ಯಲ್ಲಾಪುರ(ಜು.29): ಜನಪರ ಆಡಳಿತ ನಡೆಸುವುದಕ್ಕೆ ಸಂಖ್ಯಾಬಲದ ಕೊರತೆಯಿಂದಾಗಿ ಆಪರೇಷನ್‌ ಕಮಲದಂತಹ ಕಾರ್ಯ ಮಾಡಬೇಕಾಯಿತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ಸ್ಪಷ್ಟಪಡಿಸಿದರು.

ಮಂಗಳವಾರ ಇಲ್ಲಿ ವಿಪ ಸದಸ್ಯ ಶಾಂತಾರಾಮ ಸಿದ್ದಿ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ತತ್ವ-ಸಿದ್ಧಾಂತಗಳಿಗೆ ತದ್ವಿರುದ್ಧವಾದ ಸನ್ನಿವೇಶವೆಂಬ ಆಪಾದನೆಗೆ ಅದು ಕಾರಣವಲ್ಲವೆಂದರು.

ನೂತನ MLC ಶಾಂತಾರಾಮ್ ಸಿದ್ದಿ ಮನೆಗೆ ಬಿಜೆಪಿ ನಾಯಕರ ದಂಡು: ಅದೃಷ್ಟ ಹೀಗಿರ್ಬೇಕು..!

ಬಿಜೆಪಿ ಉಳಿದೆಲ್ಲ ರಾಜಕೀಯ ಪಕ್ಷಗಳಿಗಿಂತಲೂ ಭಿನ್ನವಾಗಿದೆ. ತಮ್ಮವರನ್ನೇ ಎಲ್ಲ ಉನ್ನತ ಹುದ್ದೆಗಳಲ್ಲಿ ಇರುವಂತೆ ಪರಂಪರೆಯನ್ನೇ ಬೆಳೆಸಿಕೊಂಡು ಬಂದಂತಹ ಈ ಕಾಲಘಟ್ಟದಲ್ಲಿ ನಮ್ಮ ಪಕ್ಷ ಸಾಮಾನ್ಯ ಕಾರ್ಯಕರ್ತರನ್ನೂ ಗುರುತಿಸುತ್ತದೆ ಎಂಬುದಕ್ಕೆ ಶಾಂತಾರಾಮ ಸಿದ್ದಿ ಒಂದು ಉದಾಹರಣೆ. ಇಂದಿನ ರಾಜಕೀಯ ಸನ್ನಿವೇಶದಲ್ಲಿ ಕುಟುಂಬ ಪರಂಪರೆಗೆ ಒತ್ತು ನೀಡಿ, ತಾಯಿಯೇ ರಾಷ್ಟಾ್ರಧ್ಯಕ್ಷರಾಗಬೇಕು, ತಂದೆ ಪ್ರಧಾನಿಯಾಗಬೇಕು ಮತ್ತು ಮಕ್ಕಳು ಮುಖ್ಯಮಂತ್ರಿ-ಮಂತ್ರಿಗಳಾಗಬೇಕು ಎನ್ನುತ್ತಿರುವಾಗ ಬಿಜೆಪಿ ಭಿನ್ನ ಹೆಜ್ಜೆಗಳನ್ನು ಇಡುತ್ತಿದೆ ಎಂದರು.

ಅಸಮಾಧಾನ ಸ್ಫೋಟ: ಇಲ್ಲದನ್ನ ಮೈಮೇಲೆ ಎಳೆದುಕೊಂಡ ಸಿಎಂ, ಕಟೀಲ್‌ ಫಜೀತಿ

ಸಾಮಾನ್ಯ ಕಾರ್ಯಕರ್ತನೊಬ್ಬನನ್ನು ಗುರುತಿಸಿ, ವಿಧಾನಪರಿಷತ್‌ ಸದಸ್ಯನನ್ನಾಗಿಸಿದ ಕಾರ್ಯ ಬಿಜೆಪಿಯ ವಿಶೇಷತೆ. ಕ್ರಿಯಾಶೀಲರಾದ ಶಾಂತಾರಾಮ ಪ್ರಕಾಶ ಕಾಮತರ ಗರಡಿಯಲ್ಲಿ ಬೆಳೆದವರು. ಯಾವುದೇ ವ್ಯಕ್ತಿಯ, ಸಮಾಜದ ಆಸೆ-ಆಮಿಷಗಳಿಗೆ ಸಿಕ್ಕು, ಮತಾಂತರಕ್ಕೆ ಬಲಿಯಾಗದೇ ಬುಡಕಟ್ಟು ಜನಾಂಗದ ಪರವಾಗಿ ವನವಾಸಿ ಕಲ್ಯಾಣದ ಮೂಲಕ ಹೋರಾಡುತ್ತಿರುವ ಅವರು ಮತ್ತು ನಾನು ಕೂಡ ಅನೇಕ ವರ್ಷಗಳಿಂದ ಆರ್‌ಎಸ್‌ಎಸ್‌ನಲ್ಲಿ ತೊಡಗಿಕೊಂಡು ಕಾರ್ಯ ಮಾಡಿದ್ದೇವು. ಅದೇ ನಮ್ಮನ್ನು ಈ ಸ್ಥಾನಕ್ಕೆ ತರುವುದಕ್ಕೆ ಕಾರಣವಾಗಿದೆ ಎಂದರು.

ನಿಗಮ ಮಂಡಳಿ ಗಿಫ್ಟ್: ಸಿಎಂ ವಿರುದ್ಧ ಸಿಡಿದೆದ್ದ ಬಿಜೆಪಿ ಶಾಸಕ....!

ಕಾರ್ಮಿಕ ಮತ್ತು ಸಕ್ಕರೆ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಮಾತನಾಡಿ, ಇಂದು ಯಲ್ಲಾಪುರ ಕ್ಷೇತ್ರದಲ್ಲಿ ಚರಿತ್ರಾರ್ಹ ದಿನ. ರಾಜ್ಯ ಬಿಜೆಪಿ ಸಂಘಟನೆ ತೀರಾ ದುರ್ಬಲ ಸಮಾಜದ ವ್ಯಕ್ತಿ, ವನವಾಸಿ ಹೋರಾಟದ ಕ್ರಿಯಾಶೀಲ ವ್ಯಕ್ತಿಯನ್ನು ಗುರುತಿಸಿ, ಜಿಲ್ಲೆಯ ಶಾಸಕರನ್ನಾಗಿ ಮಾಡಿದೆ. ನನ್ನ ತಾಲೂಕಿನ ವ್ಯಕ್ತಿಗೆ ನೀಡಿದ ಗೌರವಕ್ಕೆ ನಾನು ಸರ್ಕಾರ-ಪಕ್ಷವನ್ನು ಅಭಿನಂದಿಸಲೇಬೇಕು. ಶಾಂತಾರಾಮ ಸಿದ್ದಿ ಈವರೆಗೆ ವನವಾಸಿಗಳ ನಾಯಕರಾಗಿದ್ದರು. ಇಂದು ಇಡೀ ಜಿಲ್ಲೆಯ ಪ್ರತಿನಿಧಿಯಾಗಿದ್ದಾರೆ. ದುರ್ಬಲ ವರ್ಗದ ಪ್ರತಿನಿಧಿಯಾಗಿ ಕೆಲಸ ಮಾಡುವ ಹೊಣೆ ಅವರ ಹೆಗಲೇರಿದೆ. ಅದರಲ್ಲೂ ರಾಜ್ಯಾಧ್ಯಕ್ಷರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಈ ಕಾರ್ಯಕ್ರಮಕ್ಕೆ ಗೌರವ-ಘನತೆ ಹೆಚ್ಚಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷ ವೆಂಕಟೇಶ ನಾಯ್ಕ ಮಾತನಾಡಿ, ಬಿಜೆಪಿಯ ಚಿಂತನೆಗಳೇ ಬೇರೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಉನ್ನತ ಸ್ಥಾನ ನೀಡುವ ವಿಶಿಷ್ಟತೆ ಹೊಂದಿದ ಪಕ್ಷ. ಕಳೆದ 32 ವರ್ಷಗಳಿಂದ ಪ್ರಕಾಶ ಕಾಮತ್‌ ಅವರ ಗರಡಿಯಲ್ಲಿ ಸಮಾಜ ಸೇವೆ ಮಾಡುತ್ತಿದ್ದ ಶಾಂತಾರಾಮ ಸಿದ್ದಿ ಅವರಿಗೆ ಈ ಸ್ಥಾನ ದೊರೆತಿರುವುದು ಜಿಲ್ಲೆಗೆ ಹೆಮ್ಮೆ ಎಂದರು.

ಕೊಟ್ಟು ಕಸಿದುಕೊಂಡ ಸಿಎಂ: ಕೆಲವೇ ಗಂಟೆಗಳಲ್ಲಿ ನಿಗಮ ಮಂಡಳಿಯಿಂದ 4 ಶಾಸಕರು ಔಟ್...!

ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಂತಾರಾಮ ಸಿದ್ದಿ, ನಾನು ಇದ್ಯಾವುದನ್ನೂ ನಿರೀಕ್ಷಿಸಿದವನೇ ಅಲ್ಲ ಮತ್ತು ಯೋಚನೆಯೂ ಬಂದಿಲ್ಲವಾಗಿತ್ತು. ಆ ದೃಷ್ಟಿಯಿಂದ ಅನಿರೀಕ್ಷಿತವಾಗಿ ಸಿಕ್ಕ ಈ ಹುದ್ದೆ ನನಗೆ ಸಂತೋಷಕ್ಕಿಂತಲೂ ಹೊಣೆಗಾರಿಕೆ ಹೆಚ್ಚಿದೆ. ಬುಡಕಟ್ಟು ಸಮಾಜದ ಬೆನ್ನೆಲುಬಾಗಿ ಕಾರ್ಯ ಮಾಡುವ ಸಂಕಲ್ಪ ಮಾಡಿದ್ದೇನೆ. ಸಿಕ್ಕ ಅವಕಾಶವನ್ನು ಶಕ್ತಿಮೀರಿ ಸದುಪಯೋಗಪಡಿಸಿಕೊಳ್ಳಲು ಪ್ರಯತ್ನಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಶಾಂತಾರಾಮ ಸಿದ್ದಿ ಮತ್ತು ಪತ್ನಿ ಸುಶೀಲಾ ಸಿದ್ದಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಂಗ ಕಲಾವಿದ ಮಂಚಿಕೇರಿಯ ಪರಶುರಾಮ ಸಿದ್ದಿ ಅವರನ್ನು ಸನ್ಮಾನಿಸಲಾಯಿತು.

ಸಿದ್ದರಾಮಯ್ಯ ಕನ್ನಡಿಯಲ್ಲಿ ಮುಖ ನೋಡಿಕೊಳ್ಳಲಿ: ನಳಿನ್‌ ಟಾಂಗ್

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಭಾಗ್ವತ್‌, ಸಂಸದ ಅನಂತಕುಮಾರ ಹೆಗಡೆ, ಶಾಸಕರಾದ ದಿನಕರ ಶೆಟ್ಟಿ, ರೂಪಾಲಿ ನಾಯ್ಕ, ಸುನೀಲ ನಾಯ್ಕ, ಮಾಜಿ ಶಾಸಕರಾದ ಸುನೀಲ ಹೆಗಡೆ, ವಿವೇಕಾನಂದ ವೈದ್ಯ, ಬಿಜೆಪಿ ನಿಕಟಪೂರ್ವ ಅಧ್ಯಕ್ಷ ಕೆ.ಜಿ. ನಾಯ್ಕ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ತೆಂಗಿನಕಾಯಿ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ರೇಖಾ ಹೆಗಡೆ, ತಾಲೂಕು ಬಿಜೆಪಿ ಉಪಾಧ್ಯಕ್ಷ ವೆಂಕಟರಮಣ ಬೆಳ್ಳಿ, ಪ್ರಸಾದ ಹೆಗಡೆ ಉಪಸ್ಥಿತರಿದ್ದರು.