Mandya ಬಾರದ ಯೋಗಿ, ಕುಗ್ಗಿದ ಬಿಜೆಪಿಗರ ಉತ್ಸಾಹ

ಕಳೆದ ಮೂರು ದಿನಗಳಿಂದ ಕೆ.ಆರ್‌.ಪೇಟೆಯ ತ್ರಿವೇಣಿ ಸಂಗಮದಲ್ಲಿ ನಡೆದಿರುವ ಮಹಾಕುಂಭಮೇಳದ ಆಕರ್ಷಣೆಯ ಕೇಂದ್ರಬಿಂದುವಾಗಿದ್ದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಗೈರು ಬಿಜೆಪಿಗರಲ್ಲಿ ತೀವ್ರ ನಿರಾಸೆ ಮೂಡಿಸಿದೆ.

BJP Leaders Disappointed Over Yogi Adithyanath  Absent For kumbamela snr

 ಮಂಡ್ಯ ಮಂಜುನಾಥ

 ಮಂಡ್ಯ  (ಅ.17): ಕಳೆದ ಮೂರು ದಿನಗಳಿಂದ ಕೆ.ಆರ್‌.ಪೇಟೆಯ ತ್ರಿವೇಣಿ ಸಂಗಮದಲ್ಲಿ ನಡೆದಿರುವ ಮಹಾಕುಂಭಮೇಳದ ಆಕರ್ಷಣೆಯ ಕೇಂದ್ರಬಿಂದುವಾಗಿದ್ದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಗೈರು ಬಿಜೆಪಿಗರಲ್ಲಿ ತೀವ್ರ ನಿರಾಸೆ ಮೂಡಿಸಿದೆ.

ಬಿಜೆಪಿಯ (BJP)  ರಾಷ್ಟ್ರೀಯ ನಾಯಕರಲ್ಲಿ ಒಬ್ಬರಾಗಿರುವ ಯೋಗಿ ಆದಿತ್ಯನಾಥ್‌ (Adithyanath) ಅವರನ್ನು ಮಹಾಕುಂಭಮೇಳದ ಹೆಸರಿನಲ್ಲಿ ಹಳೇ ಮೈಸೂರು ಭಾಗಕ್ಕೆ ಕರೆತಂದು ಬಿಜೆಪಿ ಪರವಾದ ವಾತಾವರಣ ಸೃಷ್ಟಿಸುವ ಕಮಲಪಡೆ ನಾಯಕರ ಆಶಾಭಾವನೆಗೆ ತಣ್ಣೀರೆರಚಿದಂತಾಗಿದೆ.

ಮಂಡ್ಯ ಜಿಲ್ಲೆ ಒಕ್ಕಲಿಗರ ಪ್ರಾಬಲ್ಯವಿರುವ ಕ್ಷೇತ್ರ. ನಾಥ ಪರಂಪರೆಗೆ ಸೇರಿರುವ ಯೋಗಿ ಆದಿತ್ಯನಾಥ್‌ ಅವರನ್ನು ಆದಿ ಚುಂಚನಗಿರಿ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಜೊತೆಗೂಡಿಸಿ ಒಕ್ಕಲಿಗರ ಮತಗಳನ್ನು ಬಿಜೆಪಿ ಬುಟ್ಟಿಗೆ ಸೆಳೆದುಕೊಳ್ಳುವುದು ಮೂಲ ಉದ್ದೇಶವಾಗಿತ್ತು. ಮಹಾಕುಂಭಮೇಳದ ಮೂಲಕವೇ ಚುನಾವಣಾ ರಣತಂತ್ರಕ್ಕೆ ಚಾಲನೆ ನೀಡುವುದಕ್ಕೆ ಸಿದ್ಧತೆ ನಡೆಸಿದ್ದರು. ಉತ್ತರ ಪ್ರದೇಶದಲ್ಲಿ ಎದುರಾಗಿರುವ ಪ್ರವಾಹ ಪರಿಸ್ಥಿತಿ ದಕ್ಷಿಣ ಬಿಜೆಪಿ ನಾಯಕರ ಪ್ರಯತ್ನವನ್ನು ನಿರರ್ಥಕಗೊಳಿಸಿದೆ.

ಮೂರು ಜಿಲ್ಲೆಗಳನ್ನು ಒಗ್ಗೂಡಿಸಿ ಕುಂಭಮೇಳ:

ಮೊಟ್ಟಮೊದಲಬಾರಿಗೆ ಮಂಡ್ಯ ಜಿಲ್ಲೆಯಲ್ಲಿ ಕಮಲವನ್ನು ಅರಳಿಸಿದ ಹೆಗ್ಗಳಿಕೆ ಕೆ.ಸಿ.ನಾರಾಯಣಗೌಡರದ್ದಾಗಿದೆ. 2013ರಲ್ಲಿ ನಡೆದ ಕುಂಭಮೇಳದ ಹಿಂದೆ ಯಾವ ರಾಜಕೀಯ ಉದ್ದೇಶವಿರಲಿಲ್ಲ. ಆದರೆ, 2022ರಲ್ಲಿ ಮೂರು ದಿನಗಳ ಮಹಾಕುಂಭಮೇಳ ಪಕ್ಕಾ ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಯೋಜಿಸಿದ್ದ ಕಾರ್ಯಕ್ರಮವಾಗಿತ್ತು. ಅದಕ್ಕಾಗಿಯೇ ಮಹಾಕುಂಭಮೇಳವನ್ನು ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳನ್ನು ಒಳಗೊಳ್ಳುವಂತೆ ರೂಪಿಸಿದ್ದರು. ಮೂರು ಜಿಲ್ಲೆಗಳಲ್ಲಿ ಮಹಾಕುಂಭಮೇಳಕ್ಕೆ ಹೆಚ್ಚಿನ ಪ್ರಚಾರ ದೊರಕುವಂತೆ ಮಾಡಿದ್ದರು.

ಖುದ್ದು ಆಹ್ವಾನಿಸಿದ್ದ ನಾರಾಯಣಗೌಡ:

ಕೆ.ಆರ್‌.ಪೇಟೆ ಕ್ಷೇತ್ರದ ಶಾಸಕರೂ ಆಗಿರುವ ಕೆ.ಸಿ.ನಾರಾಯಣಗೌಡ ಅವರು ಉತ್ತರ ಪ್ರದೇಶದ ವಾರಾಣಸಿಗೆ ತೆರಳಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರಿಗೆ ಖುದ್ದು ಆಹ್ವಾನ ನೀಡಿ ಬಂದಿದ್ದರು. ಅವರೂ ಸಹ ಮಹಾಕುಂಭ ಮೇಳಕ್ಕೆ ಬರುವುದಾಗಿ ಮುಕ್ತವಾಗಿ ಒಪ್ಪಿಕೊಂಡಿದ್ದರು. ಕೊನೇ ಘಳಿಗೆಯಲ್ಲಿ ಯೋಗಿ ಅವರ ಕಾರ್ಯಕ್ರಮ ರದ್ದಾಗಿರುವುದು ಬಿಜೆಪಿಗರ ಉತ್ಸಾಹವನ್ನು ಕುಗ್ಗುವಂತೆ ಮಾಡಿದೆ.

ಹೆಲಿಪ್ಯಾಡ್‌ ನಿರ್ಮಾಣ:

ಯೋಗಿ ಆದಿತ್ಯನಾಥ್‌ ಅವರಿಗಾಗಿಯೇ ತ್ರಿವೇಣಿಸಂಗಮದಲ್ಲಿ ಹೆಲಿಪ್ಯಾಡ್‌ ನಿರ್ಮಿಸಲಾಗಿತ್ತು. ಅಲ್ಲಿಂದ ಅವರನ್ನು ವೇದಿಕೆಗೆ ಕರೆತರುವುದಕ್ಕೆ ಹೊಸದಾಗಿ ಡಾಂಬರು ರಸ್ತೆಯನ್ನೇ ನಿರ್ಮಾಣ ಮಾಡಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಕೇಂದ್ರ ಖಾತೆ ರಾಜ್ಯಸಚಿವರಾದ ಪ್ರಹ್ಲಾದಜೋಶಿ, ಶೋಭಾ ಕರಂದ್ಲಾಜೆ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರನ್ನೆಲ್ಲಾ ಕರೆಸಿ ಮುಂಬರುವ ಚುನಾವಣೆಗೆ ಅನುಕೂಲವಾಗುವಂತೆ ಜಿಲ್ಲೆಯಲ್ಲಷ್ಟೇ ಅಲ್ಲದೆ ಮೈಸೂರು, ಚಾಮರಾಜನಗರದಲ್ಲೂ ಬಿಜೆಪಿಗೆ ಹೊಸ ಶಕ್ತಿ ತುಂಬುವುದಕ್ಕೆ ಕೆ.ಸಿ.ನಾರಾಯಣಗೌಡರು ಸಿದ್ಧತೆ ಮಾಡಿಕೊಂಡಿದ್ದರು. ಯೋಗಿ ಅವರ ಗೈರು ಹಾಜರಿಯಿಂದ ಮಹಾಕುಂಭಮೇಳದ ಆಯೋಜನೆಯ ಉದ್ದೇಶ ಸಾರ್ಥಕಗೊಳ್ಳದಂತೆ ಮಾಡಿದೆ ಎನ್ನುವುದು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿರುವ ಮಾತಾಗಿದೆ.

ಬಿಜೆಪಿ ಗಟ್ಟಿನೆಲೆಗೆ ಪಣ:

ಮೊದಲಿಗೆ ಯೋಗಿ ಆದಿತ್ಯನಾಥ್‌, ಆನಂತರದಲ್ಲಿ ಅಮಿತ್‌ ಶಾ, ಚುನಾವಣೆ ಸಮೀಪಿಸಿದ ವೇಳೆ ಪ್ರಧಾನಿ ನರೇಂದ್ರಮೋದಿ ಅವರನ್ನು ಮಂಡ್ಯಕ್ಕೆ ಕರೆತರಲು ಬಿಜೆಪಿ ನಾಯಕರು ಯೋಜನೆ ರೂಪಿಸಿಕೊಂಡಿದ್ದರು. ಹಳೇ ಮೈಸೂರು ಭಾಗವನ್ನು ಈ ಬಾರಿ ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ನಾಯಕರು ಕಾಂಗ್ರೆಸ್‌-ಜೆಡಿಎಸ್‌ ಪ್ರಾಬಲ್ಯವಿರುವ ಕ್ಷೇತ್ರದೊಳಗೆ ಬಿಜೆಪಿಗೆ ಗಟ್ಟಿನೆಲೆ ದೊರಕಿಸುವುದಕ್ಕೆ ಪಣ ತೊಟ್ಟಿದ್ದರು.

ರಾಹುಲ್‌ಗಾಂಧಿ ನೇತೃತ್ವದ ಕಾಂಗ್ರೆಸ್‌ ಜೋಡೋ ಯಾತ್ರೆ ಕಾಂಗ್ರೆಸ್ಸಿಗರಿಗೆ ಜಿಲ್ಲೆಯೊಳಗೆ ಹೊಸ ಶಕ್ತಿಯನ್ನು ತುಂಬುವಂತೆ ಮಾಡಿದೆ. ಅದಕ್ಕೆ ಪ್ರತಿಯಾಗಿ ಯೋಗಿ ಆದಿತ್ಯಾನಾಥ್‌ ಅವರಿಂದ ಬಿಜೆಪಿ ಬಲವರ್ಧನೆಗೊಳಿಸುವುದು ಕೇಸರಿ ನಾಯಕರ ರಾಜಕೀಯ ಉದ್ದೇಶವಾಗಿತ್ತು. ಆದರೆ, ಸದ್ಯಕ್ಕೆ ಬಿಜೆಪಿ ಆ ಅವಕಾಶದಿಂದ ವಂಚಿತವಾಗಿದೆ.

Latest Videos
Follow Us:
Download App:
  • android
  • ios