ಮಾಗಡಿ ರಸ್ತೆಯ ಕಡಬಗೆರೆ ಕ್ರಾಸ್‌ನಿಂದ ಮೈಸೂರು ರಸ್ತೆಯ ಚಲ್ಲಘಟ್ಟ ಮೆಟ್ರೋ ನಿಲ್ದಾಣವನ್ನು ಸಂಪರ್ಕಿಸುವ ಎಸ್.ಎಂ.ಕೃಷ್ಣ ದಶಪಥ ರಸ್ತೆ ಉದ್ಘಾಟನೆಗೊಳ್ಳಲಿದೆ. ಈ ನೂತನ ರಸ್ತೆಯು 60 ನಿಮಿಷಗಳ ಪ್ರಯಾಣದ ಅವಧಿಯನ್ನು ಕೇವಲ 15 ನಿಮಿಷಗಳಿಗೆ ಇಳಿಸಲಿದೆ. ನಾಡಪ್ರಭು ಕೆಂಪೇಗೌಡರ 517ನೇ ಜಯಂತಿಯ ಅಂಗವಾಗಿ ಈ ರಸ್ತೆಯನ್ನು ಉದ್ಘಾಟಿಸಲಾಗುತ್ತಿದೆ.
ಬೆಂಗಳೂರು: ನಾಡಪ್ರಭು ಕೆಂಪೇಗೌಡರ 517ನೇ ಜಯಂತಿ ಅಂಗವಾಗಿ ಮಾಗಡಿ ರಸ್ತೆ ಕಡಬಗೆರೆ ಕ್ರಾಸ್‌ನಿಂದ ಮೈಸೂರು ರಸ್ತೆ ಚಲ್ಲಘಟ್ಟ ಮೆಟ್ರೋ ನಿಲ್ದಾಣದವರೆಗೆ ಸಂಪರ್ಕ ಕಲ್ಪಿಸುವ 60 ನಿಮಿಷದ ಪ್ರಯಾಣವನ್ನು ಕೇವಲ 15ಕ್ಕೆ ತಗ್ಗಿಸುವ ಎಸ್.ಎಂ.ಕೃಷ್ಣ ರಸ್ತೆ (ಎಂಎಆರ್) ಶನಿವಾರ ಉದ್ಘಾಟನೆಗೊಳ್ಳಲಿದೆ.
ಇಂದು ಬೆಳಗ್ಗೆ 7ಕ್ಕೆ ನಾಡಪ್ರಭು ಕೆಂಪೇಗೌಡರ ಸಮಾಧಿ, ಕೆಂಪಾಪುರ, ಮಾಗಡಿಯಿಂದ ಪುರಜ್ಯೋತಿಗೆ ಚಾಲನೆ ನೀಡಲಾಗುವುದು. ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಪುರಜ್ಯೋತಿಗೆ ಚಾಲನೆ ನೀಡುವರು. ಕೆಂಪಾಂಬುಧಿ ಕೆರೆ ಗಡಿ ಗೋಪುರದಿಂದ ಮಾಜಿ ಸಚಿವ ಜಮೀರ್ ಅಹ್ಮದ್‌ಖಾನ್, ಲಾಲ್‌ಬಾಗ್ ಗಡಿಗೋಪುರದಿಂದ ಸಚಿವ ಕೃಷ್ಣಬೈರೇಗೌಡ, ಮೇಖ್ರಿ ವೃತ್ತ ಗಡಿ ಗೋಪುರದಿಂದ ಸಚಿವ ಬೈರತಿ ಸುರೇಶ್, ಹಲಸೂರು ಕೆರೆ ಗಡಿಗೋಪುರದಿಂದ ಸಚಿವ ಕೆ.ಜೆ.ಜಾರ್ಜ್, ಆವಿ ಚೆನ್ನಕಶ್ವ ದೇವಾಲಯದ ಆವರಣದಿಂದ ಸಚಿವ ಕೆ.ಎಚ್.ಮುನಿಯಪ್ಪ, ಹುತ್ರಿದುರ್ಗದ ಬಯಲು ಬಿಸಿಲು ಬಸವಣ್ಣನ ಸ್ಥಳದಿಂದ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಪುರಜ್ಯೋತಿಗೆ ಚಾಲನೆ ನೀಡಲಿದ್ದಾರೆ.
ಬೆಳಗ್ಗೆ 11ಕ್ಕೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯವರು ಎಸ್.ಎಂ.ಕೃಷ್ಣ ದಶಪಥ ರಸ್ತೆಯಲ್ಲಿ ಪುರಜ್ಯೋತಿ ಸ್ವೀಕರಿಸುವರು. ಇದೇ ಸಂದರ್ಭದಲ್ಲಿ ಎಸ್.ಎಂ.ಕೃಷ್ಣ ದಶಪಥ ರಸ್ತೆಯಲ್ಲಿ ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನೂತನ ರಸ್ತೆಯನ್ನು ಉದ್ಘಾಟಿಸುವರು. ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ, ಬಿಡಿಎ ಅಧ್ಯಕ್ಷ ಎನ್.ಎ.ಹ್ಯಾರೀಸ್, ಶಾಸಕ ಎಸ್.ಟಿ.ಸೋಮಶೇಖರ್ ಅಧ್ಯಕ್ಷತೆ ವಹಿಸುವರು.
ಮಧ್ಯಾಹ್ನ 12ಕ್ಕೆ ಜಿಬಿಎ, ಬಿಡಿಎ, ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣದ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ 517ನೇ ಜಯಂತಿ ಕಾರ್ಯಕ್ರಮ ಎಸ್.ಎಂ.ಕೃಷ್ಣ ರಸ್ತೆಯಲ್ಲಿ ನಡೆಯಲಿದೆ.
ಎಸ್.ಎಂ.ಕೃಷ್ಣ ದಶಪಥ ರಸ್ತೆ ವಿಶೇಷ:
ಮಾಗಡಿ ರಸ್ತೆಯ ಕಡಬಗೆರೆ ಕ್ರಾಸ್‌ನಿಂದ ಮೈಸೂರು ರಸ್ತೆ ಚಲ್ಲಘಟ್ಟ ಮೆಟ್ರೋ ನಿಲ್ದಾಣದವರೆಗೆ ಸಂಪರ್ಕ ಕಲ್ಪಿಸುವುದರ ಜೊತೆಗೆ ನಾಡಪ್ರಭು ಕೆಂಪೇಗೌಡ ಬಡಾವಣೆಯ ಎಲ್ಲಾ 9 ಬ್ಲಾಕ್‌ಗಳನ್ನು ಸಂಪರ್ಕಿಸುತ್ತದೆ. ಮಾಗಡಿ ರಸ್ತೆಯಿಂದ ಮೈಸೂರು ರಸ್ತೆ ಸಂಪರ್ಕಿಸುವ ವಾಹನಗಳು ಪ್ರಸ್ತುತ ನೈಸ್ ರಸ್ತೆ ಅಥವಾ ನಾಯಂಡಹಳ್ಳಿ -ಸಮ್ಮನಹಳ್ಳಿ ಜಂಕ್ಷನ್ ಮುಖಾಂತರ ಚಲಿಸಬೇಕಾಗಿದ್ದು ಈ ಮಾರ್ಗದ ವಾಹನ ಸಂಚಾರ ಅವಧಿ 60 ನಿಮಿಷಗಳಷ್ಟಿತ್ತು. ಆದರೀಗ ‘ಎಸ್.ಎಂ.ಕೃಷ್ಣ’ ರಸ್ತೆಯು ಸಂಚಾರ ಅವಧಿಯನ್ನು 15 ನಿಮಿಷಗಳಿಗೆ ತಗ್ಗಿಸಲಿದೆ. ಈ ರಸ್ತೆ ಕಂಬೀಪುರ, ಕೊಮ್ಮಘಟ್ಟ ಹಾಗೂ ಕೆಂಚನಪುರ ಪ್ರದೇಶಗಳಿಗೆ ಸುಗಮ ಸಂಪರ್ಕ ಒದಗಿಸಲಿದೆ. ಜೊತೆಗೆ ಮಾಚೋಹಳ್ಳಿ, ಕೊಡಿಗೆಹಳ್ಳಿ, ಕನ್ನಳ್ಳಿ, ಕೆಂಚನಪುರ, ಸೂಲಿಕೆರೆ, ಕೊಮ್ಮಘಟ್ಟ ಹಾಗೂ ಚಲ್ಲಘಟ್ಟ ಗ್ರಾಮಗಳಿಗೆ ಹೊಂದಿಕೊಂಡಂತಿದ್ದು, ಗ್ರಾಮಗಳ ಸರ್ವಾಂಗೀಣ ಅಭಿವೃದ್ದಿಗೆ ಸಹಕಾರಿಯಾಗಲಿದೆ.
ಮೈಸೂರು, ಮಾಗಡಿ, ಹಾಸನ, ಕುಣಿಗಲ್, ಮಂಡ್ಯ ಹಾಗೂ ರಾಮನಗರ ಭಾಗಗಳಿಂದ ಬೆಂಗಳೂರಿಗೆ ಸಂಚರಿಸುವ ಸಾವಿರಾರು ಪ್ರಯಾಣಿಕರಿಗೆ ಹಣ ಮತ್ತು ಸಮಯ ಉಳಿತಾಯ ಮಾಡುವ ಪ್ರಮುಖ ಮಾರ್ಗವಾಗಲಿದೆ. 631 ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಯೋಜನೆಯಲ್ಲಿ 3 ಪ್ರಮುಖ ಅಂಡರ್‌ಪಾಸ್‌ಗಳು, 11 ಸೇತುವೆಗಳು, 270 ಮೀಟರ್ ಉದ್ದದ ಸುರಂಗ ಮಾರ್ಗ, ಆಧುನಿಕ ಸರ್ವಿಸ್ ರಸ್ತೆ, ಸೈಕಲ್ ಟ್ರಾಕ್ ವ್ಯವಸ್ಥೆ ಒಳಗೊಂಡಿವೆ.


