ಬಿಡದಿ ಟೌನ್‌ಶಿಪ್ ಯೋಜನೆ ವಿವಾದದ ಕುರಿತು ಪತ್ರಿಕಾಗೋಷ್ಠಿ ನಡೆಸಿದ ಸಿಎಂ ಡಿ.ಕೆ. ಶಿವಕುಮಾರ್, ಈ ಯೋಜನೆಗೆ ಅಡಿಪಾಯ ಹಾಕಿದ್ದೇ ಕುಮಾರಸ್ವಾಮಿ ಸರ್ಕಾರ ಎಂದು ದಾಖಲೆ ಸಮೇತ ಆರೋಪಿಸಿದ್ದಾರೆ. ರೈತರ ಒಪ್ಪಿಗೆಯಿಲ್ಲದೆ ಭೂಸ್ವಾಧೀನ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿ, ಸದ್ಯಕ್ಕೆ ಯೋಜನೆ ಸ್ಥಗಿತಗೊಳಿಸಿ ಸಮಿತಿ ರಚಿಸುವುದಾಗಿ ಘೋಷಿಸಿದ್ದಾರೆ.
ಬೆಂಗಳೂರು: ಬಿಡದಿ ಟೌನ್‌ಶಿಪ್ (ಉಪನಗರ) ಯೋಜನೆ ವಿವಾದದ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅತ್ಯಂತ ತೀಕ್ಷ್ಣ ಹಾಗೂ ವ್ಯವಸ್ಥಿತ ದಾಖಲೆಗಳೊಂದಿಗೆ ಮಾಧ್ಯಮಗೋಷ್ಠಿ ನಡೆಸಿದ ಡಿಕೆಶಿ , ಈ ಇಡೀ ಯೋಜನೆಯ ಇತಿಹಾಸವನ್ನು ಬಿಚ್ಚಿಡುವ ಮೂಲಕ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬಕ್ಕೆ ಖಡಕ್ ತಿರುಗೇಟು ನೀಡಿದ್ದಾರೆ.
"ನಾನು ಈ ಯೋಜನೆಯ ಪಿತಾಮಹನಲ್ಲ"
"ಬಿಡದಿಯಲ್ಲಿ ನಿನ್ನೆ ನಡೆದ ಘಟನೆ ನನಗೆ ತೀವ್ರ ನೋವುಂಟು ಮಾಡಿದೆ. ನಮ್ಮ ಸರ್ಕಾರಿ ಅಧಿಕಾರಿಗಳಿಗೆ ತೊಂದರೆ ಕೊಡಲಾಗಿದೆ. ರೈತರನ್ನು ತಪ್ಪು ದಾರಿಗೆ ಎಳೆಯುವ ವ್ಯವಸ್ಥಿತ ಸಂಚು ರಾಜಕೀಯವಾಗಿ ನಡೆಯುತ್ತಿದೆ. ಆದರೆ ನಾನಿಲ್ಲಿ ಸ್ಪಷ್ಟಪಡಿಸಲು ಬಯಸುತ್ತೇನೆ ಬಿಡದಿ ಟೌನ್‌ಶಿಪ್ ಯೋಜನೆ ನನ್ನ ಕನಸಿನ ಯೋಜನೆಯಲ್ಲ, ಇದಕ್ಕೆ ನಾನೇನೂ ಮುನ್ನುಡಿ ಬರೆದಿಲ್ಲ. ಮುನ್ನುಡಿ ಬರೆದವರು ನೀವು. ನಾನು ಕೇವಲ ಹಿರಿಯರು ಹಾಕಿಕೊಟ್ಟ ದಾರಿಯಲ್ಲಿ, ಅಂದಿನ ಸರ್ಕಾರಗಳ ಆದೇಶದಂತೆ ಕೆಲಸ ಮಾಡುತ್ತಿದ್ದೇನೆ ಅಷ್ಟೇ." ಎಂದರು.
ವೈಯಕ್ತಿಕವಾಗಿ ನಾನು ವ್ಯವಸಾಯ ಮಾಡದಿದ್ದರೂ, ಜನ್ಮತಃ ನಾನೊಬ್ಬ ರೈತನ ಮಗ. ರೈತರ ಕಷ್ಟ, ಶ್ರಮ ಮತ್ತು ಅವರ ನೋವು ನನಗೆ ಚೆನ್ನಾಗಿ ಗೊತ್ತಿದೆ. ಯಾರಿಗೆ ನೋವುಂಟು ಮಾಡುವುದು ಕೂಡ ನನಗೆ ಇಷ್ಟವಿಲ್ಲ" ಎಂದರು.
ಟೌನ್‌ಶಿಪ್ ಅಡಿಪಾಯ ಹಾಕಿದ್ದು ಯಾರು?
ಬಿಡದಿ ಟೌನ್‌ಶಿಪ್ ವಿಷಯದಲ್ಲಿ ಜೆಡಿಎಸ್ ನಾಯಕರು ನಡೆಸುತ್ತಿರುವ ಹೋರಾಟ ಕೇವಲ ರಾಜಕೀಯ ಗಿಮಿಕ್ ಎಂದ ಡಿ.ಕೆ. ಶಿವಕುಮಾರ್, ಯೋಜನೆಗೆ ಅಡಿಪಾಯ ಹಾಕಿದ ದಿನಾಂಕಗಳನ್ನು ಕಾಗದಪತ್ರಗಳ ಸಮೇತ ಜನರ ಮುಂದಿಟ್ಟರು.
ಸೆಪ್ಟೆಂಬರ್ 23, 2006: ಅಂದು ರಾಜ್ಯದಲ್ಲಿದ್ದ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದರು ಮತ್ತು ಬಿ.ಎಸ್. ಯಡಿಯೂರಪ್ಪ ಅವರು ಉಪಮುಖ್ಯಮಂತ್ರಿಯಾಗಿದ್ದರು. ಅವರದೇ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಸುತ್ತಮುತ್ತ 5 ಸಮಗ್ರ ಉಪನಗರಗಳನ್ನು (ಟೌನ್‌ಶಿಪ್‌ಗಳನ್ನು) ಅಭಿವೃದ್ಧಿಪಡಿಸಬೇಕು ಎಂದು ತೀರ್ಮಾನಿಸಲಾಗಿತ್ತು.
ಜೂನ್ 28, 2006: ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ ಸಮಗ್ರ ಉಪನಗರ ನಿರ್ಮಾಣಕ್ಕೆ ಗ್ಲೋಬಲ್ ಟೆಂಡರ್ ಕರೆಯಲು ಕುಮಾರಸ್ವಾಮಿ ನೇತೃತ್ವದ ಸರ್ಕಾರವೇ ನಿರ್ಧರಿಸಿತ್ತು.
ನವೆಂಬರ್ 29, 2006: ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಆದೇಶದಂತೆ ಬಿಡದಿ ಯೋಜನಾ ಪ್ರದೇಶದ ಜಮೀನುಗಳಲ್ಲಿ ಯಾವುದೇ ಖಾಸಗಿ ಪ್ರಾಧಿಕಾರವಾಗಲಿ ಅಥವಾ ಯಾರೇ ಆಗಲಿ ಯಾವುದೇ ಕಾಮಗಾರಿಗೆ ಅನುಮತಿ ನೀಡಬಾರದು ಎಂದು ಆದೇಶಿಸಿ ಆ ಇಡೀ ಪ್ರದೇಶವನ್ನು 'ರೆಡ್ ಝೋನ್' ಮಾಡಲಾಗಿತ್ತು. ಅಲ್ಲಿನ ವಸತಿ, ವಾಣಿಜ್ಯ ಮತ್ತು ಹಳ್ಳಿಯ ಮನೆಗಳನ್ನು ಒಕ್ಕಲೆಬ್ಬಿಸಲು ಅಂದೇ ಅವಕಾಶ ಕಲ್ಪಿಸಲಾಗಿತ್ತು.
ಜೂನ್ 11, 2007: ಅಂದು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಮತ್ತು ಆರ್. ಅಶೋಕ್ ಅವರು ಸಚಿವರಾಗಿದ್ದಾಗ ಮಂಡಾಲಹಳ್ಳಿ ಸೇರಿದಂತೆ ಮತ್ತೆರಡು ಗ್ರಾಮಗಳನ್ನು ಈ ಯೋಜನೆಗೆ ಸೇರಿಸಲಾಯಿತು.
2010 ಹಾಗೂ 2011: ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗಲೂ ಜಾಗತಿಕ ಟೆಂಡರ್ ಮುಂದುವರೆಸಲಾಯಿತು. ನಂತರ ನವೆಂಬರ್ 16, 2011 ರಂದು ರೈತರಿಗೆ ಪ್ರತಿ ಎಕರೆಗೆ ಗರಿಷ್ಠ 22 ಲಕ್ಷ ರೂ. ಪರಿಹಾರ ನೀಡಲು ಸರ್ಕಾರ ನಿರ್ಧರಿಸಿತ್ತು.
ಹೊಸ ಹೂಡಿಕೆಗೆ ಚಾಲನೆ
2019 ಮತ್ತು ನಂತರ ರಾಜ್ಯಕ್ಕೆ ಹೊಸ ಬಂಡವಾಳ ಹೂಡಿಕೆ ತರಲು ಟೌನ್‌ಶಿಪ್ ಅಗತ್ಯವಿದೆ ಎಂದು ಬಿ.ಎಸ್. ಯಡಿಯೂರಪ್ಪ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಿದ್ದರು.
"ಹೀಗೆ ಹಂತ ಹಂತವಾಗಿ ಈ ಇಡೀ ಯೋಜನೆಯನ್ನು ರೂಪಿಸಿ, ರೈತರ ಭೂಮಿಯನ್ನು ರೆಡ್ ಝೋನ್ ವ್ಯಾಪ್ತಿಗೆ ತಂದು, ರಿಯಲ್ ಎಸ್ಟೇಟ್‌ಗೆ ದಾರಿ ಮಾಡಿಕೊಟ್ಟಿದ್ದೇ ಕುಮಾರಸ್ವಾಮಿ ಅಣ್ಣನವರು. ಇಂದು ಅದೇ ಆದೇಶಗಳನ್ನು ನಾನು ಜಾರಿಗೊಳಿಸುತ್ತಿದ್ದರೆ ನನ್ನ ವಿರುದ್ಧ ಹೋರಾಟ ಮಾಡುತ್ತಿದ್ದಾರೆ," ಎಂದು ಡಿಕೆಶಿ ವ್ಯಂಗ್ಯವಾಡಿದರು.
ನಿಮ್ಮ ಕುಟುಂಬದ 36 ಎಕರೆ ಭೂಮಿ ಹೇಗೆ ಬಚಾವಾಯಿತು?"
ಜೆಡಿಎಸ್ ನಾಯಕರನ್ನು ನೇರವಾಗಿ ಪ್ರಶ್ನಿಸಿದ ಡಿ.ಕೆ. ಶಿವಕುಮಾರ್, "ನಾನು ರಿಯಲ್ ಎಸ್ಟೇಟ್ ದಂಧೆ ಮಾಡಿದ್ದೇನಾ ಅಣ್ಣಾ, ಅಪ್ಪಾಜಿ? ಯಾರು ಮಾಡಿದ್ದು ಈ ಕೆಲಸವನ್ನು? ಯಾರು ನಿಮಗೆ ರಾಜಕೀಯವಾಗಿ ಬದುಕು ಕೊಟ್ಟರೋ, ಅವರ ಮನೆಗಳನ್ನು, ಆಸ್ತಿಗಳನ್ನು ಕಿತ್ತುಕೊಳ್ಳಲು ಅಂದು ರೂಪಿಸಿದ ಮೋಸದ ಸಂಚನ್ನು ಎಷ್ಟು ದಿನ ಮುಚ್ಚಿಡಲು ಸಾಧ್ಯ?" ಎಂದು ಆಕ್ರೋಶ ಹೊರಹಾಕಿದರು.
"ಇದೇ ಟೌನ್‌ಶಿಪ್ ವ್ಯಾಪ್ತಿಯಲ್ಲಿ ನಿಮ್ಮ ಕುಟುಂಬಸ್ಥರು 36 ಎಕರೆ ಜಮೀನು ತಗೊಂಡಿದ್ದಾರೆ. ಆದರೆ ಅಚ್ಚರಿಯೆಂದರೆ ಅದರಲ್ಲಿ ನಿಮ್ಮ ಒಂದು ಎಕರೆ ಜಮೀನು ಕೂಡ ಭೂಸ್ವಾಧೀನವಾಗಿಲ್ಲ! ನಿಮ್ಮ ಕ್ಯಾತಗಾನಹಳ್ಳಿ ಜಮೀನು ಏಕೆ ಬಿಡದಿ ಇಂಡಸ್ಟ್ರಿಯಲ್ ಟೌನ್‌ಗೆ ಒಳಪಡಲಿಲ್ಲ? ಅದರ ಪಕ್ಕದಲ್ಲೇ ಒಂದು ರಸ್ತೆ ಮಾಡಿ, ಭೂಸ್ವಾಧೀನ ಮಾಡಿ ಅಲ್ಲಿ ಭಾರಿ ಪರಿಹಾರ ಪಡೆದುಕೊಂಡಾಗ ಯಾವ ಸರ್ಕಾರ ಅಧಿಕಾರದಲ್ಲಿತ್ತು?"
"ಯಡಿಯೂರಪ್ಪ ಹಾಗೂ ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿದ್ದಾಗ, ನೀವು ಆದೇಶ ಮಾಡಿ 15 ವರ್ಷಗಳಾಗಿತ್ತು. ಆಗ ಅದೇ ಟೌನ್‌ಶಿಪ್ ಭೂಮಿಗೆ 80 ಲಕ್ಷದಿಂದ 1 ಕೋಟಿ ರೂಪಾಯಿವರೆಗೆ ಪರಿಹಾರ ಕೊಡಿಸಿದ್ರಲ್ಲ, ಆಗ ನಿಮ್ಮ ಹೋರಾಟದ ಧ್ವನಿ ಎಲ್ಲಿ ಹೋಗಿತ್ತು? ಆಗ ನಿಮಗೆ ವಿಧಾನಸೌಧದ ಗಾಂಧಿ ಪ್ರತಿಮೆ ನೆನಪಾಗಲಿಲ್ಲವೇ? ಇಂದು ಡಿ.ಕೆ. ಶಿವಕುಮಾರ್ ಅಧಿಕಾರಕ್ಕೆ ಬಂದಾಗ ಇರುವ ಛಲ ಅಂದು ಯಡಿಯೂರಪ್ಪ ಅವರ ಮಗ ಪ್ರತಿಭಟನೆಗೆ ಹೋದಾಗ ನಿಮಗೆ ಯಾಕೆ ಇರಲಿಲ್ಲ?" ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು.
2-3 ತಿಂಗಳಲ್ಲಿ ಸಮಿತಿ ರಚನೆ, ಅಲ್ಲಿಯವರೆಗೆ ಟೌನ್ಶಿಪ್ ಯೋಜನೆ ಸ್ಥಗಿತ
ಪ್ರತಿಭಟನೆಯ ಹೆಸರಿನಲ್ಲಿ ಸರ್ಕಾರಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸುವುದನ್ನು ತೀವ್ರವಾಗಿ ಖಂಡಿಸಿದ ಡಿ.ಕೆ. ಶಿವಕುಮಾರ್ , ನಮ್ಮ ಅಧಿಕಾರಿಗಳಿಗೆ ಯಾವ ತಾಯಂದಿರು ಕೂಡ ಪೊರಕೆಯಲ್ಲಿ ಹೊಡೆಯುವುದು ಬೇಡ. ನಿಮಗೆ ಹೊಡೆಯಬೇಕು ಎನಿಸಿದರೆ ನನಗೆ ಬಂದು ಹೊಡೆಯಿರಿ, ನಾನು ಸಿದ್ಧನಿದ್ದೇನೆ. ಅಧಿಕಾರಿಗಳು ಕೇವಲ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಾನು ಯಾರ ಜಮೀನನ್ನೂ ಬಲವಂತವಾಗಿ ಕಿತ್ತುಕೊಳ್ಳುವುದಿಲ್ಲ. ಯಾರಿಗೆ ಸರ್ಕಾರ ನಿಗದಿಪಡಿಸಿದ ಹಣ ಬೇಕೋ ಅವರು ಜಮೀನು ಕೊಟ್ಟು ಪರಿಹಾರ ಪಡೆಯಬಹುದು. ಇಷ್ಟವಿಲ್ಲದಿದ್ದರೆ ತಮ್ಮ ಭೂಮಿಯನ್ನು ತಾವೇ ಇಟ್ಟುಕೊಂಡು ನೆಮ್ಮದಿಯಾಗಿ ಇರಬಹುದು. ರೈತರು ಒಪ್ಪಿದರೆ ಮಾತ್ರ ಯೋಜನೆ ನಡೆಯುತ್ತದೆ. ರೈತರ ಕಷ್ಟ ಸುಖಗಳನ್ನು ಮತ್ತು ಕಾಯ್ದೆಯ ಲೀಗಲ್ ಪಾಯಿಂಟ್‌ಗಳನ್ನು ಪರಿಶೀಲಿಸಲು ಇನ್ನು ಎರಡು ತಿಂಗಳಲ್ಲಿ ಒಂದು ವಿಶೇಷ ಸಮಿತಿ ರಚನೆ ಮಾಡುತ್ತೇನೆ. ಅಲ್ಲಿಯವರೆಗೆ ಕುಮಾರಸ್ವಾಮಿ ಮಾಡಿದ ಆ 'ರೆಡ್ ಝೋನ್' ಆದೇಶವನ್ನು ನಾನು ಸದ್ಯಕ್ಕೆ ಮುಟ್ಟಲು ಹೋಗುವುದಿಲ್ಲ. ಅದು ಹೇಗಿದೆಯೋ ಹಾಗೇ ಇರಲಿ ಎಂದು ಹೇಳಿದರು.
"ಜೈಲು ನನಗೇನು ಹೊಸದಲ್ಲ!"
ತಮ್ಮನ್ನು ಜೈಲಿಗೆ ಕಳುಹಿಸುವ ಸಂಚಿನ ಬಗ್ಗೆಯೂ ಮಾತನಾಡಿದ ಡಿ.ಕೆ. ಶಿವಕುಮಾರ್, ತಾವು ಯಾವುದಕ್ಕೂ ಹೆದರುವುದಿಲ್ಲ ಎಂದರು. "ನನ್ನನ್ನು ಜೈಲಿಗೆ ಕಳುಹಿಸಲು ಹುನ್ನಾರ ನಡೆಯುತ್ತಿದೆ. ಇವತ್ತು ಕೂಡ ಡಿಕೆಶಿ ಜೈಲಿಗೆ ಹೋಗ್ತಾರೆ ಎಂದು ಕುಮಾರಣ್ಣ ಹೇಳುತ್ತಿದ್ದಾರೆ. ಕುಮಾರಣ್ಣ, ನಿಮ್ಮ ಬಳಿ ಒಳ್ಳೆಯ ವಕೀಲರಿದ್ದಾರೆ. ನನ್ನನ್ನು ಜೈಲಿಗೆ ಕಳಿಸುವ ಕಾಲ ಸಮೀಪಿಸುತ್ತಿದೆ ಎಂದು ನೀವೇ ಹೇಳುತ್ತಿದ್ದೀರಿ. ಅದಕ್ಕೂ ನಾನು ಸಿದ್ಧನಿದ್ದೇನೆ. ಜೈಲು ನನಗೇನು ಹೊಸದಲ್ಲ. ನೋವು ಅನುಭವಿಸಿ ಬೆಂದವನು ನಾನು. ನನ್ನ ಉಸಿರಿರುವ ತನಕ ಜನಸೇವೆ ಮಾಡುವುದೇ ನನ್ನ ಧರ್ಮ. ಈ ಪೆನ್ನು ಮತ್ತು ಪೇಪರ್ ರಾಜ್ಯದ ಜನತೆಗೆ ಸೀಮಿತವಾಗಿರುತ್ತದೆ . ಜೈಲು ನನಗೇನು ಹೊಸದಲ್ಲ. ಜೈಲಿನಿಂದ ಬಂದು ಸಿಎಂ ಆಗಿದ್ದೇನೆ. ನೀವು ಚನ್ನಪಟ್ಟಣದಲ್ಲಿ ಕೂತು ಏನು ಮಾತನಾಡುತ್ತಿದ್ದೀರಿ ಮತ್ತು ರೈತರೊಂದಿಗೆ ಏನು ರಾಜಕೀಯ ಗೇಮ್ ಆಡುತ್ತಿದ್ದೀರಿ ಎಂಬ ಪೂರ್ಣ ಅರಿವು ನನಗಿದೆ ಎಂದು ಸವಾಲು ಹಾಕಿದರು.
ತಾವು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಚಿವರಾಗಿದ್ದಾಗ ಕೇವಲ 6 ಲಕ್ಷ ರೂಪಾಯಿಗೆ ರೈತರ ಮನವೊಲಿಸಿ ಭೂಸ್ವಾಧೀನ ಮಾಡಿದ್ದನ್ನು ನೆನಪಿಸಿದ ಅವರು, ಇಂದು ಆ ಭಾಗದ ರೈತರ ಆಸ್ತಿ ಮೌಲ್ಯ ಎಷ್ಟಾಗಿದೆ ಎನ್ನುವುದು ಎಲ್ಲರಿಗೂ ತಿಳಿದಿದೆ ಎಂದರು. ಒಟ್ಟಾರೆಯಾಗಿ, ಜೆಡಿಎಸ್ ನಾಯಕರು ತಮ್ಮದೇ ಹಳೆಯ ನಿರ್ಧಾರಗಳನ್ನು ಮರೆತು, ರಾಜಕೀಯ ಲಾಭಕ್ಕಾಗಿ ರೈತರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.


