1.15 ಕೋಟಿ ರೂ. ಹವಾಲಾ ಹಣ ದರೋಡೆ ಪ್ರಕರಣದಲ್ಲಿ ಕಾರವಾರದ ಪೊಲೀಸ್ ಕಾನ್‌ಸ್ಟೇಬಲ್ ಶ್ರೀಶೈಲ್ ಶಾಮೀಲಾಗಿರುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಎಸ್‌ಪಿ ದೀಪನ್ ಅವರು ಕಾನ್‌ಸ್ಟೇಬಲ್‌ನನ್ನು ಸೇವೆಯಿಂದ ಅಮಾನತು ಮಾಡಿದ್ದು, ಮಂಗಳೂರು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಉತ್ತರ ಕನ್ನಡ: ಬರೋಬ್ಬರಿ 1.15 ಕೋಟಿ ರೂಪಾಯಿ ಮೌಲ್ಯದ ಹವಾಲಾ ಹಣ ದರೋಡೆ ಪ್ರಕರಣದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಪೊಲೀಸ್ ಕಾನ್‌ಸ್ಟೇಬಲ್ ಒಬ್ಬರು ಲಾಕ್ ಆಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಕಾರವಾರ ಟ್ರಾಫಿಕ್ ಠಾಣೆಯ ಕಾನ್‌ಸ್ಟೇಬಲ್ ಶ್ರೀಶೈಲ್ ವಿರುದ್ಧ ಈ ಗಂಭೀರ ಆರೋಪ ಕೇಳಿಬಂದಿದೆ. ಈ ಬಗ್ಗೆ ಪೊಲೀಸ್ ಅಧಿಕಾರಿಗಳಿಂದ ಅಧಿಕೃತ ಮಾಹಿತಿಯನ್ನ ನಿರೀಕ್ಷಿಸಲಾಗಿದೆ.

ಏನಿದು ಪ್ರಕರಣ?

ಹವಾಲಾ ಹಣ ಎನ್ನಲಾಗುತ್ತಿರುವ 1.15 ಕೋಟಿ ರೂಪಾಯಿ ಮೌಲ್ಯದ ಹಣವನ್ನು ದಾವಣಗೆರೆಯಿಂದ ಮಂಗಳೂರಿಗೆ ಸಾಗಿಸಲಾಗುತ್ತಿತ್ತು. ಸತ್ಯನಾರಾಯಣ ಅನ್ನೋ ಈ ಹಣವನ್ನು ಸಾಗಿಸುತ್ತಿದ್ದರು. ಈ ವಿಚಾರ ದುಷ್ಕರ್ಮಿಗಳ ಗ್ಯಾಂಗ್‌ಗೆ ಗೊತ್ತಾಗಿದೆ. ಮಾರ್ಗ ಮಧ್ಯೆ ಸತ್ಯನಾರಾಯಣ ಅವರನ್ನು ತಡೆದ ಗ್ಯಾಂಗ್, ಅವರ ಬಳಿಯಿದ್ದ 1.15 ಕೋಟಿ ರೂಪಾಯಿ ಲೂಟಿ ಮಾಡಿದೆ ಎಂಬ ಆರೋಪ ಕೇಳಿಬಂದಿದೆ.

ಬೆನ್ನಲ್ಲೇ ಸತ್ಯನಾರಾಯಣ ಅನ್ನೋರು ಮಂಗಳೂರು ಪೊಲೀಸರಿಗೆ ದೂರು ನೀಡಿದ್ದಾರೆ. ಕೂಡಲೇ ತನಿಖೆ ಕೈಗೆತ್ತಿಕೊಂಡ ಮಂಗಳೂರು ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದರು. ಕೊನೆಗೂ ಪೊಲೀಸರು ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತನಿಖೆಯಲ್ಲಿ ಗೊತ್ತಾಗಿರೋದು ಏನು?

ಸತ್ಯನಾರಾಯಣ ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ನಂತರ ಪ್ರಕರಣದ ಹಿಂದೆ ಪೊಲೀಸ್ ಕಾನ್‌ಸ್ಟೇಬಲ್ ಒಬ್ಬನ ಪಾತ್ರ ಇರೋದು ಗೊತ್ತಾಗಿದೆ. ಈ ಪ್ರಕರಣದಲ್ಲಿ ಆತನೇ ಮಾಸ್ಟರ್ ಮೈಂಡ್ ಎಂದು ಹೇಳಲಾಗುತ್ತಿದೆ. ಕೆಲವು ವರದಿಗಳ ಪ್ರಕಾರ, ಕಾರವಾರದ ಕಾನ್‌ಸ್ಟೇಬಲ್ ಎನ್ನಲಾಗುತ್ತಿರುವ ಶ್ರೀಶೈಲ್ ಸ್ಥಳೀಯ ಯುವಕರ ತಂಡವನ್ನು ಕಟ್ಟಿಕೊಂಡಿದ್ದ. ಅಂತೆಯೇ ಆ ಗ್ಯಾಂಗ್‌ನೊಂದಿಗೆ ದರೋಡೆಗೆ ಪ್ಲಾನ್ ರೂಪಿಸಿದ್ದ ಎನ್ನಲಾಗಿದೆ.

ಹಣ ದರೋಡೆಗಾಗಿ ಕಾರವಾರ ತಾಲೂಕಿನ ಕಿನ್ನರ ಗ್ರಾಮದ ಗಣೇಶ್ ಕೋಳಂಕರ್ ಎಂಬಾತನಿಗೆ ಈ ಕೃತ್ಯದ ಹೊಣೆ ನೀಡಲಾಗಿತ್ತು. ಪ್ರಕರಣದ ಬೆನ್ನು ಹತ್ತಿದ್ದ ಪೊಲೀಸರಿಗೆ ಒಂದೊಂದೇ ಸುಳಿವು ಸಿಗುತ್ತ ಹೋದವು. ಕೊನೆಗೆ ಮಂಗಳೂರು ಪೊಲೀಸರು ಮೂವರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಪ್ರಮುಖ ಆರೋಪಿ ನಾಪತ್ತೆ

ಇನ್ನು ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಎನ್ನಲಾಗುತ್ತಿರುವ ಗಣೇಶ್ ಕೋಳಂಕರ್ ನಾಪತ್ತೆ ಆಗಿದ್ದಾನೆ ಎನ್ನಲಾಗಿದೆ. ಆತನ ಸೆರೆ ಹಿಡಿಯಲು ಪೊಲೀಸರು ಬಲೆ ಬೀಸಿದ್ದಾರೆ. ಇಲ್ಲಿಯವರೆಗೆ ಆತ ಸಿಕ್ಕಿಲ್ಲ. ಶೀಘ್ರದಲ್ಲೇ ಬಂಧಿಸಿ ಪ್ರಕರಣಕ್ಕೆ ಟ್ವಿಸ್ಟ್ ಕೊಡುವ ಭರವಸೆಯಲ್ಲಿ ಪೊಲೀಸರು ಇದ್ದಾರೆ ಎಂದು ತಿಳಿದುಬಂದಿದೆ.

ಈ ಪ್ರಕರಣವು ಪೊಲೀಸ್ ಇಲಾಖೆಗೆ ದೊಡ್ಡ ಮುಜುಗರ ತಂದಿದೆ. ಕೋಟ್ಯಾಂತರ ರೂಪಾಯಿ ದರೋಡೆ ಪ್ರಕರಣದಲ್ಲಿ ತಮ್ಮ ಸಿಬ್ಬಂದಿಯ ಹೆಸರು ಕೇಳಿಬಂದಿರೋರು ಪೊಲೀಸ್ ಇಲಾಖೆಗೆ ಆಘಾತದಿಂದೆ. ಕೇಸ್‌ನಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗುತ್ತಿರುವ ಶ್ರೈಶೈಲ್ ನನ್ನು ಅಮಾನತು ಮಾಡಲಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಅವರು, ಆರೋಪಿ ಕಾನ್‌ಸ್ಟೇಬಲ್‌ನಲ್ಲಿ ಸೇವೆಯಿಂದ ಅಮಾನತು ಮಾಡಿದ್ದಾರೆ ಎಂದು ತಿಳಿದುಬಂದಿದೆ.