ತುಮಕೂರು (ಡಿ04):  ಸಿ.ಪಿ. ಯೋಗೇಶ್ವರ್‌ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ವಿಚಾರದಲ್ಲಿ ಯಾರೂ ಹೇಳಿಕೆ ಕೊಡದಂತೆ ಬಿಜೆಪಿ ರಾಷ್ಟ್ರಾಧ್ಯಕ್ಷ ನಡ್ಡಾ ಅವರ ಆದೇಶವಿದ್ದು ಆ ಆದೇಶವನ್ನುಪಾಲಿಸುವುದಾಗಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.

ತಿಪಟೂರಿನಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಗ್ರಾಮ ಸ್ವರಾಜ್‌ ಸಮಾವೇಶದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಕೇಂದ್ರನಾಯಕರು, ಮುಖ್ಯಮಂತ್ರಿಗಳು, ರಾಜ್ಯಾಧ್ಯಕ್ಷರು ಸೇರಿ ಚರ್ಚೆ ನಡೆಸಿ ಯಾರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕೋ ಅವರನ್ನು ಸೇರಿಸಿಕೊಳ್ಳುತ್ತಾರೆ. ಬೆಳಗಾವಿಯಲ್ಲಿ ನಡೆಯುವ ಕಾರ್ಯಾಕಾರಿಣಿ ಸಭೆಯಲ್ಲೂ ಕೂಡ ಸಚಿವ ಸಂಪುಟದ ಬಗ್ಗೆ ಚರ್ಚೆಯಾಗುವುದಿಲ್ಲ ಎಂದ ಈಶ್ವರಪ್ಪ ಅಲ್ಲಿ ಪಕ್ಷ ಸಂಘಟನೆ ಹಾಗೂ ಸರ್ಕಾರದ ಬಗ್ಗೆ ಚರ್ಚೆಯಾಗಲಿದೆ ಎಂದರು.

ನೀವ್ ಬುದ್ದಿ ಹೇಳ್ತೀರೋ ಇಲ್ಲ ನಾವ್ ಕ್ರಮ ತಗೊಳ್ಳದಾ..? : ಈಶ್ವರಪ್ಪ ವಾರ್ನಿಂಗ್ ...

ಆದಷ್ಟುಬೇಗ ಗೋ ಹತ್ಯೆ ನಿಷೇಧ ಕಾನೂನು ಜಾರಿಗೆ ಬರಲಿದೆ ಎಂದ ಅವರು ಸಿದ್ದರಾಮಯ್ಯನವರು ಯಾವ ಯಾವ ಸಂದರ್ಭದಲ್ಲಿ ಏನೇನು ಹೇಳಿಕೆ ಕೊಡುತ್ತಾರೆಂದು ಗೊತ್ತಿರುವುದಿಲ್ಲ. ನಾವು ಗೋವನ್ನು ತಾಯಿಯೆಂದು ಕರೆಯುತ್ತೇವೆ. ಸಿದ್ದರಾಮಯ್ಯ ಅವರ ತಾಯಿಯನ್ನು ಕೂಡ ನಾವು ತಾಯಿ ಎಂದು ಕರೆಯುತ್ತೇವೆ. ಅವರ ತಾಯಿಗೆ ವಯಸ್ಸಾಗಿದೆ ಅಂತ ಬಿಜೆಪಿ ಹಾಗೂ ಆರ್‌.ಆಸ್‌.ಎಸ್‌ ನವರ ಮನೆ ಮುಂದೆ ಬಿಡಲಾಗುತ್ತದೆಯೇ ಎಂದಿದ್ದಾರೆ.

ಈ ರೀತಿ ಹೇಳಿಕೆ ನೀಡುವ ಮೂಲಕ ಮುಸ್ಲಿಂರನ್ನು ಸಂತೃಪ್ತಿ ಪಡಿಸುತ್ತಿದ್ದಾರೆ ಎಂದ ಈಶ್ವರಪ್ಪ ಅವರು ಸಿದ್ದರಾಮಯ್ಯ ನವರು ಅಧಿಕಾರಿಕಾದಲ್ಲಿದ್ದಾಗ ಗೋ ಹತ್ಯೆ ನಿಷೇಧ ಕಾನೂನು ಇತ್ತು. ಅದನ್ನು ಯಾಕೆ ರದ್ದು ಮಾಡಿಲ್ಲ ಎಂದರು. ಈಗ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಗೋ ಹತ್ಯೆ ನಿಷೇಧ ಕಾನೂನು ರದ್ದು ಮಾಡುತ್ತೇವೆ. ಗೋವುವನ್ನು ಯಾರು ಬೇಕಾದರು ಕಡಿಯಲಿ ಅದಕ್ಕೆ ನಮ್ಮ ಬೆಂಬಲವಿದೆ ಎಂದು ಹೇಳಿಕೊಂಡು ಪ್ರಚಾರ ಮಾಡಿ ವೋಟು ಪಡೆಯಲಿ ಎಂದು ಸವಾಲು ಹಾಕಿದರು.

ಎಸ್‌.ಟಿ.ಗೆ ಕುರುಬರನ್ನು ಸೇರಿಸುವ ಹೋರಾಟ ಕಾಗಿನೆಲೆ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿದ್ದು ಈ ಹೋರಾಟಕ್ಕೆ ಎಲ್ಲರೂ ಇದಕ್ಕೆ ಬೆಂಬಲ ನೀಡುತ್ತಾರೆ ಎಂದ ಅವರು ಸಿದ್ದರಾಮಯ್ಯ ಅವರಿಗೆ ಆರ್‌ಎಸ್‌ಎಸ್‌ ಹೆಸರೇಳಲು ಯೋಗ್ಯತೆ ಇಲ್ಲ ಎಂದರು.

ನಾನು ಕುರುಬರ ನಾಯಕನಲ್ಲ. ಹಿಂದೂತ್ವದ ಪ್ರತಿಪಾದಕ ಎಂದು ಪುನರುಚ್ಚರಿಸಿದ ಅವರು ಸಿದ್ದರಾಮಯ್ಯ ಎಂದೂ ಅಲ್ಪಸಂಖ್ಯಾತರು, ಹಿಂದುಳಿದವರ ನಾಯಕ ಎಂದು ಹೇಳಿಕೊಳ್ಳುತ್ತಾರೆ. ಅವರೆಲ್ಲರು ಜೊತೆಯಲ್ಲಿದ್ದರೆ ಯಾಕೆ ಸೋಲುತ್ತಿದ್ದರು ಎಂದರು. ಸಿದ್ದರಾಮಯ್ಯ ನವರ ಆಚಾರಕ್ಕೂ ನಡೆವಳಿಕೆಗೆ ಯಾವುದೇ ಸಂಬಂಧವಿಲ್ಲ ಎಂದರು.