Asianet Suvarna News Asianet Suvarna News

Mandya : ರೈತರ ಪ್ರತಿಭಟನೆಗೆ ಹೆದರಿ ಗೃಹ ಸಚಿವರು ಪರಾರಿ

ಟನ್‌ ಕಬ್ಬಿಗೆ .4500 ನಿಗದಿಪಡಿಸುವಂತೆ ಒತ್ತಾಯಿಸಿ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿರುವ ರೈತರು ಗುರುವಾರ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಮನವಿ ಸಲ್ಲಿಸಲು ಮುಂದಾದಾಗ ಪ್ರತಿಭಟನೆಗೆ ಹೆದರಿ ಪರಾರಿಯಾದ ಘಟನೆ ನಡೆಯಿತು.

Mandya  Home Minister Escape fearing farmers' protest snr
Author
First Published Nov 11, 2022, 6:00 AM IST

  ಮಂಡ್ಯ (ನ.11):   ಟನ್‌ ಕಬ್ಬಿಗೆ .4500 ನಿಗದಿಪಡಿಸುವಂತೆ ಒತ್ತಾಯಿಸಿ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿರುವ ರೈತರು ಗುರುವಾರ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಮನವಿ ಸಲ್ಲಿಸಲು ಮುಂದಾದಾಗ ಪ್ರತಿಭಟನೆಗೆ ಹೆದರಿ ಪರಾರಿಯಾದ ಘಟನೆ ನಡೆಯಿತು.

ಗೃಹ ಸಚಿವರ ಕಾರನ್ನು (Car)  ಅಡ್ಡಹಾಕಲು ಮುಂದಾದ ರೈತರ ಕತ್ತಿನ ಪಟ್ಟಿಹಿಡಿದು ಪಕ್ಕಕ್ಕೆಳೆದು ನಿಲ್ಲಿಸಿದ ಸಬ್‌ಇನ್ಸ್‌ಪೆಕ್ಟರ್‌ ಸಂತೋಷ್‌ ವಿರುದ್ಧ ರೈತಸಂಘದ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪೊಲೀಸ್‌ (Police)  ವರಿಷ್ಠಾಧಿಕಾರಿ ಎನ್‌.ಯತೀಶ್‌ ಘಟನೆಗೆ ವಿಷಾದಿಸಿದರು.

ರೈತರ ಸಮಸ್ಯೆಗಳಿಗೆ ಪರಿಹಾರ ಸೂಚಿಸುವಂತೆ ಒತ್ತಾಯಿಸಿ ಕಳೆದ ನಾಲ್ಕು ದಿನಗಳಿಂದ ರೈತರು ನಗರದ ಸರ್‌.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಅದರಂತೆ ಗುರುವಾರವೂ ಸ್ಥಳದಲ್ಲಿ ಧರಣಿ ನಿರತರಾಗಿದ್ದರು. ಇದೇ ಸಮಯಕ್ಕೆ ಮೈಸೂರಿನಿಂದ ಬೆಂಗಳೂರು ಕಡೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ತೆರಳುತ್ತಿರುವ ವಿಷಯ ಗೊತ್ತಾಗಿ ರೈತಸಂಘದ ಕಾರ್ಯಕರ್ತರು ಅವರಿಗೆ ಮನವಿ ಸಲ್ಲಿಸಲು ನಿರ್ಧರಿಸಿದರು.

ಗೃಹ ಸಚಿವ ಆರಗ ಜ್ಞಾನೇಂದ್ರ ತೆರಳುತ್ತಿದ್ದ ಕಾರಿಗೆ ಅಡ್ಡಲಾಗಿ ರೈತರು ನಿಂತು ತಡೆಯಲು ಯತ್ನಿಸಿದಾಗ ಚಾಲಕ ಕಾರನ್ನು ನಿಧಾನವಾಗಿ ಚಾಲನೆ ಮಾಡುತ್ತಾ ಮುಂದೆ ಹೋಗಿ ನಂತರ ವೇಗವಾಗಿ ಅಲ್ಲಿಂದ ಪರಾರಿಯಾದರು. ರೈತರಿಂದ ಮನವಿ ಸ್ವೀಕರಿಸುವ ಸೌಜನ್ಯವನ್ನೂ ತೋರದ ಗೃಹ ಸಚಿವರ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು.

ರೈತರ ಕತ್ತಿನಪಟ್ಟಿಹಿಡಿದೆಳೆದ ಎಸ್‌ಐ:

ಗೃಹ ಸಚಿವರ ಕಾರನ್ನು ಅಡ್ಡಹಾಕಲು ಯತ್ನಿಸಿದ ರೈತರ ಕತ್ತಿನ ಪಟ್ಟಿಗೆ ಕೈ ಹಾಕಿದ ಸಬ್‌ಇನ್ಸ್‌ಪೆಕ್ಟರ್‌ ವರ್ತನೆ ವಿರುದ್ಧವೂ ರೈತಸಂಘದ ಕಾರ್ಯಕರ್ತರು ಕಿಡಿಕಾರಿದರು. ಮನವಿ ಸಲ್ಲಿಸುವುದಕ್ಕಾಗಷ್ಟೇ ಸಚಿವರ ಕಾರಿನ ಮುಂದೆ ಬಂಧ ರೈತರ ಕತ್ತಿನಪಟ್ಟಿಹಿಡಿದೆಳೆಯುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದರು.

ಧರಣಿಯಲ್ಲಿ ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್‌.ಕೆಂಪೂಗೌಡ, ಲಿಂಗಪ್ಪಾಜಿ, ಜಿ.ಎಸ್‌.ಶಂಕರ್‌, ಶೆಟ್ಟಹಳ್ಳಿ ರವಿಕುಮಾರ್‌, ಸಾದೊಳಲು ಪುಟ್ಟಸ್ವಾಮಿ, ಸಿದ್ದೇಗೌಡ, ಶಶಿಧರ್‌ಗೌಡ ಅಜ್ಜಹಳ್ಳಿ ಸೇರಿದಂತೆ ಹಲವು ರೈತರು ಭಾಗವಹಿಸಿದ್ದರು.

ರೈತರೇನು ಗೂಂಡಾಗಳಾ: ಎಸ್‌.ಸಿ.ಮಧುಚಂದನ್‌

ರೈತರು ಪ್ರತಿಭಟನೆ ನಡೆಸಿದ ಸಮಯದಲ್ಲಿ ಸಬ್‌ ಇನ್ಸ್‌ಪೆಕ್ಟರ್‌ ಸಂತೋಷ್‌ ಅವರು ಹದ್ದುಮೀರಿ ವರ್ತಿಸುವುದು ಇದೇ ಮೊದಲಲ್ಲ. ಹಿಂದೆ ಹಲವಾರು ಘಟನೆಗಳಲ್ಲೂ ಇದೇ ರೀತಿಯ ನಡವಳಿಕೆ ಪ್ರದರ್ಶಿಸಿದ್ದಾರೆ. ರೈತರ ಕತ್ತಿನ ಪಟ್ಟಿಹಿಡಿದೆಳೆಯುವುದಕ್ಕೆ ಅವರೇನು ಗೂಂಡಾಗಳಾ ಎಂದು ರಾಜ್ಯ ರೈತಸಂಘದ ಪ್ರಧಾನ ಕಾರ್ಯದರ್ಶಿ ಎಸ್‌.ಸಿ.ಮಧುಚಂದನ್‌ ಪ್ರಶ್ನಿಸಿದರು.

ಯಾರಿಗಿಂತ ಯಾರೇನು ದೊಡ್ಡವರಲ್ಲ. ಸಂತೋಷ್‌ ಅವರ ವರ್ತನೆಯನ್ನು ಖಂಡಿಸಿ ಅಮಾನತುಪಡಿಸುವಂತೆ ಒತ್ತಾಯಿಸಬೇಕಿತ್ತು. ಆದರೆ, ಕ್ಷಮಾಪಣೆಯನ್ನಷ್ಟೇ ಕೇಳುವಂತೆ ಆಗ್ರಹಿಸುತ್ತಿದ್ದೇವೆ. ನಿಮ್ಮ ವರ್ತನೆಯನ್ನು ಸರಿಪಡಿಸಿಕೊಳ್ಳಬೇಕು ಎಂದರು.

ರೈತ ಮುಖಂಡ ಲಿಂಗಪ್ಪಾಜಿ ಮಾತನಾಡಿ, ನಾವು ಸಚಿವ ಆರಗ ಜ್ಞಾನೇಂದ್ರ ಅವರಿಗೆ ಮನವಿ ಸಲ್ಲಿಸುವುದಕ್ಕಷ್ಟೇ ಮುಂದಾಗಿದ್ದೆವು. ರೈತರ ಸಮಸ್ಯೆ, ನೋವುಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಬೇಕೆನ್ನುವುದು ನಮ್ಮ ಉದ್ದೇಶವಾಗಿತ್ತು. ಆದರೆ, ಎಸ್‌ಐ ಸಂತೋಷ್‌ ರೈತರ ಬಗ್ಗೆ ತೋರಿದ ನಡವಳಿಕೆ ತೀವ್ರ ನೋವುಂಟುಮಾಡಿದೆ ಎಂದರು.

--------

ಎಸ್‌ಪಿ ವಿಷಾದ

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಎನ್‌.ಯತೀಶ್‌ ರೈತ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದರು. ನೀವು ಗೃಹ ಸಚಿವರಿಗೆ ಮನವಿ ಸಲ್ಲಿಸುವ ವಿಷಯವನ್ನು ಮೊದಲೇ ತಿಳಿಸಿರಲಿಲ್ಲ. ಸಚಿವರ ರಕ್ಷಣೆ, ಸುರಕ್ಷತೆ ಮುಖ್ಯವಾಗಿದ್ದರಿಂದ ಕಾರನ್ನು ತಡೆಯಲೆತ್ನಿಸಿದ ರೈತರನ್ನು ಪೊಲೀಸರು ಹಿಂದಕ್ಕೆ ಎಳೆದಿದ್ದಾರೆ. ಇಂತಹ ಘಟನೆ ನಡೆಯಬಾರದಿತ್ತು. ಅದಕ್ಕೆ ನಾನು ವಿಷಾದಿಸುತ್ತೇನೆ ಎಂದರು.

------------------------

ಅಪರ ಜಿಲ್ಲಾಧಿಕಾರಿ ಮಾತುಕತೆ

ರೈತರ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಅಹೋರಾತ್ರಿ ಧರಣಿ ನಡೆಸುತ್ತಿರುವ ರೈತ ಮುಖಂಡರೊಂದಿಗೆ ಅಪರ ಜಿಲ್ಲಾಧಿಕಾರಿ ಡಾ. ಎಚ್‌.ಎನ್‌.ನಾಗರಾಜು ಮಾತುಕತೆ ನಡೆಸಿದರು. ನಿಮ್ಮ ಒತ್ತಾಯಗಳನ್ನು ಸರ್ಕಾರದ ಗಮನಕ್ಕೆ ತಂದಿದ್ದೇವೆ. ಧರಣಿ ಕೈಬಿಡುವಂತೆ ಮನವೊಲಿಸಲು ಯತ್ನಿಸಿದರು. ಇದಕ್ಕೆ ಒಪ್ಪದ ರೈತ ಮುಖಂಡರು ಸರ್ಕಾರ ಟನ್‌ ಕಬ್ಬಿಗೆ .4500 ಘೋಷಣೆ ಮಾಡಬೇಕು. ಸಮಸ್ಯೆಗಳಿಗೆ ಪರಿಹಾರ ಸೂಚಿಸಬೇಕು. ಅಲ್ಲಿಯವರೆಗೂ ಯಾವುದೇ ಕಾರಣಕ್ಕೂ ಧರಣಿ ಹಿಂಪಡೆಯುವುದಿಲ್ಲ ಎಂದು ದೃಢವಾಗಿ ಹೇಳಿದರು.

Follow Us:
Download App:
  • android
  • ios