Asianet Suvarna News Asianet Suvarna News

ಬಿಜೆಪಿ ಸರ್ಕಾರದಿಂದ ರೈತರ ಕಡೆಗಣನೆ: ಚಲುವರಾಯಸ್ವಾಮಿ

ಬಿಜೆಪಿ ಸರ್ಕಾರ ಅನ್ನದಾತರ ಸಮಸ್ಯೆಗಳಿಗೆ ಸ್ಪಂದಿಸದೆ ಉದ್ಧಟತನ. ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸದೆ ನಿರ್ಲಕ್ಷ್ಯ. ಕೆಪಿಸಿಸಿ ಉಪಾಧ್ಯಕ್ಷ ಎನ್‌.ಚಲುವರಾಯಸ್ವಾಮಿ ಆರೋಪ.

BJP government  neglected Farmers says cheluvarayaswamy gow
Author
First Published Nov 13, 2022, 4:02 PM IST

ಮಂಡ್ಯ (ನ.13): ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ರೈತರನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಕೃಷಿಕರ ಸಮಸ್ಯೆಗಳಿಗೆ ಪರಿಹಾರ ಸೂಚಿಸದೆ ನಿರ್ಲಕ್ಷ್ಯ ವಹಿಸುವುದರೊಂದಿಗೆ ರೈತ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಎನ್‌.ಚಲುವರಾಯಸ್ವಾಮಿ ಆರೋಪಿಸಿದರು. ಕಬ್ಬಿಗೆ ಬೆಂಬಲ ಬೆಲೆ ನಿಗದಿ, ಉತ್ಪಾದಕರಿಗೆ ನೀಡುವ ಹಾಲಿನ ದರ ಹೆಚ್ಚಳ, ಭತ್ತ ಖರೀದಿ ಕೇಂದ್ರ ತೆರೆಯುವುದು, ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಸೇರಿದಂತೆ ರೈತರ ಹಲವಾರು ಸಮಸ್ಯೆಗಳಿಗೆ ಪರಿಹಾರ ಸೂಚಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ರಾಜ್ಯದಲ್ಲಿ ಸರ್ಕಾರ ಇದೆಯೋ, ಇಲ್ಲವೋ ಎಂಬ ಅನುಮಾನ ಕಾಡಲಾರಂಭಿಸಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಜಿಲ್ಲೆಯ ರೈತರು ಹಾಗೂ ಜನಪ್ರತಿನಿಧಿಗಳನ್ನು ಸರ್ಕಾರ ವಿಶ್ವಾಸಕ್ಕೆ ಪಡೆಯದೇ ಉದ್ಧಟತನದಿಂದ ವರ್ತಿಸುತ್ತಿದೆ. ಇದಕ್ಕೆ ಜಿಲ್ಲೆಯ ಜನರೇ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದರು.

ಟನ್‌ ಕಬ್ಬಿಗೆ 4500 ರು. ನಿಗದಿಪಡಿಸುವಂತೆ ಒತ್ತಾಯಿಸಿ ಕಳೆದ ಐದು ದಿನಗಳಿಂದ ಜಿಲ್ಲೆಯ ರೈತರು ಆಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹಾಗೂ ಜಿಲ್ಲೆಯವರೇ ಆದ ಸಚಿವ ಕೆ.ಸಿ.ನಾರಾಯಣಗೌಡರು ಸೌಜನ್ಯಕ್ಕಾದರೂ ಭೇಟಿ ಮಾಡಿ ಸಮಸ್ಯೆ ಕೇಳಲು ಮುಂದಾಗದಿರುವುದು ವಿಪರ್ಯಾಸ. ಉಸ್ತುವಾರಿ ಸಚಿವರಾದವರಿಗೆ ಸಾಮಾಜಿಕ ಜವಾಬ್ದಾರಿ ಇರಬೇಕು. ನಾಮಕಾವಸ್ಥೆಗೆ ಸಚಿವರಾಗಿರಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಬ್ಬಿನ ದರ ಹಾಗೂ ಕಬ್ಬಿನ ಹಣ ಪಾವತಿ ಸಂಬಂಧ ಸರ್ಕಾರ ಸ್ಪಷ್ಟನಿರ್ದೇಶನ ನೀಡದೆ ರೈತರಿಗೆ ದ್ರೋಹ ಮಾಡುತ್ತಿದೆ. ರೈತರ ಹಿತವನ್ನು ಸಂಪೂರ್ಣವಾಗಿ ಬಿಜೆಪಿ ಸರ್ಕಾರ ಕಡೆಗಣಿಸುತ್ತಿದೆ ಎಂದು ಆರೋಪಿಸಿದರು.

ಜಿಲ್ಲೆಯಲ್ಲಿ ಭತ್ತದ ಕಟಾವು ಆರಂಭಗೊಳ್ಳಲಿದ್ದು, ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಬೆಂಬಲ ಬೆಲೆ ಯೋಜನೆಯಡಿ ಕ್ವಿಂಟಲ್‌ಗೆ 2040 ರು.ನಂತೆ ಭತ್ತ ಖರೀದಿಗೆ ಕೂಡಲೇ ಖರೀದಿ ಕೇಂದ್ರ ತೆರೆಯಬೇಕು. ಮುಕ್ತ ಮಾರುಕಟ್ಟೆಮೌಲ್ಯ 1500 ರು. ಆಸು-ಪಾಸಿನಲ್ಲಿದ್ದು, ಸರ್ಕಾರ ನಿಗಾ ವಹಿಸಬೇಕು. ಜಿಲ್ಲೆಯ ಜನಪ್ರತಿನಿಧಿಗಳು ಮೌನ ಮುರಿಯಬೇಕು ಎಂದು ಒತ್ತಾಯಿಸಿದರು.

ಸರ್ಕಾರದ ದಿವಾಳಿತನ: ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಜಾರಿಗೊಳಿಸಿರುವ ಬೈಸಿಕಲ್‌ ವಿತರಣೆ ಕಳೆದ ಮೂರು ವರ್ಷಗಳಿಂದ ಅನುಷ್ಠಾನಗೊಂಡಿಲ್ಲ. ಗ್ರಾಮೀಣ ವಿದ್ಯಾರ್ಥಿಗಳು ನಾಲ್ಕೆ ೖದು ಕಿ.ಮೀ. ದೂರದ ಶಾಲೆಗಳಿಗೆ ಬಿಸಿಲು, ಮಳೆ ಎನ್ನದೇ ನಡೆದುಕೊಂಡು ಹೋಗುವುದು ಅನಿವಾರ್ಯವಾಗಿದೆ. ಸರ್ಕಾರ ಕೂಡಲೇ ಸೈಕಲ್‌ ವಿತರಿಸಲು ಮುಂದಾಗಬೇಕು ಎಂದರು.

ವಿದ್ಯಾರ್ಥಿಗಳ ಶಿಕ್ಷಣಕ್ಕೆ ಆಸರೆಯಾಗಿದ್ದ ವಿದ್ಯಾರ್ಥಿವೇತನ ಸ್ಥಗಿತವಾಗಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಪರಿಪಾಟಲು ಹೇಳತೀರದಾಗಿದೆ. ಅದೇ ರೀತಿ ರಾಜ್ಯ ಬಿಸಿಯೂಟ ನೌಕರರ ಗೌರವಧನವನ್ನು ಕಳೆದ 1 ವರ್ಷದಿಂದ ಬಿಡುಗಡೆ ಮಾಡದಿರುವುದು ಸರ್ಕಾರದ ಆರ್ಥಿಕ ದಿವಾಳಿತನವನ್ನು ತೋರುತ್ತದೆ ಎಂದರು.

ಗೌರವಧನದಲ್ಲಿ ಬದುಕು ಕಟ್ಟಿಕೊಂಡಿರುವ ಬಿಸಿಯೂಟ ನೌಕರರು ರಾಜ್ಯದಲ್ಲಿ ಸುಮಾರು 1,18,586 ಸಿಬ್ಬಂದಿಗಳಿದ್ದು, ಸುಮಾರು ರಾಜ್ಯವ್ಯಾಪಿ 516 ಕೋಟಿ ರು. ಹಾಗೂ ಮಂಡ್ಯ ಜಿಲ್ಲೆಗೆ 43 ಕೋಟಿ ರು. ಬಿಡುಗಡೆಗೆ ಸರ್ಕಾರ ತಕ್ಷಣ ಮುಂದಾಗಬೇಕೆಂದು ಆಗ್ರಹಿಸಿದರು.

ಕಮಿಷನ್‌ ಸಿಗುವ ಯೋಜನೆಗಳಿಗೆ ಆಸಕ್ತಿ: ಕಮಿಷನ್‌ ಸಿಗುವ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಲು ಆಸಕ್ತಿ ತೋರುವ ರಾಜ್ಯ ಸರ್ಕಾರ ಜಿಲ್ಲೆಯ ಲೋಕೋಪಯೋಗಿ ಇಲಾಖೆಯಲ್ಲಿ ಕಾರ್ಯನಿರ್ವಹಿಸಿರುವ ಗುತ್ತಿಗೆದಾರರಿಗೆ ಸುಮಾರು 300 ಕೋಟಿ ರು. ಬಾಕಿ ಉಳಿಸಿಕೊಂಡಿರುವುದು ಸರ್ಕಾರದ ನಿರ್ಲಕ್ಷ್ಯ ಎದ್ದು ತೋರುತ್ತದೆ ಎಂದು ವ್ಯಂಗ್ಯವಾಡಿದರು.

ಬೃಹತ್‌ ಬೆಂಗಳೂರು ಸೇರಿದಂತೆ ನಗರ ಹಾಗೂ ಪಟ್ಟಣ ಪ್ರದೇಶಗಳ ರಸ್ತೆಗಳು ಗುಂಡಿ ಬಿದ್ದು ಸಾರ್ವಜನಿಕರು ಸಂಚರಿಸಲು ದುಸ್ತರ ಪಡಬೇಕಾದ ಪರಿಸ್ಥಿತಿ ಎದುರಾಗಿದೆ. ಇಂತಹ ಪರಿಸ್ಥಿತಿಯನ್ನು ಈ ಹಿಂದೆ ಎಂದೂ ತಲೆದೋರಿರಲಿಲ್ಲ. ಈ ಬಗ್ಗೆಯೂ ಸರ್ಕಾರ ನಿರ್ಲಕ್ಷ್ಯ ಸರಿಯಲ್ಲ ಎಂದರು.

ಕ್ಯಾನ್ಸರ್‌ ಆಸ್ಪತ್ರೆ ಪುನಶ್ಚೇತನವಿಲ್ಲ: ಮಂಡ್ಯ ಜಿಲ್ಲೆ ಸ್ಥಾಪನೆಯಾಗಿ 50 ವರ್ಷಗಳು ಸಂದ ನೆನಪಿಗೆ ಬಾಲಗಂಗಾಧರನಾಥ ಶ್ರೀಗಳ ಒತ್ತಾಸೆಯಿಂದ ಮಂಡ್ಯ ನಗರಕ್ಕೆ ಕ್ಯಾನ್ಸರ್‌ ಫೆರಿಪೆರಲ್‌ ಆಸ್ಪತ್ರೆ ಮಂಜೂರಾಗಿ ಕಾರ್ಯನಿರ್ವಹಿಸುತ್ತಿತ್ತು. ಆದರೆ, ಪ್ರಸ್ತುತ ಆಸ್ಪತ್ರೆ ಸೇವೆ ರೋಗಿಗಳಿಗೆ ದೊರೆಯದಿರುವುದು ವಿಪರ್ಯಾಸ ಎಂದರು.

Mandya : ರೈತರ ಪ್ರತಿಭಟನೆಗೆ ಹೆದರಿ ಗೃಹ ಸಚಿವರು ಪರಾರಿ

ಕೂಡಲೇ ಜಿಲ್ಲಾ ಮಂತ್ರಿಗಳು, ಜಿಲ್ಲೆಯ ಜನಪ್ರತಿನಿಧಿಗಳು ಕ್ಯಾನ್ಸರ್‌ ಆಸ್ಪತ್ರೆ ಕಾರ್ಯ ನಿರ್ವಹಣೆಗೆ ಕ್ರಮ ಜರುಗಿಸಬೇಕು. ಮುಂದಿನ ಒಂದು ವಾರದೊಳಗೆ ಆಸ್ಪತ್ರೆ ಸಮುಚ್ಛಯಕ್ಕೆ ವಿಧಾನ ಪರಿಷತ್‌ ಸದಸ್ಯರಾದ ದಿನೇಶ್‌ಗೂಳಿಗೌಡ ಹಾಗೂ ಮಧು ಮಾದೇಗೌಡ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ, ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಲಿದ್ದಾರೆ ಎಂದರು.

Mysuru : ಸಾವಯವ, ವೈವಿಧ್ಯದ ಬೆಳೆ ಪದ್ಧತಿ ಅನುಸರಿಸಿ

ಗೋಷ್ಠಿಯಲ್ಲಿ ಮಾಜಿ ಸಚಿವ ಎಂ.ಎಸ್‌.ಆತ್ಮಾನಂದ, ಶಾಸಕರಾದ ಮಧು ಜಿ.ಮಾದೇಗೌಡ, ದಿನೇಶ್‌ಗೂಳಿಗೌಡ, ಮಾಜಿ ಶಾಸಕ ರಮೇಶ್‌ ಬಾಬು ಬಂಡಿಸಿದ್ದೇಗೌಡ, ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್‌, ಮಹಿಳಾ ಆಧ್ಯಕ್ಷೆ ಅಂಜನಾ ಶ್ರೀಕಾಂತ್‌, ಯುವ ಘಟಕ ಅಧ್ಯಕ್ಷ ವಿಜಯ್‌ ಕುಮಾರ್‌, ನಗರ ಘಟಕ ಅಧ್ಯಕ್ಷ ಹೆಚ್‌.ಕೆ.ರುದ್ರಪ್ಪ ಹಾಗೂ ಡಿಸಿಸಿ ಬ್ಯಾಂಕ್‌ ನಿರ್ದೇಶಕ ಹಾಲಹಳ್ಳಿ ಅಶೋಕ್‌ ಹಾಜರಿದ್ದರು.

Follow Us:
Download App:
  • android
  • ios