ಬೆಂಗಳೂರು,(ಜುಲೈ. 28): ಸರ್ಕಾರಕ್ಕೆ ಒಂದು ವರ್ಷ ತುಂಬಿದ ಖುಷಿಯಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಪಕ್ಷದ ಶಾಸಕರುಗಳಿಗೆ ನಿಗಮ ಮಂಡಳಿ ಗಿಫ್ಟ್ ಕೊಟ್ಟಿದ್ದೇ ತಡ ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟವಾಗಿದೆ.

ಹೌದು... ಸಿಎಂ ಯಡಿಯೂರಪ್ಪ ಭಿನ್ನಮತೀಯ ಶಾಸಕರನ್ನು ಓಲೈಸುವ ಸಂಬಂಧ 24 ಶಾಸಕರಿಗೆ ನಿಗಮ-ಮಂಡಳಿ ಅಧ್ಯಕ್ಷರನ್ನಾಗಿ ನೇಮಿಸಿ ಆದೇಶ ಹೊರಡಿಸಿದ್ದರು.ಈ ಮೂಲಕ ಭಿನ್ನಮತ ಶಮನದ ತಂತ್ರಗಾರಿಕೆ ಅನುಸರಿಸಿದ್ದರು. ಆದ್ರೆ, ನಿಗಮ ಮಂಡಳಿ ತಂತ್ರಗಾರಿಕೆ ವರ್ಕ್ ಔಟ್ ಆದಂತೆ ಕಾಣಿಸುತ್ತಿಲ್ಲ. ಆಕಾಂಕ್ಷಿಗಳಾಗಿದ್ದವರಿಗೆ ನಿಗಮ ಮಂಡಳಿಗೆ ಕೊಟ್ಟಿದ್ದರಿಂದ ಶಾಸಕರು ಅಸಮಾಧಾನೊಂಡಿದ್ದು, ಬಿಎಸ್‌ವೈ ವಿರುದ್ಧ ತಿರುಗಿಬಿದ್ದಾರೆ.

ನಿಗಮ ಮಂಡಳಿ ಗಿಫ್ಟ್: ಸಿಎಂ ವಿರುದ್ಧ ಸಿಡಿದೆದ್ದ ಬಿಜೆಪಿ ಶಾಸಕ....!

ಸಿಎಂಗೆ ತಿರುಗುಬಾಣವಾದ ನಿಗಮ ಮಂಡಳಿ

ಬಿಜೆಪಿ ಸರ್ಕಾರಕ್ಕೆ ಒಂದು ವರ್ಷದ ಸಂಭ್ರಮಾರಚಣೆ ಸಂದರ್ಭದಲ್ಲಿ ಸಣ್ಣಪುಟ್ಟ ಅಸಮಾಧಾನ ತಣಿಸಲು ಸಿಎಂ ಯಡಿಯೂರಪ್ಪ ಅವರು ಮಾಡಿದ್ದ ಪ್ರಯತ್ನ ಉಲ್ಟಾ ಹೊಡೆದಿದೆ. ಮಂತ್ರಿಸ್ಥಾನದ ಆಕಾಂಕ್ಷಿಯಾಗಿದ್ದವರಿಗೆ ಏಕಾಏಕಿ ನಿಗಮ ಮಂಡಳಿಗಳಿಗೆ ನೇಮಕ ಮಾಡಿದ್ದರಿಂದ ಶಾಸಕರಲ್ಲಿ ಅಸಮಾಧಾನ ಸ್ಫೋಟವಾಗಿದ್ದು, ಕೋವಿಡ್ ಸಂಕಷ್ಟದಲ್ಲಿ ನಿಗಮ-ಮಂಡಳಿಗಳಿಗೆ ನೇಮಕ ಮಾಡುವ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮತ್ತೊಂದು ಸಮಸ್ಯೆಯನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಸದ್ಯದ ಕೊರೋನಾ ಪರಿಸ್ಥಿತಿಯಲ್ಲಿ ಸಚಿವಾಕಾಂಕ್ಷಿಗಳು ಸೈಲೆಂಟ್ ಆಗಿದ್ರು. ಆದ್ರೆ, ಯಡಿಯೂರಪ್ಪ ದಿಢೀರ್‌ನೇ ನಿಗಮ ಮಂಡಳಿಗೆ ನೇಮಕ ಮಾಡಿ ಸಚಿವಾಕಾಂಕ್ಷಿಗಳನ್ನ ಬಡಿದೆಬ್ಬಿಸಿದ್ದಾರೆ. ಕೊರೋನಾ ಪರಿಸ್ಥಿತಿಯಲ್ಲಿ ಅಸಮಾಧಾನಿತ ಮನಸ್ಸುಗಳು ತಮ್ಮ-ತಮ್ಮ ಕ್ಷೇತ್ರಗಳಲ್ಲಿ ಸೈಲೆಂಟ್ ಇದ್ರು. ಸಿಎಂ ಕೂಡ ಸುಮ್ಮನೆ ಇದ್ದಿದ್ದರೇ ಆಗಿರೋದು. ಈಗ ಇಲ್ಲದನ್ನು ಮಾಡಿ ಸಚಿವಾಕಾಂಕ್ಷಿಗಳನ್ನ ವಿರುದ್ಧ ಮಾಡಿಕೊಂಡಿದ್ದಾರೆ.  ಈ ಭಿನ್ನಮತ  ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಉಲ್ಬಣಗೊಳ್ಳುವ ಸಾಧ್ಯತೆಗಳಿವೆ.

ಕೊಟ್ಟು ಕಸಿದುಕೊಂಡ ಸಿಎಂ: ಕೆಲವೇ ಗಂಟೆಗಳಲ್ಲಿ ನಿಗಮ ಮಂಡಳಿಯಿಂದ 4 ಶಾಸಕರು ಔಟ್...!

 ಕಟೀಲ್‌ ಸೈಲೆಂಟ್

 ಶಾಸಕರಾದ ರಾಜು ಗೌಡ, ತಿಪ್ಪಾರೆಡ್ಡಿ, ದತ್ತಾತ್ರಯ ಪಾಟೀಲ್, ಪರಣ್ಣ ಮುನವಳ್ಳಿ, ನಡಹಳ್ಳಿ ಮತ್ತು ನೆಹರು ಓಲೆಕರ್ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ಗೆ ಫೋನ್ ಮಾಡಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಮಂತ್ರಿ ಆಕಾಂಕ್ಷಿ ಆಗಿದ್ದವರು ನಾವು. ಈಗ ನಿಗಮ ಮಂಡಳಿ ಸ್ಥಾನ ನೀಡಿದ್ರೆ ಸುಮ್ನಿರಬೇಕಾ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ಗೆ ಪ್ರಶ್ನಿಸಿದ್ದಾರೆ. ಇದರಿಂದ ನಳೀನ್ ಕುಮಾರ್‌ ಫಜೀತಿಗೆ ಸಿಲುಕಿದ್ದಾರೆ. ಕಟೀಲ್ ಇತ್ತ ಯಡಿಯೂರಪ್ಪರಿಗೆ ಏನು ಹೇಳೊ ಹಾಗಿಲ್ಲ. ಅಸಮಾಧಾನಗೊಂಡವರಿಗೆ ಸಮಾಧಾನ ಮಾಡೋಕೆ ಉತ್ತರವೂ ಇಲ್ಲ. ಇದರಿಂದ ನಳಿನ್ ಕುಮಾರ್ ಕಟೀಲ್‌ಗೆ ದಿಕ್ಕುತೋಚದಂತಾಗಿದೆ.

ಒಟ್ಟಿನಲ್ಲಿ ಯಡಿಯೂರಪ್ಪ ಅವರೇ ಅವಸರಕ್ಕೆ ಬಿದ್ದು ನಿಗಮ ಮಂಡಳಿ ನೇಮಕ ಮಾಡಿ ಇಲ್ಲದ್ದನ್ನು ಮೈಮೇಲೆ ಎಳೆದುಕೊಂಡಿದ್ದು, ಬಿಜೆಪಿ ಸರ್ಕಾರಕ್ಕೆ ಒಂದು ವರ್ಷದ ಸಂಭ್ರಮಾರಚಣೆ ಸಂದರ್ಭದಲ್ಲಿ ಸಣ್ಣಪುಟ್ಟ ಅಸಮಾಧಾನ ತಣಿಸಲು ಸಿಎಂ ಯಡಿಯೂರಪ್ಪ ಮಾಡಿದ್ದ ಪ್ರಯತ್ನ ಉಲ್ಟಾ ಹೊಡೆದಿದೆ.