ಜಗದೀಶ ವಿರಕ್ತಮಠ 

ಬೆಳಗಾವಿ(ಏ.13): ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಸುರೇಶ್‌ ಅಂಗಡಿ ಅವರ ಅಕಾಲಿಕ ನಿಧನದಿಂದಾಗಿ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದ್ದು ಎರಡು ರಾಷ್ಟ್ರೀಯ ಪಕ್ಷಗಳ ಮಧ್ಯೆ ನೇರ ಪೈಪೋಟಿ ಕಂಡುಬಂದಿದೆ. ಕ್ಷೇತ್ರದಲ್ಲಿ ಸಂಸದರಾಗಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನೇ ಅಸ್ತ್ರವಾಗಿಸಿಕೊಂಡಿರುವ ಬಿಜೆಪಿ ಅಭ್ಯರ್ಥಿ ಬಿರುಸಿನ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಈಗಾಗಲೇ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಹಿರಿಯ ನಾಯಕರು ಅಬ್ಬರದ ಪ್ರಚಾರ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿ ಕನ್ನಡಪ್ರಭ ನಡೆಸಿದ ಸಂದರ್ಶನದಲ್ಲಿ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

ಇಲ್ಲಿಯವರೆಗೂ ಕುಟುಂಬ ನಿರ್ವಹಣೆ ಜವಾಬ್ದಾರಿ ಹೊತ್ತಿದ್ದ ತಾವು ಅನಿವಾರ್ಯವಾಗಿ ರಾಜಕೀಯಕ್ಕೆ ಬರಬೇಕಾಯಿತು. ಏನನ್ನಿಸುತ್ತಿದೆ?

ಅನಿವಾರ್ಯತೆ ಅರಿತೇ ರಾಜಕೀಯಕ್ಕೆ ಬರಬೇಕಾಯಿತು. ಕುಟುಂಬದವರ ಜತೆ ಜೊತೆಗೆ ಪತಿ ದಿ.ಸುರೇಶ್‌ ಅಂಗಡಿ ಅವರ ರಾಜಕೀಯ ಆಗುಹೋಗುಗಳನ್ನು ಅತ್ಯಂತ ಹತ್ತಿರದಿಂದ ಅರಿತಿದ್ದೇನೆ. ಜನರ ಪ್ರಬಲ ಪ್ರೀತಿ ವಿಶ್ವಾಸವೇ ನನ್ನ ರಕ್ಷಾ ಕವಚವಾಗಿದೆ.

ಬೆಳಗಾವಿ ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿ ವಿರುದ್ಧ ಕನ್ನಡಿಗರು ಕಿಡಿ

ಕಾಂಗ್ರೆಸ್‌ನಿಂದ ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿಸಿದ್ದಾರೆ. ಅವರನ್ನು ಎದುರಿಸಲು ಏನು ಯೋಜನೆ ಸಿದ್ಧಪಡಿಸಿಕೊಂಡಿದ್ದೀರಿ?

ಪಕ್ಷದ ಪ್ರಮುಖರು ಅಗತ್ಯ ಮಾರ್ಗದರ್ಶನ ನೀಡುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಜನಪರ, ದೇಶದಲ್ಲಿನ ಅಭಿವೃದ್ಧಿಯ ಕಾರ್ಯಕ್ರಮಗಳೇ ನಮ್ಮ ಗೆಲುವಿಗೆ ಆಧಾರ. ಕಾಂಗ್ರೆಸ್‌ ಹಾಕಿದ ಅಭ್ಯರ್ಥಿ ಪ್ರಬಲರೆಂದು ನನಗೆ ಅನಿಸುತ್ತಿಲ್ಲ.

ಮತದಾರರ ಮುಂದೆ ತಾವು ಯಾವ ಭರವಸೆ ನೀಡುತ್ತಿದ್ದೀರಿ?

ನನ್ನ ಪತಿ ದಿ. ಸುರೇಶ ಅಂಗಡಿ ಅವರು ಬಿಟ್ಟು ಹೋದ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗುವ ಮತ್ತು ಪ್ರಧಾನಿ ಮೋದಿ ಅವರಿಂದ ದೇಶದ ಅಭಿವೃದ್ಧಿ, ಜನಸಾಮಾನ್ಯರ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಒತ್ತು ನೀಡುತ್ತಿದ್ದೇನೆ.

ಟಿಕೆಟ್‌ ಸಿಗದವರಲ್ಲಿ ಕೆಲವರಿಗೆ ಅಸಮಾಧಾನವಿದೆ. ಇದನ್ನು ಹೇಗೆ ನಿಭಾಯಿಸುತ್ತೀರಿ?

ಟಿಕೆಟಿಗಾಗಿ ಪೈಪೋಟಿ ಸಹಜ. ಆದರೆ ಈಗ ಎಲ್ಲರೂ ನನ್ನ ಗೆಲುವಿಗಾಗಿ ಕೈ ಜೋಡಿಸಿದ್ದಾರೆ.

ಬೆಳಗಾವಿ ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿ ಎಷ್ಟು ಕೋಟಿ ಒಡತಿ..?

ತೈಲ ಬೆಲೆ ಏರಿಕೆ, ನಿರುದ್ಯೋಗ, ಬಿಜೆಪಿ ರೈತನೀತಿಗಳ ಬಗ್ಗೆ ಪ್ರತಿಪಕ್ಷದವರು ಪ್ರಚಾರ ಮಾಡುತ್ತಿದ್ದಾರೆ. ತಾವು ಬಿಜೆಪಿ ಸರ್ಕಾರವನ್ನು ಹೇಗೆ ಸಮರ್ಥಿಸಿಕೊಳ್ಳುತ್ತಿದ್ದೀರಿ?

ತೈಲ ಬೆಲೆ, ಗೃಹ ಬಳಕೆ ಅನಿಲ ಸಿಲಿಂಡರ್‌ಗಳ ಬೆಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿಗದಿಯಾಗುತ್ತದೆ ಎಂಬುದನ್ನು ಎಲ್ಲರೂ ಅರಿತಿದ್ದಾರೆ. ಮತ್ತೆ ರೈತರು ಬೆಳೆದ ಆಹಾರ ಧಾನ್ಯಕ್ಕೆ ಯೋಗ್ಯ ಬೆಲೆ ಸಿಗಲೆಂದು ಕೇಂದ್ರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿದೆ. ಆದರೆ ರಾಜಕೀಯ ಹಿತಾಸಕ್ತಿಗಳ ಹುನ್ನಾರವನ್ನು ಜನ ಅರ್ಥೈಸಿಕೊಳ್ಳುತ್ತಾರೆ.

ತಮ್ಮದೇ ಪಕ್ಷದ ಶಾಸಕರಾದ ಬಾಲಚಂದ್ರ ಜಾರಕಿಹೊಳಿ, ರಮೇಶ ಜಾರಕಿಹೊಳಿ ಅವರ ಸಹೋದರ ಸತೀಶ ಜಾರಕಿಹೊಳಿ ನಿಮಗೆ ಪ್ರಬಲ ಪ್ರತಿಸ್ಪರ್ಧಿ. ಆದರೆ ಸಹೋದರರ ಕುಟುಂಬ ತಮಗೆ ಬೆಂಬಲ ನೀಡುತ್ತಾರಾ?

ಪಕ್ಷದ ಸಿದ್ಧಾಂತಗಳ ಮೇಲೆ ಇಬ್ಬರೂ ಸಹೋದರರು ನಮ್ಮ ಗೆಲುವಿಗೆ ಎಲ್ಲ ಪ್ರಯತ್ನ ಮಾಡುತ್ತಲಿದ್ದಾರೆ. ಕಿರಿಯ ಸಹೋದರ ಲಖನ್‌ ಜಾರಕಿಹೊಳಿ ಅವರೂ ನಮ್ಮ ಪಕ್ಷಕ್ಕೆ ಬಂದಿದ್ದು, ನಮ್ಮ ಗೆಲುವಿಗೆ ಎಲ್ಲ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ.