Asianet Suvarna News Asianet Suvarna News

ಸೈಬರ್ ವಂಚಕರ ಕಾಟವೇ? ಹಾಗಾದ್ರೆ ಇಲ್ಲಿದೆ ಗುಡ್ ನ್ಯೂಸ್!

ಮಹತ್ವದ ಕಾರ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದ ನಗರ ಪೊಲೀಸ್ ಆಯುಕ್ತರು | ಗೃಹ ಇಲಾಖೆಯಿಂದ ಪೂರಕ ಸ್ಪಂದನೆ | ಕೆಲವೇ ದಿನಗಳಲ್ಲಿ ವಿಶೇಷ ಠಾಣೆಗಳ ಸ್ಥಾಪನೆ | ಸೈಬರ್ ವಂಚನೆ ತಡೆಯಲು 8 ವಿಶೇಷ ಠಾಣೆ ಆರಂಭ

Bengaluru to get 8 special police stations to curb cyber crime
Author
Bengaluru, First Published Nov 2, 2018, 10:13 AM IST

-ಗಿರೀಶ್ ಮಾದೇನಹಳ್ಳಿ

ಬೆಂಗಳೂರು: ದಿನೇ ದಿನೇ ಅಂಕೆ ಇಲ್ಲದೆ ಬೆಳೆಯುತ್ತಿರುವ ಸೈಬರ್ ಮತ್ತು ಆರ್ಥಿಕ ವಂಚನೆಗಳು ಹಾಗೂ ಮಾದಕ ವಸ್ತು ಮಾರಾಟ ಕೃತ್ಯಗಳಿಗೆ ಕಡಿವಾಣ ಹಾಕಲು ಮುಂದಾಗಿರುವ ನಗರ ಪೊಲೀಸರು, ಈಗ ಅಂತಹ ಅಪರಾಧ ಪ್ರಕರಣಗಳ ತನಿಖೆ ಸಲುವಾಗಿಯೇ ರಾಜಧಾನಿಯಲ್ಲಿ ಎಂಟು ವಿಶೇಷ ಠಾಣೆಗಳ ಸ್ಥಾಪನೆ ಸಂಬಂಧ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಈ ಪ್ರಸಾವನೆಗೆ ಗೃಹ ಇಲಾಖೆಯು ಸಹ ಪೂರಕವಾಗಿ ಸ್ಪಂದಿಸಿದ್ದು, ಕೆಲವೇ ದಿನಗಳಲ್ಲಿ ನಗರದ ಪ್ರತಿ ವಿಭಾಗದಲ್ಲಿ ‘ಸೈಬರ್, ಆರ್ಥಿಕ ಮತ್ತು ಮಾದಕ ವಸ್ತು ಠಾಣೆ’ (ಸಿಇಎನ್) ಹೆಸರಿನಲ್ಲಿ ವಿಶೇಷ ಠಾಣೆಗಳು ಆರಂಭವಾಗಲಿದೆ. ಈ ಠಾಣೆಗಳ ಸ್ಥಾಪನೆ ಬಳಿಕ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಸಿಸಿಬಿ ವಿಭಾಗದ ಸೈಬರ್ ಠಾಣೆ ಕಾರ್ಯದೊತ್ತಡ ಸಹ ತಗ್ಗುವ ನಿರೀಕ್ಷೆಯಿದೆ.

ಇತ್ತೀಚಿನ ದಿನಗಳಲ್ಲಿ ಸೈಬರ್, ಆರ್ಥಿಕ ವಂಚನೆಗಳ ಹಾಗೂ ಮಾದಕ ವಸ್ತು ಮಾರಾಟ ಜಾಲದ ವಿರುದ್ಧ ಪ್ರಕರಣಗಳು ಸಂಖ್ಯೆ ಏರುಮುಖವಾಗುತ್ತಿವೆ. ಅದರಲ್ಲೂ ಸೈಬರ್ ವಂಚಕರ ಆಟಾಟೋಪಕ್ಕೆ ಅಂಕುಶವಿಲ್ಲದಂತಾಗಿದೆ. ಈ ಸಂಬಂಧ ಸಿಸಿಬಿ ಮತ್ತು ಸಿಐಡಿಯ ಸೈಬರ್ ಠಾಣೆಗಳಿಗೆ ಪ್ರತಿ ದಿನ ನೂರಾರು ದೂರುಗಳು ಸಲ್ಲಿಕೆಯಾಗಿದ್ದು, ೧೦ರಿಂದ ೩೦ ಎಫ್‌ಐಆರ್‌ಗಳು ದಾಖಲಾಗುತ್ತಿವೆ. ಈ ಅಪರಾಧ ನಿಯಂತ್ರಣಕ್ಕೆ ಸಾಕಷ್ಟು ಕ್ರಮ ವಹಿಸಿದ ಪೊಲೀಸರು, ಈಗ ನಗರದ ಪ್ರತಿ ಡಿಸಿಪಿ ವಿಭಾಗದಲ್ಲೂ ಸಿಇಎನ್ ಠಾಣೆಗಳ ಸ್ಥಾಪಿಸುವ ನಿರ್ಧಾರಕ್ಕೆ ಬಂದಿದ್ದಾರೆ.

ಇನ್ಸ್ಪೆಕ್ಟರ್ಗಳು ಠಾಣಾಧಿಕಾರಿಗಳು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಲಾಟರಿ ಮತ್ತು ಅಬಕಾರಿ ಮಾರಾಟ ನಿಷೇಧ ಘಟಕ ರದ್ದುಪಡಿಸಿದ ಬಳಿಕ ಜಿಲ್ಲಾ ಮಟ್ಟದಲ್ಲಿ ವಿಶೇಷ ದಳ ರಚಿಸಲಾಯಿತು. ದಿನ ದಿನೇ ಆರ್ಥಿಕ, ಅಪ್ರಾಪ್ತ ಮಕ್ಕಳ ನಾಪತ್ತೆ ಹಾಗೂ ಸೈಬರ್ ವಂಚನೆ ಕೃತ್ಯಗಳು ಹೆಚ್ಚಾದ ಬಳಿಕ ಪೊಲೀಸ್ ಇಲಾಖೆ, ಅಂತಹ ಪ್ರಕರಣಗಳ ಪತ್ತೆಗೆ ವಿಶೇಷ ದಳವನ್ನೇ ಸಿಇಎನ್ ಠಾಣೆಗಳನ್ನಾಗಿ ಪರಿವರ್ತಿಸಿತು. ಈ ಠಾಣೆಗಳಿಗೆ ಜಿಲ್ಲಾ ಮಟ್ಟದಲ್ಲಿ ಸಬ್
ಇನ್ಸ್ಪೆಕ್ಟರ್ ಠಾಣಾಧಿಕಾರಿಯಾಗಿದ್ದು, ಉಸ್ತುವಾರಿಗೆ ಅಪರಾಧ ದಾಖಲಾತಿ ಘಟಕದ ಡಿವೈಎಸ್ಪಿ ಅವರನ್ನು ನಿಯೋಜಿಸಲಾಗಿದೆ.

ಇದೇ ಮಾದರಿಯಲ್ಲೇ ಬೆಂಗಳೂರು ನಗರದ ಎಂಟು ವಿಭಾಗದಲ್ಲೂ ಠಾಣೆ ತೆರೆಯಲು ಸರ್ಕಾರಕ್ಕೆ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಪ್ರಸ್ತಾವನೆ ಕಳುಹಿಸಿದ್ದಾರೆ. ಇದಕ್ಕೆ ಗೃಹ ಇಲಾಖೆ ಸಹ ಸಮ್ಮತಿಸಿದೆ. ಆದರೆ ಬೆಂಗಳೂರು ನಗರದಲ್ಲಿ ಸಿಇಎನ್ ಠಾಣೆಗಳಿಗೆ ಇನ್ಸ್ಪೆಕ್ಟರ್ಗಳು ಠಾಣಾಧಿಕಾರಿಗಳಾಗಲಿದ್ದಾರೆ ಎಂದು ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಮಕ್ಕಳ ನಾಪತ್ತೆ ಪ್ರಕರಣ ಸಿಇಎನ್ ಠಾಣೆಗೆ

ಹಣಕಾಸು ವಿಚಾರವಾಗಿ ನಡೆಯುವ ಮೋಸ, ಆನ್ಲೈನ್, ಸಾಮಾಜಿಕ ಜಾಲ ತಾಣಗಳಲ್ಲಿ ಅವಹೇಳನಕಾರಿ ಬರಹ ಹೀಗೆ ಸೈಬರ್ ಕ್ರೈಂಗೆ ಸಂಬಂಧಿಸಿದ ಪ್ರಕರಣಗಳು ಹಾಗೂ ಮಹಿಳೆ ಮತ್ತು ಮಕ್ಕಳ ನಾಪತ್ತೆ ಪ್ರಕರಣಗಳ ತನಿಖೆಯು ಸಿಇಎನ್ ಠಾಣೆಗಳ ಹೆಗಲಿಗೆ ಬೀಳಲಿದೆ. ಈ ಠಾಣೆಗಳು ಎಫ್‌ಐಆರ್ ದಾಖಲಿಸಿ ಸ್ವತಂತ್ರವಾಗಿ ತನಿಖೆ ನಡೆಸುವ ಅಽಕಾರ ಸಹ ಹೊಂದಿದ್ದು, ಆಯಾ ವಿಭಾಗದ ಡಿಸಿಪಿಗಳ ಅಧೀನದಲ್ಲಿ ಕೆಲಸ ಮಾಡುತ್ತವೆ. 

ಇನ್ನೂ ಸ್ಥಳೀಯ ಠಾಣೆಗಳ ಮಕ್ಕಳ ಕಣ್ಮರೆ ಸಂಬಂಧ ದಾಖಲಾಗುವ ಪ್ರಕರಣಗಳು 4 ತಿಂಗಳಲ್ಲಿ ಪತ್ತೆಯಾಗದೆ ಹೋದರೆ, ಆ ಮಕ್ಕಳು ಮಾನವ ಕಳ್ಳ ಸಾಗಾಣಿಕೆ ಜಾಲದ ಬಲೆಗೆ ಸಿಲುಕಿದ್ದಾರೆ ಎಂದೇ ಪರಿಗಣಿಸ ಬೇಕಿದೆ. ಬಳಿಕ ಮಕ್ಕಳ ನಾಪತ್ತೆ ಪ್ರಕರಣಗಳನ್ನು ಹೆಚ್ಚಿನ ತನಿಖೆ ಸಲುವಾಗಿ ಸಿಇಎನ್ ಠಾಣೆಗಳಿಗೆ ವರ್ಗಾಯಿಸಬೇಕು. ನಂತರ ಎಫ್‌ಐಆರ್ ದಾಖಲಿಸಿಕೊಂಡು ಸಿಇಎನ್ ಠಾಣೆಗಳು ತನಿಖೆ ಮುಂದುವರಿಸುವಂತೆ ಡಿಜಿಪಿ ಸೂಚನೆ ಸಹ ಕೊಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Follow Us:
Download App:
  • android
  • ios