ಮೊದಲ ಭಾರಿ ಇಲ್ಲಿ ಬಿಜೆಪಿಗೆ ಗೆಲುವು : ಕೈನಿಂದ ಬಹಿಷ್ಕಾರ
ಮೊದಲ ಬಾರಿಗೆ ಇಲ್ಲಿ ಬಿಜೆಪಿ ಗೆದ್ದು ಅಧಿಕಾರ ಪಡೆಯುವಲ್ಲಿ ಸಫಲವಾಗಿದೆ. ಕೈ ಬಹಿಷ್ಕಾರ ಮಾಡಿ ನಡೆದಿದೆ.
ಗುಂಡ್ಲುಪೇಟೆ (ನ.06): ಇತಿಹಾಸದಲ್ಲಿಯೇ ಬಿಜೆಪಿಯ ಸದಸ್ಯರು ಗುಂಡ್ಲುಪೇಟೆ ಪುರಸಭೆ ಅಧ್ಯಕ್ಷ- ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಪ್ರಥಮ ಬಾರಿಗೆ ಬಿಜೆಪಿ ತನ್ನ ತೆಕ್ಕೆಗೆ ಹಾಕಿಕೊಂಡಿದೆ.
ಪುರಸಭೆ ಅಧ್ಯಕ್ಷರಾಗಿ ಪಿ.ಗಿರೀಶ್, ಉಪಾಧ್ಯಕ್ಷರಾಗಿ ದೀಪಿಕಾ ಅಶ್ವಿನ್ ಅವಿರೋಧವಾಗಿ ಆಯ್ಕೆಯಾಗುವಂತೆ ಶಾಸಕ ಸಿ.ಎಸ್.ನಿರಂಜನ್‌ಕುಮಾರ್ ನೋಡಿಕೊಳ್ಳುವ ಮೂಲಕ ಪುರಸಭೆಯಲ್ಲಿ ಕೇಸರಿ ಭಾವುಟ ಹಾರಿಸಿದ್ದಾರೆ.
ಪುರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗ ಮೀಸಲಿನಲ್ಲಿ ಬಿಜೆಪಿ ಹಿರಿಯ ಸದಸ್ಯ ಪಿ.ಗಿರೀಶ್ ಅಧ್ಯಕ್ಷ ಸ್ಥಾನಕ್ಕೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ(ಮಹಿಳೆ)ಗೆ ಮೀಸಲಿನಲ್ಲಿ ಬಿಜೆಪಿ ಸದಸ್ಯೆ ದೀಪಿಕಾ ಅಶ್ವಿನ್ ನಾಮಪತ್ರ ಸಲ್ಲಿಸಿದರು.
8 ಮಂದಿ ಸದಸ್ಯರ ಬಲ ಹೊಂದಿದ್ದ ಕಾಂಗ್ರೆಸ್ ಸದಸ್ಯರು ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆ ಬಹಿಷ್ಕರಿಸಿದರೇ, ಎಸ್‌ಡಿಪಿಐ ಏಕೈಕ ಸದಸ್ಯ ರಾಜಗೋಪಾಲ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.
ಚುನಾವಣೆಯಲ್ಲಿ 14 ಮಂದಿ ಬಿಜೆಪಿ ಸದಸ್ಯರೊಂದಿಗೆ ಲೋಕಸಭಾ ಸದಸ್ಯ ವಿ.ಶ್ರೀನಿವಾಸ್‌ಪ್ರಸಾದ್, ಶಾಸಕ ಸಿ.ಎಸ್.ನಿರಂಜನ್‌ಕುಮಾರ್ ಚುನಾವಣೆಯಲ್ಲಿ ಭಾಗವಹಿಸಿದ್ದರು.
ಪುರಸಭೆ ಅಧ್ಯಕ್ಷ- ಉಪಾಧ್ಯಕ್ಷರಾಗಿ ಬಿಜೆಪಿಯ ಪಿ.ಗಿರೀಶ್, ದೀಪಿಕಾ ಅಶ್ವಿನ್ ಅವಿರೋಧವಾಗಿ ಆಯ್ಕೆಯಾದರೆಂದು ಚುನಾವಣಾಧಿಕಾರಿ ತಹಸೀಲ್ದಾರ್ ಎಂ.ನಂಜುಂಡಯ್ಯ ಘೋಷಿಸಿದರು.
ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ಘೋಷಣೆಯಾಗುತ್ತಿದ್ದಂತೆಯೇ ಪುರಸಭೆ ನೂತನ ಅಧ್ಯಕ್ಷ ಪಿ.ಗಿರೀಶ್ ಬೆಂಬಲಿಗರು ಪುರಸಭೆ ಕಚೇರಿ ಮುಂದಿನ ಹೆದ್ದಾರಿಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಕಾಂಗ್ರೆಸ್ ಪರವಾಗಿ ನಿಂತ ಸುಮಲತಾ : ನನಗೆ ಬೆಂಬಲಿಸಿದ್ದಕ್ಕೆ ಸಪೋರ್ಟ್ ಎಂದ ಸಂಸದೆ ..
ಈ ಸಮಯದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಆರ್.ಸುಂದರ್, ಕ್ಷೇತ್ರ ಬಿಜೆಪಿ ಪ್ರಭಾರಿ ನಿಜಗುಣರಾಜು, ಬಿಜೆಪಿ ಮಂಡಲ ಅಧ್ಯಕ್ಷ ಡಿ.ಪಿ.ಜಗದೀಶ್, ಜಿಪಂ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎನ್.ಮಲ್ಲೇಶ್, ಎಲ್ಲ ಪುರಸಭೆ ಸದಸ್ಯರು ಸೇರಿದಂತೆ ನೂರಾರು ಮಂದಿ ಕಾರ್ಯಕರ್ತರು ಇದ್ದರು.
ಕ್ರೈನ್‌ನಲ್ಲಿ ಹಾರ:
ಮುಖಂಡರು ಪುರಸಭೆಯಿಂದ ಹೊರಗಡೆ ಬಂದಾಗ ನಾಲ್ಕು ಮೀಟರ್ ಉದ್ದದ ಗುಲಾಬಿ ಹಾರವನ್ನು ಕ್ರೈನ್ ಮೂಲಕ ಶಾಸಕ ಸಿ.ಎಸ್.ನಿರಂಜನ್‌ಕುಮಾರ್, ಪುರಸಭೆ ನೂತನ ಅಧ್ಯಕ್ಷ ಪಿ.ಗಿರೀಶ್, ಉಪಾಧ್ಯಕ್ಷ ದೀಪಿಕಾ ಅಶ್ವಿನ್‌ಗೆ ಹಾಕಿದರು. ಇದೇ ವೇಳೆ ಪಿ.ಗಿರೀಶ್ ಬೆಂಬಲಿಗರು ಬಿಜೆಪಿಗೆ ಜೈಕಾರ ಮೊಳಗಿಸಿ ಸಂಭ್ರಮಿಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿ ಶಾಸಕ ಸಿ.ಎಸ್.ನಿರಂಜನ್‌ಕುಮಾರ್, ನೂತನ ಅಧ್ಯಕ್ಷ ಪಿ.ಗಿರೀಶ್ ಆಡಳಿತದಲ್ಲಿ ಅನುಭವವಿದೆ. ಪಟ್ಟಣದ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ ಎಂದರು. ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾದ ಎಲ್ಲ ಪುರಸಭೆ ಸದಸ್ಯರು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ನೂತನ ಅಧ್ಯಕ್ಷ ಪಿ.ಗಿರೀಶ್ ಮಾತನಾಡಿ ಪಟ್ಟಣದ ಸರ್ವಾಂಗಿಣ ಅಭಿವೃದ್ಧಿಗೆ ಶಾಸಕರು ಹಾಗೂ ಎಲ್ಲ ಸದಸ್ಯರ ಸಹಕಾರ ಪಡೆದು ಶ್ರಮಿಸುವುದಾಗಿ ಭರವಸೆ ನೀಡಿದರು