ಉಳ್ಳಾಲ(ಜೂ.09): ಕೊರೋನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬಂದ್‌ ಮಾಡಿರುವ ದ.ಕ. ಗಡಿ ಪ್ರದೇಶದಲ್ಲಿ ಮುಕ್ತ ವಾಹನ ಸಂಚಾರಕ್ಕೆ ಅವಕಾಶ ನೀಡುವಂತೆ ಆಗ್ರಹಿಸಿ ಕಾಸರಗೋಡು ಬಿಜೆಪಿ ಮುಖಂಡರು ಸೋಮವಾರ ದ.ಕ. ಜಿಲ್ಲೆಯ ಬಿಜೆಪಿ ಆಡಳಿತ ವಿರುದ್ಧವೇ ಪ್ರತಿಭಟನೆ ನಡೆಸಿದ ವಿದ್ಯಮಾನ ನಡೆದಿದೆ.

ಕಾಸರಗೋಡಿನಲ್ಲಿ ಕೊರೋನಾ ಸೋಂಕು ಹಬ್ಬುತ್ತಿದ್ದ ವೇಳೆ ತಲಪಾಡಿ ಗಡಿಯನ್ನು ಉಭಯ ಜಿಲ್ಲಾಡಳಿತ ಮುಚ್ಚಿತ್ತು. ಬಳಿಕ ಕೇರಳ ಸರ್ಕಾರ ಸುಪ್ರೀಂ ಕೋರ್ಟ್‌ ಕದತಟ್ಟಿದ ಬಳಿಕ ವೈದ್ಯಕೀಯ ತುರ್ತು ಅವಶ್ಯಕತೆಗಳಿಗೆ ಮಾತ್ರ ಪಾಸ್‌ ಮೂಲಕ ಗಡಿ ಪ್ರವೇಶಕ್ಕೆ ಅವಕಾಶ ಲಭಿಸಿತ್ತು.

ಸತತ ಮಳೆ: ಉಕ್ಕಿ ಹರಿಯುತ್ತಿರುವ ನದಿಗಳು, ಬೆಳ್ತಂಗಡಿಯಲ್ಲಿ ಪ್ರವಾಹ ಭೀತಿ

ಆದರೆ ಕೊರೋನಾ ಸೋಂಕು ಹತೋಟಿಗೆ ಬಾರದ ಕಾರಣ ಗಡಿ ಬಂದ್‌ ಯಥಾಸ್ಥಿತಿ ಮುಂದುವರಿದಿತ್ತು. ಇದರಿಂದಾಗಿ ಲಾಕ್‌ಡೌನ್‌ ಸಡಿಲಗೊಂಡರೂ ಗಡಿ ಪ್ರದೇಶ ಸಂಚಾರಕ್ಕೆ ತೆರವುಗೊಳ್ಳದ ಹಿನ್ನೆಲೆ ಹಾಗೂ ಉದ್ಯೋಗಿಗಳ ಸಂಚಾರಕ್ಕೆ ನಿತ್ಯ ಪಾಸ್‌ ಸಮರ್ಪಕವಾಗಿ ವಿತರಣೆಯಾಗದ ಆರೋಪದಲ್ಲಿ ಕಾಸರಗೋಡು ಬಿಜೆಪಿ ಪ್ರತಿಭಟನೆಗೆ ಇಳಿದಿತ್ತು.

ಸೋಮವಾರ ಕುಂಜತ್ತೂರಿನಿಂದ ಕಾಲ್ನಡಿಗೆಯಲ್ಲಿ ತಲಪಾಡಿಗೆ ಹೊರಟ ಕಾಸರಗೋಡು ಬಿಜೆಪಿ ಜಿಲ್ಲಾಧ್ಯಕ್ಷ, ನ್ಯಾಯವಾದಿ ಶ್ರೀಕಾಂತ್‌ ಮತ್ತಿತರರನ್ನು ದಾರಿ ಮಧ್ಯೆ ಪೊಲೀಸರು ತಡೆದರು. ಬಳಿಕ ಮತ್ತೆ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ರಾಷ್ಟ್ರೀಯ ಹೆದ್ದಾರಿ ಮೂಲಕ ಕೊನೆಗೂ ತಲಪಾಡಿ ತಲುಪಿದ ಬಿಜೆಪಿ ಮುಖಂಡರು, ತಲಪಾಡಿ ಚೆಕ್‌ಪೋಸ್ಟ್‌ ಬಳಿ ಪಕ್ಷದ ಧ್ವಜ ಹಿಡಿದು ದ.ಕ. ಜಿಲ್ಲಾಡಳಿತದ ಧೋರಣೆಯನ್ನು ಟೀಕಿಸಿದರು.

ದಕ್ಷಿಣ ಕನ್ನಡ: ಕೊರೋನಾ ಸಮಯದಲ್ಲಿ 40 ಡೆಂಘೀ ಕೇಸ್‌!

ಸುದ್ದಿಗಾರರ ಜೊತೆ ಮಾತನಾಡಿದ ಶ್ರೀಕಾಂತ್‌, ಕಾಸರಗೋಡಿನಿಂದ ಮಂಗಳೂರಿಗೆ ಸಂಚರಿಸುವವರಿಗೆ ನಿತ್ಯ ಪಾಸ್‌ನ್ನು ಬೇಗನೆ ವಿತರಿಸುವ ಬಗ್ಗೆ ಜಿಲ್ಲಾಡಳಿತ ಸಮ್ಮತಿ ವ್ಯಕ್ತಪಡಿಸಿದೆ. ಈ ಬಗ್ಗೆ ದ.ಕ. ಉಸ್ತುವಾರಿ ಸಚಿವರು, ಶಾಸಕರು ಹಾಗೂ ಸಂಸದರು ಸಹಕಾರ ನೀಡಿದ್ದಾರೆ. ಕೆಲವೊಂದು ನಿಬಂಧನೆಗಳ ಕಾರಣ ಗಡಿಯನ್ನು ಪೂರ್ತಿಯಾಗಿ ಸಂಚಾರಕ್ಕೆ ತೆರೆಯಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಅವರು ಮನವರಿಕೆ ಮಾಡಿದ್ದಾರೆ ಎಂದರು.

ದೇಗುಲ ಓಪನ್ ಆಗುತ್ತಿದ್ದಂತೆಯೇ ಧರ್ಮಸ್ಥಳಕ್ಕೆ ಕುಮಾರ್ ಬಂಗಾರಪ್ಪ: ಕಾರಿಗೂ ವಿಶೇಷ ಪೂಜೆ

ದ.ಕ. ಜಿಲ್ಲೆಯ ಶಾಸಕರು, ಸಂಸದರು ಹಾಗೂ ಉಸ್ತುವಾರಿ ಸಚಿವರು ಸೇರಿ ಈ ಹಿಂದೆ ಗಡಿ ಬಂದ್‌ ಮಾಡುವ ನಿರ್ಧಾರ ಕೈಗೊಂಡಿದ್ದರು. ಇದೀಗ ದ.ಕ. ಜಿಲ್ಲಾಡಳಿತ ವಿರುದ್ಧ ಪ್ರತಿಭಟನೆ ನಡೆಸಿದರೂ, ಜಿಲ್ಲೆಯ ಬಿಜೆಪಿ ವಿರುದ್ಧವೇ ಕಾಸರಗೋಡು ಬಿಜೆಪಿ ಪ್ರತಿಭಟನೆ ನಡೆಸಿದಂತಾಗಿದೆ.