ಬೆಳಗಾವಿ (ಏ.15):  ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಬುಧವಾರ ಭರ್ಜರಿ ಪ್ರಚಾರ ನಡೆಸಿದ್ದಾರೆ.

 ದಿನವಿಡೀ ಪಕ್ಷದ ಅಭ್ಯರ್ಥಿ ಪರ ಬಿರುಸಿನ ಪ್ರಚಾರ ನಡೆಸಿದ ಅವರು, ಗೋಕಾಕ್‌ನಲ್ಲಿ ಬೃಹತ್‌ ಶೋ ನಡೆಸಿ ಮತ ಯಾಚಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪಕ್ಷದ ಅಭ್ಯರ್ಥಿ ಮಂಗಲ ಅಂಗಡಿ ಅವರು ನಾಲ್ಕು ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಉಪ ಚುನಾವಣೆ : ಮಸ್ಕಿಯಲ್ಲಿ ಕಮಲ ಅರಳುವುದು ಖಚಿತ ...

ಈಗಾಗಲೇ ಕ್ಷೇತ್ರದಲ್ಲಿ ಬಿಜೆಪಿ ಪರ ಉತ್ತಮ ವಾತಾವರಣ ಇದೆ. ಬೆಳಗಾವಿ ಲೋಕಸಭೆಗೆ ಮೊದಲ ಬಾರಿ ಮಹಿಳೆಯೊಬ್ಬರಿಗೆ ಬಿಜೆಪಿಯಿಂದ ಟಿಕೆಟ್‌ ನೀಡಿದ್ದೇವೆ. ಗೋಕಾಕ ಮತ್ತು ಅರಭಾವಿಯಲ್ಲೂ ಪಕ್ಷದ ಪರ ಉತ್ತಮ ವಾತಾವರಣ ಇದೆ. ರಮೇಶ್‌ ಜಾರಕಿಹೊಳಿ ಸಹೋದರರು ಕೂಡ ಸ್ಪಂದಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು ಉತ್ಸಾಹದಿಂದ ಪ್ರಚಾರ ನಡೆಸುತ್ತಿದ್ದಾರೆ ಎಂದರು.

ಕಾಂಗ್ರೆಸ್‌ ಮುಳುಗುವ ಹಡಗು. ಆದರೆ, ನಾವು ಶಕ್ತಿ ಮೀರಿ ರಾಜ್ಯ ಅಭಿವೃದ್ಧಿ ಮಾಡುತ್ತಿದ್ದೇವೆ. ಬೆಳಗಾವಿಯನ್ನು ಮಾದರಿ ಜಿಲ್ಲೆಯಾಗಿಸಲು ಎಲ್ಲ ಕ್ರಮ ಕೈಗೊಳ್ಳುತ್ತೇವೆ. ಬಾಲಚಂದ್ರಜಾರಕಿಹೊಳಿ ಅವರು ಪ್ರಚಾರಕ್ಕೆ ಬಂದದ್ದು ನಮಗೆ ಆನೆ ಬಲಬಂದಂತಾಗಿದೆ ಎಂದರು.