* ನಿತ್ಯವೂ ಇಲ್ಲ ಹೊಸ ಪ್ರಕರಣಗಳು, ಈ ವರೆಗೆ 225 ಪ್ರಕರಣ ದಾಖಲು* ಧಾರವಾಡದ 95, ಹೊರ ಜಿಲ್ಲೆಯ 130 ಪ್ರಕರಣಗಳು* 200 ಜನ ಚಿಕಿತ್ಸೆಯಲ್ಲಿ, 10 ಜನ ಗುಣಮುಖ, 15 ಸಾವು 

ಬಸವರಾಜ ಹಿರೇಮಠ

ಧಾರವಾಡ(ಜೂ.18): ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕೋವಿಡ್‌ ಪಾಸಿಟಿವ್‌ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿರುವ ಜತೆಗೆ ಸೋಂಕಿತರಿಗೆ ಮಾರಕವಾಗಿದ್ದ ಬ್ಲ್ಯಾಕ್‌ ಫಂಗಸ್‌ ಸೋಂಕಿಗೂ ಕಡಿವಾಣ ಬೀಳುತ್ತಿದೆ.

ಕೋವಿಡ್‌ ಸೋಂಕಿತ ಅದರಲ್ಲೂ ಸಕ್ಕರೆ ಕಾಯಿಲೆ ಇದ್ದ ಹೆಚ್ಚಿನವರಿಗೆ ಅಂಟಿಕೊಂಡಿದ್ದ ಬ್ಲ್ಯಾಕ್‌ ಫಂಗಸ್‌ ತೀವ್ರ ಭಯ ಹುಟ್ಟಿಸಿತ್ತು. ಇನ್ನೇನು ಕೋವಿಡ್‌ನಿಂದ ಗುಣಮುಖರಾಗಿ ಮರುಜೀವ ಬಂತು ಎನ್ನುವಷ್ಟರಲ್ಲಿ ಅದೆಷ್ಟೋ ಜನರು ಬ್ಲ್ಯಾಕ್‌ ಫಂಗಸ್‌ಗೆ ಬಲಿಯಾದರು. ಆದರೆ, ಇದೀಗ ಕೋವಿಡ್‌ ಸೋಂಕಿತರ ಸಂಖ್ಯೆ ಕಡಿಮೆಯಾಗುವ ಜತೆಗೆ ಬ್ಲ್ಯಾಕ್‌ ಫಂಗಸ್‌ ಪ್ರಕರಣಗಳಲ್ಲೂ ಇಳಿಕೆ ಕಾಣುತ್ತಿದೆ. ಆರಂಭದಲ್ಲಿ ಒಂದು ಅಥವಾ ಎರಡರಿಂದ ಶುರುವಾದ ಬ್ಲ್ಯಾಕ್‌ ಫಂಗಸ್‌ ಪ್ರಕರಣಗಳು ನಂತರದಲ್ಲಿ ದಿನಕ್ಕೆ ಗರಿಷ್ಠ 20ರ ವರೆಗೂ ದಾಖಲಾದವು. ಇದೀಗ ಜೂನ್‌ ತಿಂಗಳಲ್ಲಿ ಈ ಸಂಖ್ಯೆ ಇಳಿಮುಖ ಕಂಡಿದ್ದು ದಿನ ಬಿಟ್ಟು ದಿನ ಒಂದಂಕಿಯಲ್ಲಿ ಪತ್ತೆಯಾಗುತ್ತಿವೆ. ಹೀಗಾಗಿ ಈ ಸೋಂಕಿತರ ಸಾವಿನ ಪ್ರಮಾಣ ಸಹ ಕಡಿಮೆಯಾಗಿದೆ.

10 ಗುಣಮುಖ, 15 ಜನರ ಸಾವು:

ಆರೋಗ್ಯ ಇಲಾಖೆ ಅಂಕಿ-ಅಂಶಗಳ ಪ್ರಕಾರ ಜೂನ್‌ 16ರ ವರೆಗೆ ಜಿಲ್ಲೆಯಲ್ಲಿ ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ 225 ಬ್ಲ್ಯಾಕ್‌ ಫಂಗಸ್‌ ಪ್ರಕರಣ ಪತ್ತೆಯಾಗಿವೆ. ಈ ಪೈಕಿ 200 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್‌ನಂತೆ ಬಹುಬೇಗ ಈ ರೋಗಿಗಳು ಗುಣಮುಖ ಆಗುವುದಿಲ್ಲ. ತಿಂಗಳುಗಟ್ಟಲೇ ಗುಣಮುಖಕ್ಕೆ ಸಮಯಾವಕಾಶ ಬೇಕು ಎಂದು ತಜ್ಞ ವೈದ್ಯರು ಹೇಳುತ್ತಾರೆ. ಆದ್ದರಿಂದ ಈ ವರೆಗೂ ಬರೀ 10 ಜನರು ಮಾತ್ರ ಗುಣಮುಖರಾಗಿದ್ದಾರೆ. 15 ಜನರು ಈ ಸೋಂಕಿಗೆ ಬಲಿಯಾಗಿದ್ದಾರೆ.

18 ವರ್ಷ ಮೇಲ್ಪಟ್ಟವರಿಗೂ ಲಸಿಕೆ ನೀಡಲು ಸಿದ್ಧತೆ

ಕೋವಿಡ್‌ ಹಿನ್ನೆಲೆಯುಳ್ಳವರಿಗೆ ಹೆಚ್ಚು:

ಅಂಕಿ-ಅಂಶ ಗಮನಿಸಿದಾಗ 18 ವರ್ಷದ ಯಾವ ವ್ಯಕ್ತಿಗೂ ಈ ಸೋಂಕು ಬಂದಿಲ್ಲ. 18ರಿಂದ 45 ವಯಸ್ಸಿನ 74 ಜನರಿಗೆ, 45-60 ವಯಸ್ಸಿನ 98 ಜನರಿಗೆ ಹಾಗೂ 60 ವರ್ಷದ ಮೇಲ್ಪಟ್ಟ 53 ಜನರಿಗೆ ಈ ಸೋಂಕು ತಗುಲಿದೆ. ಅದರಲ್ಲೂ 225ರಲ್ಲಿ 211 ಪ್ರಕರಣಗಳು ಕೋವಿಡ್‌ ಹಿನ್ನೆಲೆಯುಳ್ಳ, 14 ಪ್ರಕರಣಗಳು ಮಾತ್ರ ಕೋವಿಡ್‌ ಇಲ್ಲದೇ ಇರುವ ಪ್ರಕರಣಗಳು. ಕೋವಿಡ್‌ ಸೋಂಕಿತರಿಗೆ ಸ್ಟಿರಾಯ್ಡ್‌ ನೀಡುವುದರಿಂದಲೇ ಕೋವಿಡ್‌ ಹಿನ್ನೆಲೆಯುಳ್ಳವರಿಗೆ ಈ ಸೋಂಕು ಪತ್ತೆಯಾಗಿದೆ ಎನ್ನುವುದು ವೈದ್ಯರ ಅಭಿಪ್ರಾಯ.

ಪುರುಷರಲ್ಲಿ ಜಾಸ್ತಿ:

ಒಟ್ಟು ಸೋಂಕಿತರಲ್ಲಿ 167 ಪುರುಷರಿಗೆ ಹಾಗೂ 58 ಮಹಿಳೆಯರಿಗೆ ಈ ಸೋಂಕು ತಗುಲಿದೆ. ಒಟ್ಟು ಸೋಂಕಿತರಲ್ಲಿ ಹೊರ ಜಿಲ್ಲೆಯ ಸೋಂಕಿತರೇ ಹೆಚ್ಚಿದ್ದಾರೆ. ಹುಬ್ಬಳ್ಳಿಯ ಕಿಮ್ಸ್‌ ಹಾಗೂ ಅವಳಿ ನಗರದಲ್ಲಿ ದೊಡ್ಡ ಆಸ್ಪತ್ರೆಗಳಿರುವ ಕಾರಣ ಸುತ್ತಲಿನ ಜಿಲ್ಲೆಯ ಸೋಂಕಿತರು ಇಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು ಸೋಂಕಿತರ ಪೈಕಿ ಧಾರವಾಡ ಜಿಲ್ಲೆಯ 95 ಹಾಗೂ ಹೊರ ಜಿಲ್ಲೆಗಳಿಂದ 130 ಸೋಂಕಿತರು ಪತ್ತೆಯಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಒಟ್ಟಾರೆ, ಕೋವಿಡ್‌ನಿಂದ ಆತಂಕಕ್ಕೆ ಒಳಗಾಗಿದ್ದ ಸೋಂಕಿತರಿಗೆ ಬ್ಲ್ಯಾಕ್‌ ಫಂಗಸ್‌ ದೊಡ್ಡ ತಲೆನೋವಾಗಿತ್ತು. ಇದೀಗ ಅದು ಸಹ ತನ್ನ ಪ್ರಭಾವ ಕುಗ್ಗಿಸಿದ್ದು ಮತ್ತಷ್ಟು ಸಮಾಧಾನದ ಸಂಗತಿ.

ಬ್ಲ್ಯಾಕ್‌ ಫಂಗಸ್‌ ಪ್ರಕರಣಗಳ ಸಂಖ್ಯೆ ಮೊದಲಿನ ವೇಗದಲ್ಲಿಲ್ಲ. ಜೂನ್‌ ತಿಂಗಳಲ್ಲಿ ತಗ್ಗಿದ್ದು ಹೊಸ ಪ್ರಕರಣಗಳು ದಾಖಲಾಗುತ್ತಿಲ್ಲ. ಕೋವಿಡ್‌ ಪಾಸಿಟಿವ್‌ ಪ್ರಕರಣಗಳ ಸಂಖ್ಯೆ ಕಡಿಮೆಯಾದಂತೆ ಬ್ಲ್ಯಾಕ್‌ ಫಂಗಸ್‌ ಸಹ ಇಳಿಮುಖವಾಗುತ್ತಿದೆ. ಹುಬ್ಬಳ್ಳಿಯ ಕಿಮ್ಸ್‌ ಸೇರಿದಂತೆ ಖಾಸಗಿ ಆಸ್ಪತ್ರೆಗಳಲ್ಲೂ ಈ ರೋಗಕ್ಕೆ ಸೂಕ್ತ ಚಿಕಿತ್ಸೆ ಸಹ ನೀಡಲಾಗುತ್ತಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕರು ಡಾ. ಶಿವಕುಮಾರ ಮಾನಕರ ತಿಳಿಸಿದ್ದಾರೆ. 

ನಿನ್ನೆ ನಾಲ್ವರಿಗೆ ಬ್ಲ್ಯಾಕ್‌ ಫಂಗಸ್‌

ಗುರು​ವಾರ ಜಿಲ್ಲೆ​ಯಲ್ಲಿ ನಾಲ್ಕು ಹೊಸ ಬ್ಲ್ಯಾಕ್‌ ಫಂಗಸ್‌ ಪ್ರಕ​ರಣ​ಗಳು ದಾಖ​ಲಾ​ಗಿದ್ದು ಓರ್ವ ಗುಣ​ಮು​ಖ​ನಾ​ಗಿ​ದ್ದಾನೆ. ಈ ವರೆಗೆ ಒಟ್ಟು 229 ಪ್ರಕ​ರ​ಣ​ಗಳು ದಾಖ​ಲಾ​ಗಿವೆ. ಹೊಸ ಪ್ರಕ​ರ​ಣ​ಗಳ ಪೈಕಿ ಎರಡು ಜಿಲ್ಲೆಯ ಹಾಗೂ ಇನ್ನೆ​ರೆಡು ಹೊರ ಜಿಲ್ಲೆ​ಗ​ಳವು. ಜಿಲ್ಲೆಯ ಸರ್ಕಾರಿ, ಖಾಸಗಿ ಆಸ್ಪ​ತ್ರೆ​ಯಲ್ಲಿ 202 ಜನ ಚಿಕಿ​ತ್ಸೆ ಪಡೆಯು​ತ್ತಿ​ದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.