ಬೆಸ್ಕಾಂ ವ್ಯಾಪ್ತಿಯಲ್ಲಿ ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಪಡೆಯುತ್ತಿರುವ 1.42 ಲಕ್ಷ ಗ್ರಾಹಕರನ್ನು ಯೋಜನೆಯಿಂದ ಕೈಬಿಡಲು ಸಿದ್ಧತೆ ನಡೆದಿದೆ. ಕಳೆದ 4 ತಿಂಗಳುಗಳಿಂದ ನಡೆದ ಸಮೀಕ್ಷೆಯಲ್ಲಿ ದಾಖಲೆ ಒದಗಿಸದ ಹಾಗೂ ಅಸಹಕಾರ ತೋರಿದವರನ್ನು ಅನರ್ಹರೆಂದು ಪರಿಗಣಿಸುವ ಸಾಧ್ಯತೆಯಿದೆ. ಶೀಘ್ರದಲ್ಲೇ ಇಂಧನ ಇಲಾಖೆಗೆ ವರದಿ ಸಲ್ಲಿಕೆಯಾಗಲಿದೆ.

ಬೆಂಗಳೂರು (ನ.03): ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ 5 ಗ್ಯಾರಂಟಿಗಳಲ್ಲಿ ಒಂದಾದ ‘ಗೃಹಜ್ಯೋತಿ’ (Gruha Jyothi Scheme) ಯೋಜನೆಯ ಫಲಾನುಭವಿಗಳಿಗೆ ಇದೀಗ ದೊಡ್ಡ ಆಘಾತ ಎದುರಾಗುವ ಸಾಧ್ಯತೆಯಿದೆ. ಬೆಸ್ಕಾಂ (BESCOM) ವ್ಯಾಪ್ತಿಯಲ್ಲಿ ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿರುವ ಸುಮಾರು 1.42 ಲಕ್ಷ ಗ್ರಾಹಕರನ್ನು ಯೋಜನೆಯಿಂದ ಕೈಬಿಡಲು ಸಿದ್ಧತೆಗಳು ನಡೆದಿವೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

4 ತಿಂಗಳ ಸಮೀಕ್ಷೆ ಅಂತ್ಯ - 1.42 ಲಕ್ಷ ಮಂದಿ ಅಸಹಕಾರ:

ಗೃಹಜ್ಯೋತಿ ಯೋಜನೆಯಡಿ ನೈಜ ಫಲಾನುಭವಿಗಳಿಗೆ ಮಾತ್ರ ಉಚಿತ ವಿದ್ಯುತ್ ತಲುಪುತ್ತಿದೆಯೇ ಅಥವಾ ಅನರ್ಹರು ಯೋಜನೆಯ ಲಾಭ ಪಡೆಯುತ್ತಿದ್ದಾರೆಯೇ ಎಂಬುದನ್ನು ಪತ್ತೆಹಚ್ಚಲು ಬೆಸ್ಕಾಂ ಕಳೆದ 4 ತಿಂಗಳುಗಳಿಂದ ಸಮಗ್ರ ಮರುಪರಿಶೀಲನಾ ಹಾಗೂ ಭೌತಿಕ ಸಮೀಕ್ಷಾ ಕಾರ್ಯವನ್ನು ಕೈಗೊಂಡಿತ್ತು. ಇದೀಗ ಈ ಸಮೀಕ್ಷೆ ಮುಕ್ತಾಯಗೊಂಡಿದೆ.

ಆದರೆ, ಸಮೀಕ್ಷೆಯ ವೇಳೆ ಅಧಿಕಾರಿಗಳು ಮನೆ ಮನೆಗೆ ತೆರಳಿ ದಾಖಲೆ ಪರಿಶೀಲನೆ ನಡೆಸಿದಾಗ, ಬರೋಬ್ಬರಿ 1.42 ಲಕ್ಷ ಫಲಾನುಭವಿಗಳು ಸಮೀಕ್ಷೆಯಲ್ಲಿ ಭಾಗಿಯಾಗಲು ಹಿಂದೇಟು ಹಾಕಿದ್ದಾರೆ ಅಥವಾ ಅಗತ್ಯ ದಾಖಲೆಗಳನ್ನು ಒದಗಿಸದೆ ಅಸಹಕಾರ ತೋರಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ, ಇವರನ್ನು ಯೋಜನೆಯಿಂದ ಹೊರಗಿಡಲು ಬೆಸ್ಕಾಂ ಚಿಂತನೆ ನಡೆಸಿದೆ.

8 ಜಿಲ್ಲೆಗಳಲ್ಲಿ ಪರಿಶೀಲನೆ – 74 ಲಕ್ಷ ಫಲಾನುಭವಿಗಳು:

ಬೆಸ್ಕಾಂ ವ್ಯಾಪ್ತಿಗೆ ಬರುವ ಪ್ರಮುಖ 8 ಜಿಲ್ಲೆಗಳಲ್ಲಿ ಈ ಪರಿಶೀಲನೆ ನಡೆದಿದೆ:

  1. ಬೆಂಗಳೂರು ನಗರ
  2. ಬೆಂಗಳೂರು ಗ್ರಾಮಾಂತರ
  3. ರಾಮನಗರ
  4. ಕೋಲಾರ
  5. ಚಿಕ್ಕಬಳ್ಳಾಪುರ
  6. ತುಮಕೂರು
  7. ದಾವಣಗೆರೆ
  8. ಚಿತ್ರದುರ್ಗ

ಬೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟು 74 ಲಕ್ಷ ಗೃಹಜ್ಯೋತಿ ಗ್ರಾಹಕರು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ ಸಮೀಕ್ಷೆಗೆ ಸ್ಪಂದಿಸದ 1.42 ಲಕ್ಷ ಮಂದಿಯನ್ನು ಅನರ್ಹರೆಂದು ಪರಿಗಣಿಸಿ, ಅವರಿಗೆ ಉಚಿತ ವಿದ್ಯುತ್ ಸ್ಥಗಿತಗೊಳಿಸುವ ಸಾಧ್ಯತೆ ದಟ್ಟವಾಗಿದೆ.

ಇಂಧನ ಇಲಾಖೆಗೆ ಶೀಘ್ರ ವರದಿ ಸಲ್ಲಿಕೆ:

4 ತಿಂಗಳ ಕಾಲ ನಡೆಸಲಾದ ಈ ಮರುಪರಿಶೀಲನಾ ಸಮೀಕ್ಷೆಯ ಸಮಗ್ರ ವರದಿಯನ್ನು ಬೆಸ್ಕಾಂ ಶೀಘ್ರದಲ್ಲೇ ಇಂಧನ ಇಲಾಖೆಗೆ ಸಲ್ಲಿಸಲಿದೆ. ಇಂಧನ ಇಲಾಖೆ ಹಾಗೂ ಸರ್ಕಾರದ ಮಟ್ಟದಲ್ಲಿ ಅಂತಿಮ ನಿರ್ಧಾರ ಕೈಗೊಂಡ ಬಳಿಕ, ಸಮೀಕ್ಷೆಯಲ್ಲಿ ಸಹಕರಿಸದ ಗ್ರಾಹಕರಿಗೆ ಮುಂದಿನ ತಿಂಗಳಿನಿಂದ ಉಚಿತ ವಿದ್ಯುತ್ ರದ್ದಾಗಿ, ಪೂರ್ಣ ಕರೆಂಟ್ ಬಿಲ್ ಪಾವತಿಸಬೇಕಾದ ಪರಿಸ್ಥಿತಿ ಎದುರಾಗಬಹುದು.