Asianet Suvarna News Asianet Suvarna News

ಕೆಪಿಸಿಸಿ ಕಚೇರಿಗೆ ಚಡ್ಡಿಗಳ ಸ್ಪೀಡ್‌ಪೋಸ್ಟ್‌..!

*  ಬಿಜೆಪಿ ಕಚೇರಿಯಿಂದಲೇ ಚಡ್ಡಿಗಳ ಹಿಡಿದು ಮೆರವಣಿಗೆ
*  ಆರ್‌ಎಸ್‌ಎಸ್‌ ವಿರುದ್ಧ ಕಾಂಗ್ರೆಸ್‌ ಹೇಳಿಕೆಗೆ ಆಕ್ರೋಶ
*  ಸಿದ್ದರಾಮಯ್ಯ ಹಾಗೂ ನಲಪಾಡ್‌ ದೇಶದ ಸಂಸ್ಕೃತಿಗೆ ಅವಮಾನಿಸಿದ್ದಾರೆ

BJP Held Protest Against Congress in Chikkamgaluru grg
Author
Bengaluru, First Published Jun 8, 2022, 12:15 PM IST | Last Updated Jun 8, 2022, 12:15 PM IST

ಚಿಕ್ಕಮಗಳೂರು(ಜೂ.08):  ಆರ್‌ಎಸ್‌ಎಸ್‌ ಕುರಿತು ನೀಡಿರುವ ಹೇಳಿಕೆ ಹಿಂಪಡೆಯಬೇಕು, ತಪ್ಪಾಯಿತು ಎಂದು ಜನರ ಎದುರು ಕ್ಷಮೆ ಕೋರಬೇಕೆಂದು ಕಾಂಗ್ರೆಸ್‌ ಪಕ್ಷಕ್ಕೆ ಆಗ್ರಹಿಸಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಹಾಗೂ ಯುವ ಮೋರ್ಚಾ ನೇತೃತ್ವದಲ್ಲಿ ಕಾರ್ಯಕರ್ತರು ಚಡ್ಡಿಗಳನ್ನು ಸ್ಪೀಡ್‌ ಪೋಸ್ಟ್‌ನಲ್ಲಿ ಕೆಪಿಸಿಸಿ ಕಚೇರಿಗೆ ಕಳುಹಿಸುವ ಮೂಲಕ ಪ್ರತಿಭಟಿಸಿದರು. ಮಂಗಳವಾರ ಜಿಲ್ಲಾ ಬಿಜೆಪಿ ಕಚೇರಿಯಿಂದ ಚಡ್ಡಿಗಳನ್ನು ಹಿಡಿದು ಕಾಂಗ್ರೆಸ್‌ ನಾಯಕರ ವಿರುದ್ಧ ಘೋಷಣೆ ಕೂಗುತ್ತ ಆಜಾದ್‌ ಪಾರ್ಕ್ ವೃತ್ತದವರೆಗೆ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಎಚ್‌.ಸಿ.ಕಲ್ಮರುಡಪ್ಪ ಮಾತನಾಡಿ, ವ್ಯಕ್ತಿಗಳನ್ನು ಕೊಲ್ಲಬಹುದು. ಆದರೆ, ವ್ಯಕ್ತಿಗಳ ಚಿಂತನೆ ಕೊಲ್ಲಲು ಯಾರಿಂದಲೂ ಸಾಧ್ಯವಿಲ್ಲ. ಆರ್‌ಎಸ್‌ಎಸ್‌ನ ಉದ್ದೇಶ ಮತ್ತು ಚಿಂತನೆಗಳು ಈ ದೇಶವನ್ನು ಸಾಂಸ್ಕೃತಿಕ, ಪಾರಂಪರಿಕವಾಗಿ ಪ್ರಪಂಚದಾದ್ಯಂತ ಇಂದು ಗತವೈಭವಕ್ಕೆ ಕೊಂಡೊಯ್ಯುತ್ತಿರುವ ಸಂಸ್ಥೆ. ಈ ದೇಶದ ನೆಲದ ಸಂಸ್ಕೃತಿಯನ್ನು ಅವಹೇಳನ ಮಾಡುವ ಕೆಲಸವನ್ನು ಸಿದ್ದರಾಮಯ್ಯ ಮತ್ತು ನಲಪಾಡ್‌ ನೇತೃತ್ವದ ಕಾಂಗ್ರೆಸ್‌ ಪಕ್ಷದ ತಂಡ ಮಾಡುತ್ತಿದೆ ಎಂದು ಆರೋಪಿಸಿದರು.

ಚಡ್ಡಿಯನ್ನು ಕೆಪಿಸಿಸಿ ಕಚೇರಿಗೆ ಕಳುಹಿಸುವ ಮೂಲಕ ನಿಮ್ಮ ದಿವಾಳಿತನ ಸಾರಲಾಗುತ್ತಿದೆ. ಎಚ್ಚರಿಕೆಯಿಂದ ಮಾತನಾಡುವ ಸಂಸ್ಕೃತಿ ಕಲಿಯದ ಕಾರಣ ಕಾಂಗ್ರೆಸ್‌ ಪಕ್ಷಕ್ಕೆ ಎಲ್ಲ ಎಲೆಕ್ಷನ್‌ಗಳಲ್ಲೂ ಜನ ಪಾಠ ಕಲಿಸಿದ್ದಾರೆ. ಭೌತಿಕವಾಗಿ ದಿವಾಳಿ ಆಗಬಾರದು. ಈ ದೇಶದ ಜನರ ಗೌರವ ಉಳಿಸಬೇಕು, ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಆಲೋಚನೆ ಮಾಡಬೇಕು ಇಲ್ಲದಿದ್ದರೆ ಮುಂದೆ ಇನ್ನೂ ಕಠೋರವಾದ ನಿರ್ಧಾರವನ್ನು ಜನ ಕಂಡುಕೊಳ್ಳುವುದರಲ್ಲಿ ಸಂದೇಹವಿಲ್ಲ ಎಂದು ಎಚ್ಚರಿಕೆ ನೀಡಿದರು.

Chikkamagaluru: ವಿವಾದದ ನಡುವೆಯೂ ಯುವ ಕಾಂಗ್ರೆಸ್ ಕಾರ್ಯಕರ್ತರಿಂದ ಚಡ್ಡಿ ಸುಡುವ ಪ್ರತಿಭಟನೆ

ಹಿಂದುಳಿದ ವರ್ಗದ ಉಸ್ತುವಾರಿ ಬಿ.ರಾಜಪ್ಪ ಮಾತನಾಡಿ, ಕಾಂಗ್ರೆಸ್‌ ಮುಖಂಡರಾದ ಸಿದ್ದರಾಮಯ್ಯ ಹಾಗೂ ನಲಪಾಡ್‌ ಅವರು ಈ ದೇಶದ ಸಂಸ್ಕೃತಿಗೆ ಅವಮಾನಿಸಿದ್ದಾರೆ. ದೇಶದ ಯಾವುದೇ ಜನರ ಉಡುಗೆ ತೊಡುಗೆಗಳಿಗೆ ಅವರದೇ ಆದ ಗೌರವ ಇರುತ್ತದೆ. ಅದನ್ನು ಕಾಪಾಡಿಕೊಳ್ಳಬೇಕು. ಹಾಗಾಗಿ ಚಡ್ಡಿಯ ಮಹತ್ವ ತಿಳಿಸುವ ಸಲುವಾಗಿ ಕೆಪಿಸಿಸಿ ಕಚೇರಿಗೆ ಚಡ್ಡಿಗಳನ್ನು ಕಳಿಸಲಾಗುತ್ತಿದೆ ಎಂದು ಹೇಳಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಆರ್‌.ದೇವರಾಜ ಶೆಟ್ಟಿಮಾತನಾಡಿ, ಕಾಂಗ್ರೆಸ್‌ ಮುಖಂಡ ನಲಪಾಡ್‌ ಒಂದು ಚಡ್ಡಿ ಸುಡುವ ಮೂಲಕ ಸಂಸ್ಕೃತಿಗೆ ಧಕ್ಕೆ ತಂದ ಹಿನ್ನೆಲೆಯಲ್ಲಿ 10 ಚಡ್ಡಿಗಳನ್ನು ಕೆಪಿಸಿಸಿ ಕಚೇರಿಗೆ ಕಳಿಸಲಾಗುತ್ತಿದೆ. ಆರ್‌ಎಸ್‌ಎಸ್‌ ಬಗ್ಗೆ ಮಾತನಾಡುವಾಗ ನಾಲಿಗೆ ಬಿಗಿಹಿಡಿದುಕೊಳ್ಳಿ ಎಂದರು.

ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ್‌ ಕೋಟ್ಯಾನ್‌ ಮಾತನಾಡಿ, ರಾಜ್ಯ ಯುವ ಕಾಂಗ್ರೆಸ್‌ ಅಗ್ರಿಮೆಂಟ್‌ ಅಧ್ಯಕ್ಷ ನಲಪಾಡ್‌ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಗ್ಗೆ ನೀಡಿರುವ ಹೇಳಿಕೆ ಖಂಡನೀಯ. ಆರ್‌ಎಸ್‌ಎಸ್‌ ಹೆಸರು ಹೇಳುವ ನೈತಿಕತೆ ನಲಪಾಡ್‌ಗೆ ಇಲ್ಲ. ಈ ಹಿಂದೆ ಚಡ್ಡಿ ಬಗ್ಗೆ ಮಾತನಾಡಿದ ಕಾಂಗ್ರೆಸ್‌ ನಾಯಕರು ಇಂದು ಯಾವ ಸ್ಥಿತಿಗೆ ತಲುಪಿದ್ದಾರೆ ಎಂದು ಒಮ್ಮೆ ಹಿಂತಿರುಗಿ ನೋಡಿ. ಮುಂದೆಯೂ ಅದಕ್ಕಿಂತ ಹೀನಾಯ ಸ್ಥಿತಿಗೆ ನಿಮ್ಮನ್ನು ತಲುಪಿಸಲು ರಾಜ್ಯದ ಜನ ಕಾತರರಾಗಿದ್ದಾರೆ ಎಂದು ಹೇಳಿದರು. ಪ್ರತಿಭಟನೆಯಲ್ಲಿ ನಗರಾಧ್ಯಕ್ಷ ರಾಜೇಶ್‌, ಕೆ.ಎಸ್‌.ಪುಷ್ಪರಾಜ್‌, ಜಯರಾಮ್‌, ಶಶಿ ಆಲ್ದೂರು, ಯತೀಶ್‌, ಸಚಿನ್‌, ಮಧು ನಾಯರ್‌, ನಗರಸಭೆ ಸದಸ್ಯ ಮೋಹನ್‌ ಇದ್ದರು.
 

Latest Videos
Follow Us:
Download App:
  • android
  • ios