ಕಾಳೇನ ಅಗ್ರಹಾರ-ನಾಗವಾರ ಸಂಪರ್ಕಿಸುವ ನಮ್ಮ ಮೆಟ್ರೋದ ಗುಲಾಬಿ ಮಾರ್ಗ ಸೇರಿ ಮಂಬರುವ ಏರ್‌ಪೋರ್ಟ್‌ ನೀಲಿ ಮಾರ್ಗಕ್ಕಾಗಿ ಬಿಇಎಂಎಲ್‌ ನಿರ್ಮಿಸಿರುವ ಚಾಲಕರಹಿತ ರೈಲು ಗುರುವಾರ ಬಿಡುಗಡೆ ಆಗಿದೆ.

ಬೆಂಗಳೂರು : ಕಾಳೇನ ಅಗ್ರಹಾರ-ನಾಗವಾರ ಸಂಪರ್ಕಿಸುವ ನಮ್ಮ ಮೆಟ್ರೋದ ಗುಲಾಬಿ ಮಾರ್ಗ ಸೇರಿ ಮಂಬರುವ ಏರ್‌ಪೋರ್ಟ್‌ ನೀಲಿ ಮಾರ್ಗಕ್ಕಾಗಿ ಬಿಇಎಂಎಲ್‌ ನಿರ್ಮಿಸಿರುವ ಚಾಲಕರಹಿತ ರೈಲು ಗುರುವಾರ ಬಿಡುಗಡೆ ಆಗಿದೆ.

ಕಂಪನಿಯ ಸಿಎಂಡಿ ಶಾಂತನು ರಾಯ್‌ ಅವರ ಉಪಸ್ಥಿತಿಯಲ್ಲಿ ಈ ರೈಲಿನ ಬಿಇಎಂಎಲ್‌ ರೈಲ್‌ಶೆಡ್‌ನಲ್ಲಿ ಮೊದಲ ಪ್ರಾಯೋಗಿಕ ಸಂಚಾರ ಕೂಡ ನಡೆಯಿತು. ಮುಂದಿನ ನಾಲ್ಕೈದು ದಿನಗಳಲ್ಲಿ ಈ ರೈಲು ಬಿಇಎಂಎಲ್‌ ಕೊತ್ತನೂರು ಡಿಪೋವನ್ನು ತಲುಪಲಿದ್ದು, ಅಲ್ಲಿ ವಿಸ್ತ್ರತವಾದ ಪ್ರಾಯೋಗಿಕ ಸಂಚಾರ, ತಪಾಸಣೆ ನಡೆಯಲಿದೆ.

ಮೊದಲ ಹಂತದಲ್ಲಿ ಪಿಂಕ್ ಲೈನ್​​ಗೆ ಚಾಲಕ ರಹಿತ 6 ರೈಲುಗಳು ಬರಲಿದ್ದು, ಆ ಪೈಕಿ ಮೊದಲ ಪ್ರೋಟೋಟೈಪ್ ರೈಲನ್ನು ರೋಲ್ ಔಟ್ ಮಾಡಲಾಗಿದೆ.

ಒಪ್ಪಂದದ ಪ್ರಕಾರ ಬ್ಲ್ಯೂ ಲೈನ್​​ ಮತ್ತು ಪಿಂಕ್​​ ಲೈನ್​​ ಮೆಟ್ರೋಗಳಿಗಾಗಿ ಒಟ್ಟು 318 ಸ್ಟ್ಯಾಂಡರ್ಡ್ ಗೇಜ್ ಮೆಟ್ರೋ ಬೋಗಿಗಳನ್ನು ಬಿಇಎಂಎಲ್‌ ಪೂರೈಸಲಿದೆ. ಮೆಟ್ರೋ ರೈಲು ಸೆಟ್‌ಗಳನ್ನು ಸಂಪೂರ್ಣವಾಗಿ ಬೆಂಗಳೂರಿನ ಬಿಇಎಂಎಲ್‌ನಲ್ಲಿ ವಿನ್ಯಾಸಗೊಳಿಸಲಾಗಿದ್ದು, ಎಂಜಿನಿಯರಿಂಗ್​​ ಮತ್ತು ನಿರ್ಮಾಣ ಎಲ್ಲವೂ ಇಲ್ಲಿಯೇ ಆಗಿದೆ. ಜೊತೆಗೆ ಮುಂದಿನ 15 ವರ್ಷಗಳ ಕಾಲ ಸಮಗ್ರ ನಿರ್ವಹಣೆಯನ್ನೂ ಬಿಇಎಂಎಲ್‌ ಮಾಡಲಿದೆ.

ರೈಲು ಹೇಗಿದೆ?:

ಆರು ಬೋಗಿಗಳ ಚಾಲಕ ರಹಿತ ರೈಲು ಇದಾಗಿದ್ದು, ಸಿಬಿಟಿಸಿ (ಕಮ್ಯುನಿಕೇಷನ್‌ ಬೇಸ್ಡ್‌ ಟ್ರೈನ್‌ ಕಂಟ್ರೋಲ್‌) ತಂತ್ರಜ್ಞಾನ ಆಧಾರಿತವಾಗಿ ಸಂಚರಿಸಲಿದೆ. 90 ಕಿ.ಮೀ ವೇಗ, ಏಕಕಾಲಕ್ಕೆ 2008 ಪ್ರಯಾಣಿಕರನ್ನು ಕರೆದೊಯ್ಯುವ ಸಾಮರ್ಥ್ಯ ಹೊಂದಿರಲಿದೆ. ಒಳ ವಿನ್ಯಾಸ ಸಂಪೂರ್ಣ ಹೊಸತನದಿಂದ ಕೂಡಿದ್ದು, ಪ್ರಯಾಣಿಕ ಸ್ನೇಹಿಯಾಗಿದೆ. 2,762 ಮಿ.ಮೀ ಅಗಲ ಮತ್ತು 3,800 ಮಿ.ಮೀ ಎತ್ತರವಿರುವ ಸ್ಟೇನ್‌ಲೆಸ್-ಸ್ಟೀಲ್ ಕಾರು ಬಾಡಿಯನ್ನು ಇದು ಹೊಂದಿದೆ. ಇದು ಪುನರುತ್ಪಾದಕ ಮತ್ತು ನ್ಯೂಮ್ಯಾಟಿಕ್ ಬ್ರೇಕಿಂಗ್ ಅನ್ನು ಸಂಯೋಜಿಸುತ್ತದೆ.

ಯಾವ್ಯಾವ ಮಾರ್ಗಕ್ಕೆ?

ಸುರಂಗ (13.76 ಕಿ.ಮೀ), ಎತ್ತರಿಸಿದ (7.5 ಕಿ.ಮೀ) ಮಾರ್ಗ ಸೇರಿ 21.25 ಕಿಮೀ ಉದ್ದದ ಗುಲಾಗಿ ಮಾರ್ಗಕ್ಕಾಗಿ 20 ರೈಲುಸೆಟ್‌ಗಳನ್ನು ಪೂರೈಸುವ ಹೊಣೆಯನ್ನು ಬಿಇಎಂಎಲ್‌ ಹೊತ್ತಿದೆ. 2026ರ ಮೇ ವೇಳೆಗೆ ಎತ್ತರಿಸಿದ ಹಂತ ಹಾಗೂ ಡಿಸೆಂಬರ್‌ನಲ್ಲಿ ಸುರಂಗ ಮಾರ್ಗದಲ್ಲಿ ರೈಲು ವಾಣಿಜ್ಯ ಸೇವೆಯನ್ನು ಆರಂಭಿಸಲು ಬೆಂಗಳೂರು ಮೆಟ್ರೋ ರೈಲು ನಿಗಮವು ಪ್ರಯತ್ನಿಸುತ್ತಿದೆ. 2026ರಲ್ಲಿ ಈ ಮಾರ್ಗದಲ್ಲಿ ರೈಲು ವಾಣಿಜ್ಯ ಸೇವೆ ಆರಂಭಿಸಲು ಕನಿಷ್ಠ 6-8 ರೈಲುಗಳು ಬೇಕಾಗುತ್ತವೆ. ಮುಂದಿನ ಐದು ತಿಂಗಳಲ್ಲಿ 8 ರೈಲುಗಳನ್ನು ಪೂರೈಸಲು ಬಿಇಎಂಎಲ್‌ ಪ್ರಯತ್ನಿಸುತ್ತಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದರು.

ಬಿಇಎಂಎಲ್‌ ಈಗಾಗಲೇ ನಮ್ಮ ಮೆಟ್ರೋದ ನೇರಳೆ, ಹಸಿರು ಮಾರ್ಗಕ್ಕೆ ರೈಲು ಒದಗಿಸಿದೆ. ಗುಲಾಬಿ ಮಾರ್ಗವೂ ಸೇರಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ನೀಲಿ ಮಾರ್ಗ ಮತ್ತು ಹಳದಿ ಮಾರ್ಗಕ್ಕಾಗಿ ಒಟ್ಟೂ 66 ರೈಲುಗಳನ್ನು ನಿರ್ಮಿಸುವ ಗುತ್ತಿಗೆಯನ್ನು ಪಡೆದಿದೆ.ಮೂಲ ಮಾದರಿಯ ರೈಲು ಸಂಪೂರ್ಣ ಸಿದ್ಧವಾದ ಬಳಿಕ ಶಾಸನಬದ್ಧ ಅನುಮೋದನೆ ಪಡೆಯಲು ಬಿಎಂಆರ್‌ಸಿಎಲ್‌ ರೈಲ್ವೆ ಇಲಾಖೆಯ ಆರ್‌ಡಿಎಸ್‌ಒ (ರಿಸರ್ಚ್‌ ಡಿಸೈನ್ಸ್‌ ಆ್ಯಂಡ್‌ ಸ್ಟ್ಯಾಂಡರ್ಡ್ಸ್‌ ಆರ್ಗನೈಸೆಶನ್‌ ) ಮತ್ತು ಮೆಟ್ರೋ ಸುರಕ್ಷತಾ ಆಯುಕ್ತಾಲಯವನ್ನು ಸಂಪರ್ಕಿಸಲಿದೆ.

ಗುಲಾಬಿ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದಲ್ಲಿ ಪ್ರಯಾಣವನ್ನು ಹೆಚ್ಚಿಸುವ ಅತ್ಯಾಧುನಿಕ ರೈಲುಗಳನ್ನು ಒದಗಿಸಿದ್ದೇವೆ. ಈ ಮೂಲಕ ಬೆಂಗಳೂರಿನ ನಮ್ಮ ಮೆಟ್ರೋ ಅಭಿವೃದ್ಧಿಗೆ ಬಿಇಎಂಎಲ್‌ ಬದ್ಧವಾಗಿದೆ.

-ಶಾಂತನು ರಾಯ್, ಸಿಎಂಡಿ, ಬಿಇಎಂಎಲ್