ಬೆಂಗಳೂರಿನ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸತೀಶ್ ನೇತೃತ್ವದಲ್ಲಿ, ತಮ್ಮ ಸಹೋದ್ಯೋಗಿ ತುಂಬು ಗರ್ಭಿಣಿ ಉಮಾ ಅವರಿಗೆ ಅದ್ಧೂರಿಯಾಗಿ ಸೀಮಂತ ಕಾರ್ಯಕ್ರಮವನ್ನು ಆಯೋಜಿಸಿದರು. ಈ ಮೂಲಕಮಾನವೀಯ ಮೌಲ್ಯಗಳು ಮತ್ತು ಸಹೋದ್ಯೋಗಿಗಳ ನಡುವಿನ ಬಾಂಧವ್ಯವನ್ನು ಎತ್ತಿ ತೋರಿಸಿತು.

ಬೆಂಗಳೂರು (ಡಿ.14): ಸಾಮಾನ್ಯವಾಗಿ ಸಾರ್ವಜನಿಕರಿಗೆ ಕಾನೂನು ಸುವ್ಯವಸ್ಥೆ ಮತ್ತು ದೂರುಗಳ ವಿಚಾರಣೆ ನಡೆಯುವ ಪೊಲೀಸ್ ಠಾಣೆಗಳು ಅಂದಾಕ್ಷಣ ಗಂಭೀರ ವಾತಾವರಣವೇ ಕಣ್ಣ ಮುಂದೆ ಬರುತ್ತದೆ. ಆದರೆ, ಬೆಂಗಳೂರಿನ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ಇತ್ತೀಚೆಗೆ ಹಬ್ಬದ ವಾತಾವರಣ ಮತ್ತು ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಗಿತ್ತು. ಇಲ್ಲಿನ ಇಡೀ ಸಿಬ್ಬಂದಿ ವರ್ಗವು ತುಂಬು ಗರ್ಭಿಣಿಯಾಗಿದ್ದ ತಮ್ಮ ಸಹೋದ್ಯೋಗಿ ಮಹಿಳಾ ಪೊಲೀಸ್ ಪೇದೆಗೆ ಅದ್ಧೂರಿಯಾಗಿ ಸೀಮಂತ ಕಾರ್ಯಕ್ರಮ ಆಯೋಜಿಸಿ, ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿದಿದ್ದಾರೆ.

ಪರಪ್ಪನ ಅಗ್ರಹಾರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಪೇದೆ ಉಮಾ ಅವರು ತುಂಬು ಗರ್ಭಿಣಿಯಾಗಿದ್ದು, ಹೆರಿಗೆ ರಜೆ ಪಡೆಯುವ ಮುನ್ನ ಠಾಣೆಯಲ್ಲೇ ಈ ಶುಭ ಸಮಾರಂಭಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಠಾಣೆಯ ಇನ್ಸ್‌ಪೆಕ್ಟರ್ ಸತೀಶ್ ಅವರ ನೇತೃತ್ವದಲ್ಲಿ ಇಡೀ ಪೊಲೀಸ್ ಸಿಬ್ಬಂದಿ ಈ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದ್ದರು.

ಸೀಮಂತ ಕಾರ್ಯಕ್ರಮಕ್ಕಾಗಿ ಠಾಣೆಯ ಆವರಣವನ್ನು ಸುಂದರವಾಗಿ ಅಲಂಕರಿಸಲಾಗಿತ್ತು. ಹೂವಿನ ಮಾಲೆಗಳು, ಬಲೂನ್‌ಗಳು ಮತ್ತು ರಂಗೋಲಿಯಿಂದ ಕಛೇರಿಯು ಕಂಗೊಳಿಸುತ್ತಿತ್ತು. ಪೇದೆ ಉಮಾ ಅವರಿಗೆ ಎಲ್ಲಾ ಸಂಪ್ರದಾಯಬದ್ಧ ಶಾಸ್ತ್ರಗಳನ್ನು ನೆರವೇರಿಸಲಾಯಿತು. ಠಾಣೆಯ ಎಲ್ಲಾ ಸಿಬ್ಬಂದಿ, ಪುರುಷ ಮತ್ತು ಮಹಿಳಾ ಸಹೋದ್ಯೋಗಿಗಳು, ಪ್ರೀತಿಯಿಂದ ಉಮಾ ಅವರಿಗೆ ಸೀಮಂತದ ಉಡುಗೊರೆಗಳನ್ನು ನೀಡಿ, ಮಗುವಿನ ಮತ್ತು ತಾಯಿಯ ಆರೋಗ್ಯಕ್ಕಾಗಿ ಹಾರೈಸಿದರು.

ಠಾಣೆಯಲ್ಲಿ ಹಬ್ಬದ ಸಂಭ್ರಮ

ಈ ಸಂದರ್ಭದಲ್ಲಿ ಮಾತನಾಡಿದ ಪೋಲೀಸ್ ಸಿಬ್ಬಂದಿ, 'ಇಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲರೂ ಕೇವಲ ಸಹೋದ್ಯೋಗಿಗಳಲ್ಲ, ನಾವೆಲ್ಲರೂ ಒಂದೇ ಕುಟುಂಬದವರು. ಉಮಾ ಅವರು ನಮ್ಮೆಲ್ಲರ ಸಹೋದರಿ ಇದ್ದಂತೆ. ಹೀಗಾಗಿ ಆಕೆಗೆ ಶುಭ ಕೋರುವುದು ನಮ್ಮೆಲ್ಲರ ಕರ್ತವ್ಯವಾಗಿತ್ತು. ಠಾಣೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು ನಮಗೆಲ್ಲ ಸಂತೋಷ ತಂದಿದೆ' ಎಂದು ತಿಳಿಸಿದರು. ಈ ಅನಿರೀಕ್ಷಿತ ಪ್ರೀತಿ ಮತ್ತು ಗೌರವದಿಂದ ಮಹಿಳಾ ಪೇದೆ ಉಮಾ ಅವರ ಕಣ್ಣಾಲಿಗಳು ತುಂಬಿ ಬಂದಿದ್ದವು. ಪೊಲೀಸ್ ಇಲಾಖೆಯಲ್ಲಿ ಕೆಲಸದ ಒತ್ತಡದ ಮಧ್ಯೆಯೂ ಸಿಬ್ಬಂದಿ ಇಂತಹ ಆತ್ಮೀಯತೆಯನ್ನು ತೋರಿರುವುದು ನನಗೆ ದೊರೆತ ದೊಡ್ಡ ಭಾಗ್ಯ. ಈ ದಿನವನ್ನು ನಾನು ಎಂದಿಗೂ ಮರೆಯುವುದಿಲ್ಲ' ಎಂದು ಕೃತಜ್ಞತೆ ಸಲ್ಲಿಸಿದರು.

ಸಾಮಾನ್ಯವಾಗಿ ಒತ್ತಡ ಮತ್ತು ಕಠಿಣ ನಿಯಮಗಳ ನೆಲೆಯಾಗಿ ಕಾಣುವ ಪೊಲೀಸ್ ಠಾಣೆಗಳೂ ಕೂಡ ಮಾನವೀಯ ಸಂಬಂಧಗಳು ಮತ್ತು ಬಾಂಧವ್ಯದ ಕೇಂದ್ರಗಳಾಗಬಹುದು ಎಂಬುದನ್ನು ಪರಪ್ಪನ ಅಗ್ರಹಾರ ಠಾಣೆಯ ಸಿಬ್ಬಂದಿ ಇಡೀ ಸಮಾಜಕ್ಕೆ ತೋರಿಸಿಕೊಟ್ಟಿದ್ದಾರೆ. ಈ ಘಟನೆ ಠಾಣೆಯಲ್ಲಿದ್ದ ಎಲ್ಲರಲ್ಲೂ ಸಂತಸ ಮತ್ತು ಬಾಂಧವ್ಯದ ಭಾವನೆಯನ್ನು ಹೆಚ್ಚಿಸಿತು.