ವರ್ಷದ ಬಹುತೇಕ ದಿನಗಳು ಮದುವಣಗಿತ್ತಿಯಂತಿರುವ ರಾಜ್ಯದ ಶ್ವೇತಾದ್ರಿ ಪರ್ವತ
ಎತ್ತ ಕಣ್ಣಾಯಿಸಿದರೂ ಹಚ್ಚ ಹಸಿರಿನಿಂದ ಕಂಗೊಳಿಸುವ ಬೆಟ್ಟದ ಸಾಲುಗಳು. ಬೆಟ್ಟದ ಮೇಲ್ಬಾಗದಲ್ಲಿ ಮಂಜು ಕವಿದಿದ್ದು ಹಾಲಿನ ನೊರೆಯಂತೆ ಕಾಣುವ ಬೆಟ್ಟದ ಸಾಲುಗಳು. ಪ್ರಕೃತಿಯ ಸೊಬಗನ್ನು ಹೊದ್ದು ಮಲಗಿದಂತೆ ಕಾಣುವ ಬೆಟ್ಟ ಯಾವುದು ಇಲ್ಲಿದೆ ವಿವಿರ.
ವರದಿ: ಪುಟ್ಟರಾಜು. ಆರ್.ಸಿ. ಏಷಿಯಾನೆಟ್ ಸುವರ್ಣ ನ್ಯೂಸ್
ಚಾಮರಾಜನಗರ (ನ.13): ಅದು ಪೂರ್ವ ಮತ್ತು ಪಶ್ಚಿಮ ಘಟ್ಟಗಳ ಸೇತುವೆ. ಬಿಳಿ ಬಣ್ಣದಂತೆ ಕಾಣುವ ಆ ಬೆಟ್ಟವನ್ನ ಶ್ವೇತಾದ್ರಿ ಪರ್ವತವೆಂದು ಕರೆಯುತ್ತಾರೆ. ಅಚ್ಚ ಹಸಿರಾದ ಬೆಟ್ಟ ನೋಡಲೂ ಕಣ್ಣೆರಡು ಸಾಲದು. ಅಂದ ಚೆಂದದ ಬೆಟ್ಟದ ಸಾಲುಗಳ ಮಧ್ಯೆ ತಣ್ಣಗೆ ಬೀಸುವ ತಂಗಾಳಿ ಮುದ ನೀಡುತ್ತೆ. ಎತ್ತರ ಪ್ರದೇಶದಲ್ಲಿರುವ ಆ ಬೆಟ್ಟದ ಸೊಬಗನ್ನ ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡೆ ಹರಿದು ಬರುತ್ತದೆ. ಅಲ್ದೆ ಬೆಟ್ಟದ ಮೇಲ್ಬಾಗದಲ್ಲಿ ಮಂಜು ಕವಿದಿದ್ದು ಹಾಲಿನ ನೊರೆಯಂತೆ ಕಂಗೊಳಿಸ್ತಿದೆ. ಎತ್ತ ಕಣ್ಣಾಯಿಸಿದರೂ ಅಚ್ಚ ಹಸಿರಿನಿಂದ ಕಂಗೊಳಿಸುವ ಬೆಟ್ಟದ ಸಾಲುಗಳು. ತಣ್ಣಗೆ ಮೈ ಸೋಕುವ ತಂಗಾಳಿ, ಅವುಗಳನ್ನ ಕಣ್ತುಂಬಿಕೊಳ್ಳಲು ಬರುತ್ತಿರುವ ಪ್ರವಾಸಿಗರು. ಇಂತಹದೊಂದು ಅಪರೂಪವಾದ, ಪ್ರಕೃತಿ ರಮಣೀಯವಾದ ಪ್ರೇಕ್ಷಣೀಯ ಸ್ಥಳ ಇರೋದು ಚಾಮರಾಜನಗರ ಜಿಲ್ಲೆಯಲ್ಲಿ. ಪ್ರಕೃತಿ ಸೊಬಗನ್ನ ಹೊದ್ದು ಮಲಗಿದಂತೆ ಕಾಣುವ ಈ ಬೆಟ್ಟ ಬಿಳಿಗಿರಿ ರಂಗನಾಥಸ್ವಾಮಿ ಬೆಟ್ಟ. ಕರ್ನಾಟಕದ ತಿರುಪತಿ, ಶ್ವೇತಾದ್ರಿ ಪರ್ವತ ಎಂದೆಲ್ಲಾ ಭಕ್ತರಿಂದ ಕರೆಯಲ್ಪಡುವ ಬಿಳಿಗಿರಿ ರಂಗನಾಥ ಸ್ವಾಮಿ ಸೊಲಿಗರ ಆರಾದ್ಯ ದೈವ. ವರ್ಷದ ಬಹುತೇಕ ದಿನಗಳು ಮದುವಣಗಿತ್ತಿಯಂತೆ ಹಸಿರು ಸೀರೆಯುಟ್ಟು ಶೃಂಗಾರಗೊಂಡ ನಾರಿಯಂತೆ ಕಾಣುವ ಈ ಅಚ್ಚ ಹಸಿರಾದ ಬೆಟ್ಟದ ಸೌಂದರ್ಯಕ್ಕೆ ಮನಸೋಲದವರೆ ಇಲ್ಲ.
ಬಿಳಿಗಿರಿ ರಂಗನಾಥಸ್ವಾಮಿ ಬೆಟ್ಟ ಪೂರ್ವ ಮತ್ತು ಪಶ್ಚಿಮ ಘಟ್ಟಗಳು ಸಂಧಿಸುವ ಸ್ಥಳ. ದೂರಕ್ಕೆ ಹಾಲಿನ ನೊರೆಯಂತೆ ಕಾಣುವ ಈ ಬೆಟ್ಟವನ್ನ ಶ್ವೇತಾದ್ರಿ ಬೆಟ್ಟ ಎಂದು ಕರೆಯುತ್ತಾರೆ. ಸಮುದ್ರ ಮಟ್ಟದಿಂದ 4 ಸಾವಿರ ಅಡಿ ಎತ್ತರದಲ್ಲಿರುವ ಬಿಳಿಗಿರಿ ರಂಗನಾಥ ಬೆಟ್ಟ ನಗರವಾಸಿಗಳ ಸ್ವರ್ಗ. ಇದು ಯಾವಾಗಲೂ ಅಚ್ಚ ಹಸಿರಿನಿಂದ ಕಂಗೊಳಿಸುವ ಇಲ್ಲಿನ ವಾತಾವರಣ, ತಣ್ಣಗೆ ಬೀಸುವ ತಂಗಾಳಿ ಪ್ರತಿಯೊಬ್ಬರ ಮೈಸೋಕಿ ಉಲ್ಲಾಸಗೊಳಿಸುತ್ತದೆ. ಇಲ್ಲಿನ ವಾತಾರಣವನ್ನ ಎಸಿಯ ಮನೆ ಎಂದು ಪ್ರವಾಸಿಗರೇ ಕರೆಯುತ್ತಾರೆ. ಒಮ್ಮೆ ಇಲ್ಲಿಗೆ ಭೇಟಿ ಕೊಟ್ಟವರಂತೂ ಪದೇ ಪದೇ ಇಲ್ಲಿಗೆ ಬಂದು ಪ್ರಕೃತಿಯ ಸೊಬಗನ್ನು ಸವಿಯುತ್ತಾರೆ. ಆಗಾಗ ಸುರಿಯುವ ತುಂತುರು ಮಳೆ ಪ್ರವಾಸಿಗರ ಮನಸಿಗೆ ಮುದ ನೀಡುತ್ತಿದೆ.
Travel Tip: ಗೋವಾದಲ್ಲಿದೆ ನೀವು ನೋಡದ ಅದ್ಭುತ ಬೀಚ್ ಇಲ್ಲಿದೆ
ಬಿಳಿಗಿರಿ ರಂಗನಾಥ ಬೆಟ್ಟಕ್ಕೆ ಎರಡು ಕಡೆಯಿಂದ ಪ್ರವೇಶ ಪಡೆಯಬಹುದು. ಒಂದು ಯಳಂದೂರು ಮಾರ್ಗದಿಂದ ಮತ್ತೊಂದು ಚಾಮರಾಜನಗರ ಭಾಗದಿಂದ ಹೋಗಲು ಹೊಂಡರಬಾಳು ಬಳಿ ಪ್ರವೇಶ ದ್ವಾರಗಳಿವೆ. ಈ ಎರಡು ಪ್ರವೇಶದ್ವಾರಗಳು ಪ್ರವಾಸಿಗರನ್ನ ಆಕರ್ಷಿಸದೇ ಬಿಡಲಾರವು. ಬರುವ ಪ್ರವಾಸಿಗರನ್ನ ಆನೆ, ಹುಲಿ, ಚಿರತೆ, ಕಾಡಮ್ಮೆಯಂತಹ ವನ್ಯಜೀವಿಗಳೇ ಸ್ವಾಗತ ಕೋರುತ್ತವೆ. ಹೌದು ನೋಡುವುದಕ್ಕೆ ವನ್ಯಜೀವಿಗಳೇ ಎದ್ದು ಬಂದಂತೆ ಕಾಣುವಂತೆ ಚಿತ್ರಿಸಲಾಗಿದೆ.
Travel Tips: ಮಕ್ಕಳಿಗೆ ಪಾಲಕರು ಕಲಿಸ್ಬೇಕು ಈ ಮ್ಯಾನರ್ಸ್
ನಗರ ಪ್ರದೇಶಗಳಿಂದ ಬರುವ ಜನರು ಇವುಗಳನ್ನ ನೋಡಿ ಆಶ್ಚರ್ಯಗೊಳದ್ದೆ ಇರಲಾರರು. ನಂತರ ನಿಧಾನವಾಗಿ ಇಳಿದು ಚಿತ್ರಿಸಿದ ವನ್ಯಪ್ರಾಣಿಗಳ ಮುಂದೆ ನಿಂತು ಫೋಟೋ ತೆಗೆಸಿಕೊಳ್ಳದೇ ಹೋಗುವುದಿಲ್ಲ. ಎರಡು ಕಡೆಯಿಂದ ಬರುವ ಪ್ರವಾಸಿಗರಿಗೆ ವನ್ಯಜೀವಿಗಳ ದರ್ಶನ ಮಾತ್ರ ಉಚಿತ. ಕಾಡೆಮ್ಮೆ, ಆನೆ, ಜಿಂಕೆ, ಕಡವೆ ಸೇರಿದಂತೆ ಹಲವು ಪ್ರಾಣಿಗಳ ದರ್ಶನ ಪ್ರವಾಸಿಗರ ಮನಸಿಗೆ ಮುದ ನೀಡುತ್ತದೆ. ಬಿಳಿಗಿರಿ ರಂಗನಾಥ ಸ್ವಾಮಿ ದೇವಾಲಯದಿಂದಲೇ ಖ್ಯಾತಿಗಳಿಸಿದ್ದ ಬಿಆರ್ ಟಿ ಈಗ ಹುಲಿ ಸಂರಕ್ಷಿತ ಪ್ರದೇಶವಾಗಿ ಖ್ಯಾತಿಗಳಿಸಿದೆ. ಹಾಲ್ನೊರೆಯನ್ನು ಹೊದ್ದು ಮಲಗಿದಂತೆ ಕಾಣೋ ದೃಶ್ಯ ಎಲ್ಲರನ್ನೂ ಕೂಡ ಮತ್ತೇ ಮತ್ತೇ ಕೈ ಬಿಸಿ ಕರೆಯುತ್ತೆ.