ಮಂಗಳೂರು(ಜ.29): ವಿಧಾನಸೌಧದಲ್ಲಿ ಬಾಂಬ್‌ ಇಟ್ಟವರನ್ನು ಅಭ್ಯರ್ಥಿಯಾಗಿಸಿದ ಬಿಜೆಪಿ, ಮಹಾರಾಷ್ಟ್ರದಲ್ಲಿಯೂ ಬಾಂಬ್‌ ಇಟ್ಟವ್ಯಕ್ತಿಗೆ ಸೀಟು ನೀಡಿತ್ತು. ಮುಂದೆ ಮಂಗಳೂರು (ಉಳ್ಳಾಲ ) ಕ್ಷೇತ್ರಕ್ಕೆ ತನ್ನ ವಿರುದ್ಧ ವಿಮಾನ ನಿಲ್ದಾಣದಲ್ಲಿ ಬಾಂಬ್‌ ಇಟ್ಟಆದಿತ್ಯರಾವ್‌ನನ್ನು ಅಭ್ಯರ್ಥಿಯನ್ನು ಮಾಡುವ ಸಾಧ್ಯತೆಗಳಿವೆ ಎಂದು ವಿಧಾನ ಸಭೆಯ ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿದ್ದಾರೆ.

ಮುಸಲ್ಮಾನರನ್ನು ಹೊರತಾಗಿಸಿರುವ ಪೌರತ್ವ ತಿದ್ದುಪಡಿಯನ್ನು ಸಂವಿಧಾನ ಒಪ್ಪುವುದಿಲ್ಲ. ಸಂಸತ್‌ಗೆ ಸಂವಿಧಾನ ವಿರುದ್ಧ ಹೋಗುವ ಅಧಿಕಾರವಿಲ್ಲ. ಪ್ರತಿಭಟನೆಗಳು ಸಂವಿಧಾನ ಉಳಿಸಿ ಅನ್ನುವ ಹೆಸರಿನಲ್ಲಿ ಮುಂದಿನ ದಿನಗಳಲ್ಲಿ ಆಗಬೇಕಿದೆ ಎಂದಿದ್ದಾರೆ.

ಕಲ್ಲಾಪುವಿನ ಪೌರತ್ವ ಹೋರಾಟ ಸಮಿತಿ ವತಿಯಿಂದ ಎನ್‌ಆರ್‌ಸಿ, ಸಿಎಎ, ಎನ್‌ಪಿಆರ್‌ ವಿರುದ್ಧ ಕಲ್ಲಾಪು ಯುನಿಟಿ ಹಾಲ್‌ ಮೈದಾನದಲ್ಲಿ ಹಮ್ಮಿಕೊಂಡ ಬೃಹತ್‌ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

'BJP ಸಮಾವೇಶ ಸಂದರ್ಭ ಶಾಲೆಗಳಿಗೇಕೆ ರಜೆ'..?

ಸಿಎಎ, ಎನ್‌ಆರ್‌ಸಿ ಮುಸಲ್ಮಾನರಿಗೆ ಮಾತ್ರ ಸಂಬಂಧಿಸಿದ ವಿಷಯ ಎಂದು ತಲೆ ಕೆಡಿಸಿಕೊಳ್ಳಬೇಡಿ. ಪ್ರಸ್ತುತ ನಡೆಯುತ್ತಿರುವುದು ರಾಜಕೀಯ ಸಭೆಯೂ ಅಲ್ಲ, ಕಾಂಗ್ರೆಸ್ಸಿಗನಾಗಿ ಬಂದಿಲ್ಲ. ದೇಶದ ಪ್ರಜೆಯಾಗಿ ಭಾಗವಹಿಸುತ್ತಿದ್ದೇನೆ ಎಂದರು.

ಮೂರು ವರ್ಷದ ಒಳಗಾಗಿ ಅರ್ಜೆಂಟಾಗಿ ಹಿಂದೂ ರಾಷ್ಟ್ರ ಪೂರೈಸಲು ಕೇಂದ್ರ ಸರ್ಕಾರ ಹೊರಟಿದೆ. ಆದರೆ ಸತ್ಯ, ಸೃಷ್ಟಿಕರ್ತ ನಮ್ಮ ಕಡೆಯಲ್ಲಿ ಇದ್ದಾನೆ, ಜಯ ನಮ್ಮದೇ ಎಂದರು.

ಬೆದರಿಸದವರ ವಿರುದ್ಧ ಪ್ರಕರಣ ಇಲ್ಲ:

ಶಾಸಕ ಯು.ಟಿ.ಖಾದರ್‌ ಮಾತನಾಡಿ, ಸಿಎಎ, ಎನ್‌ಆರ್‌ಸಿ ಕುರಿತು ದೇಶದ ಜನರಿಗೆ ಸ್ಪಷ್ಟವಾದ ಸ್ಪಷ್ಟೀಕರಣ ನೀಡಿ,ಗೊಂದಲಕ್ಕೆ ಎಡೆ ಮಾಡಕೊಡದಿರಿ ಎಂದಿದ್ದಾರೆ. ಉಳ್ಳಾಲ ಸಯ್ಯದ್‌ ಮದನಿ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್‌ ರಶೀದ್‌ ಅಧ್ಯಕ್ಷತೆ ವಹಿಸಿದ್ದರು.

ಸಮಿತಿಯ ಸಂಚಾಲಕ ಉಸ್ಮಾನ್‌ ಕಲ್ಲಾಪು, ನ್ಯಾಯವಾದಿ ದಿನೇಶ್‌ ಹೆಗ್ಡೆ ಉಳೇಪ್ಪಾಡಿ, ವಿಧಾನ ಪರಿಷತ್‌ ಸದಸ್ಯ ನಝೀರ್‌ ಅಹಮದ್‌, ಎಸ್‌ಎಸ್‌ಎಫ್‌ ಮುಖಂಡ ಮುನೀರ್‌ ಸಖಾಫಿ, ಜಮಾತೆ ಇಸ್ಲಾಮಿ ಹಿಂದ್‌ನ ರಾಜ್ಯ ಕಾರ್ಯದರ್ಶಿ ಮಹಮ್ಮದ್‌ ಕುಂಞಿ, ಹೋರಾಟಗಾರರಾದ ಅಮೃತ ಶೆಣೈ ಉಡುಪಿ, ಬಾಲಕೃಷ್ಣ ಪೆರಿಯಾರ್‌, ಅಬ್ದುಲ್‌ ಅಝೀಝ್‌ ದಾರಿಮಿ, ಎಸ್‌ಎಸ್‌ಎಫ್‌ ಮುಖಂಡರಾದ ಮುನೀರ್‌ ಸಖಾಫಿ ಮತ್ತಿತರರಿದ್ದರು. ಯು.ಬಿ. ಸಲೀಂ ಸ್ವಾಗತಿಸಿದರು. ಮಂಗಳೂರು ತಾಲೂಕು ಪಂಚಾಯಿತಿ ಅಧ್ಯಕ್ಷ ಮಹಮ್ಮದ್‌ ಮೋನು ನಿರೂಪಿಸಿದ್ದಾರೆ.

ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ವಿಭಾಗ ಕಾರ್ಯದರ್ಶಿ ಭಾಗಿ!

ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ವಿಭಾಗ ಕಾರ್ಯದರ್ಶಿ ಡಾ.ಮುನೀರ್‌ ಬಾವಾ ಹಾಜಿ ಕಲ್ಲಾಪುವಿನಲ್ಲಿ ನಡೆದ ಸಿಎಎ ಎನ್‌ಆರ್‌ಸಿ ವಿರೋಧದ ಪ್ರತಿಭಟನೆಯಲ್ಲಿ ಭಾಗವಹಿಸಿರುವುದು ಸಭಿಕರಲ್ಲಿ ಅಚ್ಚರಿ ಮೂಡಿಸಿತ್ತು. ಬಿಜೆಪಿಯಿಂದ ನನ್ನನ್ನು ದೂರ ಮಾಡಲಾಗಿದೆ. ಇದರಿಂದ ಮಾನಸಿಕವಾಗಿ ನೊಂದಿದ್ದೇನೆ. ಹಲವು ವರ್ಷಗಳಿಂದ ಪಕ್ಷಕ್ಕಾಗಿ ಹಗಲಿರುಳು ಶ್ರಮಿಸಿದ್ದೇನೆ. ಆದರೂ ಗಣನೆಗೆ ಪಡೆದುಕೊಂಡಿಲ್ಲ ಎಂದು ಅವರು ಹೇಳಿದ್ದಾರೆ.

ವಿಶೇಷ ತನಿಖಾ ತಂಡದಿಂದ ಮಂಗಳೂರು ಗೋಲಿಬಾರ್ ತನಿಖೆ..?