*   ಕಳೆದ ಮೂರು ತಿಂಗಳಿನಿಂದ ದೇಶದಾದ್ಯಂತ ಬೀದಿಗಿಳಿದು ಹೋರಾಟ ಮಾಡುತ್ತಿರುವ ರೈತರು *   ಒಂದು ದಿನವೂ ರೈತರ ಕಷ್ಟವೇನೆಂದು ಕೇಳದ ಪ್ರಧಾನಿ ನರೇಂದ್ರ ಮೋದಿ*   ಕಾಂಗ್ರೆಸ್‌ ಎಂದೂ ದೇಶ ಮಾರುವ ಕೆಲಸ ಮಾಡಲಿಲ್ಲ

ಬೆಂಗಳೂರು(ಸೆ.30): ಇವತ್ತು ನಾನೇನಾದರೂ ಕೇಂದ್ರದಲ್ಲಿ ಪೆಟ್ರೋಲಿಯಂ ಸಚಿವನಾಗಿದ್ದರೆ 45ಗೆ ಒಂದು ಲೀಟರ್‌ ಪೆಟ್ರೋಲ್‌ ಕೊಡುತ್ತಿದ್ದೆ ಎಂದು ಕೇಂದ್ರದ ಮಾಜಿ ಸಂಸದ ವೀರಪ್ಪ ಮೊಯ್ಲಿ(Veerappa Moily) ಹೇಳಿದ್ದಾರೆ. 

ಯಲಹಂಕ ವಿಧಾನಸಭಾ ಕ್ಷೇತ್ರದ ಸೋಲದೇವನಹಳ್ಳಿಯಲ್ಲಿ ನಡೆದ ಕಾಂಗ್ರೆಸ್‌(Congress) ಪಕ್ಷದ ಗಾಂಧಿ ನಡಿಗೆ ಕಾರ್ಯಾಗಾರದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ ಮೂರು ತಿಂಗಳಿನಿಂದ ರೈತರು ದೇಶದಾದ್ಯಂತ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಈ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ(Narendra Modi) ಒಂದು ದಿನವು ಅವರ ಕಷ್ಟವೇನೆಂದು ಕೇಳದ ಇವರೆಂತಹ ಪ್ರಧಾನಿ? ಎಂದ ಅವರು, ಬೆಂಗಳೂರು(Bengaluru) ನಗರಕ್ಕೆ ಪ್ರಪ್ರಥಮವಾಗಿ ನೀರು ಪೂರೈಕೆ ಮಾಡಿದ ಹೆಸರಘಟ್ಟ ಕೆರೆಗೆ ಎತ್ತಿನ ಹೊಳೆಯಿಂದ ನೀರನ್ನು ತುಂಬಿಸುವ ಮೂಲಕ ಈ ಭಾಗವನ್ನು ಹಸಿರಾಗಿಸುವುದು ಕಾಂಗ್ರೆಸ್‌ ಪಕ್ಷದ ಗುರಿಯಾಗಿದೆ ಎಂದು ಹೇಳಿದರು.

ಶಾಸಕ ಕೃಷ್ಣಬೈರೇಗೌಡ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ರಾಮಲಿಂಗಾರೆಡ್ಡಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌, ಬೆಂಗಳೂರು ಉತ್ತರ ಜಿಲ್ಲೆ ಕಾಂಗ್ರೆಸ್‌ ಅಧ್ಯಕ್ಷ ಎಂ. ರಾಜಕುಮಾರ್‌, ಎಂಎಲ್‌ಸಿ ನಾರಾಯಣಸ್ವಾಮಿ, ಕಾಂಗ್ರೆಸ್‌ ಪಕ್ಷದ ಮುಖಂಡರಾದ ಗೋಪಾಲಕೃಷ್ಣ, ಜಯರಾಂ, ಕೇಶವ ರಾಜಣ್ಣ, ಅದ್ದೆ ಮಂಜುನಾಥ್‌ ಮತ್ತಿತರರು ಹಾಜರಿದ್ದರು.

ತನ್ನದೇ ಪಕ್ಷದ ಮುಖಂಡರ ವಿರುದ್ಧ ಮೊಯ್ಲಿ ವಾಗ್ದಾಳಿ

ಯಲಹಂಕ ವಿಧಾನಸಭಾ ಕ್ಷೇತ್ರದ ಸೋಲದೇವನಹಳ್ಳಿಯಲ್ಲಿ ನಡೆದ ಕಾಂಗ್ರೆಸ್‌ ಪಕ್ಷದ ಗಾಂಧಿ ನಡಿಗೆ ಕಾರ್ಯಾಗಾರದಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಕಾಂಗ್ರೆಸ್‌ ಮುಖಂಡರಾದ ರಾಮಲಿಂಗಾರೆಡ್ಡಿ, ಸಲೀಂ ಅಹಮದ್‌, ಎಂಎಲ್‌ಸಿ ನಾರಾಯಣಸ್ವಾಮಿ ಗೋಪಾಲಕೃಷ್ಣ, ಕೇಶವರಾಜಣ್ಣ ಹಾಜರಿದ್ದರು.

ಕಾಂಗ್ರೆಸ್‌ ಎಂದೂ ದೇಶ ಮಾರುವ ಕೆಲಸ ಮಾಡಲಿಲ್ಲ. ಆದರೆ ಇಂದು ಬಿಜೆಪಿಯವರು(BJP) ಎಲ್ಲಾ ಸರ್ಕಾರಿಸ್ವಾಮ್ಯದ ಕಂಪನಿಗಳನ್ನು ಖಾಸಗೀಕರಣ ಮಾಡುವ ಮೂಲಕ ದೇಶವನ್ನು ದಿವಾಳಿತನದತ್ತ ಕೊಂಡೊಯ್ಯುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯವರು ದೇಶ ಭಕ್ತರಲ್ಲ. ದೇಶದಿಂದ ಬಿಜೆಪಿಯವರನ್ನು ಕಿತ್ತು ಒಗೆಯುವುದೇ ನಮ್ಮ ಮುಂದಿನ ಹೋರಾಟ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.