ಬೆಂಗಳೂರಿನಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದ್ದು, ಸರ್ಕಾರ ಮತ್ತು ಪಾಲಿಕೆಯ ಪ್ರಯತ್ನಗಳು ವಿಫಲವಾದ ಹಿನ್ನೆಲೆಯಲ್ಲಿ, ಜೆಪಿ ನಗರದ ಅಪಾರ್ಟ್‌ಮೆಂಟ್ ನಿವಾಸಿಗಳು ನಾಯಿಗಳ ಕಾಟದಿಂದ ಪಾರಾಗಲು ಕಾಲಭೈರವ ಮತ್ತು ದತ್ತಾತ್ರೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಬೀದಿ ನಾಯಿಗಳ ಹಾವಳಿ ಬಹುತೇಕ ಸ್ಥಳಗಳಲ್ಲಿ ಮಾಮೂಲಾಗಿಬಿಟ್ಟಿವೆ. ಇದಾಗಲೇ ನಾಯಿಗಳಿಂದ ಅದೆಷ್ಟೋ ಮಂದಿ, ಅದರಲ್ಲಿಯೂ ಮಕ್ಕಳು ಜೀವ ಕಳೆದುಕೊಂಡಿದ್ದಾರೆ. ಸುಮ್ಮನೇ ಮಲಗಿರುವ ನಾಯಿಗಳಿಗೆ ಕಲ್ಲು ಹೊಡೆದು ಅದಕ್ಕೆ ಕೋಪ ತರಿಸಿ ದಾಳಿ ಮಾಡಿಸಿಕೊಳ್ಳುವ ಘಟನೆ ಒಂದಾದರೆ, ಹಲವು ಬಾರಿ, ಸುಖಾ ಸುಮ್ಮನೇ ಹೋಗುತ್ತಿದ್ದವರ ಮೇಲೂ ನಾಯಿಗಳು ಹಾವಳಿ ಮಾಡುವ ಭಯಾನಕ ಘಟನೆಗಳೂ ನಡೆಯುತ್ತಲೇ ಇದ್ದು, ಅದಕ್ಕೆ ಹೆಚ್ಚು ಬಲಿಯಾಗುತ್ತಿರುವವರು ಬೆಂಗಳೂರಿಗರು.

Add Asianetnews Kannada as a Preferred SourcegooglePreferred

2.88 ಕೋಟಿ ಬಿಡುಗಡೆ?

ಇದಾಗಲೇ ಸರ್ಕಾರಕ್ಕೆ ಹಲವಾರು ಮಂದಿ ಮನವಿ ಸಲ್ಲಿಸಿಯಾಗಿದೆ. ಮಹಾನಗರ ಪಾಲಿಕೆ ಮೊರೆಯೂ ಹೋಗಿಯಾಗಿದೆ. ನಾಯಿ ಹಾವಳಿ ಕಡಿಮೆ ಮಾಡಲು ಸರ್ಕಾರ ಅವುಗಳಿಗೆ ಮಾಂಸದೂಟಕ್ಕೆಂದು ಒಂದಿಷ್ಟು ಹಣವನ್ನು ಬಿಡುಗಡೆ ಮಾಡಿತ್ತು. ಬೆಂಗಳೂರಿನಲ್ಲಿ ಬೀದಿ ನಾಯಿಗಳ ಹಾವಳಿ ನಿಯಂತ್ರಿಸಲು ಮತ್ತು ಅವುಗಳಿಗೆ ಪೌಷ್ಟಿಕ ಆಹಾರ ನೀಡಲು, ಬಿಬಿಎಂಪಿ ಸುಮಾರು 2.88 ಕೋಟಿ ರೂ ವೆಚ್ಚದಲ್ಲಿ ಪ್ರತಿದಿನ 5,000 ನಾಯಿಗಳಿಗೆ ಚಿಕನ್ ಮತ್ತು ಆಹಾರ ನೀಡುವ ಯೋಜನೆ ರೂಪಿಸಿದ್ದು, ದುಡ್ಡು, ಯೋಜನೆ ಎಲ್ಲಿಯವರೆಗೆ ಬಂತು, ಏನಾಯ್ತು ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. ಅದೇನೇ ಮಾಡಿದರೂ ಹಾವಳಿ ಮಾತ್ರ ಕಡಿಮೆಯಾಗುತ್ತಿಲ್ಲ. ಯಾರೂ ಸಹಾಯಕ್ಕೆ ಬರದಾಗ ಕೊನೆಯದ್ದಾಗಿ ಎಲ್ಲರಿಗೂ ಕಾಣಿಸುವುದು ಆ ಪರಮಾತ್ಮ ಮಾತ್ರ.

ನಿವಾಸಿಗಳಿಂದ ಪೂಜೆ

ಅದೇ ರೀತಿ ಬೆಂಗಳೂರಿನ ಜೆಪಿ ನಗರದ ಎಲಿಟಾ ಪ್ರೊಮೆನೇಡ್ ಅಪಾರ್ಟ್‌ಮೆಂಟ್ ನಿವಾಸಿಗಳು ಬೀದಿನಾಯಿಗಳ ಹಾವಳಿಯಿಂದ ತಪ್ಪಿಸಿಕೊಳ್ಳಲು ದೇವರ ಮೊರೆ ಹೋಗಿದ್ದಾರೆ. ಕಾಲಭೈರವ ಮತ್ತು ದತ್ತಾತ್ರೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ್ದು ಅದರ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ. ನಾಯಿ ಹಾವಳಿ ತಪ್ಪಿಸಲು ಸರ್ಕಾರಕ್ಕೆ, ಪಾಲಿಕೆಗೆ ಮಾಡಿಕೊಂಡ ಮನವಿಗಳೆಲ್ಲಾ ವಿಫಲವಾದಾಗ ಕೊನೆಯದ್ದಾಗಿ ದೇವರೇ ಗತಿ ಎಂದು ಈ ನಿವಾಸಿಗಳು ವಿಶೇಷ ಪೂಜೆ ಸಲ್ಲಿಸಿದ್ದಾರೆ.

ನಾಯಿಗಳೂ ಭಾಗಿ

ಅಪಾರ್ಟ್ಮೆಂಟ್ ಕ್ಲಬ್ ಹೌಸ್‌ನಲ್ಲಿ ನಡೆದ ಈ ಪೂಜೆಯಲ್ಲಿ ನಿವಾಸಿಗಳು, ಮಕ್ಕಳು ಹಾಗೂ ಸಾಕು ನಾಯಿಗಳು ಭಾಗವಹಿಸಿದ್ದರು. ಪೂಜೆ ನಂತರ ವಿಶೇಷ ಪ್ರಸಾದ ಹಾಗೂ ಆಹಾರ ವ್ಯವಸ್ಥೆ ಮಾಡಲಾಗಿತ್ತು.