ದೇವರಾಜೇಗೌಡ ಕುಮಾರಸ್ವಾಮಿ ಕೃಪಾಪೋಷಿತ ನಾಟಕ ಮಂಡಳಿ ಸದಸ್ಯ: ಶಾಸಕ ಉದಯ್ ಗೌಡ
ಪ್ರಜ್ವಲ್ ಪೆನ್‌ಡ್ರೈವ್ ಕೇಸ್‌ನಲ್ಲಿ ಡಿ.ಕೆ. ಶಿವಕುಮಾರ್ ಹೆಸರೇಳುತ್ತಿರುವ ವಕೀಲ ದೇವರಾಜೇಗೌಡ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಕೃಪಾಪೋಷಿತ ನಾಟಕ ಮಂಡಳಿಯ ಸದಸ್ಯ ಎಂದು ಶಾಸಕ ಉದಯ್ ಗೌಡ ಆರೋಪ ಮಾಡಿದ್ದಾರೆ.
ಬೆಂಗಳೂರು (ಮೇ 18): ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದೆನ್ನಲಾದ ಅಶ್ಲೀಲ ವಿಡಿಯೋ ಪೆನ್‌ಡ್ರೈವ್ ಬಿಡುಗಡೆ ಮಾಡಿದ್ದೇ ಡಿಸಿಎಂ ಡಿ.ಕೆ. ಶಿವಕುಮಾರ್, ಇದನ್ನು ಮುಚ್ಚಿಹಾಕಲು 100 ಕೋಟಿ ರೂ. ಆಫರ್ ಮಾಡಿದ್ದರು ಎಂದು ಹೇಳುತ್ತಿರುವ ವಕೀಲ ದೇವರಾಜೇಗೌಡ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಕೃಪಾಪೋಷಿತ ನಾಟಕ ಮಂಡಳಿಯ ಸದಸ್ಯನಾಗಿದ್ದಾನೆ ಎಂದು ಮದ್ದೂರು ಶಾಸಕ ಕದಲೂರು ಉದಯ್ ಗೌಡ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಕೀಲ ದೇವರಾಜೇಗೌಡ ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಸರ್ಕಾರ ವಿರುದ್ಧ ಆರೋಪ ಮಾಡಿದ ವಿಚಾರದ ಬಗ್ಗೆ ಮಾತನಾಡಿ, ನೋಡಿ ಅವನು ಕುಮಾರಸ್ವಾಮಿ ಕೃಪಾಪೋಷಿತ ನಾಟಕ ಮಂಡಳಿಯ ಒಬ್ಬ ಸದಸ್ಯನಾಗಿದ್ದಾನೆ. 100 ಕೋಟಿ ರೂ. ಆಫರ್ ಕೊಟ್ಟಿದ್ದರೆ, ಇಷ್ಟು ದಿನ ಏನು ಬಾಯಿಗೆ ಮಣ್ಣು ತುಂಬಿಕೊಂಡಿದ್ದನಾ? ಜೈಲಿಗೆ ಹೋದ ಮೇಲೆ ಯಾಕೆ ಈ ವಿಚಾರ ಹೇಳಬೇಕಿತ್ತು? ಅಷ್ಟು ಸಾಚಾ ಇದ್ದ ಮೇಲೆ ಅವನು ಮಾಡಿದಾಗಲೇ ಕಂಪ್ಲೇಟ್ ಮಾಡಬಹುದಿತ್ತು. ಅವನಿಗೆ ತಿಳುವಳಿಕೆ ಇಲ್ವಾ ಎಂದು ಕಿಡಿಕಾರಿದ್ದಾರೆ.
ಪೆನ್‌ಡ್ರೈವ್ ಕೇಸ್‌ನಲ್ಲಿ ಹೆಚ್‌ಡಿಕೆ ಹೆಸರು ಹೇಳಲು ಡಿಕೆಶಿ 100 ಕೋಟಿ ರೂ ಆಫರ್, ದೇವರಾಜ್ ಸ್ಫೋಟಕ ಹೇಳಿಕೆ!
ದೇವರಾಜೇಗೌಡ ಅವನೊಬ್ಬ ವಕೀಲ, ಬಿಜೆಪಿ ಪಾರ್ಟಿಯಿಂದ ಸ್ಪರ್ಧೆ ಮಾಡಿದವನು. ಅವನ ತಪ್ಪು ಮುಚ್ಚಿಕೊಳ್ಳುವುದಕ್ಕೆ ಬೇರೆಯವರ ಮೇಲೆ ಮಾತನಾಡಿದ್ರೆ ಹೇಗೆ? ನೂರು ಕೋಟಿ ರೂಪಾಯಿಗೆ ತೂಕ ಎಷ್ಟಿದೆ ಗೊತ್ತಾ ಅವನಿಗೆ..? ಜನ ಏನು ದಡ್ಡರಲ್ಲ. ಇವರೆಲ್ಲಾ ಪ್ಲ್ಯಾನ್ ಮಾಡಿ ಅಲೀಗೇಶನ್ ಮಾಡ್ತಾ ಇದ್ದಾರೆ. ಡ್ಯಾಕುಮೆಂಟ್ ಇದ್ದಿದ್ರೆ ಕೊಟ್ಟು ಹೋಗಬಹುದಿತ್ತು. ಇಷ್ಟು ದಿನ ಏನು ಮಾಡ್ತಾ ಇದ್ದ? ಜೈಲಿಗೆ ಹೋದಮೇಲೆ ಈಗ ಹೇಳೋದಾ? ದುಡ್ಡಿಗೆ ಬೆಲೆ ಇಲ್ವಾ ಹೇಳಿ. ನೀವು ಮಾಧ್ಯಮದವರು ಬಿಟ್ಟಾಕಿ ಇವರೆಲ್ಲಾ ಚಿಲ್ಲರೆಗಳು ಎಂದು ಶಾಸಕ ಉದಯ್‌ಗೌಡ ಹೇಳಿದರು.
ದೇವರಾಜೇಗೌಡ ಹೇಳಿದ್ದೇನು?
ಪೊಲೀಸರ ವಶದಲ್ಲಿರುವಾಗಲೇ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದ ವಕೀಲ ದೇವೇರಾಜೇಗೌಡ ಅವರು, ಪ್ರಜ್ವಲ್ ರೇವಣ್ಣನ ಅಶ್ಲೀಲ ವಿಡಿಯೋ ಪೆನ್‌ಡ್ರೈವ್ ರೆಡಿ ಮಾಡಿದ್ದೇ ಡಿಕೆ ಶಿವಕುಮಾರ್ ಎಂದು ಆರೋಪಿಸಿದ್ದರು. ಈ ಪೆನ್‌ಡ್ರೈವ್ ಪ್ರಕರಣಕ್ಕೆ ನಾಲ್ವರು ಸಚಿವರನ್ನು ನೇಮಕ ಮಾಡಿದ್ದರು. ಚೆಲುವರಾಯ ಸ್ವಾಮಿ, ಕೃಷ್ಣಬೈರೇಗೌಡ, ಪ್ರಿಯಾಂಕ ಖರ್ಗೆ ಹಾಗೂ ಮತ್ತೊಬ್ಬ ಸಚಿವರ ತಂಡ ರಚಿಸಿದರು. ಬಳಿಕ ನಿರಂತರವಾಗಿ ನನ್ನ ಮೇಲೆ ಒತ್ತಡ ತರುವ ಪ್ರಯತ್ನವನ್ನು ಡಿಕೆ ಶಿವಕುಮಾರ್ ಮಾಡಿದ್ದಾರೆ ಎಂದು ದೇವೇರಾಜೇಗೌಡ ಹೇಳಿದ್ದಾರೆ.
ಪ್ರಜ್ವಲ್ ರೇವಣ್ಣ ಪ್ರಕರಣದ ತನಿಖೆ ಸರಿಯಾದ ದಿಕ್ಕಿನಲ್ಲಿ ನಡೀತಿದೆ: ಸಿಎಂ
ಪ್ರಧಾನಿ ಮೋದಿ, ಬಿಜೆಪಿ ಹಾಗೂ ಕುಮಾರಸ್ವಾಮಿಗೆ ಕೆಟ್ಟ ಹೆಸರು ತರಲು ಈ ಪ್ರಕರಣವನ್ನು ಮಾಡಿದ್ದಾರೆ. 100 ಕೋಟಿ ರೂಪಾಯಿ ಆಫರ್ ನೀಡಿದ್ದರು. 5 ಕೋಟಿ ರೂಪಾಯಿ ಅಡ್ವಾನ್ಸ್ ಮೊತ್ತವನ್ನು ಬೌರಿಂಗ್ ಕ್ಲಬ್‌ನ 110 ರೂಂ ನಂಬರ್‌ಗೆ ಕಳುಹಿಸಿದ್ದರು. ಚೆನ್ನರಾಯಪಟ್ಟಣದ ಗೋಪಾಲಸ್ವಾಮಿಯನ್ನು ಸಂಧಾನಕ್ಕೆ ಕಳುಹಿಸಿದ್ದರು. ಗೋಪಾಲಸ್ವಾಮಿ ಬಳಿ 5 ಕೋಟಿ ರೂಪಾಯಿ ನಗದು ಕೊಟ್ಟು ಕಳುಹಿಸಿದ್ದರು. ನಾಯಕ ಶಿವರಾಮೇ ಗೌಡ ಮೂಲಕ ನನಗೆ 100 ಕೋಟಿ ರೂಪಾಯಿ ಆಫರ್ ನೀಡಲಾಗಿತ್ತು ಎಂದಿದ್ದಾರೆ. ಡಿಕೆ ಶಿವಕುಮಾರ್ ಅವರ ಪ್ರಮುಖ ಉದ್ದೇಶ ಎಂದರೆ, ಹೆಚ್‌ಡಿ ಕುಮಾರಸ್ವಾಮಿ ನಾಯಕತ್ವ ಅಂತ್ಯಗೊಳಿಸಲು ಪ್ರಯತ್ನಿಸಿದ್ದಾರೆ ಎಂದು ದೇವೇರಾಜೆ ಗೌಡ ಆರೋಪ ಮಾಡಿದ್ದರು.