ಭಟ್ಕಳ ನಗರವನ್ನು 24 ಗಂಟೆಯೊಳಗೆ ಸ್ಫೋಟಿಸುವುದಾಗಿ ಬೆದರಿಕೆ ಇ-ಮೇಲ್ ಬಂದ ಹಿನ್ನೆಲೆಯಲ್ಲಿ ಪೊಲೀಸರು ಭದ್ರತೆ ಬಿಗಿಗೊಳಿಸಿದ್ದಾರೆ. ಬಾಂಬ್ ನಿಷ್ಕ್ರಿಯ ದಳ ಮತ್ತು ಡಾಗ್ ಸ್ಕ್ವಾಡ್ ನಗರದಾದ್ಯಂತ ತಪಾಸಣೆ ನಡೆಸುತ್ತಿದೆ. ಸೈಬರ್ ವಿಭಾಗದ ಸಹಾಯದಿಂದ ಇ-ಮೇಲ್ ಮೂಲ ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ.

ಕಾರವಾರ (ಜು.11): ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಗರವನ್ನು 24 ಗಂಟೆಯೊಳಗೆ ಸ್ಫೋಟಿಸಿ ನಾಶಮಾಡುತ್ತೇವೆ ಎಂದು ಇ-ಮೇಲ್ ಮೂಲಕ ಬರುವಂತೆ ಕಳಿಸಿರುವ ಬೆದರಿಕೆದಿಂದ ಭಟ್ಕಳ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದ್ದು, ನಗರದೆಲ್ಲೆಡೆ ಬಿಗಿ ಭದ್ರತೆ ಏರ್ಪಡಿಸಲಾಗಿದೆ.

ಜುಲೈ 10ರ ಬೆಳಗ್ಗೆ 10.30ರ ಸಮಯದಲ್ಲಿ, kannnannandik@gmail.com ಎಂಬ ವಿಳಾಸದಿಂದ 'ಕಣ್ಣನ್ ಗುರುಸ್ವಾಮಿ' ಎಂಬ ಹೆಸರಿನಲ್ಲಿ ಈ ಬೆದರಿಕೆಭರಿತ ಇ-ಮೇಲ್, ಭಟ್ಕಳ ಶಹರ ಪೊಲೀಸ್ ಠಾಣೆಯ ಅಧಿಕೃತ ಇ-ಮೇಲ್ ವಿಳಾಸ bhatkaltownkwr@ksp.gov.in ಗೆ ರವಾನೆಯಾಗಿತ್ತು. ಇ-ಮೇಲ್‌ನಲ್ಲಿ 'ಭಟ್ಕಳ ನಗರದಾದ್ಯಂತ ಸ್ಫೋಟ ಸಂಭವಿಸುತ್ತಿದೆ. 24 ಗಂಟೆಯೊಳಗೆ ನಗರ ನಾಶವಾಗಲಿದೆ' ಎಂಬ ಹೆಸರಿಲ್ಲದ ಬೆದರಿಕೆಯೊಂದಿಗೆ ಭಯದ ವಾತಾವರಣವನ್ನು ಸೃಷ್ಟಿಸಲು ಯತ್ನಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪೊಲೀಸರ ತ್ವರಿತ ಕಾರ್ಯಾಚರಣೆ:

ಈ ಇ-ಮೇಲ್‌ ಬಂದ ತಕ್ಷಣವೇ ಭಟ್ಕಳ ಪೊಲೀಸರು ಎಚ್ಚರಗೊಂಡು, ಜಿಲ್ಲಾ ಬಾಂಬ್ ನಿಷ್ಕ್ರಿಯ ದಳ (Bomb Disposal Squad) ಹಾಗೂ ಡಾಗ್ ಸ್ಕ್ವಾಡ್‌ನ ಸಹಾಯದಿಂದ ನಗರದ ಪ್ರಮುಖ ಸ್ಥಳಗಳಲ್ಲಿ ವಿಸ್ತೃತ ತಪಾಸಣಾ ಕಾರ್ಯಾಚರಣೆ ಆರಂಭಿಸಿದರು.

  • ಭಟ್ಕಳ ಬಸ್ ನಿಲ್ದಾಣ
  • ರೈಲ್ವೇ ನಿಲ್ದಾಣ
  • ಸಾರ್ವಜನಿಕ ಉದ್ಯಾನಗಳು
  • ಸಾರ್ವಜನಿಕ ಆವರಣಗಳು ಹಾಗೂ ಶಾಲಾ ಕಾಲೇಜು ಹತ್ತಿರದ ಭಾಗಗಳಲ್ಲಿ ಬಿಗಿ ಭದ್ರತೆ ಮತ್ತು ಪರಿಶೀಲನೆ ನಡೆಯಿತು.

ಸುಮೋಟೊ ದೂರು ದಾಖಲು:

ಈ ಸಂಬಂಧ ಭಟ್ಕಳ ಶಹರ ಠಾಣೆಯ ಪಿಎಸ್‌ಐ ನವೀನ್ ನಾಯ್ಕ ಅವರು ಸ್ವಯಂಪ್ರೇರಿತ (suomoto) ದೂರು ದಾಖಲಿಸಿಕೊಂಡಿದ್ದಾರೆ. 'ಕಣ್ಣನ್ ಗುರುಸ್ವಾಮಿ' ಎಂಬ ಹೆಸರಿನ ವ್ಯಕ್ತಿ ವಿರುದ್ಧ ಐಟಿ ಕಾಯ್ದೆಗಳಡಿ ಹಾಗೂ ಸಾರ್ವಜನಿಕ ಆತಂಕ ಉಂಟುಮಾಡುವ ಹೆಸರಿಲ್ಲದ ಬೆದರಿಕೆ ನೀಡಿರುವ ಹಿನ್ನೆಲೆಯಲ್ಲಿ ಕಾನೂನು ಕ್ರಮ ಆರಂಭಿಸಲಾಗಿದೆ.

ಪೊಲೀಸರ ನಿಗಾ ಹಾಗೂ ಪರಿಶೀಲನೆ ಮುಂದುವರಿದಿದೆ:

ಭಟ್ಕಳ ಪೊಲೀಸ್ ಇಲಾಖೆ ಹಾಗೂ ಗೌಪ್ಯ ವಿಭಾಗಗಳಿಂದ ಈ ಇ-ಮೇಲ್‌ನ ಮೂಲ ಪತ್ತೆಹಚ್ಚಲು ಸೈಬರ್ ವಿಭಾಗ ಸಹಾಯ ಪಡೆಯಲಾಗಿದೆ. ನಗರದ ಸಾರ್ವಜನಿಕರಲ್ಲಿ ಯಾವುದೇ ಗೊಂದಲ ಉಂಟಾಗದಂತೆ ಅಧಿಕಾರಿಗಳು ಮೌನದಿಂದಲೇ ಕಾರ್ಯಾಚರಣೆ ಮುಂದುವರೆಸಿದ್ದಾರೆ. 'ಇದೊಂದು ಫೇಕ್ ಇ-ಮೇಲ್ ಆಗುವ ಸಾಧ್ಯತೆ ಇದ್ದರೂ, ಯಾವುದೇ ಅಪಾಯ ಎದುರಾಗದಂತೆ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ' ಎಂದು ಭಟ್ಕಳ ಶಹರ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ಭಟ್ಕಳ ನಗರದಲ್ಲಿ ಇಂತಹ ಬೆದರಿಕೆ ಇ-ಮೇಲ್ ಪ್ರಕರಣವು ಭದ್ರತೆಯ ಬಗ್ಗೆ ಗಂಭೀರವಾಗಿ ನೋಡುವ ಅಗತ್ಯವಿದೆ ಎಂಬುದನ್ನು ತೋರಿಸಿದೆ. ಪೊಲೀಸರು ತಕ್ಷಣ ಕ್ರಮ ಕೈಗೊಂಡು ಸಾರ್ವಜನಿಕ ಭದ್ರತೆಯ ಕಡೆ ಕ್ರಮ ಕೈಗೊಂಡಿದ್ದು, ಇಡೀ ಜಿಲ್ಲೆಯಲ್ಲಿ ಹೆಚ್ಚಿನ ಎಚ್ಚರಿಕೆಯನ್ನು ಕೈಗೊಂಡಿದ್ದಾರೆ.

ಇದನ್ನೂ ಓದಿ: ತಿರುಪತಿ ರೈಲಿಗೆ ಮೂರು ಬಾರಿ ಅಡ್ಡಬಿದ್ದು ನಮಸ್ಕಾರ ಮಾಡಿದ ಅಜ್ಜಿ: ಚಿಕ್ಕಮಗಳೂರಿನಲ್ಲಿ ಭಕ್ತಿಯ ಅಪರೂಪದ ದೃಶ್ಯ

ಬೆಂಗಳೂರಿನಲ್ಲಿ ಬರುತ್ತಿದ್ದ ಬಾಂಬ್ ಸ್ಪೋಟದ ಇಮೇಲ್:

ಬೆಂಗಳೂರು ನಗರದಲ್ಲಿ ಹಲವು ಬಾರಿ ಪ್ರತಿಷ್ಠಿತ ಶಾಲೆಗಳನ್ನು, ಹೋಟೆಲ್‌ಗಳನ್ನು, ಶಾಪಿಂಗ್ ಮಾಲ್‌ಗಳನ್ನು ಹಾಗೂ ದೇವಸ್ಥಾನಗಳನ್ನು ಬಾಂಬ್ ಇಟ್ಟು ಸ್ಪೋಟ ಮಾಡುವುದಾಗಿ ಹಲವುಯ ಪೊಲೀಸ್ ಠಾಣೆಗಳಿಗೆ ಬೆದರಿಕೆ ಇಮೇಲ್‌ಗಳು ಬರುತ್ತಿರುತ್ತವೆ. ಆದರೆ, ಈ ಬಗ್ಗೆ ಪೊಲೀಸರು ತಕ್ಷಣ ಕ್ರಮ ಕೈಗೊಂಡು ಪರಿಶೀಲನೆ ಮಾಡುತ್ತಾರೆ. ನಂತರ, ಫೇಕ್ ಇಮೇಲ್ ಆಗಿದ್ದರೆ ಈ ಬಗ್ಗೆ ಮಾಹಿತಿ ಪಡೆದು ಕೇಸ್ ದಾಖಲಿಸುತ್ತಾರೆ. ನಂತರ ಇಮೇಲ್ ಬಂದ ಮೂಲಗಳನ್ನು ಹುಡುಕಿ ಸಂಬಂಧಪಟ್ಟ ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ. ಆದರೆ, ಬೆಂಗಳೂರಿನಲ್ಲಿ ರಾಮೇಶ್ವರಂ ಕೆಫೆ ಸ್ಪೋಟದ ಬಳಿಕ ಎಲ್ಲ ಬಾಂಬ್ ಬೆದರಿಕೆ ಇಮೇಲ್ ಅಥವಾ ಮೆಸೇಜ್‌ಗಳನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸುತ್ತದೆ.