Asianet Suvarna News Asianet Suvarna News

ಬಿಜೆಪಿಯವರಿಗೆ ಆರ್ಥಿಕತೆಯೂ ಗೊತ್ತಿಲ್ಲ, ತಜ್ಞರ ಸಲಹೆಯೂ ಬೇಕಾಗಿಲ್ಲ : ಸಿದ್ದು ಟಾಂಗ್

ದೇಶದ ಮುನ್ನಡೆಗೆ ಬೇಕಾದ ಯಾವ ಮುನ್ನೋಟವೂ ಇಲ್ಲದ, ಭವಿಷ್ಯದ ಮೇಲಿನ ಭರವಸೆಯನ್ನು ಕಳೆದುಕೊಂಡಿರುವ ಸಾಮಾನ್ಯ ಜನರು, ರೈತರು, ಯುವಜನರು, ಉದ್ಯಮಿಗಳು ಹೀಗೆ ಯಾವ ಜನ ಸಮುದಾಯದಲ್ಲಿಯೂ ವಿಶ್ವಾಸ-ಭರವಸೆ ಹುಟ್ಟಿಸದ ನಿರಾಶದಾಯಕ ಬಜೆಚ್‌ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

BJP dont no economics and dont need experts suggestions says siddaramaiah
Author
Bangalore, First Published Feb 2, 2020, 12:43 PM IST

ಮೈಸೂರು(ಫೆ.02): ದೇಶದ ಮುನ್ನಡೆಗೆ ಬೇಕಾದ ಯಾವ ಮುನ್ನೋಟವೂ ಇಲ್ಲದ, ಭವಿಷ್ಯದ ಮೇಲಿನ ಭರವಸೆಯನ್ನು ಕಳೆದುಕೊಂಡಿರುವ ಸಾಮಾನ್ಯ ಜನರು, ರೈತರು, ಯುವಜನರು, ಉದ್ಯಮಿಗಳು ಹೀಗೆ ಯಾವ ಜನ ಸಮುದಾಯದಲ್ಲಿಯೂ ವಿಶ್ವಾಸ-ಭರವಸೆ ಹುಟ್ಟಿಸದ ನಿರಾಶದಾಯಕ ಬಜೆಚ್‌ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಬಾರಿಯ ಕೇಂದ್ರದ ಬಜೆಟ್‌ ಗಾತ್ರ 27 ಲಕ್ಷ ಕೋಟಿ ರು.ಗಳಿತ್ತು. ಈ ಬಾರಿ 30 ಲಕ್ಷದ 42 ಸಾವಿರ ಕೋಟಿಗೆ ಏರಿಕೆ ಕಂಡಿದೆ. ನೇರ ತೆರಿಗೆ ಸಂಗ್ರಹ ಕಡಿಮೆಯಾದ ಕಾರಣ ಕಳೆದ ಬಾರಿ ಸುಮಾರು ಎರಡು ಲಕ್ಷ ಕೋಟಿ ಹಣ ಕೊರತೆಯಾಗಿತ್ತು. ಪ್ರಸಕ್ತ ಬಜೆಟ್‌ನಲ್ಲಿ ದೇಶದ ಜಿಡಿಪಿಯನ್ನು ಶೇ. 6ಗೆ ಏರಿಸುವ ಕುರಿತು ವ್ಯಾಖ್ಯಾನಿಸಲಾಗಿದ್ದರೂ, ಅದರ ಈಡೇರಿಕೆಗೆ ಬೇಕಾದಂತಹ ಪರಿಣಾಮಕಾರಿ ಕಾರ್ಯಸೂಚಿಗಳೇನೂ ಕಂಡುಬರುತ್ತಿಲ್ಲ. ಹಾಗಾಗಿ ಇದೂ ಕೂಡ ಭರವಸೆಯಾಗಿಯೇ ಉಳಿಯಲಿದೆ.

ಪ್ರಧಾನಿ ಮೋದಿ ಭದ್ರತೆಗೆ 600 ಕೋಟಿ ರೂ. ಮೀಸಲಿಟ್ಟ ಬಜೆಟ್!

ಪಾತಾಳ ಮುಟ್ಟಿರುವ ಆರ್ಥಿಕ ಸ್ಥಿತಿಯನ್ನು ಮೇಲೆತ್ತಲು ಬೇಕಾದ ಇಚ್ಚಾಶಕ್ತಿ ಕೇಂದ್ರ ವಿತ್ತ ಸಚಿವರಲ್ಲಿ ಇಲ್ಲ, ಹಣಕಾಸು ಸಚಿವರು ಕೃಷಿ ಕ್ಷೇತ್ರದ ಅಭಿವೃದ್ಧಿಗೆ 16 ಅಂಶಗಳ ಕಾರ್ಯಕ್ರಮ ಘೋಷಿಸಿದ್ದಾರೆ. ಇದರಲ್ಲಿ 9 ಅಂಶಗಳು ರೈತರ ಜಮೀನನ್ನು ಖಾಸಗಿ ಕಂಪೆನಿಗಳ ಸುಪರ್ದಿಗೆ ಒಳಪಡಿಸುವಂತಿವೆ. ಉದಾಹರಣೆಗೆ ‘ಕೃಷಿ ಉಡಾನ್‌’ ಯೋಜನೆ ಸಣ್ಣಪುಟ್ಟರೈತರಿಗಿಂತ ಕಾರ್ಪೊರೇಟ್‌ ಕಂಪೆನಿಗಳಿಗೆ ಹೆಚ್ಚು ಲಾಭದಾಯಕವಾಗುವಂತಿದೆ ಎಂದರು.

2022ರ ವೇಳೆಗೆ ದೇಶದ ರೈತರ ಆದಾಯವನ್ನು ದುಪ್ಪಟ್ಟು ಮಾಡುವುದಾಗಿ ಪ್ರಧಾನಿ ಹೇಳಿದ್ದರು. ಕಳೆದ ಹಣಕಾಸು ವರ್ಷದಲ್ಲಿ ಕೃಷಿ ಕ್ಷೇತ್ರ ಶೇ. 2.5 ರಷ್ಟುಬೆಳವಣಿಗೆ ಕಂಡಿದೆ. ರೈತರ ಆದಾಯ ದುಪ್ಪಟ್ಟು ಆಗಬೇಕಾದರೆ ಕೃಷಿ ಕ್ಷೇತ್ರ ಕನಿಷ್ಠ ಶೇ. 10 ರಿಂದ 15 ದರದಲ್ಲಿ ಬೆಳವಣಿಗೆ ಆಗಬೇಕು. ಸದ್ಯಕ್ಕೆ ಇದೂ ಕೂಡ ಅಸಾಧ್ಯದ ಮಾತು 5 ಲಕ್ಷ ಕೋಟಿ ರು. ಗಳಷ್ಟುಮಾತ್ರ ಖರ್ಚು ಮಾಡಲಾಗಿದೆ. ಎರಡನೇ ಬಾರಿ ನರೇಂದ್ರ ಮೋದಿಯವರ ಸರ್ಕಾರ ಅಧಿಕಾರಕ್ಕೆ ಬಂದಾಗ ದೇಶದ ಆದಾಯವನ್ನು 5 ಟ್ರಿಲಿಯನ್‌ ಡಾಲರ್‌ಗೆ ಏರಿಸುವುದಾಗಿ ಭರವಸೆ ನೀಡಿದ್ದರು. ಇಂದು ದೇಶದ ಜಿಡಿಪಿ 2.5 ರಷ್ಟಿದೆ, ಈ ಪರಿಸ್ಥಿತಿಯಲ್ಲಿ ಮೋದಿಯವರ ಭರವಸೆ ಈಡೇರುವುದು ಕನಸಿನ ಮಾತು ಎಂದು ತಿವಿದರು.

ಕೃಷಿ ಖಾಸಗೀಕರಣಕ್ಕೆ ಅಸ್ತು:

ಕೃಷಿಗೆ ಸಂಬಂಧಿಸಿದ 16 ಅಂಶಗಳ ಕಾರ್ಯಕ್ರಮಗಳಲ್ಲಿ 9 ಅಂಶಗಳು ‘ಕಾರ್ಪೊರೇಟ್‌ ಫಾರ್ಮಿಂಗ್‌ ಕಡೆಗೆ ಒತ್ತು ನೀಡುತ್ತಿವೆ. ಒಟ್ಟಾರೆ ಕೃಷಿಯನ್ನು ಖಾಸಗೀಕರಣಗೊಳಿಸುವ ಸರ್ಕಾರದ ಉದ್ದೇಶ ಇದರಿಂದ ಸ್ಪಷ್ಟವಾಗುತ್ತಿದೆ. ಕೇಂದ್ರ ಪ್ರಸ್ತಾಪಿಸಿರುವ 3 ಮಾದರಿ ಕಾಯ್ದೆಗಳಾದ ಭೂಮಿ ಗುತ್ತಿಗೆ ಕಾಯ್ದೆ, ಎಪಿಎಂಸಿ ಕಾಯ್ದೆಯಲ್ಲಿ ಅಮೂಲಾಗ್ರ ಬದಲಾವಣೆ ಮಾಡುವ ಹೊಸ ಮಾರ್ಕೆಟಿಂಗ್‌ ಕಾಯ್ದೆ ಮತ್ತು ಕಾಂಟ್ರಾಕ್ಟ್ ಫಾರ್ಮಿಂಗ್‌ (ಕಾರ್ಪೋರೇಟ್‌ ಫಾರ್ಮಿಂಗ್‌) ಕಾಯ್ದೆಗಳನ್ನು ರಾಜ್ಯ ಸರ್ಕಾರಗಳು ಒಪ್ಪಿಕೊಳ್ಳಲೇಬೇಕು ಎಂದು ಕೇಂದ್ರ ಹೇಳುತ್ತಿದೆ. ಇದು ತುಂಬಾ ಅಪಾಯಕಾರಿ ಎಂದರು.

ಕಳೆದ ಬಾರಿಯ ಬಜೆಟ್‌ನಲ್ಲಿ ಸಾರ್ವಜನಿಕ ವಲಯಗಳಿಗೆ ಒಟ್ಟು ಬಜೆಟ್‌ ಗಾತ್ರದ ಶೇ. 0.90 ರಷ್ಟುಅನುದಾನ ವಿನಿಯೋಗಿಸಲಾಗಿತ್ತು, ಈ ಬಾರಿ ಅದು ಶೇ. 0.96ಗೆ ಏರಿಕೆ ಕಂಡಿದೆ. ಗ್ರಾಮೀಣಾಭಿವೃದ್ಧಿಗೆ ಕಳೆದ ಬಾರಿ ಶೇ. 1.21 ಅನುದಾನ ಮೀಸಲಿತ್ತು. ಈ ಬಾರಿ ಶೇ. 1.23 ಗೆ ಹೆಚ್ಚಿಸಲಾಗಿದೆ. ಈ ವಲಯಗಳನ್ನು ಹೀಗೆ ಕಡೆಗಣಿಸಬಾರದಿತ್ತು.

ಬಜೆಟ್‌ನಲ್ಲಿ ಮೋದಿ ಭರವಸೆ ಈಡೇರಿಸಿಲ್ಲ: ಈಶ್ವರ ಖಂಡ್ರೆ

ಈ ಬಜೆಟ್‌ನಲ್ಲಿ ಕೃಷಿಗೆ ಅತ್ಯಧಿಕ ಮಹತ್ವ ನೀಡುತ್ತಿದ್ದೇವೆ ಎಂದು ಕೇಂದ್ರ ಸರ್ಕಾರ ಹೇಳಿದರೂ ಕೂಡ ಕೃಷಿಗೆ ಒಟ್ಟು ಬಜೆಟ್‌ ಅನುದಾನದಲ್ಲಿ ಮೀಸಲಾದ ಪಾಲು ಕೇವಲ ಶೇ. 1.50 ಮಾತ್ರ. ಕಳೆದ ಬಾರಿ ಇದು ಶೇ. 1.46 ಇತ್ತು. ಈ ಬಾರಿಯೂ ಕೃಷಿ ಕಡೆಗಣಿಸಲ್ಪಟ್ಟಿರುವುದು ದುರದೃಷ್ಟಕರ ಎಂದರು.

ಗ್ರಾಮೀಣ ಭಾಗದ ನಿರುದ್ಯೋಗ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮನರೇಗಾ ಯೋಜನೆಗೆ 10 ಸಾವಿರ ಕೋಟಿ ರು. ಹಣ ಕಡಿತಗೊಳಿಸಲಾಗಿದೆ. ಕಳೆದ ವರ್ಷ 71,000 ಕೋಟಿ ರು. ನೀಡಿದ್ದರೆ. ಈ ಬಾರಿ 61,000 ಕೋಟಿ ರು. ನಿಗದಿಗೊಳಿಸಲಾಗಿದೆ. ಇದರಿಂದ ಗ್ರಾಮೀಣ ಭಾರತ ಇನ್ನಷ್ಟುಸೊರಗಿಹೋಗಲಿದೆ.

ದೇಶದ ಅಭಿವೃದ್ಧಿ ದರ 42 ವರ್ಷಗಳಷ್ಟುಹಿಂದಕ್ಕೆ ಹೋಗಿದೆ. ತೆರಿಗೆ ಸಂಗ್ರಹ ಎರಡು ಲಕ್ಷ ಕೋಟಿ ರು. ಕಡಿಮೆಯಾಗಿದೆ. ಕಾರ್ಪೋರೇಟ್‌ ತೆರಿಗೆ ಶೇ. 15ರಷ್ಟುಕಡಿಮೆಯಾಗಿದೆ. ಸಂಪನ್ಮೂಲ ಸಂಗ್ರಹದ ಯಾವ ಹೊಸ ಮಾರ್ಗಗಳ ಬಗ್ಗೆಯೂ ಬಜೆಟ್‌ನಲ್ಲಿ ಪ್ರಸ್ತಾಪ ಇಲ್ಲ. ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರಸಕ್ತ ಬಜೆಟ್‌ನಲ್ಲಿ ಎಲ್‌ಐಸಿ ಶೇರುಗಳನ್ನು ಸಹ ಮಾರಾಟ ಮಾಡಲು ನಿರ್ಧರಿಸಲಾಗಿದೆ. ಇದೊಂದು ರೀತಿ ಕುತ್ತಿಗೆಯಲ್ಲಿರುವ ತಾಳಿ ಮಾರಾಟಕ್ಕಿಟ್ಟಪರಿಸ್ಥಿತಿ ಎಂದು ವಿಮರ್ಷಿಸಿದರು.

ಬಜೆಟ್‌ನಲ್ಲಿ ಕರಾವಳಿಗೆ ಏನು ಲಾಭ?

ದೇಶದ ಸದ್ಯದ ಆರ್ಥಿಕ ವ್ಯವಸ್ಥೆ ಎಷ್ಟುಹದಗೆಟ್ಟಿದೆ ಎಂಬುದುಕ್ಕೆ ಸರ್ಕಾರದ ಈ ನಿರ್ಧಾರ ಸಾಕ್ಷಿ. ವಿತ್ತೀಯ ಶಿಸ್ತು ಕಳೆದ ಬಾರಿ ಬಜೆಟ್‌ನಲ್ಲಿ 3.3 ಎಂದು ನಿಗದಿಪಡಿಸಲಾಗಿತ್ತು. ವರ್ಷಾಂತ್ಯದ ವೇಳೆಗೆ ಇದು 3.6 ತಲುಪಿತ್ತು. ಬರುವ ವರ್ಷಕ್ಕೆ ಸರ್ಕಾರವೇ 3.5 ಎಂದು ಗುರಿ ಇಟ್ಟುಕೊಂಡಿದೆ. ಅಂದರೆ ಈಗಿರುವ ಸಾಲದ ಜೊತೆಗೆ ಇನ್ನಷ್ಟುಸಾಲ ಮಾಡಿ ದೇಶವನ್ನು ದಿವಾಳಿ ಮಾಡಲು ಸರ್ಕಾರ ನಿರ್ಧರಿಸಿದಂತಿದೆ ಎಂದು ಭವಿಷ್ಯ ನುಡಿದರು.

ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ, ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಡಾ. ಪುಷ್ಪ ಅಮರನಾಥ್‌, ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ, ಜಿಪಂ ಸದಸ್ಯ ಡಿ. ರವಿಶಂಕರ್‌, ಪಾಲಿಕೆ ಸದಸ್ಯ ಜೆ. ಗೋಪಿ, ಮುಖಂಡರಾದ ಕೋಟೆಹುಂಡಿ ಮಹದೇವು, ಹರೀಶ್‌ ಇದ್ದರು.

ಇಡೀ ದೇಶದ ರೈತರು ಸಾಲದ ಬಲೆಯಲ್ಲಿ ಸಿಕ್ಕಿಹಾಕಿಕೊಂಡು ನರಳಾಡುತ್ತಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ರೈತರ ಸಾಲವನ್ನು ಮನ್ನಾ ಮಾಡಬೇಕು ಎಂಬುದು ನಮ್ಮದು ಹಳೆಯ ಬೇಡಿಕೆ. ಕಳೆದ ಆರು ವರ್ಷಗಳಿಂದ ಇದನ್ನು ಕೇಳುತ್ತಾ ಬಂದಿದ್ದೇವೆ. ಈ ಬಜೆಟ್‌ನಲ್ಲಿಯೂ ಆ ಬಗ್ಗೆ ಉತ್ತರ ಇಲ್ಲ. 16 ಅಂಶಗಳ ಬಹುತೇಕ ಕಾರ್ಯಕ್ರಮಗಳು ಸಾಮಾನ್ಯ ರೈತರಿಗೆ ಸಂಬಂಧಿಸಿದ್ದಲ್ಲ. 162 ಎಂಟಿ ಸಾಮರ್ಥ್ಯದ ಕೋಲ್ಡ್‌ ಸ್ಟೋರೇಜ್‌ಗಳ ಮ್ಯಾಪಿಂಗ್‌ ಮತ್ತು ಜಿಯೊಟ್ಯಾಗಿಂಗ್‌ ಇದರಿಂದ ಬಡ ರೈತನಿಗೆ ಏನು ಲಾಭ? ರೆಫ್ರಿಜರೇಟೇಡ್‌ ರೈಲುಗಳು, ಕೃಷಿ ಉಡಾನ್‌ ವಿಮಾನಗಳು ಯಾವ ರೈತರ ಅನುಕೂಲಕ್ಕಾಗಿ ತಿಳಿಯುತ್ತಿಲ್ಲ.

ಸಬ್‌ಅರ್ಬನ್‌ ನಗೆಪಾಟಲು

ಬೆಂಗಳೂರು ನಗರದ ಉಪನಗರ ರೈಲು ಯೋಜನೆ ಬಗ್ಗೆ ಕಳೆದ ಬಜೆಟ್‌ನಲ್ಲಿಯೇ ಪ್ರಸ್ತಾಪವಿದ್ದರೂ ಈವರೆಗೂ ಒಂದು ಸ್ಟೇಷನ್‌ ಆಗಲಿ, ಹಳಿ ನಿರ್ಮಾಣ ಕಾರ್ಯವಾಗಲಿ ಆಗಿಲ್ಲ. ಮತ್ತೆ ಈ ಬಾರಿಯೂ ಅದೇ ರಾಗ, ಅದೇ ಹಾಡು. ಈ ಬಜೆಟ್‌ನಲ್ಲಿ ಕೂಡ ಅನುದಾನವನ್ನು ಮೀಸಲಿಟ್ಟಿಲ್ಲ ಜೊತೆಗೆ ಅನುದಾನದ ಬಗ್ಗೆ ಸ್ಪಷ್ಟತೆ ಕೂಡ ಇಲ್ಲ. ಈ ಯೋಜನೆ ಪುನಃ ನಗೆಪಾಟಲೀಗೀಡಾಗಿದೆ ಎಂದರು.

Follow Us:
Download App:
  • android
  • ios