ರಾಮಕೃಷ್ಣ ದಾಸರಿ

ರಾಯಚೂರು(ಜು.29): ಜಿಲ್ಲೆಯ ಇಬ್ಬರು ಶಾಸಕರಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಅನಿರೀಕ್ಷಿತವಾಗಿ ನೀಡಿರುವ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ನಮಗೆ ಬೇಡವೆಂದು ಇಬ್ಬರೂ ತಮ್ಮ ತಿರಸ್ಕಾರದ ಅಭಿಪ್ರಾಯ ವ್ಯಕ್ತ​ಪ​ಡಿ​ಸಿದ್ದಾರೆ.

ದೇವದುರ್ಗ ಕ್ಷೇತ್ರದ ಶಾಸಕ ಕೆ.ಶಿವನಗೌಡ ನಾಯಕ ಅವರಿಗೆ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ಮತ್ತು ರಾಯಚೂರು ನಗರ ಕ್ಷೇತ್ರದ ಶಾಸಕ ಡಾ.ಶಿವರಾಜ ಪಾಟೀಲ್‌ ಅವರಿಗೆ ಕರ್ನಾಟಕ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರನ್ನಾಗಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರು ನೇಮಿಸಿದ್ದಾರೆ. ಆದರೆ ಈ ಸ್ಥಾನಗಳನ್ನು ಒಲ್ಲೆ ಎಂದಿರುವ ಉಭಯ ಶಾಸಕರು ಒಂದೇ ನಿಲುವು ಪ್ರಕಟಿಸಿದ್ದು, ನಿಗಮ-ಮಂಡಳಿಗಳ ಸ್ಥಾನಕ್ಕಿಂತ ಅಭಿವೃದ್ಧಿಗೆ ಆದ್ಯತೆ ನೀಡಿ ಎನ್ನುವಂತಹ ಇಬ್ಬರ ಮಾತುಗಳ ಹಿಂದೆ ಅಸಮಧಾನದ ಛಾಯೆಯು ಎದ್ದುಕಾಣುತ್ತಿದೆ. ಸಿಎಂ ಕೊಟ್ಟಸ್ಥಾನಗಳನ್ನು ಉಭಯ ಶಾಸಕರು ತಿರಸ್ಕರಿಸಿದ್ದು ಇದರು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ನಿಗಮ ಮಂಡಳಿಗೆ ನೇಮಕ: ಸಿಎಂ ಆದೇಶಕ್ಕೆ ವ್ಯಂಗ್ಯವಾಡಿದ ಬಿಜೆಪಿ ಶಾಸಕ

ಇಬ್ಬ​ರದ್ದು ಒಂದೇ ನಿಲುವು:

ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನವನ್ನು ತಿರಸ್ಕರಿಸಿರುವ ಶಾಸಕರಾದ ಡಾ.ಶಿವರಾಜ ಪಾಟೀಲ್‌, ಕೆ.ಶಿವನಗೌಡ ನಾಯಕ ಅವರು ಒಂದೇ ನಿಲುವು ವ್ಯಕ್ತಪಡಿಸಿದ್ದಾರೆ. ಕ್ಷೇತ್ರ ಮತ್ತು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಅನುದಾನ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹಾಗೂ ಸಿಎಂ ಬಿಎಸ್‌ವೈ ಅವರಿಗೆ ಮನವಿ ಮಾಡಲಾಗಿತ್ತು. ಇದರ ನಡುವೆ ಅನಿರೀಕ್ಷಿತವಾಗಿ ನಿಗಮ ಮಂಡಳಿಗಳ ಅಧ್ಯಕ್ಷರನ್ನಾಗಿ ಮಾಡಿರುವುದಕ್ಕೆ ಧನ್ಯವಾದ. ಆದರೆ ನಮಗೆ ಆ ಸ್ಥಾನಗಳು ಬೇಡ. ಅದರ ಬದಲು ಕ್ಷೇತ್ರ, ಜಿಲ್ಲೆ ಸಮಗ್ರ ಅಭಿವೃದ್ಧಿಗೆ ಅನುದಾನ ಒದಗಿಸಿಕೊಡಲಿ ಎಂದು ಶಾಸಕರಿಬ್ಬರು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಿರಸ್ಕಾರದ ಹಿಂದೆ ಅಸಮಧಾನ:

ದೇವದುರ್ಗ ಕ್ಷೇತ್ರದ ಶಾಸಕ ಕೆ.ಶಿವನಗೌಡ ನಾಯಕ ಅವರು ಹಿರಿಯ, ಅನುಭವಿ ಶಾಸಕರಾಗಿದ್ದಾರೆ. ಕ್ಷೇತ್ರದಲ್ಲಿ ನಾಲ್ಕು ಭಾರಿ ಶಾಸಕರಾಗಿ, ಸಚಿವರಾಗಿ, ಸಿಎಂ ರಾಜಕೀಯ ಕಾರ್ಯದರ್ಶಿಯಾಗಿ ಅಪಾರ ಅನುಭವ, ಹಿರಿತನವನ್ನು ಹೊಂದಿದ್ದಾರೆ. ಅದೇ ರೀತಿ ಡಾ.ಶಿವರಾಜ ಪಾಟೀಲ್‌ ಅವರು ಎರಡನೇ ಭಾರಿ ಶಾಸಕರಾಗಿದ್ದು, ಸಚಿವ ಸ್ಥಾನವನ್ನು ನೀಡಿದ್ದಲ್ಲಿ ಅದನ್ನು ಸಮರ್ಥವಾಗಿ ನಿಭಾಯಿಸುವುದಾಗಿ ತಿಳಿಸಿದ್ದಾರೆ. ಉಭಯ ಶಾಸಕರು ನಿಗಮ-ಮಂಡಳಿಗಳನ್ನು ತಿರಸ್ಕರಿಸಿರುವ ನಿರ್ಧಾರದ ಹಿಂದೆ ಸಚಿವ ಸ್ಥಾನ ಬೇಕು ಎನ್ನುವ ಸಂದೇಶವನ್ನು ಪರೋಕ್ಷವಾಗಿ ರವಾನಿಸಿದ್ದಾರೆ.

ನಿರೀಕ್ಷಿಸದೇ ನಿಗಮ ಮಂಡಳಿಗೆ ನನ್ನನ್ನು ಆಯ್ಕೆ ಮಾಡಲಾಗಿದೆ. ಸಿಎಂ ವಹಿಸಿರುವ ಆ ಸ್ಥಾನವನ್ನು ನಾವು ಅಲಂಕರಿಸುವುದಿಲ್ಲ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿದರೆ ಸಾಕು. ಸಚಿವ ಸ್ಥಾನ ನೀಡುವುದು, ಬಿಡುವುದು ಸಿಎಂ ಹಾಗೂ ಹೈಕಮಾಂಡ್‌ ನಿರ್ಧಾರವಾಗಿದೆ ಎಂದು ರಾಯಚೂರು ನಗರ ಕ್ಷೇತ್ರದ ಶಾಸಕ ಡಾ.ಶಿವರಾಜ ಪಾಟೀಲ್‌ ಅವರು ತಿಳಿಸಿದ್ದಾರೆ.

ಕ್ಷೇತ್ರ, ಜಿಲ್ಲೆ ಅಭಿವೃದ್ಧಿಗೆ ಅನುದಾನ ನೀಡುವಂತೆ ಸಿಎಂ ಅವರಿಗೆ ಮನವಿ ಮಾಡಿದ್ದೇವೆ. ಅದಕ್ಕೆ ಸ್ಪಂದಿಸುವ ನಿರೀಕ್ಷೆಯನ್ನು ಹೊಂದಿರುವೆ. ಇದರ ಜೊತೆಗೆ ಅನಿರೀಕ್ಷಿತವಾಗಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿದ್ದು, ನನಗೆ ಆಸ್ಥಾನ ಬೇಡ. ಅದರ ಬದಲಾಗಿ ಹೆಚ್ಚಿನ ಅಭಿವೃದ್ಧಿಗೆ ಅನುದಾನ ನೀಡಲಿ, ಕೊಟ್ಟಿರುವ ಸ್ಥಾನವನ್ನು ಜಿಲ್ಲೆ ಸಾಮಾನ್ಯ ಕಾರ್ಯಕರ್ತರಿಗೆ ನೀಡಲಿ ಎಂದು ದೇವದುರ್ಗದ ಶಾಸಕ ಕೆ.ಶಿವನಗೌಡ ನಾಯಕ ಅವರು ಹೇಳಿದ್ದಾರೆ.