ಕಲಬುರಗಿ: ನಿಗಮ-ಮಂಡಳಿ ನೇಮಕ, ಕಮಲ ಪಡೆ ಕಾರ್ಯಕರ್ತರು ಕಂಗಾಲು..!

ನಿಗಮ-ಮಂಡಳಿ ನೇಮಕದಲ್ಲಿ ಶಾಸಕರಿಗೆ ಮಣೆ| ತಮ್ಮ ಪಾಡೇನು ಎಂದು ಕಾರ್ಯಕರ್ತರು ಪರೇಷಾನ್‌| ಕಲಬುರಗಿಯಲ್ಲಂತೂ ಹೆಚ್ಚಿನ ಅತೃಪ್ತಿ ಕಂಡಿದ್ದು ಪಕ್ಷದ ಹಿರಿಯರನೇಕರು ಚುನಾವಣೆ ಬಂದಾಗೆಲ್ಲಾ ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿಯುತ್ತಿದ್ದರೂ ಪಕ್ಷ ಸರ್ಕಾರಕ್ಕೆ ಬಂದಾಗ ಈ ರೀತಿ ನಮ್ಮನ್ನೆಲ್ಲ ಕಡೆಗಣಿಸಿ ಶಾಸಕರಿಗೆ ಮನ್ನಣೆ ನೀಡೋದು ಅದೆಷ್ಟು ಸರಿ? ಎಂದು ಅಸಮಾಧಾನ ಹೊರ ಹಾಕುತ್ತಿದ್ದಾರೆ|

BJP Activists Dissatisfaction for Appointment of Corporation Board President

ಕಲಬುರಗಿ(ಜು.31): ಇತ್ತೀಚೆಗೆ ಬಿಜೆಪಿ ಸರ್ಕಾರ ಮಾಡಿರೋ ನಿಗಮ- ಮಂಡಳಿ ನೇಮಕಾತಿಯಲ್ಲಿ ಕಾರ್ಯಕರ್ತರು ರಾರಾಜಿಸಬೇಕಾದಂತಹ ಕಡೆಗಳಲ್ಲೆಲ್ಲಾ ಶಾಸಕರಿಗೆ ಮಣೆ ಹಾಕಿರೋದು ತೊಗರಿ ಕಣಜ ಕಲಬುರಗಿ ಬಿಜೆಪಿ ಪಾಳಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ಈ ಬಗ್ಗೆ ಕಲಬುರಗಿಯಲ್ಲಂತೂ ಹೆಚ್ಚಿನ ಅತೃಪ್ತಿ ಕಂಡಿದ್ದು ಪಕ್ಷದ ಹಿರಿಯರನೇಕರು ಚುನಾವಣೆ ಬಂದಾಗೆಲ್ಲಾ ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿಯುತ್ತಿದ್ದರೂ ಪಕ್ಷ ಸರ್ಕಾರಕ್ಕೆ ಬಂದಾಗ ಈ ರೀತಿ ನಮ್ಮನ್ನೆಲ್ಲ ಕಡೆಗಣಿಸಿ ಶಾಸಕರಿಗೆ ಮನ್ನಣೆ ನೀಡೋದು ಅದೆಷ್ಟು ಸರಿ? ಎಂದು ಅಸಮಾಧಾನ ಹೊರ ಹಾಕುತ್ತಿದ್ದಾರೆ.

ಕಲಬುರಗಿಯಲ್ಲಿರೋ ನಿಗಮ- ಮಂಡಳಿಗಳ ಪೈಕಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಹಾಗೂ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳಿಗೆ ಶಾಸಕರಿಬ್ಬರನ್ನು ನೇಮಿಸಿ ಸಿಎಂ ಯಡಿಯೂರಪ್ಪ 3 ದಿನಗಳ ಹಿಂದೆಯೇ ಆದೇಶ ಹೊರಡಿಸಿದ್ದಾರೆ. ಇವೆರಡರ ಪೈಕಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನಿಗಮಕ್ಕಂತೂ ಹಿಂದೆಂದು ಶಾಸಕರನ್ನು ಅಧ್ಯಕ್ಷರನ್ನಾಗಿ ಯಾವ ಪಕ್ಷವೂ ನೇಮಕ ಮಾಡಿದ ಉದಾಹರಣೆಗಳಿಲ್ಲ.

ನಿಗಮ ಮಂಡಳಿ ನೇಮಕ: ಸಿಎಂ ಭೇಟಿಯಾಗಿ ಹೊಸ ಬೇಡಿಕೆ ಮುಂದಿಟ್ಟ ಶಾಸಕರು..!

ಹೊಸ ಪರಂಪರೆಗೆ ನಾಂದಿ:

ಆಯಾ ಕಾಲದಲ್ಲಿ ಅಧಿಕಾರ ಚುಕ್ಕಾಣಿ ಹಿಡಿದ ಪಕ್ಷಗಳು ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿ ಈಶಾನ್ಯ ಸಾರಿಗೆಯಲ್ಲಿ ಪೂರಿಸಿದ್ದು ವಾಸ್ತವ. ಆದರೆ, ಇದೇ ಮೊದಲ ಬಾರಿಗೆ ಬಿಜೆಪಿ ಶಾಸಕರೊಬ್ಬರಿಗೆ ಈ ಸ್ಥಾನಕ್ಕೆ ನೇಮಿಸಿರೋದು ರಾಜಕೀಯವಾಗಿ ಎಲ್ಲರ ಹುಬ್ಬರುವಂತೆ ಮಾಡಿದೆ. ಸೇಡಂ ಶಾಸಕ ರಾಜಕುಮಾರ ಪಾಟೀಲ್‌ ತೇಲ್ಕೂರ್‌ ಅವರಿಗೆ ಎನ್‌ಇಕೆಆರ್‌ಟಿಸಿ ಅಧ್ಯಕ್ಷರನ್ನಾಗಿಸಿರುವ ಬಿಎಸ್‌ವೈ ಕ್ರಮವೇ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ.
ಇತ್ತ ತೇಲ್ಕೂರ್‌ ಅವರಿಗೆ ಈ ಸ್ಥಾನಮಾನ ತೃಪ್ತಿ ತಂದಿಲ್ಲ. ಬಿಜೆಪಿ ಹಿರಿಯ ಕಾಯಕರ್ತರು ಹಲವರು ಈ ಹುದ್ದೆಗೆ ಪ್ರಯತ್ನಿಸಿ ಸಾರಿಗೆ ಸಚಿವರು, ಡಿಸಿಎಂ ಸವದಿ ಸೇರದಂತೆ ಅನೇಕರ ಸಂಪರ್ಕದಲ್ಲಿದ್ದರು. ಶಾಸಕರೆಲ್ಲರ ಪತ್ರ ಸಹ ಪಡೆದಿದ್ದರೂ ಯಾರ ಸಂಪರ್ಕಕ್ಕೂ ಬಾರದಂತೆ ನಡೆದ ನೇಮಕಾತಿಯು ಕಾರ್ಯಕರ್ತರನ್ನು ಕೆರಳಿಸಿದೆ.

ರೇವೂರ ಗೌಡ್ರಿಗೂ ಕೆಕೆಆಡಿರ್‌ಬಿ ಆಸಕ್ತಿ ಇಲ್ಲ:

ಕಲಂ 371 ಜಾರಿಗೊಂಡ ನಂತರ ಇದೇ ಮೊದಲ ಬಾರಿಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಶಾಸಕರೊಬ್ಬರಿಗೆ ನೇಮಕವಾಗಿದೆ. ಕಲಬುರಗಿ ದಕ್ಷಿಣ ಶಾಸಕ ದತ್ತತ್ರೇಯ ರೇವೂರ್‌ ಅವರಿಗೆ ಈ ಸ್ಥಾನ ನೀಡಿ ಸಿಎಂ ಯಡಿಯೂರಪ್ಪ ಆದೇಶ ಹೊರಡಿಸಿದ್ದರೂ ಇವರಿಗೂ ಈ ಸ್ಥಾನ ತೃಪ್ತಿ ತಂದಿಲ್ಲ, ಹೀಗಾಗಿ ಈ ವಿಚಾರದಲ್ಲಿ ಯಾವುದೇ ಸ್ಪಂದನೆ ತೋರದೆ ರೇವೂರ್‌ ಮೌನವಾಗಿರೋದು ಗುಟ್ಟೇನಲ್ಲ. ಕೆಕೆಆರ್‌ಡಿಬಿಗೆ ಕಲ್ಯಾಣ ನಾಡಿನ 6 ಜಿಲ್ಲೆಗಳ ವ್ಯಾಪ್ತಿಯ ಜಿಲ್ಲಾ ಉಸ್ತುವಾರಿ ಸಚಿವರು ಮಾತ್ರ ರೋಟೇಷನ್‌ನಲ್ಲಿ ಅಧ್ಯಕ್ಷರಾಗಿರಬೇಕು ಎಂಬ ನಿಯಮ ಹಿಂದಿನ ಕಾಂಗ್ರೆಸ್‌ ಸರ್ಕಾರದಲ್ಲಿತ್ತು. ಬೀದರ್‌ ಹೊರತುಪಡಿಸಿ ಬಿಜೆಪಿ ಸಂಪುಟದಲ್ಲಿ ಈ ಪ್ರದೇಶದವರಿಗೆ ಮಂತ್ರಿಸ್ಥಾನವೇ ಸಿಕ್ಕಿಲ್ಲದ ಕಾರಣ ಅಧ್ಯಕ್ಷರ ನೇಮಕ ನಿಯಮಗಳನ್ನೇ ಬದಲಿಸಿ ಇದೀಗ ಶಾಸಕರಿಗೆ ಈ ಸ್ಥಾನಕ್ಕೆ ಕೂರಿಸಲಾಗಿದೆ. ಮಂತ್ರಿಗಿರಿ ಆಕಾಂಕ್ಷಿ ದತ್ತಾತ್ರೇಯ ಪಾಟೀಲರಿಗೆ ಕೆಕೆಆರ್‌ಡಿಬಿಗೆ ನೇಮಿಸಿ ಕೈ ತೊಳ್ಳೆದುಕೊಳ್ಳಲಾಗಿದೆ ಎಂಬ ಮಾತುಗಳು ಪಕ್ಷದಲ್ಲೇ ಕೇಳಿಬರುತ್ತಿವೆ.

ನಿಗಮ-ಮಂಡಳಿ ಸ್ಥಾನ ಒಲ್ಲೆ ಎಂದ ಶಾಸಕರು: ಬಿಜೆಪಿಯಲ್ಲಿ ಅಸಮಧಾನದ ಹೊಗೆ..!

ಕಾರ್ಯಕರ್ತರ ಗೋಳಾಟ:

ಜಿಲ್ಲೆಯಲ್ಲಿ ಬಿಜೆಪಿಯ ಸೇಡಂ, ಕಲಬುರಗಿ ದಕ್ಷಿಣ ಶಾಸಕರಿಗೆ ಸ್ಥಳ ತೋರಿಸಲಾಗಿದ್ದು ಇನ್ನೂ ಕಲಬುರಗಿ ಗ್ರಾಮೀಣ, ಚಿಂಚೋಳಿ, ಆಳಂದ ಶಾಸಕರು ಹುದ್ದೆ ನಿರೀಕ್ಷೆಯಲ್ಲಿದ್ದಾರೆ. ಜಿಲ್ಲೆಯ ಎಲ್ಲ ಶಾಸಕರಿಗೆ ನಿಗಮ- ಮಂಡಳಿ ಎಂದು ನೇಮಕಾತಿ ಸಾಗಿದರೆ ತಮಗೆ ಹುದ್ದೆ, ಸದಸ್ಯತ್ವ ಗೌರವಗಳು ಗಗನಕುಸುಮ ಮಾತ್ರ ಎಂದು ಕಾರ್ಯಕರ್ತರು ಗೋಳಾಡುತ್ತಿದ್ದಾರೆ. ಕಲಬುರಗಿ ಮಟ್ಟಿಗೆ ಉಳಿದಿರೋದು ನಗರಾಭಿವೃದ್ಧಿ ಪ್ರಾಧಿಕಾರ, ತೊಗರಿ ಅಭಿವೃದ್ಧಿ ಮಂಡಳಿ ಹಾಗೂ ಅಚ್ಚುಕಚ್ಚು ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಕಾಡಾ), ಹೀಗಾಗಿ ಇವುಗಳಿಗೆಲ್ಲ ಉಳಿದಿರೋ ಶಾಸಕರಿಗೆ ಮಣೆ ಹಾಕಿದರೆ ತಮ್ಮ ಪಾಡೇನು ಎಂದು ಪಕ್ಷವನ್ನೇ ನಂಬಿ ದಶಕಗಳಿಂದ ಕೆಲಸ ಮಾಡುತ್ತಿರೋ ಕಾರ್ಯಕರ್ತರು ಕಂಗಾಲಾಗಿದ್ದಾರೆ.
 

Latest Videos
Follow Us:
Download App:
  • android
  • ios