ಗಂಗಾವತಿ(ಆ.24): ನಗರದ ಬಿಜೆಪಿ ಮುಖಂಡ ಹಾಗೂ ನಗರಸಭೆ ಮಾಜಿ ಸದಸ್ಯ ದೇವಪ್ಪ ಕಾಮದೊಡ್ಡಿ (45) ಅವರು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.

ಒಂದು ವಾರದ ಹಿಂದೆ ತೀವ್ರ ಉಸಿರಾಟ ತೊಂದರೆಗೆ ಒಳಗಾಗಿ ಹುಬ್ಬಳ್ಳಿ ಕೆಎಲ್‌ಇ ಸುಚಿರಾಯು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಬೆಳಗ್ಗೆ ನಿಧನರಾದರು. ಪತ್ನಿ, ಓರ್ವ ಪುತ್ರ, ಪುತ್ರಿ ಇದ್ದಾರೆ.
ಈ ಹಿಂದೆ ಮಾಜಿ ಸಚಿವ ಇಕ್ಬಾಲ್‌ ಅನ್ಸಾರಿ ಅವರ ಆಪ್ತ ಬೆಂಬಲಿಗರಾಗಿದ್ದ ದೇವಪ್ಪ ಕಾಮದೊಡ್ಡಿ ಅವರು 2001ರಲ್ಲಿ ನಗರಸಭೆಗೆ ಕಾಂಗ್ರೆಸ್‌ನಿಂದ ಸ್ಪಧಿ​ರ್‍ಸಿ ಜಯ ಸಾಧಿಸಿದ್ದರು. ಆನಂತರ ಜೆಡಿಎಸ್‌ದಿಂದ 2007ರಲ್ಲಿ ಮತ್ತೆ ನಗರಸಭೆಗೆ ಸ್ಪರ್ಧಿಸಿ ಜಯ ಸಾಧಿಸಿದ್ದರು. ಕಾಮದೊಡ್ಡಿ ಅವರನ್ನು ಅಂದು ಸಚಿವರಾಗಿದ್ದ ಇಕ್ಬಾಲ್‌ ಅನ್ಸಾರಿ ಅವರು ನಗರಸಭೆಯ ಹಣಕಾಸು ಸ್ಥಾಯಿ ಸಮಿತಿ ಅ​ಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದರು. ಎರಡು ವರ್ಷಗಳ ಹಿಂದೆ ಬದಲಾದ ರಾಜಕೀಯದಿಂದಾಗಿ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿ​ದ್ದ​ರು.

ಕೊಪ್ಪಳ: ಗಣೇಶ ಮೂರ್ತಿಗಳನ್ನ ಚರಂಡಿಗೆ ಸುರಿದ ನಗರಸಭೆ ಸಿಬ್ಬಂದಿ

ಬಳ್ಳಾರಿಯ ಸೂರ್ಯನಾರಾಯಣ ರೆಡ್ಡಿ ಅವರ ಆಪ್ತರಾಗಿದ್ದ ಕಾಮದೊಡ್ಡಿ ಅವರು ಕೇವಲ ರಾಜಕೀಯ ಅಲ್ಲದೆ ಶಿಕ್ಷಣ, ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು. ಕಳೆದ ಎರಡು ತಿಂಗಳ ಹಿಂದೆ ಕೊರೋನಾ ಸಂದರ್ಭದಲ್ಲಿ ಲಾಕ್‌ಡೌನ್‌ ಆಗಿದ್ದಾಗ ವಾರ್ಡಿನ ಜನರಿಗೆ ದಿನಸಿ ಕಿಟ್‌ಗಳನ್ನು ನೀಡಿದ್ದರು. ಪ್ರತಿ ವರ್ಷ ಶ್ರಾವಣ ಮಾಸದ ಸಂದರ್ಭದಲ್ಲಿ ಅಖಂಡೇಶ್ವರ ಜಾತ್ರೆಯ ಸಂದರ್ಭದಲ್ಲಿ ಉಚಿತ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿ​ದ್ದ​ರು.

ನಗರಸಭೆ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್‌ ಬ್ಲಾಕ್‌ ಸಮಿತಿ ಅ​ಧ್ಯಕ್ಷ ಶ್ಯಾಮೀದ್‌ ಮನಿಯಾರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್‌.ಎಂ. ಸಿದ್ದರಾಮಸ್ವಾಮಿ, ಸಿಂಗನಾಳ, ಪಂಪಾಪತಿ, ನಗರಸಭಾ ಸದಸ್ಯರಾದ ಸಿಂಗನಾಳ ಉಮೇಶ, ವಾಸುದೇವ ನವಲಿ ಸಂತಾಪ ವ್ಯಕ್ತ ಪಡಿಸಿದ್ದಾರೆ.