ಶಿರಾ (ಅ.17):  ಕೋಟೆ ನಾಡು ಶಿರಾದಲ್ಲಿ 70 ವರ್ಷದ ಬಳಿಕ ಬಿಜೆಪಿ ಜಯಗಳಿಸಲಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

ಶಿರಾ ಕ್ಷೇತ್ರದಲ್ಲಿ ಮತದಾರರು ಅಭಿವೃದ್ಧಿಗೋಸ್ಕರ ಬದಲಾವಣೆ ಬಯಸಿದ್ದಾರೆ. ಹಾಗಾಗಿ ಈ ಬಾರಿ ಕ್ಷೇತ್ರದ ಜನತೆ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯನ್ನು ಬೆಂಬಲಿಸುತ್ತಾರೆ ಎಂದರು.

ಶಿರಾದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ರಾಜೇಶ್‌ಗೌಡ ಅವರ ನಾಮಪತ್ರ ಸಲ್ಲಿಕೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳ ಸವಾಲವನ್ನು ಸ್ವೀಕರಿಸಲು ಬಿಜೆಪಿ ಸಿದ್ಧವಾಗಿದೆ. ನಾವು ಅಭಿವೃದ್ಧಿ ಆಧಾರದ ಮೇಲೆ ಚುನಾವಣೆಯನ್ನು ಗೆಲ್ಲುತ್ತೇವೆ, ಯಾವುದೇ ಜಾತಿ ಆಧಾರದ ಮೇಲೆ ಚುನಾವಣೆ ಎದುರಿಸಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಶಿರಾ ಶಿಕಾರಿಗೆ ಫೀಲ್ಡಿಗಿಳಿದ ಬಿ.ವೈ ವಿಜಯೇಂದ್ರ..! ...

ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿ, ದೇಶದಲ್ಲಿ ನರೇಂದ್ರ ಮೋದಿ ಆಡಳಿತ, ರಾಜ್ಯದಲ್ಲಿ ಯಡಿಯೂರಪ್ಪನವರ ಆಡಳಿತವನ್ನು ಮೆಚ್ಚಿ ಶಿರಾ ಕ್ಷೇತ್ರದ ಜನತೆ 70 ವರ್ಷದ ನಂತರ ಬದಲಾವಣೆ ಬಯಸಿ ಬಿಜೆಪಿ ಗೆಲ್ಲಿಸುತ್ತಾರೆ. ನಮ್ಮ ಅಭ್ಯರ್ಥಿ ರಾಜೇಶ್‌ಗೌಡ ಅವರು 25 ಸಾವಿರ ಮತಗಳ ಅಂತರದಿಂದ ಗೆದ್ದೇ ಗೆಲ್ಲುತ್ತಾರೆ ಎಂಬ ಆತ್ಮವಿಶ್ವಾಸ ತಮಗಿದೆ ಎಂದರು.

ಕಾಂಗ್ರೆಸ್‌ ಮತ್ತು ಜೆಡಿಎಸ್‌ನವರು ಅಭಿವೃದ್ಧಿ ಮಾಡದೆ ಶಿರಾ ಕ್ಷೇತ್ರಕ್ಕೆ ಕಳಂಕ ತಂದಿದ್ದಾರೆ. ಇದನ್ನು ಬಿಜೆಪಿ ಅಭ್ಯರ್ಥಿಯಾಗಿರುವ ರಾಜೇಶ್‌ಗೌಡ ಅವರು ಸ್ವಚ್ಛ ಮಾಡಿ ಕ್ಷೇತ್ರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲಿದ್ದಾರೆ. ಶಿರಾ ಕ್ಷೇತ್ರದ ಮತದಾರರು ಭಾರತೀಯ ಜನತಾ ಪಕ್ಷವನ್ನು ಈ ಬಾರಿ ಬೆಂಬಲಿಸಬೇಕು ಎಂದು ಅವರು ಮನವಿ ಮಾಡಿದರು.

ಉಪಮುಖ್ಯಮಂತ್ರಿ ಡಾ. ಸಿ.ಎನ್‌. ಅಶ್ವತ್‌್ಥನಾರಾಯಣ ಮಾತನಾಡಿ, ಶಿರಾ ಕ್ಷೇತ್ರದಲ್ಲಿ ಉಪಚುನಾವಣೆಗೆ ಸ್ಪರ್ಧಿಸಿರುವ ಪಕ್ಷದ ಅಭ್ಯರ್ಥಿ ಡಾ. ರಾಜೇಶ್‌ಗೌಡ ಅವರ ಪರವಾಗಿರುವ ಅಲೆ ಕಂಡು ಬಂದಿದೆ. ರಾಜ್ಯದಲ್ಲಿ ಸ್ಥಿರವಾದ ಸರ್ಕಾರ ಇದೆ. ಇದಕ್ಕೆ ಪೂರಕವಾಗಿ ಶಿರಾ ಕ್ಷೇತ್ರದಲ್ಲಿ ಬೆಂಬಲವನ್ನು ಬಯಸಿದ್ದೇವೆ. ಹಾಗಾಗಿ ಇಲ್ಲಿ ಕಮಲ ಅರಳುತ್ತದೆ. ಹಾಗೆಯೇ ನಾವು ಸಹ ಶಿರಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯನ್ನು ಮಾಡುತ್ತೇವೆ ಎಂದರು.

ಕಾಂಗ್ರೆಸ್‌ ಪಕ್ಷಕ್ಕೆ ಮತ ನೀಡಿದರೆ ಏನೂ ಪ್ರಯೋಜನವಿಲ್ಲ ಎಂಬುದು ಶಿರಾ ಜನತೆಗೆ ಗೊತ್ತಿದೆ. ಆದ್ದರಿಂದ ಬಿಜೆಪಿ ಅಭ್ಯರ್ಥಿಗೆ ಮತ ಕೊಡಬೇಕು ಎಂದು ಮತದಾರರು ನಿರ್ಧರಿಸಿದ್ದಾರೆ. ಹಾಗಾಗಿ ಈ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್‌ಗೌಡ ಅವರನ್ನು ಗೆಲ್ಲಿಸುತ್ತಾರೆ ಎಂದರು.

ಅಭ್ಯರ್ಥಿ ಡಾ.ರಾಜೇಶ್‌ಗೌಡ ಮಾತನಾಡಿ, ಶಿರಾ ತಾಲೂಕಿನ ಜನತೆ ನನಗೆ ಅಭೂತಪೂರ್ವ ವಿಶ್ವಾಸ, ಬೆಂಬಲ ವ್ಯಕ್ತಪಡಿಸಿದ್ದಾರೆ. ನ. 3 ರಂದು ನಡೆಯುವ ಉಪಚುನಾವಣೆಯಲ್ಲಿ ಶಿರಾ ಕ್ಷೇತ್ರದಲ್ಲಿ ಪ್ರಪ್ರಥಮ ಬಾರಿಗೆ ಕೇಸರಿ ಪತಾಕೆ ಹಾರಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ. ಸುರೇಶ್‌ಗೌಡ, ಸಂಸದ ವೈ.ಎ. ನಾರಾಯಣಸ್ವಾಮಿ, ಮುಖಂಡರಾದ ಬಿ.ಕೆ. ಮಂಜುನಾಥ್‌, ಎಸ್‌.ಆರ್‌. ಗೌಡ, ಶಾಸಕ ಜ್ಯೋತಿ ಗಣೇಶ್‌ ಮತ್ತಿತರರು ಪಾಲ್ಗೊಂಡಿದ್ದರು.