ವರದಿ :  ರಾಮಕೃಷ್ಣ ದಾಸರಿ

 ರಾಯಚೂರು (ಏ.15):  ಮಸ್ಕಿ ವಿಧಾನಸಭಾ ಉಪಚುನಾವಣೆ ಗೆಲುವು ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್‌ ಎರಡಕ್ಕೂ ಪ್ರತಿಷ್ಠೆಯಾಗಿದೆ. ಹೀಗಾಗಿ ಮಸ್ಕಿ ವಿಧಾನಸಭಾ ಕ್ಷೇತ್ರ ಗೆದ್ದೇ ತೀರಬೇಕೆಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಕ್ಷೇತ್ರದ ಉಸ್ತುವಾರಿಗಳಲ್ಲಿ ಒಬ್ಬರಾಗಿರುವ ಬಿ.ವೈ.ವಿಜಯೇಂದ್ರ ಕ್ಷೇತ್ರದಲ್ಲಿಯೇ ಎರಡು ವಾರ ಬೀಡುಬಿಟ್ಟು ಕ್ಷೇತ್ರ ಸಂಚಾರ ನಡೆಸಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್‌ ಪರ ಮತಯಾಚನೆ, ಪ್ರಚಾರ ಸಭೆ, ಸಮಾರಂಭಗಳು, ಸಮಾವೇಶಗಳನ್ನು ನಡೆಸಿದ್ದು ಈ ಸಮಯದಲ್ಲಿ ಅವರು ನೀಡಿದ ವಿಶೇಷ ಸಂದರ್ಶನ ಇಲ್ಲಿದೆ.

* ಮಸ್ಕಿ ಉಪಚುನಾವಣೆ ಉಸ್ತುವಾರಿ ವಹಿಸಿಕೊಂಡು ಪ್ರಚಾರ ನಡೆಸಿದ್ದೀರಿ. ಮತದಾರರ ಸ್ಪಂದನೆ ಹೇಗಿದೆ?

- ನಾನು ಹೋದ ಕಡೆಗಳಲ್ಲಿ ಅದ್ಧೂರಿಯಾಗಿ ಜನ ಸ್ವಾಗತ ಕೋರುತ್ತಿದ್ದಾರೆ. ಎಲ್ಲೆಡೆ ನಮ್ಮ ಸಿಎಂ ಯಡಿಯೂರಪ್ಪನ ಮಗ ಬಂದ್ರು ಅಂತ ಪ್ರೀತಿ ವಿಶ್ವಾಸದಿಂದ ನೋಡುತ್ತಿದ್ದಾರೆ. ಮತದಾರರಲ್ಲಿ ಉತ್ಸಾಹ ಹೆಚ್ಚಾಗಿದೆ. ಯುವಕರು ಕುಣಿದು ಕುಪ್ಪಳಿಸುತ್ತಿದ್ದಾರೆ. ಮತದಾರರು ನಮಗೆ ಆರ್ಶಿರ್ವಾದ ಮಾಡುತ್ತಾರೆ. ನಾವು 20-25 ಸಾವಿರ ಮತಗಳ ಅಂತರದಿಂದ ಮಸ್ಕಿಯಲ್ಲಿ ಕಮಲ ಅರಳಿಸುತ್ತೇವೆ.

* ಪ್ರಚಾರದ ವೇಳೆ ಕಂಡು ಬಂದ ಕ್ಷೇತ್ರದ ಸಮಸ್ಯೆಗಳು ಏನು?

- ಈ ಕ್ಷೇತ್ರದಲ್ಲಿ ಬಡತನ, ನೀರುದ್ಯೋಗ ಸಮಸ್ಯೆ ಇದೆ. ಯುವಕರು ಡಿಗ್ರಿ ಆಗಿದ್ರೂ ಕೆಲಸಗಳು ಇಲ್ಲದೆ ಸಿಟಿಗಳಿಗೆ ಗುಳೆ ಹೋಗುವುದು ಕಂಡು ಬಂದಿದೆ. ಅದರಲ್ಲೂ ಮಹಿಳೆಯರು ಕೆಲಸವಿಲ್ಲದೆ ಮನೆಯಲ್ಲಿಯೇ ಇರುವುದು ಸಹ ಕ್ಷೇತ್ರದಲ್ಲಿ ಇದೆ. ಹೀಗಾಗಿ ಯಡಿಯೂರಪ್ಪ ಹಾಗೂ ಮೋದಿ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳ ಬಳಕೆ ಮಾಡಿಕೊಳ್ಳಲು ಕ್ಷೇತ್ರ ಜನರಿಗೆ ತಿಳಿಸುತ್ತಾ ಮತಯಾಚನೆ ಮಾಡುತ್ತಿದ್ದೇವೆ.

* ಬಿಜೆಪಿ ಅಭ್ಯರ್ಥಿ ಗೆದ್ದರೆ ಈ ಕ್ಷೇತ್ರದ ಅಭಿವೃದ್ಧಿಗೆ ಏನೆಲ್ಲ ಮಾಡುತ್ತೀರಿ?

- ಕಳೆದ 10 ದಿನಗಳಿಂದ ಮಸ್ಕಿ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದೇನೆ. ಇಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್‌ ಗೆಲ್ಲುತ್ತಾರೆ. ಮಸ್ಕಿ ಕ್ಷೇತ್ರದ ನೀರಾವರಿ ಸಮಸ್ಯೆ, ಮಹಿಳೆಯರಿಗಾಗಿ ಗಾರ್ಮೆಂಟ್ಸ್‌ ಕಂಪನಿಗಳು ತರುವ ಕೆಲಸ ಮಾಡುತ್ತೇನೆ. ಯುವಕರಿಗೆ ವಿವಿಧ ಕೌಶಲ್ಯ ತರಬೇತಿ ನೀಡಿ ಸ್ಥಳೀಯ ಮಟ್ಟದಲ್ಲೇ ಯುವಕರು ಕೆಲಸ ಮಾಡುವಂತೆ ಮಾಡುವ ಚಿಂತನೆ ಇದೆ.

* ಕ್ಷೇತ್ರದಲ್ಲಿ ಬಿಜೆಪಿಗಿಂತ ಪ್ರತಾಪ್‌ಗೌಡರ ವಿರೋಧಿ ಅಲೆ ಹೆಚ್ಚಾಗಿದೆ. ಅದನ್ನು ಹೇಗೆ ದೂರ ಮಾಡಿ ಬಿಜೆಪಿ ಗೆಲ್ಲಿಸುತ್ತೀರಿ?

- ಯಾವುದೇ ವಿಧಾನಸಭಾ ಉಪಚುನಾವಣೆ ನಡೆದಾಗ ಅಭ್ಯರ್ಥಿ ಪರ ವಿರೋಧದ ಅಲೆ ಇರುವುದು ಸಹಜ. ಆದರೆ ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸರ್ಕಾರ ಬಂದ ಮೇಲೆ 1500 ಕೋಟಿ ರು.ಗಳನ್ನು ಕ್ಷೇತ್ರದ ಅಭಿವೃದ್ಧಿಗೆ ನೀಡಿದ್ದೇವೆ. ಪ್ರಧಾನಿ ಮೋದಿ ಮತ್ತು ಯಡಿಯೂರಪ್ಪ ಸರ್ಕಾರ ಮಾಡಿದ ಸಾಧನೆಗಳು ಮತ್ತು ಈ ಮಸ್ಕಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಮತ ಕೇಳುತ್ತೇವೆ. ಯಾವುದೇ ಅಲೆಯೂ ಬಿಜೆಪಿ ಗೆಲುವಿಗೆ ಅಡ್ಡಿಯಾಗುವುದಿಲ್ಲ. 20ರಿಂದ 25 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇವೆ.

* ನೀವು ಈ ಸರ್ಕಾರದ ಸೂಪರ್‌ ಸಿಎಂ ಎಂಬ ಆರೋಪವನ್ನು ಪ್ರತಿಪಕ್ಷ ಕಾಂಗ್ರೆಸ್‌ ಮಾಡುತ್ತಿದೆ?

- ವಿರೋಧ ಪಕ್ಷದವರು ಆರೋಪ ಮಾಡುವುದು ಸಹಜ. ನಾನು ಪಕ್ಷದ ಜವಾಬ್ದಾರಿ ವಹಿಸಿಕೊಂಡು ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ಬಂದಿದ್ದೇನೆ. ನಾನು ಬಂದಿರುವುದರಿಂದ ಕಾಂಗ್ರೆಸ್‌ ನಾಯಕರಿಗೆ ಸೋಲಿನ ಭಯ ಶುರುವಾಗಿದೆ. ಕಾಂಗ್ರೆಸ್‌ ನಾಯಕರು ಹತಾಶೆಗೊಂಡಿದ್ದಾರೆ. ಸೋಲುತ್ತೇವೆ ಎಂಬ ಭಯದಿಂದ ಹೀಗೆ ಆರೋಪ ಮಾಡುತ್ತಿದ್ದಾರೆ.

* ಕ್ಷೇತ್ರದಲ್ಲಿ 5ಎ ಕಾಲುವೆ ಹೋರಾಟ ನಡೆದಿದೆ. ಗುಳೆ ಸಮಸ್ಯೆ ಇದೆ. ಮೂಲ ಸೌಕರ್ಯಗಳು ಇಲ್ಲ. ಈ ಎಲ್ಲಾ ಸಮಸ್ಯೆಗಳಿಗೆ ಬಿಜೆಪಿ ಹೇಗೆ ಪರಿಹಾರ ಒದಗಿಸುತ್ತದೆ?

- 5ಎ ಕಾಲುವೆ ಬಗ್ಗೆ ಚುನಾವಣೆ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಾತನಾಡುತ್ತಾರೆ. ರೈತರಿಗೆ ನೀರು ಕೊಡುವ ವ್ಯವಸ್ಥೆ ನಮ್ಮ ಸರ್ಕಾರ ಮಾಡೇ ಮಾಡುತ್ತದೆ. ಈ ಹಿಂದೆಯೂ ನೀರಾವರಿಗೆ ಅತೀ ಹೆಚ್ಚು ಒತ್ತು ನೀಡಿದ್ದರೆ ಅದು ಯಡಿಯೂರಪ್ಪ ಸರ್ಕಾರ. ಇನ್ನು ಗುಳೆ ಸಮಸ್ಯೆಗೂ ನಮ್ಮ ಸರ್ಕಾರ ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಸೃಷ್ಟಿಸಲು ಒತ್ತು ನೀಡಲಿದೆ. ಮೂಲಭೂತ ಸಮಸ್ಯೆಗಳು ಕ್ಷೇತ್ರದಲ್ಲಿ ಇರುವುದು ನಾನು ಕೂಡ ಗಮನಿಸಿದ್ದೇನೆ. ಈ ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನಮ್ಮ ಗುರಿ.

* ಜಾತಿ ಲೆಕ್ಕಾಚಾರ ಕೆಲಸ ಮಾಡುತ್ತಾ? 

- ನಾವು ಜಾತಿ ಲೆಕ್ಕಾಚಾರ ಇಟ್ಟುಕೊಂಡು ಚುನಾವಣೆ ಮಾಡುವುದಿಲ್ಲ. ಹೀಗಾಗಿ ಎಲ್ಲಾ ಸಮುದಾಯಗಳನ್ನು ಒಂದು ಗೂಡಿಸುವ ಕೆಲಸ ಮಾಡಿದ್ದೇವೆ. ಎಲ್ಲಾ ಸಮುದಾಯಗಳ ಜೊತೆಗೆ ಸಭೆಗಳು ಸಹ ಮಾಡಿದ್ದೇವೆ. ಹೀಗಾಗಿ ಎಲ್ಲರೂ ಬಿಜೆಪಿಗೆ ಆರ್ಶಿವಾದ ಮಾಡುತ್ತಾರೆ ಎಂಬ ವಿಶ್ವಾಸವಿದೆ.