ಕಾನ್ಫಿಡೆಂಟ್ ಗ್ರೂಪ್ ಮಾಲೀಕ ಸಿ.ಜೆ. ರಾಯ್, ಐಟಿ ದಾಳಿಯ ನಂತರ ತಮ್ಮ ಕಚೇರಿಯಲ್ಲಿ ಗುಂಡು ಹಾರಿಸಿಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಈ ದುರಂತಕ್ಕೆ ಬಿಗ್ ಬಾಸ್ ವಿಜೇತ ಹನುಮಂತ ಲಮಾಣಿ ಕಂಬನಿ ಮಿಡಿದಿದ್ದು, ತಮಗೆ ಫ್ಲಾಟ್ ಹಾಗೂ ತಂಗಿಯ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿದ್ದನ್ನು ಸ್ಮರಿಸಿದ್ದಾರೆ.
ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್‌ನ ಮಾಲೀಕ ಸಿ.ಜೆ. ರಾಯ್, ಶುಕ್ರವಾರ ಮಧ್ಯಾಹ್ನ 3 ಗಂಟೆಯ ವೇಳೆಗೆ ಇಲ್ಲಿನ ರಿಚ್ಮಂಡ್ ಟೌನ್‌ನಲ್ಲಿರುವ ಕಾನ್ಫಿಡೆಂಟ್ ಗ್ರೂಪ್‌ನ ಪ್ರಧಾನ ಕಚೇರಿಯಲ್ಲಿ ಪಿಸ್ತೂಲ್‌ನಿಂದ ಎದೆಗೆ ಗುಂಡು ಹಾರಿಸಿಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಕಚೇರಿಯ ಮೇಲೆ ಕೇರಳ ಐಟಿ ದಾಳಿ ನಡೆಸಿದ ಬೆನ್ನಲ್ಲೇ ಸಾವಿರಾರು ಕೋಟಿ ಒಡೆಯ ರಾಯ್, ದುರಂತ ಸಾವು ಕಂಡಿದ್ದಾರೆ. ಈ ಸಾವು ಉದ್ಯಮಿಗಳ ವಲಯದಲ್ಲಿ ತಲ್ಲಣ ಮೂಡಿಸಿದೆ. ಇನ್ನು 11ನೇ ಸೀಸನ್ ಬಿಗ್ ಬಾಸ್ ಚಾಂಪಿಯನ್ ಹನುಮಂತ ಲಮಾಣಿ ತಮಗೆ ಫ್ಲಾಟ್ ಬಹುಮಾನ ನೀಡಿದ್ದ ಸಿ.ಜೆ. ರಾಯ್ ಅವರ ಸಾವಿಗೆ ಕಣ್ಣೀರಿಟ್ಟಿದ್ದಾರೆ.
ಹೌದು, ಹನುಮಂತ ಲಮಾಣಿ 11ನೇ ಸೀಸನ್ ಬಿಗ್ ಬಾಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಆದ ಸಿ.ಜೆ ರಾಯ್ ನೇತೃತ್ವದ ಕಾನ್ಫಿಡೆಂಟ್ ಗ್ರೂಪ್, ಹನುಮಂತ ಲಮಾಣಿಗೆ ಬೆಂಗಳೂರಿನಲ್ಲಿ 50 ಲಕ್ಷ ರುಪಾಯಿ ಮೌಲ್ಯದ ಫ್ಲಾಟ್ ಅನ್ನು ಗಿಫ್ಟ್ ಆಗಿ ನೀಡಿದ್ದರು. ಇದೀಗ ಡಾ.ಸಿ.ಜೆ.ರಾಯ್ ಸಾವಿನ ಸುದ್ದಿ ಕೇಳಿ ಬಹಳ ದುಃಖವಾಗಿದೆ. ಅವರು ಎರಡು ಬಾರಿ ನನಗೆ ಬಹುಮಾನ ಕೊಟ್ಟಿದ್ದಾರೆ. ಇದಷ್ಟೇ ಅಲ್ಲದೇ ಅವರು ನಮ್ಮೂರಿಗೆ ಬರುತ್ತೇನೆ ಎಂದು ಕೂಡಾ ಹೇಳಿದ್ದರು ಎಂದು ಹನುಮಂತ ಹೇಳಿದ್ದಾರೆ
ಹನುಮಂತಗೆ ಮನೆ ಕಟ್ಟಿಸಲು ಹೇಳಿದ್ದ ರಾಯ್:
ಹಾವೇರಿ ಜಿಲ್ಲೆ ಸವಣೂರು ತಾಲ್ಲೂಕಿನ ಚಿಲ್ಲೂರುಬಡ್ನಿ ಗ್ರಾಮದಲ್ಲಿ ನೆಲೆಸಿರುವ ಹನುಮಂತನಿಗೆ ರಾಯ್, ನೀನು ನಿಮ್ಮೂರಿನಲ್ಲಿ ಮನೆ ಕಟ್ಟಿಸು. ಮನೆ ಕಟ್ಟಿಸಿದ ಮೇಲೆ ಗೃಹಪ್ರವೇಶಕ್ಕೆ ನನ್ನನ್ನು ಕರಿ, ನಾನು ನಿಮ್ಮೂರಿಗೆ ಬರುತ್ತೇನೆ ಎಂದು ಹೇಳಿದ್ದರು. ಆದರೆ ಆ ಕನಸು ಈಡೇರಲಿಲ್ಲ ಎಂದು ಹನುಮಂತ ಹೇಳಿದ್ದಾರೆ. ಬಿಗ್ ಬಾಸ್ ಗೆದ್ದಾಗ ನನಗೆ ಬಹುಮಾನ ರೂಪದಲ್ಲಿ ಬೆಂಗಳೂರಿನಲ್ಲಿ ಫ್ಲಾಟ್ ನೀಡಿದ್ದರು. ಆದರೆ ನಮಗೆ ಬೆಂಗಳೂರು ಸೆಟ್ ಆಗಲ್ಲ ಎಂದು ಫ್ಲಾಟ್ ಬದಲಿಗೆ ಹಣವನ್ನು ತೆಗೆದುಕೊಂಡಿದ್ದೆ. ಅವರಿಗೆ ಹಳ್ಳಿ ನೋಡಬೇಕು, ನಮ್ಮೂರಿಗೆ ಬರಬೇಕು ಅಂತ ತುಂಬಾ ಆಸೆಯಿತ್ತು. ಆ ಕನಸು ಈಡೇರಲಿಲ್ಲ. ಅವರು ನನ್ನ ತಂದೆ-ತಾಯಿ ನೋಡಿ ಸಾಕಷ್ಟು ಖುಷಿ ಪಟ್ಟಿದ್ದರು ಎಂದು ಹನುಮಂತ ಹೇಳಿದ್ದಾರೆ.
ಹನುಮಂತ ಕುಟುಂಬಕ್ಕೆ ಎರಡು ಸಲ ಬಹುಮಾನ ಕೊಟ್ಟಿದ್ರು:
ಮೊದಲಿಗೆ ಬಿಗ್ ಬಾಸ್ ಗೆದ್ದ ನಂತರ ಫ್ಲಾಟ್ ಬದಲಿಗೆ ಹಣ ಪಡೆದುಕೊಂಡಿದ್ದ ಹನುಮಂತ ಆ ಬಳಿಕ, ತಮ್ಮ ತಂಗಿಯ ಜತೆಗೂಡಿ, ಬಡತನದ ಮನೆಯೊಳಗ ಹೆಣ್ಣು ಹುಟ್ಟ ಬಾರದು ಅಂತ ಹಾಡು ಹಾಡಿದ್ದರು. ಆಗ ಮತ್ತೆ ರಾಯ್, ನನ್ನ ತಂಗಿಯ ವಿದ್ಯಾಭ್ಯಾಸಕ್ಕೆ 50 ಸಾವಿರ ರುಪಾಯಿ ಹಣ ಸಹಾಯ ಮಾಡಿ ನೆರವಾಗಿದ್ದರು. ನನ್ನ ತಂಗಿಗೆ ಬೆಂಗಳೂರಿನಲ್ಲಿ ನೌಕರಿ ಕೊಡುತ್ತೇನೆ ಎಂದು ಹೇಳಿದ್ದರು. ಆದರೆ ನಾವೇ ನನ್ನ ತಂಗಿಯನ್ನು ಬೆಂಗಳೂರಿಗೆ ಕಳಿಸಲಿಲ್ಲ. ಅವರು ನನ್ನ ಬಳಿ 5 ಕುರಿ ಕೊಡು ಎಂದು ಹೇಳಿದ್ದರು. ಇದೀಗ ಅವರ ಸಾವಿನ ಸುದ್ದಿ ಕೇಳಿ ತುಂಬಾ ಬೇಜಾರಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹನುಮಂತ ಲಮಾಣಿ ಹೇಳಿದ್ದಾರೆ.
ನಾಲ್ಕು ದಿನಗಳ ಹಿಂದಷ್ಟೇ ಬೆಂಗಳೂರಿಗೆ
ದುಬೈನಿಂದ ನಾಲ್ಕು ದಿನಗಳ ಹಿಂದಷ್ಟೇ ನಗರಕ್ಕೆ ರಾಯ್ ಬಂದಿದ್ದರು. ತಮ್ಮ ಉದ್ಯಮದ ಆರ್ಥಿಕ ವ್ಯವಹಾರಗಳ ಬಗ್ಗೆ ಅವರಿಗೆ ಕಳವಳ ವ್ಯಕ್ತವಾಗಿತ್ತು. ಅದೇ ಹೊತ್ತಿಗೆ ಐಟಿ ದಾಳಿ ನಡೆದಿದ್ದು ಅವರನ್ನು ಮತ್ತಷ್ಟು ಭಾದಿಸಿದೆ. ಈ ನೋವಿನಲ್ಲೇ ರಾಯ್ ಆತ್ಮ*ಹತ್ಯೆ ಮಾಡಿಕೊಂಡರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.


