದರು.