ಕಡೂರು (ನ.03):  ಬಹಳಷ್ಟುಕುತೂಹಲಕ್ಕೆ ಕಾರಣವಾಗಿದ್ದ ಪುರಸಭೆ ನೂತನ ಅಧ್ಯಕ್ಷರಾಗಿ 8ನೇ ವಾರ್ಡಿನ ಜೆಡಿಎಸ್‌ ಪಕ್ಷದ ಭಂಡಾರಿ ಶ್ರೀನಿವಾಸ್‌ ಹಾಗೂ ಉಪಾಧ್ಯಕ್ಷರಾಗಿ 9ನೇ ವಾರ್ಡಿನ ಬಿಜೆಪಿಯ ವಿಜಯ ಚಿನ್ನರಾಜ್‌ ಚುನಾವಣೆ ಮೂಲಕ ಆಯ್ಕೆಯಾದರು.

ಸೋಮವಾರ ಪುರಸಭೆಯ ಕನಕ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಸ್ಪಷ್ಟಬಹುಮತದ ಕೊರತೆಯಿಂದ ತಲಾ 6 ಸ್ಥಾನಗಳನ್ನು ಗಳಿಸಿದ್ದ ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳ ಹಿಂದಿನ ಹೊಂದಾಣಿಕೆ ಒಪ್ಪಂದದಂತೆ ಇರುವ 23 ಸದಸ್ಯರಲ್ಲಿ 13 ಸದಸ್ಯರು ಭಂಡಾರಿ ಶ್ರೀನಿವಾಸ್‌ ಮತ್ತು ಉಪಾಧ್ಯಕ್ಷೆ ವಿಜಯ ಪರವಾಗಿ ಮತ ಚಲಾಯಿಸಿದರು.

ಬಿಜೆಪಿ ಶಾಸಕ ಬೆಳ್ಳಿ ಪ್ರಕಾಶ್‌ ಅವರು ತಮಗಿರುವ ಮತದಾನದ ಹಕ್ಕನ್ನು ವಿಜೇತ ಅಧ್ಯಕ್ಷ, ಉಪಾಧ್ಯಕ್ಷರಿಗೆ ಚಲಾಯಿಸಿದರು. ಇದರಿಂದ ಇಬ್ಬರಿಗೂ ಒಟ್ಟು 14 ಮತಗಳು ದೊರೆತವು. ಭಂಢಾರಿ ಶ್ರೀನಿವಾಸ್‌ ಅವರ ಪ್ರತಿಸ್ಪರ್ಧಿ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಿದ್ದ ಸೈಯದ್‌ ಯಾಸೀನ್‌ ಅವರಿಗೆ ಮತ್ತು ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಜ್ಯೋತಿ ಆನಂದ್‌ ಅವರಿಗೆ ತಲಾ 7 ಮತಗಳು ಲಭಿಸಿದವು.

ಪುರಸಭೆಗೆ ಚುನಾಯಿತ ಸದಸ್ಯರಾಗಿ ಆಯ್ಕೆಯಾಗಿ ಒಂದೂವರೆ ವರ್ಷಗಳ ಬಳಿಕ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 6 ಜೆಡಿಎಸ್‌, 6 ಬಿಜೆಪಿ ಮತ್ತು 7 ಕಾಂಗ್ರೆಸ್‌ ಸದಸ್ಯರು ಮತ್ತು 4 ಪಕ್ಷೇತರ ಸದಸ್ಯರಿದ್ದು, ಜೆಡಿಎಸ್‌ ಮತ್ತು ಬಿಜೆಪಿ ಸದಸ್ಯರು ಚುನಾವಣೆ ನಡೆದ ಸಂದರ್ಭದಲ್ಲಿಯೇ ಮೈತ್ರಿ ಮಾಡಿಕೊಂಡಿದ್ದು ಓರ್ವ ಪಕ್ಷೇತರ ಸದಸ್ಯ ಬಿಜೆಪಿಗೆ ಬೆಂಬಲಿಸಿದ್ದರಿಂದ ಕಾಂಗ್ರೆಸ್‌ ಪಕ್ಷವು ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ನಿರೀಕ್ಷೆಯಂತೆ 7 ಮತಗಳನ್ನು ಪಡೆದು ತೃಪ್ತರಾಗಬೇಕಾಯಿತು.

ವೇದಿಕೆಯಲ್ಲೇ ಮೈಕ್ ಕಿತ್ತುಕೊಂಡ ರೇವಣ್ಣ : ಗರಂ ಆದ ಜೆಡಿಎಸ್ ನಾಯಕ ...

ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಗೆಲುವು ಸಾಧಿಸಿದ ಭಂಡಾರಿ ಶ್ರೀನಿವಾಸ್‌ ಮತ್ತು ವಿಜಯ ಚಿನ್ನರಾಜು ಅವರ ಪರವಾಗಿ ಶಾಸಕ ಬೆಳ್ಳಿ ಪ್ರಕಾಶ್‌, ಜಿ.ಸೋಮಯ್ಯ, ಪುಷ್ಪಲತಾ, ಭಂಡಾರಿ ಶ್ರೀನಿವಾಸ್‌, ಲತಾ ರಾಜು, ವಿಜಯ ಚಿನ್ನರಾಜು, ಮಂಜುಳಾ ಚಂದ್ರು, ವಿಜಯಲಕ್ಷ್ಮೇ, ಪದ್ಮಾ ಶಂಕರ್‌, ಮೋಹನ್‌ಕುಮಾರ್‌, ಸಂದೇಶ್‌ಕುಮಾರ್‌, ಗೋವಿಂದಪ್ಪ, ಯತಿರಾಜ್‌ ಮತ ಚಲಾಯಿಸಿದರು.

ಪರಾಜಿತ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಸೈಯದ್‌ ಯಾಸೀನ್‌ ಮತ್ತು ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಜ್ಯೋತಿ ಆನಂದ್‌ ಅವರ ಪರವಾಗಿ ಕೆ.ಎಂ. ಮೋಹನ್‌ಕುಮಾರ್‌, ಇಕ್ಬಾಲ್‌, ಶ್ರೀಕಾಂತ್‌, ಸೈಯದ್‌ ಯಾಸಿನ್‌, ಜ್ಯೋತಿ ಆನಂದ್‌, ಭಾಗ್ಯಮ್ಮ, ಹಾಲಮ್ಮ ಮತ ಚಲಾಯಿಸಿದರು. ಪಕ್ಷೇತರ ಸದಸ್ಯರಾದ ಕಮಲಾ ವೆಂಕಟೇಶ್‌ ಮತ್ತು ಸುಧಾ ಉಮೇಶ್‌ ಅವರು ಮತ ಚಲಾಯಿಸದೇ ತಟಸ್ಥರಾಗಿ ಉಳಿದರು. ಮತ್ತೋರ್ವ ಪಕ್ಷೇತರ ಸದಸ್ಯ ಈರಳ್ಳಿ ರಮೇಶ್‌ ಚುನಾವಣೆ ಪ್ರಕ್ರಿಯೆಗೆ ಗೈರುಹಾಜರಾಗಿದ್ದರು.

ಪೊಲೀಸ್‌ ಬಂದೋಬಸ್ತ್: ಚುನಾವಣೆಗೆ ಪುರಸಭೆ ಕಚೇರಿ ಸೇರಿದಂತೆ ಪಟ್ಟಣದ ಆಯಕಟ್ಟಿನ ಸ್ಥಳಗಳಲ್ಲಿ ಬಿಗಿ ಪೊಲೀಸ್‌ ಬಂದೋಬಸ್‌್ತ ಮಾಡಲಾಗಿತ್ತು. ಹಳೇ ಬಸ್‌ ನಿಲ್ದಾಣದಿಂದ ಆಕ್ಸಿಸ್‌ ಬ್ಯಾಂಕ್‌ವರೆಗೂ ಜೋಡಿ ಮಾರ್ಗದ ಸಂಚಾರ ರದ್ದುಗೊಳಿಸಿದ್ದರಿಂದ ಸಂತೆ ದಿನವಾದ ಸೋಮವಾರ ಈ ರಸ್ತೆಯ ಬಹುತೇಕ ವ್ಯಾಪಾರಸ್ಥರು ವ್ಯಾಪಾರ ವಿಲ್ಲದೇ ಅಂಗಡಿಗಳನ್ನು ಮುಚ್ಚಿದ್ದರು.

ಸ್ವತಃ ಡಿವೈಎಸ್‌ಪಿ ಬಂದೋಬಸ್ತಿನ ಹೊಣೆ ಹೊತ್ತಿದ್ದರಿಂದ ಪುರಸಭೆ ಹೊರ ಮತ್ತು ಒಳ ಆವರಣವು ಪೊಲೀಸರ ಭದ್ರಕೋಟೆಯಂತಾಗಿತ್ತು. ಚುನಾವಣೆ ಪ್ರಕ್ರಿಯೆಗೆ ಮಾಧ್ಯಮದವರನ್ನು ಹೊರಗಿಡಲಾಗಿತ್ತು. ಚುನಾವಣಾ ಪ್ರಕ್ರಿಯೆ ನಂತರ ಚುನಾವಣಾಧಿಕಾರಿ, ಪ್ರಭಾರ ತಹಸೀಲ್ದಾರರು ಮಾಧ್ಯಮಗಳಿಗೆ ಪ್ರಕ್ರಿಯೆಯ ಮಾಹಿತಿ ಒದಗಿಸಿದರು. ಒಂದೂವರೆ ವರ್ಷಗಳ ಬಳಿಕ ನಿರೀಕ್ಷೆಯಂತೆ ಬಿಜೆಪಿ ಮತ್ತು ಜೆಡಿಎಸ್‌ ಹೊಂದಾಣಿಕೆಯಂತೆ ಆಯ್ಕೆ ನಡೆಯುವ ಮೂಲಕ ಕುತೂಹಲಗಳಿಗೆ ತೆರೆಬಿದ್ದಿತು.